ಶ್ರೀನಿವಾಸಪುರ ಶಾಸಕರು ಹಾಗು ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌ ಕಾಂಗ್ರೆಸ್‌ ಪಕ್ಷದ ಮಹತ್ವದ ಹುದ್ದೆಗೆ ಅಯ್ಕೆಯಾಗಿದ್ದಾರೆ ಇದು ಸಹಜವಾಗಿಯೇ ಪಕ್ಷದಲ್ಲಿಯೇ ಇರುವ ಅವರ ವೈರಿಗಳಲ್ಲಿ ನಡುಕ ಹುಟ್ಟಿಸಿದೆ

 ಕೋಲಾರ (ಸೆ.04): ಶ್ರೀನಿವಾಸಪುರ ಶಾಸಕರು ಹಾಗು ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌ ಕಾಂಗ್ರೆಸ್‌ ಪಕ್ಷದ ರಾಷ್ಟ್ರೀಯ ಸಮಿತಿಗೆ ಆಯ್ಕೆಯಾಗಿದ್ದಾರೆ. ಇದು ಸಹಜವಾಗಿಯೇ ಪಕ್ಷದಲ್ಲಿಯೇ ಇರುವ ಅವರ ವೈರಿಗಳಲ್ಲಿ ನಡುಕ ಹುಟ್ಟಿಸಿದೆ.

ಕೋಲಾರ ಜಿಲ್ಲೆಯ ಮಟ್ಟಿಗೆ ಹೇಳುವುದಾದರೆ ಕಾಂಗ್ರೆಸ್‌ ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ ಇಲ್ಲಿ ಕಳೆದ ಮೂರ್ನಾಲ್ಕು ವರ್ಷಗಳಿಂದಲೂ ಪಕ್ಷ ಹರಿದು ಹಂಚಿ ಹೋಗಿದೆ, ಜಿಲ್ಲೆ ಮತ್ತು ರಾಜ್ಯ ಮಟ್ಟದಲ್ಲಿ ಪಕ್ಷದ ಹಿಡಿತಕ್ಕಾಗಿ ಪಕ್ಷದ ನಾಯಕರಲ್ಲಿ ಮೊದಲಿನಿಂದಲೂ ಕಚ್ಚಾಟವಿದೆ. ಇಲ್ಲಿ ಎರಡು ಗುಂಪುಗಳಾಗಿ ಹಂಚಿಕೆಯಾಗಿದ್ದು ಒಂದು ಗುಂಪು ರಮೇಶ್‌ ಕುಮಾರ್‌ ಅವರದು ಮತ್ತೊಂದು ಗುಂಪು ಮಾಜಿ ಸಂಸದ ಕೆ.ಎಚ್‌.ಮುನಿಯಪ್ಪ ಬಣವೆಂದು ಗುರ್ತಿಸಿಕೊಂಡಿದೆ.

ಪಕ್ಷದ ಮೇಲೆ ಹಿಡಿತ ಕಳೆದುಕೊಂಡ ಕೆಎಚ್ಚೆಂ

ಕಳೆದ 20 ವರ್ಷಗಳಿಂದ ಕೆ.ಎಚ್‌.ಮುನಿಯಪ್ಪ ಪಕ್ಷದಲ್ಲಿ ಹಿಡಿತ ಸಾಧಿಸುತ್ತಾ ಬಂದಿದ್ದರು, ಪಕ್ಷದಲ್ಲಿ ತಮ್ಮ ವಿರುದ್ಧ ಮಾತನಾಡಿದವರನ್ನು ಮಣಿಸುತ್ತಾ ಬಂದಿದ್ದ ಅವರು ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌ ಬುಡಕ್ಕೂ ಕೈ ಹಾಕಿದ್ದರು. ಇದರಿಂದ ಹುಷಾರಾದ ರಮೇಶ್‌ಕುಮಾರ್‌, ಮುನಿಯಪ್ಪ ಅವರ ವಿರೋಧಿಗಳಾದ ವಿ.ಮುನಿಯಪ್ಪ, ಸುಧಾಕರ್‌,ಕೊತ್ತೂರು ಮಂಜುನಾಥ್‌, ಎಸ್‌ಎನ್‌.ನಾರಾಯಣಸ್ವಾಮಿ, ಜೆಡಿಎಸ್‌ ಶಾಸಕ ಕೆ.ಶ್ರೀನಿವಾಶಗೌಡ ಈ ಎಲ್ಲರನ್ನೂ ಒಗ್ಗೂಡಿಸಿ ಕಳೆದ ಲೋಕಸಭಾ ಚುನಾವಣೆಗೆ ಮುನಿಯಪ್ಪಗೆ ಮಣ್ಣುಮುಕ್ಕಿಸಿದ್ದರು.

ನನ್ನ ಗೆಲ್ಲಿಸಿದ್ದೆ ಅವರು :ರಮೇಶ್ ಕುಮಾರ್ ಹಾಡಿ ಹೊಗಳಿದ ಜೆಡಿಎಸ್ ಶಾಸಕ

ಸೋಲಿನಿಂದ ಹತಾಶರಾದ ಮುನಿಯಪ್ಪ ತಮ್ಮ ಈ ಸೋಲಿಗೆ ಕಾರಣರಾದವರನ್ನು ಪಕ್ಷದಿಂದ ಉಚ್ಛಾಟಿಸಬೇಕೆಂದು ಎಷ್ಟೇ ಒದ್ದಾಡಿದರೂ ಪಕ್ಷ ಅದನ್ನು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ, ಯಾವಾಗ ಜಿಲ್ಲೆಯಲ್ಲಿ ರಮೇಶ್‌ ಕುಮಾರೇ ಸ್ಟ್ರಾಂಗು ಎನ್ನುವ ಸಂದೇಶ ಹೈಕಮಾಂಡ್‌ಗೆ ರವಾನೆ ಆಯಿತೋ ಅಂದಿನಿಂದಲೂ ರಮೇಶ್‌ ಕುಮಾರ್‌ ಪಕ್ಷದಲ್ಲಿ ಇನ್ನಷ್ಟುಗಟ್ಟಿಯಾದರು.

