ನೂತನ ಮೆಟ್ರೋ ಮಾರ್ಗದಲ್ಲಿ ಇಂದಿನಿಂದಲೇ ಸಂಚಾರ ಪ್ರಾರಂಭ: 12 ನಿಮಿಷಕ್ಕೊಂದು ರೈಲು
ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಿದ ವೈಟ್‌ಫೀಲ್ಡ್-ಕೆ.ಆರ್.ಪುರ ಮೆಟ್ರೋ ರೈಲು ಮಾರ್ಗದಲ್ಲಿ ಭಾನುವಾರ ಬೆಳಗ್ಗೆ 7ರಿಂದ ವಾಣಿಜ್ಯ ಸಂಚಾರ ಆರಂಭವಾಗಲಿದೆ. ಮಾ.30ರಿಂದ ಎಲ್ಲ ಮೆಟ್ರೋ ನಿಲ್ದಾಣಗಳಲ್ಲಿ ನ್ಯಾಷನಲ್ ಕಾಮನ್ ಮೊಬಲಿಟಿ ಕಾರ್ಡ್ (ಎನ್‌ಸಿಎಂಸಿ) ಪ್ರಯಾಣಿಕರು ಪಡೆಯಬಹುದು.
ಬೆಂಗಳೂರು (ಮಾ.26): ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಿದ ವೈಟ್‌ಫೀಲ್ಡ್-ಕೆ.ಆರ್.ಪುರ ಮೆಟ್ರೋ ರೈಲು ಮಾರ್ಗದಲ್ಲಿ ಭಾನುವಾರ ಬೆಳಗ್ಗೆ 7ರಿಂದ ವಾಣಿಜ್ಯ ಸಂಚಾರ ಆರಂಭವಾಗಲಿದೆ. ಮಾ.30ರಿಂದ ಎಲ್ಲ ಮೆಟ್ರೋ ನಿಲ್ದಾಣಗಳಲ್ಲಿ ನ್ಯಾಷನಲ್ ಕಾಮನ್ ಮೊಬಲಿಟಿ ಕಾರ್ಡ್ (ಎನ್‌ಸಿಎಂಸಿ) ಪ್ರಯಾಣಿಕರು ಪಡೆಯಬಹುದು. ಬೆಳಗ್ಗೆ 5ರಿಂದ ರಾತ್ರಿ 11ರವರೆಗೆ ಮೆಟ್ರೋ ರೈಲಿನ ಸೇವೆ ಲಭ್ಯವಾಗಲಿದೆ. ರಾತ್ರಿ 11ಕ್ಕೆ ಎರಡೂ ನಿಲ್ದಾಣದಲ್ಲಿ ಕೊನೆಯ ಮೆಟ್ರೋ ರೈಲುಗಳು ಸಂಚರಿಸಲಿವೆ. ಪ್ರಯಾಣಿಕರು ಪ್ರತ್ಯೇಕ ಟೋಕನ್, ಮೊಬೈಲ್ ಕ್ಯೂಆರ್ ಟಿಕೆಟ್, ಸ್ಮಾರ್ಚ್ ಕಾರ್ಡ್ ಬಳಸಿ ಟಿಕೆಟ್ ಖರೀದಿಸಿ ಪ್ರಯಾಣ ಮಾಡಬಹುದು. 10-12 ನಿಮಿಷಕ್ಕೊಂದರಂತೆ ರೈಲುಗಳು ಸಂಚರಿಸಲಿವೆ ಎಂದು ಮೆಟ್ರೋ ತಿಳಿಸಿದೆ.
