ಮೆಟ್ರೋ ಪಿಲ್ಲರ್‌, ರಸ್ತೆ ಗುಂಡಿಯಿಂದ ಜನರ ಸಾವಿಗೆ ಸರ್ಕಾರ ಹೊಣೆ: ರಾಮಲಿಂಗಾರೆಡ್ಡಿ

ಕಟೀಲ್‌ ಅವರು ರಸ್ತೆ ಗುಂಡಿ, ಚರಂಡಿ ವಿಚಾರ ಬಿಟ್ಟು ಲವ್‌ಜಿಹಾದ್‌ ಬಗ್ಗೆ ಮಾತ್ರ ಮಾತನಾಡಿ’ ಎಂದು ಹೇಳಿಕೆ ನೀಡಿದ್ದಾರೆ. ಇಷ್ಟೆಲ್ಲಾ ಜನ ಅಮಾಯಕರು ಸಾವನ್ನಪ್ಪುತ್ತಿದ್ದರೂ ಅಂತಹ ಹೇಳಿಕೆ ನೀಡಿದ್ದಾರೆಂದರೆ ಬಿಜೆಪಿಯವರ ವಿಕೃತ ಮನಸ್ಥಿತಿ ಅರ್ಥವಾಗುತ್ತಿದೆ ಎಂದು ಕಿಡಿ ಕಾರಿದ ರಾಮಲಿಂಗಾರೆಡ್ಡಿ

KPCC Working President Ramalinga Reddy Slams BJP Government grg

ಬೆಂಗಳೂರು(ಜ.12): ‘ಮೆಟ್ರೋ ಪಿಲ್ಲರ್‌ ಬಿದ್ದ ದುರಂತದಲ್ಲಿ ಪುಟ್ಟಕಂದಮ್ಮ ಸೇರಿದಂತೆ ಎರಡು ಅಮಾಯಕ ಜೀವಗಳು ಬಲಿಯಾಗಿವೆ. ಇದೇ ರೀತಿ ರಸ್ತೆ ಗುಂಡಿಗಳಿಂದ ಈವರೆಗೆ 17 ಜನ ಪ್ರಾಣ ಕಳೆದುಕೊಂಡಿದ್ದಾರೆ. ಇವೆಲ್ಲಾ 19 ಸಾವುಗಳಿಗೂ ರಾಜ್ಯ ಸರ್ಕಾರವೇ ನೇರ ಕಾರಣ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಹೇಳಿದ್ದಾರೆ.

‘ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‌ಕುಮಾರ್‌ ಕಟೀಲ್‌ ಅವರು ರಸ್ತೆ ಗುಂಡಿ, ಚರಂಡಿ ವಿಚಾರ ಬಿಟ್ಟು ಲವ್‌ಜಿಹಾದ್‌ ಬಗ್ಗೆ ಮಾತ್ರ ಮಾತನಾಡಿ’ ಎಂದು ಹೇಳಿಕೆ ನೀಡಿದ್ದಾರೆ. ಇಷ್ಟೆಲ್ಲಾ ಜನ ಅಮಾಯಕರು ಸಾವನ್ನಪ್ಪುತ್ತಿದ್ದರೂ ಅಂತಹ ಹೇಳಿಕೆ ನೀಡಿದ್ದಾರೆಂದರೆ ಬಿಜೆಪಿಯವರ ವಿಕೃತ ಮನಸ್ಥಿತಿ ಅರ್ಥವಾಗುತ್ತಿದೆ ಎಂದು ಕಿಡಿ ಕಾರಿದರು.

ಬೆಂಗಳೂರಿನಲ್ಲಿ ಮೆಟ್ರೋ ಪಿಲ್ಲರ್‌ಗೆ ತಾಯಿ-ಮಗು ಬಲಿ: ಕಾಮಗಾರಿ ಸ್ಥಳದಲ್ಲಿ ಮೃತ್ಯು ರಣಕೇಕೆ

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮೆಟ್ರೋ ಕಾಮಗಾರಿಯ ಪಿಲ್ಲರ್‌ ಬಿದ್ದು ಮಗು ಹಾಗೂ ತಾಯಿ ಸಾವನ್ನಪ್ಪಿದ್ದಾರೆ. ಕಳೆದ ಎರಡು ದಿನಗಳಿಂದ ಈ ಪಿಲ್ಲರ್‌ ವಾಲಿದ್ದರೂ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ. ಇದು ಕೇವಲ 40 ಪರ್ಸೆಂಟ್‌ ಕಮಿಷನ್‌ನಲ್ಲಿ ಮುಳುಗಿರುವ ರಾಜ್ಯ ಸರ್ಕಾರ ಹಾಗೂ ಅಧಿಕಾರಿಗಳ ಬೇಜವಾಬ್ದಾರಿಯ ಪರಮಾವಧಿ. ಮೆಟ್ರೋ ಮುಖ್ಯಮಂತ್ರಿಗಳ ವ್ಯಾಪ್ತಿಗೆ ಬರುತ್ತದೆ. ಮೃತರಿಗೆ ಪರಿಹಾರ ನೀಡುವುದಾಗಿ ಹೇಳಿದ್ದಾರೆ. ಇವರು ನೀಡುವ ಪರಿಹಾರದಿಂದ ಹೋದ ಮಗುವಿನ ಜೀವ ವಾಪಸ್ಸು ಬರುತ್ತದೆಯೇ? ಎಂದು ಪ್ರಶ್ನಿಸಿದರು.

