ಕೊಪ್ಪಳ(ಮೇ.31): ಕೇಂದ್ರ ಸರ್ಕಾರದ ಬೇಜವಾಬ್ದಾರಿಯಿಂದ ದೇಶದಲ್ಲಿ ಕೊರೋನಾ ಮಹಾಮಾರಿ ಇಷ್ಟೊಂದು ಹರಡುತ್ತಿದೆ. ಪ್ರಾರಂಭದಲ್ಲಿಯೇ ಲಾಕ್‌ಡೌನ್‌ ಮಾಡುವುದನ್ನು ಬಿಟ್ಟು, ಆಪರೇಶನ್‌ ಕಮಲ ಮಾಡುವುದಕ್ಕೆ ಬ್ಯುಸಿಯಾಗಿದ್ದರಿಂದ ಈ ಸಮಸ್ಯೆ ತಲೆದೋರಿದೆ. ಈಗ ಕೇಂದ್ರ ಸರ್ಕಾರ 20 ಲಕ್ಷ ಕೋಟಿ ಪ್ಯಾಕೇಜ್‌ ಘೋಷಣೆ ಮಾಡಿ, ಅಂಗೈಯಲ್ಲಿ ಅರಮನೆ ತೋರಿಸುತ್ತಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಕಿಡಿಕಾರಿದ್ದಾರೆ.

ನಗರದ ಜಿಲ್ಲಾ ಕಾಂಗ್ರೆಸ್‌ ಕಾರ್ಯಾಲಯದಲ್ಲಿ ಕಾಂಗ್ರೆಸ್‌ ಪದಾಧಿಕಾರಿಗಳ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದರು.

ಭಾರತಕ್ಕೆ ಕಾಲಿಡುವ ಮುನ್ನವೇ ಕೊರೋನಾ ಚೀನಾ ಸೇರಿದಂತೆ ನಾನಾ ದೇಶಗಳಲ್ಲಿ ಹರಡಲಾರಂಭಿಸಿತು. ಆಗಲೇ ಎಚ್ಚೆತ್ತು, ವಿದೇಶದಿಂದ ಬರುವ ವಿಮಾನ ರದ್ದು ಮಾಡಿ, ಲಾಕ್‌ಡೌನ್‌ ಮಾಡಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ. ಆದರೆ ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ಮತ್ತು ಆಪರೇಶನ್‌ ಮಾಡುವುದರಲ್ಲಿ ಬ್ಯುಸಿಯಾಗಿದ್ದು ಸೇರಿದಂತೆ ನಾನಾ ಮಹಾನ್‌ ಕಾರ್ಯಗಳನ್ನು ಮೈಮರೆತಿದ್ದರಿಂದ ದೇಶ ಇಂದು ಕೊರೋ​ನಾ ಸಂಕಷ್ಟ ಎದುರಿಸುತ್ತಿದ್ದು, ಈಗ ಕೇಂದ್ರ ಸರ್ಕಾರದ ಸಂಪೂರ್ಣ ವೈಫಲ್ಯಕ್ಕೆ ಸಾಕ್ಷಿಯಾಗಿದೆ.

'ಸಾಲ ಕೊಡುವುದೇ ಪ್ಯಾಕೇಜಾ? ಅಂಗೈಲಿ ಅರಮನೆ ತೋರಿಸಿದ ಕೇಂದ್ರ ಸರ್ಕಾರ'