ಉದ್ಘಾಟನೆ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಂಜುಮ್ ಫರ್ವೇಜ್, ವೈಟ್‌ಫೀಲ್ಡ್-ಕೆ.ಆರ್.ಪುರ ಮಾರ್ಗದ ಕಾಮಗಾರಿ ಸಾಕಷ್ಟುಸವಾಲಿನಿಂದ ಕೂಡಿತ್ತು. ಪ್ರತಿದಿನ ಇಲ್ಲಿ 1400 ನೌಕರರು ಹಗಲು ರಾತ್ರಿ ಕೆಲಸ ಮಾಡಿದ್ದಾರೆ. ಮೆಟ್ರೋ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಪ್ರಧಾನಿಯೊಬ್ಬರು ಮೆಟ್ರೋ ಉದ್ಘಾಟನೆ ಮಾಡಿದ್ದಾರೆ. ಈ ಮಾರ್ಗದ ಮುಂದಿನ 2 ಕಿ.ಮೀ.ವರೆಗಿನ ಬೈಯ್ಯಪ್ಪನಹಳ್ಳಿವರೆಗಿನ ಕಾಮಗಾರಿ ಜೂನ್ ಅಂತ್ಯದಲ್ಲಿ ಪೂರ್ಣಗೊಳ್ಳಲಿದೆ. ಬಳಿಕ ಇದು ಕೂಡ ಸಾರ್ವಜನಿಕರ ಬಳಕೆಗೆ ಲಭ್ಯವಾಗಲಿದೆ ಎಂದರು. ಶನಿವಾರ ಮೊಬಿಲಿಟಿ ಕಾರ್ಡ್ (ಎನ್‌ಸಿಎಂಸಿ) ಪರಿಚಯ ಆಗಿದೆ. ಮಾ.30ರಿಂದ ಮೆಟ್ರೋ ನಿಲ್ದಾಣಗಳಲ್ಲಿ ಪ್ರಯಾಣಿಕರು ಎನ್‌ಸಿಎಂಸಿ ಕಾರ್ಡನ್ನು ಖರೀದಿಸಬಹುದು ಎಂದು ತಿಳಿಸಿದರು.
ನಮ್ಮ ಮೆಟ್ರೋ ವೈಟ್‘ಫೀಲ್ಡ್’ಗೆ ಮೋದಿ ಚಾಲನೆ: ಸರ್ಕಾರಿ ಕಾಲೇಜು ವಿದ್ಯಾರ್ಥಿಗಳು, ಮೆಟ್ರೋ ಸಿಬ್ಬಂದಿ ಜತೆ ಸಂವಾದ
2ನೇ ಅತೀ ದೊಡ್ಡ ಮೆಟ್ರೋ: ಬೆಂಗಳೂರು ಮೆಟ್ರೋದ ಮೊದಲ ಐಟಿ ಕಾರಿಡಾರ್ ವೈಟ್‌ಫೀಲ್ಡ್-ಕೆ.ಆರ್.ಪುರ ಮಾರ್ಗ ಉದ್ಘಾಟನೆ ಮೂಲಕ ದೇಶದ ಎರಡನೇ ಅತೀದೊಡ್ಡ ಮೆಟ್ರೋ ರೈಲು ಮಾರ್ಗವಾಗಿ ನಮ್ಮ ಮೆಟ್ರೋ ಹೊರಹೊಮ್ಮಿದೆ. ದೆಹಲಿ ಮೆಟ್ರೋ (349 ಕಿ.ಮೀ.) ಬಳಿಕ ನಮ್ಮ ಮೆಟ್ರೋ 69.1 ಕಿ.ಮೀ. ಸಂಪರ್ಕ ಜಾಲದೊಂದಿಗೆ ಎರಡನೇ ಸ್ಥಾನದಲ್ಲಿದೆ. ಜತೆಗೆ ಈವರೆಗೆ ಬೆಂಗಳೂರಲ್ಲಿ ಉದ್ಘಾಟನೆಯಾದ ಮೆಟ್ರೋ ಮಾರ್ಗದಲ್ಲಿಯೇ ಅತೀ ಉದ್ದನೆಯ ಮಾರ್ಗ ಇದಾಗಿದೆ. ನಗರದಲ್ಲಿ ಇದೀಗ 30 ಕಿ.ಮೀ. ಹಸಿರು ಮಾರ್ಗ, 39.31 ಕಿ.ಮೀ. ನೇರಳೆ ಮಾರ್ಗ ಹೊಂದಿದಂತಾಗಿದೆ.
4249 ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ನೇರಳೆ ಕಾರಿಡಾರ್‌ನ ವಿಸ್ತರಿತ ಈ ಮಾರ್ಗ ನಗರ ಹಾಗೂ ಟೆಕ್ ಪ್ರದೇಶವನ್ನು ಸಂಪರ್ಕಿಸುತ್ತದೆ. ವಿಶೇಷವಾಗಿ ಪ್ರತಿನಿತ್ಯ ಸಂಚರಿಸುವ ಸಾವಿರಾರು ತಂತ್ರಜ್ಞರಿಗೆ ನೆರವಾಗಲಿದೆ. ಈ ಮಾರ್ಗದಲ್ಲಿ 12 ನಿಲ್ದಾಣಗಳಿದ್ದು, 24 ನಿಮಿಷದಲ್ಲಿ ಅಂತರ ಕ್ರಮಿಸಬಹುದು. ಬೈಯಪ್ಪನಹಳ್ಳಿಯಿಂದ ಕೆ.ಆರ್.ಪುರದವರೆಗೆ 2 ಕಿ.ಮೀ. ಮೆಟ್ರೋ ಕಾಮಗಾರಿ ಬಾಕಿ ಇರುವುದರಿಂದ ನೇರ ಸಂಪರ್ಕಕ್ಕೆ ಪ್ರಯಾಣಿಕರು ಇನ್ನೂ ನಾಲ್ಕೈದು ತಿಂಗಳ ಕಾಯುವುದು ಅನಿವಾರ್ಯ. ಅಲ್ಲಿವರೆಗೆ ಫೀಡರ್ ಬಸ್‌ಗಳನ್ನು ಪ್ರಯಾಣಿಕರು ಅವಲಂಬಿಸಬೇಕಾಗಿದೆ.