ಶಾಸಕ ನಂಜೇಗೌಡರಿಗೂ ಗಾಳ

ಇತ್ತೀಚೆಗೆ ಮಾಲೂರು ಶಾಸಕ ಕೆ.ವೈ.ನಂಜೇಗೌಡರನ್ನೂ ತಮ್ಮತ್ತ ಸೆಳೆದು ಕೊಂಡು ಮುನಿಯಪ್ಪರನ್ನು ನಿಶಕ್ತಿಗೊಳಿಸುವಲ್ಲಿಯೂ ರಮೇಶ್‌ಕುಮಾರ್‌ ಯಶಸ್ವಿಯಾಗಿದ್ದಾರೆ. ಇನ್ನು ರಾಜ್ಯ ಮಟ್ಟದಲ್ಲಿ ಒಂದು ಕಡೆ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತೊಂದು ಕಡೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ಜತೆಯೂ ಉತ್ತಮ ಒಡನಾಟ ಇಟ್ಟುಕೊಂಡಿದ್ದ ರಮೇಶ್‌ ಕುಮಾರ್‌ ಒಳಗೊಳಗೇ ಮುನಿಯಪ್ಪರ ಬೇರುಗಳನ್ನು ಒಂದೊಂದಾಗಿಯೇ ಕತ್ತರಿಸುತ್ತಿದ್ದಾರೆ. ಇದರಿಂದಾಗಿ ಮುಂಬರುವ ಜಿ.ಪಂ.ಮತ್ತು ತಾ.ಪಂ.ಚುನಾವಣೆಗಳೂ ರಮೇಶ್‌ ಕುಮಾರ್‌ ನೇತೃತ್ವದಲ್ಲಿಯೇ ನಡೆಯುವ ಸಾಧ್ಯತೆ ಹೆಚ್ಚಾಗಿದೆ.

ಕಾಂಗ್ರೆಸ್ನಲ್ಲಿ ಕೆಲ ರಣಹದ್ದುಗಳಿದೆ : ರಮೇಶ್ ಕುಮಾರ್ ಅಸಮಾಧಾನ

ಹಾಗಂತ ಕೆ.ಎಚ್‌.ಮುನಿಯಪ್ಪ ಶಸ್ತ್ರ ತ್ಯಾಗ ಮಾಡಿ ಸುಮ್ಮನೆ ಕುಳಿತಿಲ್ಲ. ತಮ್ಮ ಬತ್ತಳೆಯಲ್ಲಿರುವ ಬಿಲ್ಲು ಬಾಣಗಳನ್ನು ಉಪಯೋಗಿಸಿ ತಮ್ಮ ವಿರೋಧಿಯನ್ನು ಮಣಿಸಲು ಎಲ್ಲೆಲ್ಲಿ ಅವಕಾಶ ಸಿಗುತ್ತದೋ ಅಲ್ಲೆಲ್ಲಾ ಮಾಡುತ್ತಾ ಬಂದಿದ್ದಾರೆ. ಜೆಡಿಎಸ್‌ ಪಕ್ಷದ ಬಲವನ್ನು ಬಳಸಿಕೊಂಡೂ ರಮೇಶ್‌ ಕುಮಾರ್‌ರನ್ನು ರಾಜಕೀಯವಾಗಿ ಮುಗಿಸಲು ತಂತ್ರಗಳನ್ನು ಎಣೆಯುತ್ತಿದ್ದಾರೆ.

ಇಷ್ಟೆಲ್ಲಾ ನಡೆಯುತ್ತಿರುವ ಸಂದರ್ಭದಲ್ಲಿ ಇನ್ನೇನು ಲೋಕಸಭೆ ಮತ್ತು ವಿಧಾನ ಸಭೆ ಚುನಾವಣೆಗಳು ಎದುರಾಗುವ ಹೊತ್ತಿನಲ್ಲಿ ರಮೇಶ್‌ ಕುಮಾರ್‌ ರಾಷ್ಟ್ರೀಯ ಕಾಂಗ್ರೆಸ್‌ ಪಕ್ಷದ ಪ್ರಮುಖ ಸಮಿತಿಯಲ್ಲಿ ಸ್ಥಾನ ಪಡೆದಿರುವುದು ವಿರೋಧಿಗಳನ್ನು ಕಂಗೆಡಿಸಿದೆ. ರಮೇಶ್‌ ಕುಮಾರ್‌ ಈ ಅವಕಾಶವನ್ನೇ ಬಳಸಿಕೊಂಡು ತಮ್ಮ ಎದುರಾಳಿ ಕೆ.ಎಚ್‌.ಮುನಿಯಪ್ಪ ಅವರನ್ನು ರಾಜಕೀಯವಾಗಿ ಇನ್ನಷ್ಟುಕುಗ್ಗಿಸಿಬಿಡುತ್ತಾರೋ ಎನ್ನುವ ಆತಂಕ ಮುನಿಯಪ್ಪ ಪಾಳೆಯವನ್ನು ಕಾಡುತ್ತಿದೆ.