'ಬಿಜೆಪಿ ಸರ್ಕಾರ ಉರುಳಿಸಲು ಭಿನ್ನಮತವೇ ಸಾಕು, ವಿಪಕ್ಷ ಬೇಕಿಲ್ಲ'
ಬಿಜೆಪಿಯಲ್ಲಿನ ಭಿನ್ನಮತ, ಆಂತರಿಕ ಕಲಹಗಳು ಸರ್ಕಾರವನ್ನ ಉರುಳಿಸುತ್ತೆ: ಖಂಡ್ರೆ| ಖರೀದಿ ಮಾಡಿ ಸರ್ಕಾರ ನಡೆಸಿ, ಚುನಾವಣೆ ಬೇಕಿಲ್ಲ, ಆಯೋಗ ಯಾತಕ್ಕೆ| ಕಾಂಗ್ರೆಸ್ ಸರ್ಕಾರಗಳನ್ನ ಅಸ್ಥಿರಗೊಳಿಸುತ್ತಿರುವ ಬಿಜೆಪಿಗೆ ಜನ ಪಾಠ ಕಲಿಸ್ತಾರೆ: ಈಶ್ವರ ಖಂಡ್ರೆ|
ಬೀದರ್(ಆ.03): ಅಧಿಕಾರದ ಹಪಾಹಪಿಯಿಂದಾಗಿ ಬಿಜೆಪಿಯಲ್ಲಿ ಸಾಕಷ್ಟು ಭಿನ್ನಮತಗಳಿವೆ, ಆಂತರಿಕ ಕಲಹಗಳಿವೆ ಇಂಥ ಸಂದರ್ಭದಲ್ಲಿ ಸರ್ಕಾರವನ್ನು ಕೆಡವಲು ವಿಪಕ್ಷಗಳು ಏಕೆ ಅವರ ಪಕ್ಷದಲ್ಲಿರುವವರೇ ಸಾಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಲೇವಡಿ ಮಾಡಿದ್ದಾರೆ.
ಈ ಕುರಿತು ಭಾನುವಾರ ಭಾಲ್ಕಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ವಿಪಕ್ಷಗಳು ಸರ್ಕಾರವನ್ನು ಅಸ್ಥಿರಗೊಳಿಸುತ್ತವೆ ಎಂಬ ಮಾತುಗಳು ಸುಳ್ಳು. ಅವರ ಪಕ್ಷದವರೇ ಸರ್ಕಾರವನ್ನ ಬೀಳಿಸಲು ಮುಂದಾಗಿದ್ದಾರೆ. ಕೋವಿಡ್ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡುತ್ತಿದೆ. ಪ್ರಜಾಸತ್ತಾತ್ಮಕವಾಗಿ ಚುನಾವಣೆಯಲ್ಲಿ ಆಯ್ಕೆಯಾಗಿರುವ ಸರ್ಕಾರಗಳನ್ನು ಅಸ್ಥಿರಗೊಳಿಸುವ ಕೆಲಸ ಮಾಡುತ್ತಿರುವುದು ಅದೂ ಇಂಥ ಕೋವಿಡ್ ಸಂಕಷ್ಟದಲ್ಲಿ ಇಂಥ ಕೆಲಸ ಮಾಡುತ್ತಿದೆ ಎಂಬುವುದು ಇಡೀ ದೇಶದ ಜನರಿಗೆ ಇದು ಸ್ಪಷ್ಟವಾಗಿ ಗೊತ್ತಾಗಿದೆ ಎಂದರು.
ಈ ಹಿಂದೆ ಕರ್ನಾಟಕದಲ್ಲಿ ಆಯ್ತು, ಈಗ ಮಧ್ಯಪ್ರದೇಶ ಆಯ್ತು, ರಾಜಸ್ಥಾನದಲ್ಲಿ ಪ್ರಾರಂಭ ಮಾಡುತ್ತಿದ್ದಾರೆ. ಹೀಗಾದಲ್ಲಿ ಚುನಾವಣೆ ಯಾಕೆ ಬೇಕು. ಚುನಾವಣಾ ಆಯೋಗದದ್ದಾದರೂ ಏನು ಕೆಲಸ. ಎಲ್ಲರಿಗೂ ಖರೀದಿ ಮಾಡಿಬಿಡಿ ಎಂದು ಬಿಜೆಪಿ ವಿರುದ್ಧ ಕಿಡಿ ಕಾರಿದರು.