6 ನಿಲ್ದಾಣ ಮರುನಾಮಕರಣ: ಈ ಮಾರ್ಗದಲ್ಲಿ ಒಟ್ಟು 12 ನಿಲ್ದಾಣಗಳಿವೆ. ಕನ್ನಡಿಗರ ಒತ್ತಾಸೆ ಮೇರೆಗೆ ಕೆ.ಆರ್. ಪುರಂ ನಿಲ್ದಾಣವನ್ನು ಕೃಷ್ಣರಾಜಪುರ (ಕೆ.ಆರ್.ಪುರ) ಎಂದು ಬದಲಿಸಲಾಗಿದೆ. ಇನ್ನು, ಮಹದೇವಪುರ ಮೆಟ್ರೋ ನಿಲ್ದಾಣವನ್ನು ಸಿಂಗಯ್ಯಪ್ಪನಪಾಳ್ಯ ನಿಲ್ದಾಣ, ಹೂಡಿ ಜಂಕ್ಷನ್ ಮೆಟ್ರೋ ನಿಲ್ದಾಣವನ್ನು ಹೂಡಿ, ಕಾಡುಗೋಡಿ ಮೆಟ್ರೋ ನಿಲ್ದಾಣವನ್ನು ಕಾಡುಗೋಡಿ ಟ್ರೀ ಪಾರ್ಕ್ ಹಾಗೂ ಚನ್ನಸಂದ್ರವನ್ನು ಹೋಮ್ ಫಾಮ್‌ರ್ ಚನ್ನಸಂದ್ರ, ವೈಟ್‌ಫೀಲ್ಡ್ ಅನ್ನು ವೈಟ್‌ಫೀಲ್ಡ್ (ಕಾಡುಗೋಡಿ) ಎಂದು ಮರುನಾಮಕರಣ ಮಾಡಲಾಗಿದೆ. ಉಳಿದಂತೆ ನಲ್ಲೂರು ಹಳ್ಳಿ, ಕುಂದಲಹಳ್ಳಿ, ಸೀತಾರಾಮಪಾಳ್ಯ, ಗರುಡಾಚಾರಪಾಳ್ಯ, ಪಟ್ಟಂದೂರು ಅಗ್ರಹಾರ, ಶ್ರೀ ಸಾಯಿ ಆಸ್ಪತ್ರೆ ನಿಲ್ದಾಣಗಳಿವೆ.
ಪ್ರಧಾನಿ ಮೋದಿ ‘ಮಹಾ’ ಮತ ಕಹಳೆ: ಸಿದ್ದರಾಮಯ್ಯಗೆ ಕಪಾಳಮೋಕ್ಷ ಟಾಂಗ್!
ವಿಶೇಷತೆಗಳಿವು
* 30 ಕಿ.ಮೀ. ಹಸಿರು ಮಾರ್ಗ, 39.31 ಕಿ.ಮೀ. ನೇರಳೆ ಮಾರ್ಗ
* ನೇರಳೆ ಮಾರ್ಗವು ನಗರದ ಅತೀ ಉದ್ದನೆಯ ಮೆಟ್ರೋ ಮಾರ್ಗ
* 4249 ಕೋಟಿ ವೆಚ್ಚದಲ್ಲಿ ನಿರ್ಮಾಣ, ಟೆಕ್ ಪಾರ್ಕ್ಗೆ ಸಂಪರ್ಕ
* ಬೈಯಪ್ಪನಹಳ್ಳಿ-ಕೆ.ಆರ್.ಪುರಕ್ಕೆ 2 ಕಿ.ಮೀ. ನಿರ್ಮಾಣ ಬಾಕಿ