ಬೆಂಗಳೂರಿಗೆ ಅಷ್ಟದಿಕ್ಪಾಲಕರಂತೆ ಎಂಟು ಮಂದಿ ಸಚಿವರಾಗಿದ್ದಾರೆ. ಇಂತಹ ಘಟನೆ ಪದೇ ಪದೇ ಆಗುತ್ತಿದ್ದರೂ ಯಾವೊಬ್ಬ ಸಚಿವರೂ ತಲೆ ಕೆಡಿಸಿಕೊಳ್ಳುತ್ತಿಲ್ಲ. ಈ ಸರ್ಕಾರದ ದುರಾಡಳಿತಕ್ಕೆ ಇನ್ನು ಎಷ್ಟುಬಲಿ ಬೇಕು? ಈ ಭ್ರಷ್ಟಸರ್ಕಾರಕ್ಕೆ ಹಣ ಬಿಟ್ಟು ಬೇರೇನೂ ಕಾಣುವುದಿಲ್ಲ. 40 ಪರ್ಸೆಂಟ್‌ ಕಮಿಷನ್‌ ಆಸೆಗಾಗಿ ಕಳಪೆ ಕಾಮಗಾರಿ ನಡೆಸುವ ಬದಲು ಇನ್ನಾದರೂ ಸರ್ಕಾರ ಎಚ್ಚೆತ್ತುಕೊಳ್ಳಬೇಕು. ಮೆಟ್ರೋ ಪಿಲ್ಲರ್‌ ಆಗಲಿ, ರಸ್ತೆ ಗುಂಡಿ ಮುಚ್ಚುವುದಾಗಲಿ ಗುಣಮಟ್ಟದ ಕಾಮಗಾರಿ ಆಗಬೇಕು ಎಂದು ರಾಮಲಿಂಗಾರೆಡ್ಡಿ ಆಗ್ರಹಿಸಿದರು.

ತಾಕತ್ತಿದ್ದರೆ ಗುಣಮಟ್ಟದ ಕಾಮಗಾರಿ ಮಾಡಲಿ:

ಮುಖ್ಯಮಂತ್ರಿಗಳು ಮಾತೆತ್ತಿದರೆ ಧಮ್ಮು ತಾಕತ್ತಿನ ಬಗ್ಗೆ ಮಾತನಾಡುತ್ತಾರೆ. ಅವರಿಗೆ ಧಮ್ಮು ತಾಕತ್ತು ಇದ್ದರೆ ಗುಣಮಟ್ಟದ ಕಾಮಗಾರಿ ಮಾಡಲಿ. ಇಷ್ಟೆಲ್ಲಾ ಸಮಸ್ಯೆ ಅನಾಹುತಗಳಿಗೆ, ಬಿಜೆಪಿಯ ಹಣದಾಹ ಹಾಗೂ ದುರಾಡಳಿತವೇ ಕಾರಣ. ಈ ದುರಾಡಳಿತ ಕೊನೆಗಾಣಿಸುವ ಕಾಲ ಸನ್ನಿಹಿತವಾಗಿದೆ. ಡಬಲ್‌ ಎಂಜಿನ್‌ ಸರ್ಕಾರ ಕೇವಲ ಜನರ ಜೀವ ತೆಗೆಯುತ್ತಿದೆ ಹೊರತು ಅಭಿವೃದ್ದಿ ಬಗ್ಗೆ ಯಾವುದೇ ವಿಷಯ ಪ್ರಸ್ತಾಪ ಮಾಡುತ್ತಿಲ್ಲ. ಜನ ಈ ಅನಿಷ್ಟಸರ್ಕಾರದಿಂದ ಜನ ಬೇಸತ್ತಿದ್ದು, ಈ ಸರ್ಕಾರದಿಂದ ಮುಕ್ತಿ ಪಡೆಯುವ ಸಂಕಲ್ಪ ಮಾಡಿದ್ದಾರೆ ಎಂದರು.

Latest Videos
Follow Us:
Download App:
  • android
  • ios