ಯಾದಗಿರಿ(ಮೇ.30): ಕೇಂದ್ರ ಸರ್ಕಾರ 20 ಲಕ್ಷ ಕೋಟಿ ರುಪಾಯಿಗಳ ಹಣ ಘೋಷಣೆ ಅಂಗೈಲಿ ಅರಮನೆ ತೋರಿಸಿದಂತಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಟೀಕಿಸಿದ್ದಾರೆ.

ಶುಕ್ರವಾರ ನಗರದ ಕಾಂಗ್ರೆಸ್‌ ಪಕ್ಷದ ಜಿಲ್ಲಾ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಘೋಷಿಸಿರುವ 20 ಲಕ್ಷ ಕೋಟಿ ರೂಪಾಯಿಗಳ ಆರ್ಥಿಕ ಪ್ಯಾಕೇಜ್‌ ಯಾರಿಗೆ ಸಿಕ್ಕಿದೆ? ಸಾಲ ಕೊಡುವುದೇ ಪ್ಯಾಕೇಜಾ ಎಂದು ಪ್ರಶ್ನಿಸಿದ ಅವರು, ರೈತರು, ಕಾರ್ಮಿಕರ ಕೈಗೆ ನೇರ ಹಣದ ವರ್ಗಾವಣೆಯಾಗಬೇಕೆಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ ಎಂದರು.

ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಒಳಗಾಗಿರುವ ಆದಾಯ ತೆರಿಗೆ ವ್ಯಾಪ್ತಿಗೆ ಒಳಪಡದ ಜನಸಾಮಾನ್ಯರ ಬ್ಯಾಂಕ್‌ ಖಾತೆಗೆ 10 ಸಾವಿರ ಪರಿಹಾರವನ್ನು ಜಮಾ ಮಾಡಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು. ರಾಜ್ಯ ಸರ್ಕಾರ ಕೆಲವೇ ವರ್ಗಗಳಿಗೆ ಐದು ಸಾವಿರ ರುಪಾಯಿಗಳ ಪರಿಹಾರ ನೀಡಲಾಗಿದೆ. ಉಳಿದವರಿಗೂ ಪರಿಹಾರ ನೀಡಬೇಕು. ರೈತರ ಬೆಳೆಗಳಿಗೂ ವೈಜ್ಞಾನಿಕ ಬೆಲೆ ನೀಡಬೇಕೆಂದು ಎಂದು ಖಂಡ್ರೆ ಒತ್ತಾಯಿಸಿದರು.

ಯಾದಗಿರಿ: ಕ್ವಾರಂಟೈನ್ ಕೇಂದ್ರಗಳ ನಿರ್ವಹಣೆ, ಹೈರಾಣಾದ ಸರ್ಕಾರ

ಪೂರ್ವಸಿದ್ಧತೆ ಇಲ್ಲದೆ ಲಾಕ್‌ಡೌನ್‌:

ಕೊರೋನಾ ಲಾಕ್‌ ಡೌನ್‌ ಜಾರಿ ಮಾಡುವಲ್ಲಿ ಕೇಂದ್ರ ಸರ್ಕಾರ ಸಂಪೂರ್ಣ ಎಡವಿದೆ. ಯಾವುದೇ ಪೂರ್ವಸಿದ್ಧತೆ ಇಲ್ಲದೆ ಕೇವಲ ಮೂರು-ನಾಲ್ಕು ತಾಸು ಸಮಯ ಕೊಟ್ಟು ಬಂದ್‌ ಮಾಡಿದ್ದರಿಂದ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. 2019ರ ನವೆಂಬರ್‌ ನಲ್ಲೇ ಕೊರೋನಾ ಕಾಣಿಸಿಕೊಂಡಿದೆ. ಇಟಲಿ, ಚೀನಾದಲ್ಲಿ ಲಾಕ್‌ ಡೌನ್‌ ಮಾಡಿ ನಾಲ್ಕು ವಾರಗಳ ನಂತರ ಭಾರತದಲ್ಲಿ ಮಾಡಲಾಗಿದೆ. ಪೂರ್ವಸಿದ್ಧತೆ ಮಾಡಿಕೊಳ್ಳದ ಕಾರಣ ನೂರಾರು ಕಾರ್ಮಿಕರು ಮೃತಪಟ್ಟಿದ್ದಾರೆ. ನೀರು-ಆಹಾರ ಇಲ್ಲದೆ ಕಾಲಿನ ಚರ್ಮ ಕಿತ್ತು ಹೋಗುವಂತೆ ನಡೆದಿದ್ದಾರೆ. ಇದು ಮಾನವ ಹಕ್ಕುಗಳ ಕಗ್ಗೊಲೆಯಾಗಿದೆ. ಇದಕ್ಕೆ ಕೇಂದ್ರ ಸರ್ಕಾರವೇ ಹೊಣೆಯಾಗಿದ್ದು, ಈ ವಿಚಾರವಾಗಿ ಸುಪ್ರೀಂಕೋರ್ಟ್‌ ನಲ್ಲಿ ವಿಚಾರಣೆ ನಡೆಯುತ್ತಿದೆ ಎಂದರು. ಫೆಬ್ರುವರಿ ತಿಂಗಳಲ್ಲಿ ಕಾಂಗ್ರಸ್‌ ನಾಯಕ ರಾಹುಲ್‌ ಗಾಂಧಿ​ ಈ ಬಗ್ಗೆ ಸರ್ಕಾರವನ್ನು ಎಚ್ಚರಿಸಿದ್ದರೂ ಅದನ್ನು ಲಘುವಾಗಿ ಪರಿಗಣಿಸಲಾಗಿದೆ. ಈಗ ಕೊರೋನಾ ನಿಯಂತ್ರಣ ತಪ್ಪಿ ಹೋಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಜೂನ್‌ 7ಕ್ಕೆ ಪದಗ್ರಹಣ:

ಕೆಪಿಸಿಸಿ ಅಧ್ಯಕ್ಷರ ಹಾಗೂ ಪದಾ​ಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಬೆಂಗಳೂರಿನ ಕ್ವಿನ್ಸ್‌ ರಸ್ತೆಯಲ್ಲಿ ಜೂನ್‌ 7ರಂದು ನಡೆಸಲಾಗುತ್ತಿದೆ. ಸಂವಿಧಾನದ ಪೀಠಿಕೆಯನ್ನು ಓದಿ ಪ್ರಮಾಣ ವಚನ ಸ್ವೀಕರಿಸಲಾಗುತ್ತದೆ. ಗ್ರಾಮ ಪಂಚಾಯಿತಿ, ತಾಲ್ಲೂಕಿ ಪಂಚಾಯಿತಿ, ಜಿಲ್ಲಾ ಪಂಚಾಯಿತಿ, ಬ್ಲಾಕ್‌ ಮಟ್ಟ, ವಾರ್ಡ್‌ ಮಟ್ಟಮತ್ತು ಜಿಲ್ಲಾ ಮಟ್ಟದಲ್ಲಿ ಏಕಕಾಲಕ್ಕೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಒಂದು ಕಡೆ ಕಾಂಗ್ರೆಸ್‌ ಧ್ವಜ ಹಾಗೂ ಇನ್ನೊಂದು ಕಡೆಗೆ ರಾಷ್ಟ್ರ ಧ್ವಜ ಇರಲಿದೆ ಎಂದು ಈಶ್ವರ್‌ ಖಂಡ್ರೆ ಮಾಹಿತಿ ನೀಡಿದರು.