ಈ ನಡುವೆ ದೇಶದಲ್ಲಿ ಕೊರೋನಾ ವೇಳೆಯಲ್ಲಿ ಕೇವಲ ಲಾಕ್‌ಡೌನ್‌ ಮಾಡಿ ಕುಳಿತ ಸರ್ಕಾರ ಜನರ ನೆರವಿಗೆ ಧಾವಿಸಲಿಲ್ಲ. ಪರಿಣಾಮ ಅದೆಷ್ಟೋ ಕಾರ್ಮಿಕರು ಕಾಲ್ನಡಿಗೆಯಲ್ಲಿ ತೆರಳಿ ಪ್ರಾಣತೆತ್ತರು. ಎಲ್ಲೆಂದರಲ್ಲಿ ಸಿಕ್ಕಿಹಾಕಿಕೊಂಡು ಕಾರ್ಮಿಕರಿಗೆ ಅನ್ನವಿಲ್ಲದಂತೆ ಆಯಿತು. ಹೀಗೆ ಕೇಂದ್ರ ಸರ್ಕಾರದ ವೈಫಲ್ಯದಿಂದ ಸಾಮಾನ್ಯರು ನೋವು ಅನುಭವಿಸಬೇಕಾಯಿತು. ಸರ್ಕಾರ ಯಾವುದೇ ಇರಲಿ, ಸಂಕಷ್ಟದಲ್ಲಿರುವ ಜನರನ್ನು ರಕ್ಷಣೆ ಮಾಡುವುದು ಅದರ ಹೊಣೆ ಎನ್ನುವುದನ್ನೇ ಪ್ರಧಾನಿ ನರೇಂದ್ರ ಮೋದಿ ಅವರು ಮರೆತಂತೆ ಕಾಣುತ್ತದೆ ಎಂದರು.

20 ಲಕ್ಷ ಕೋಟಿ ಪ್ಯಾಕೇಜ್‌ ಘೋಷಣೆ ಮಾಡಿರುವ ಕೇಂದ್ರ ಸರ್ಕಾರ ಅದರಿಂದ ಯಾರಿಗೆ ಲಾಭವಾಗುತ್ತದೆ? ಅದಕ್ಕೆ ಹಣ ಎಲ್ಲಿಂದ ತರಲಾಗುತ್ತದೆ? ಎಂಬೆಲ್ಲ ಅಂಶಗಳನ್ನು ವಿವರಿಸಿಯೇ ಇಲ್ಲ. ಅದೊಂದು ರೀತಿಯಲ್ಲಿ ಗಾಳಿಯ ಗೋಪುರ ಅಷ್ಟೇ ಎಂದು ಹೇಳಿದರು.

ಗಾಳಿ ಗುಂಡು

ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಅವರು ಸತತವಾಗಿ ಗಾಳಿ ಗುಂಡುಗಳನ್ನು ಹಾರಿಸುತ್ತಲೇ ಇರುತ್ತಾರೆ. ಅದು ಅವರಿಗೆ ಕರಗತವಾಗಿದೆ. ಕಾಂಗ್ರೆಸ್‌ನಿಂದ ಯಾರೂ ಹೋಗುವ ಪ್ರಶ್ನೆಯೇ ಇಲ್ಲ. ಇನ್ನು ರಮೇಶ ಜಾರಕಿಹೊಳಿ ಅವರ ಪರಿಸ್ಥಿತಿಯೇ ಏನಾಗಿದೆ ಎಂದು ಅವರನ್ನೇ ಕೇಳಿ ಎಂದು ಪ್ರಶ್ನೆ ಮಾಡಿದರು.

ಇಂಥ ಸಂಕಷ್ಟದ ಸಮಯದಲ್ಲಿಯೂ ಬಿಜೆಪಿಯಲ್ಲಿ ಏನೇನೋ ಆಗುತ್ತಿದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿಯೇ ಆಗಿದೆ. ಲೆಕ್ಕಪರಿಶೋಧನಾ ಸಮಿತಿ ಸಭೆಯಲ್ಲಿ ಭಾಗವಹಿಸಿದ ವೇಳೆಯಲ್ಲಿ ಶಾಸಕ ಉಮೇಶ ಕತ್ತಿ ಅವರು ಅಸಮಾಧಾನ ಹೊರಹಾಕಿದ್ದರು. ಅವರು ಸಹ ಸಾರ್ವಜನಿಕ ಲೆಕ್ಕಪರಿಶೋಧನಾ ಸಮಿತಿಯ ಸದಸ್ಯರಾಗಿದ್ದು, ಸರ್ಕಾರದ ನಡೆ ಬಗ್ಗೆ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು. ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಶಿವರಾಜ ತಂಗಡಗಿ, ಶಾಸಕರಾದ ಅಮರೇಗೌಡ ಬಯ್ಯಾಪುರ, ರಾಘವೇಂದ್ರ ಹಿಟ್ನಾಳ, ಮಾಜಿ ಸಂಸದ ಶಿವರಾಮಗೌಡ, ಮಾಜಿ ಶಾಸಕ ಹಸನ್‌ಸಾಬ ದೋಟಿಹಾಳ ಇದ್ದರು.