ಕುವೈತ್‌ನಲ್ಲಿ ಸಿಲುಕಿರುವ ಕನ್ನಡಿಗರು ಶೀಘ್ರ ಸ್ವದೇಶಕ್ಕೆ: ಈಶ್ವರ್ ಖಂಡ್ರೆ ಭರವಸೆ
ದೇಶದ ವಿವಿಧ ರಾಜ್ಯಗಳಲ್ಲಿರುವ ಕಾಂಗ್ರೆಸ್ ಆಡಳಿತದ ಸರ್ಕಾರಗಳನ್ನು ಅಸ್ತಿರಗೊಳಿಸುವಲ್ಲಿ ಮುಂದಾಗಿರುವ ಬಿಜೆಪಿಗೆ ಭವಿಷ್ಯದಲ್ಲಿ ದೇಶದ ಜನತೆ ತಕ್ಕ ಪಾಠ ಕಲಿಸಲಿದ್ದಾರೆ. ಅವರ ಆಟ ಬಹಳ ದಿನ ನಡೆಯೋಲ್ಲ. ಪ್ರಜಾಪ್ರಭುತ್ವ ವಿರೋಧಿ ತಂತ್ರಗಾರಿಕೆಗೆ ಉಳಿಗಾಲವಿಲ್ಲ ಎಂದು ಈಶ್ವರ ಖಂಡ್ರೆ ಎಚ್ಚರಿಸಿದರು.
ವಿದೇಶದಲ್ಲಿ ಸಿಲುಕಿರುವ ಕನ್ನಡಿಗರನ್ನು ತಕ್ಷಣವೇ ತಾಯ್ನಾಡಿಗೆ ಕರೆ ತರುವ ಕಾರ್ಯವಾಗಬೇಕು. ಕೊರೋನಾ ಮಹಾಮಾರಿಯ ಪರಿಣಾಮದಿಂದ ಉದ್ಯೋಗ ಕಳೆದುಕೊಂಡಿರುವ ಅವರನ್ನು ತಕ್ಷಣವೇ ತಾಯ್ನಾಡಿಗೆ ಕರೆತರುವ ಕಾರ್ಯವಾಗಬೇಕು ಎಂದು ಈಶ್ವರ ಖಂಡ್ರೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಗೆ ಆಗ್ರಹಿಸಿದರು.
ಕುವೈತ್ ಸೇರಿದಂತೆ ಗಪ್ಫ್ ರಾಷ್ಟ್ರಗಳಲ್ಲಿ ಹೈದ್ರಾಬಾದ್ ಮೂಲದ ಮೆಗಾ ಇನ್ಫ್ರಾಸ್ಟ್ರಕ್ಷರ್ ಕಂಪನಿಯಿಂದ ತೆರಳಿದ್ದ ಯುವಕರನ್ನು ಇದೀಗ ಕಂಗಾಲಾಗಿದ್ದಾರೆ ನಮ್ಮ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರಗಳೆರಡೂ ಕರ್ನಾಟಕದ ಯವಕರೊಂದಿಗೆ ಸ್ಪಂದಿಸುವ ಕಾರ್ಯಮಾಡುತ್ತಿಲ್ಲ ಎಂದು ಆರೋಪಿಸಿದರು.
ಕೇಂದ್ರ ಸರ್ಕಾರ ಕರ್ನಾಟಕದ ಜೊತೆಯಲ್ಲಿ ತಾರತಮ್ಯ ನೀತಿ ಅನುಸರಿಸುತ್ತಿದೆ. ಈ ಮೊದಲು ಒಂದೇ ಭಾರತ ಮಿಷನ್ ಅಡಿಯಲ್ಲಿ ಕೇರಳಕ್ಕೆ 800 ವಿಮಾನಗಳನ್ನು ಕಳುಸಿ ಅಲ್ಲಿಯ ಎಲ್ಲರನ್ನೂ ಕರೆಸಿಕೊಂಡಿರುವ ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಕೇವಲ 20 ರಿಂದ 25 ವಿಮಾನಗಳನ್ನು ಮಾತ್ರ ಕಳುಹಿಸಿ ತಾರತಮ್ಯ ನೀತಿ ಅನುಸರಿಸಿತು. ಅಲ್ಲದೇ ಕುವೈತ್‌ನಿಂದ ಇದುವರೆಗೆ ಒಂದೂ ವಿಮಾನ ನಮ್ಮ ದೇಶಕ್ಕೆ ಬಂದಿಲ್ಲ, ನಮ್ಮವರ ತೊಂದರೆ ಸರಿಪಡಿಸುವ ಕಾರ್ಯಮಾಡಬೇಕು ಇಲ್ಲವಾದಲ್ಲಿ ಕಾಂಗ್ರೆಸ್ ಪಕ್ಷ ಸರ್ಕಾರದ ವಿರುದ್ಧ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಖಂಡ್ರೆ ಎಚ್ಚರಿಸಿದರು.