ರಾಮಕೃಷ್ಣ ದಾಸರಿ

ರಾಯಚೂರು(ಆ.02): ಯಾವುದೇ ಸರ್ಕಾರ ಬಂದರೂ ಸಹ ನಮ್ಮ ಜಿಲ್ಲೆಯವರೇ ಉಸ್ತುವಾರಿ ಸಚಿವರಾಗುವುದರಿಂದ ಸ್ವಂತ ಊರಿನ ಕಾಳಜಿ, ಅಭಿವೃದ್ಧಿ ಮೇಲೆ ನಿಗಾ, ಆಡಳಿತದ ಮೇಲೆ ಹಿಡಿತ ಸಾಧಿಸಲು ಸಾಧ್ಯ ಎನ್ನುವುದು ರಾಜಕೀಯದಲ್ಲಿ ಅದರಲ್ಲಿಯೂ ಆಡಳಿತ ವರ್ಗದ ಪಕ್ಷದ ಮುಖಂಡರು ಮಾತನಾಡಿಕೊಳ್ಳುವುದು ಸಹಜ ಅದು ನಿಜ ಎನ್ನುವಂತಹ ರೀತಿಯಲ್ಲಿ ರಾಯಚೂರು ಜಿಲ್ಲೆಯ ಉಸ್ತುವಾರಿ ಸಚಿವರು ಇದ್ದರೂ ಇಲ್ಲದಂತಾಗಿದೆ.

ರಾಜ್ಯದಲ್ಲಿ ಬಿ.ಎಸ್‌. ಯಡಿಯೂರಪ್ಪ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದು ವರ್ಷ ಕಳೆದಿದೆ. ಆರಂಭದಲ್ಲಿ ಪಕ್ಕದ ಜಿಲ್ಲೆಯ ಬಿ.ಶ್ರೀರಾಮುಲು ಅವರನ್ನು ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ಮಾಡಲಾಗಿತ್ತು. ಏಳೆಂಟು ತಿಂಗಳ ಕಾಲ ಉಸ್ತುವಾರಿ ಸಚಿವರಾಗಿದ್ದ ಬಿ. ಶ್ರೀರಾಮುಲು ಅವರು ಬೆರಳೆಣಿಕೆಯಷ್ಟು ಬಾರಿ ಜಿಲ್ಲೆಗೆ ಬಂದು ಹೋದರೆ ಹೊರತು ಹೇಳಿಕೊಳ್ಳುವಷ್ಟು ಅಭಿವೃದ್ಧಿ ಕೆಲಸ ಮಾಡಲಿಲ್ಲ. ಇವರಾದ ಬಳಿಕ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರನ್ನು ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ಮಾಡಿದರೂ ಅವರು ಸಹ ರಾಮುಲು ಹಾದಿಯಲ್ಲಿಯೇ ಸಾಗಿರುವುದು ಜಿಲ್ಲೆ ರಾಜಕೀಯ ಮುಖಂಡರು, ಸಂಘಟನೆಗಳು, ಜನಸಾಮಾನ್ಯರಲ್ಲಿ ತೀವ್ರ ಅಸಮಾಧಾನವನ್ನುಂಟು ಮಾಡಿದೆ.

ಕೊರೋನಾದಲ್ಲೂ ಭ್ರಷ್ಟಾಚಾರ ಮಾಡೋದು ಬಿಜೆಪಿ ಸಂಸ್ಕಾರವೇ..?

ಸಂಕ​ಷ್ಟದ ಕಾಲ​ದಲ್ಲಿ ಜಿಲ್ಲೆಗೆ ಬಂದಿ​ಲ್ಲ:

ಸಹಜವಾಗಿ ಸಾಮಾನ್ಯ ದಿನಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಗೆ ಆಗಮಿಸದಿದ್ದರು ಪರವಾಗಿಲ್ಲ. ಆದರೆ ಇದೀಗ ಕೊರೋನಾ ಕಾಲದಲ್ಲಿಯೇ ಕಾಣದಂತೆ ಮಾಯವಾಗಿರುವ ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ ಅವರ ಕಾಳಜಿರಹಿತ ಆಡಳಿತವು ಎಲ್ಲರಲ್ಲಿ ಬೇಸರ ಮೂಡಿಸಿದೆ.

ತಿಂಗಳು ಕಳೆ​ದರೂ ಆಗ​ಮಿ​ಸಿ​ಲ್ಲ:

ಕಳೆದ ಮಾರ್ಚ್‌ನಲ್ಲಿ ಶ್ರೀರಾಮುಲು ಬದಲು ಡಿಸಿಎಂ ಲಕ್ಷ್ಮಣ ಸವದಿ ಅವರನ್ನು ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಕ ಮಾಡಲಾಯಿತು. ಅಲ್ಲಿಂದ ಇಲ್ಲಿ ವರೆಗೆ ಕೇವಲ ಐದು ಬಾರಿ ಮಾತ್ರ ರಾಯಚೂರಿಗೆ ಆಗಮಿಸಿರುವ ಸಚಿವರು, ಒಂದು ತಿಂಗಳಿನಿಂದ ಮತ್ತೆ ಮುಖಮಾಡಿಲ್ಲ. ಜಿಲ್ಲೆಗೆ ಕೊರೋನಾ ಮಹಾಮಾರಿ ಕಾಲಿಡುವುದಕ್ಕಿಂತ ಮುಂಚೆ ಡಿಸಿಎಂ ಜಿಲ್ಲೆಗೆ ಬಂದು ಸಭೆ ನಡೆಸಿ ಹೋಗಿದ್ದರು. ಏ.27 ಮತ್ತು ಮೇ 22ರಂದು ಜಿಲ್ಲೆಗೆ ಬಂದು ಸಭೆ ನಡೆಸಿದ್ದರು. ಜೂ.23ರಂದು ಅರ್ಧದಿನ ಪ್ರವಾಸ ಕೈಗೊಂಡು ಅವಸರದಲ್ಲಿಯೇ ಮರಳಿ ಹೋದವರು. ತಿಂಗಳು ಕಳೆಯುತ್ತಿದ್ದರೂ ಜಿಲ್ಲೆಗೆ ಕಾಲಿಟ್ಟಿಲ್ಲ. ಜುಲೈ ಮಾಹೆಯಲ್ಲಿ ಕೊರೋನಾ ಅಬ್ಬರ ತಾರಕಕ್ಕೇರಿರುವ ಸಮಯದಲ್ಲಿ ಉಸ್ತುವಾರಿ ಸಚಿವರು ಜಿಲ್ಲೆಗೆ ಬಂದು ಜವಾಬ್ದಾರಿ ನಿಭಾಯಿಸುವ ಕೆಲಸವನ್ನು ಮಾಡಿಲ್ಲ.

ಕೊರೋನಾ ಹಾವಳಿ ಹೆಚ್ಚ​ಳ:

ಕಳೆದ ಎರಡು ವಾರಗಳಿಂದ ಜಿಲ್ಲೆಯಲ್ಲಿ ಕೊರೋನಾ ಸೋಂಕಿನ ಸಂಖ್ಯೆ ದಿನೇ ದಿನೆ ಹೆಚ್ಚಾಗುತ್ತಿದೆ. ನಿತ್ಯ ಶತಕದಾಟಿ ಪಾಸಿಟಿವ್‌ ಪ್ರಕರಣ ದಾಖಲಾಗುತ್ತಿವೆ. ಇಲ್ಲಿವರೆಗೆ 2273 ಪಾಸಿಟವ್‌ ಕೇಸ್‌ಗಳು ದೃಢಪಟ್ಟಿವೆ. ಇಂತಹ ಸಂದಿಗ್ಧ ಸನ್ನಿವೇಶದಲ್ಲಿ ಜಿಲ್ಲಾ ಉಸ್ತುವಾರಿ ಅಷ್ಟೇ ಅಲ್ಲದೇ ರಾಜ್ಯದ ಮೂರು ಜನ ಉಪಮುಖ್ಯಮಂತ್ರಿಗಳ ಪೈಕಿ ಒಬ್ಬರಾಗಿರುವ ಲಕ್ಷ್ಮಣ ಸವದಿ ಅವರು ಜನಪ್ರತಿನಿಧಿಗಳ, ಅಧಿಕಾರಿಗಳೊಂದಿಗೆ ಸಮನ್ವಯತೆ ಸಾಧಿಸಿ ಆಡಳಿತದ ಮೇಲುಸ್ತುವಾರಿ ನಿಭಾಯಿಸದಿರುವುದು ಸಾರ್ವಜನಿಕರಲ್ಲಿ ತೀವ್ರ ಅಸಮಧಾನವನ್ನುಂಟು ಮಾಡಿದೆ.

ಡಿಸಿಎಂ, ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ ಅವರು ದೆಹಲಿಗೆ ಹೋಗಲು ಸಮಯವಿದೆ. ಆದರೆ, ಜಿಲ್ಲೆಯಲ್ಲಿ ತಾಂಡವಾಡುತ್ತಿರುವ ಕೊರೋನಾ ಕಿರಿಕಿರಿ ನೀಗಿಸಲು ಸಮಯವಿಲ್ಲ. ದಿನೇ ದಿನೆ ಹೆಚ್ಚುತ್ತಿರುವ ಸೋಂಕಿತರಿಂದಾಗಿ ಸಮರ್ಪಕ ಔಷಧಿ, ಚಿಕಿತ್ಸೆ ದೊರೆಯುತ್ತಿಲ್ಲ. ಕೊರೋನಾ ನಿರ್ವಹಣೆಯನ್ನು ಕೇವಲ ಅಧಿಕಾರಿಗಳ ಮೇಲೆ ಬಿಟ್ಟಿರುವ ಡಿಸಿಎಂ ವಹಿಸಿರುವ ಉಸ್ತುವಾರಿ ಜವಾಬ್ದಾರಿ ನಿಭಾಯಿಸುವುದನ್ನು ಬಿಟ್ಟು ಸಿಎಂ ಆಗುವ ಪ್ರಯತ್ನ ನಡೆಸಿದ್ದಾರೆ ಎಂದು ಮಾಜಿ ಸಚಿವ ಕೃಷ್ಣಭೈರೇಗೌಡ ಅವರು ಹೇಳಿದ್ದಾರೆ.