Asianet Suvarna News Asianet Suvarna News

ಯಾದಗಿರಿ: ಕ್ವಾರಂಟೈನ್ ಕೇಂದ್ರಗಳ ನಿರ್ವಹಣೆ, ಹೈರಾಣಾದ ಸರ್ಕಾರ

14 ದಿನಗಳಿಂದ 7 ದಿನಗಳಿಗೆ ಇಳಿಸಿದರ ಹಿಂದಿನ ಅನಿವಾರ್ಯತೆ| ಕೋವಿಡ್ ಟೆಸ್ಟ್ ಮಾಡಿಸದೆಯೆ ಬಿಡುಗಡೆಗೊಳಿಸಿದರೆ ಮತ್ತಷ್ಟೂ ಆತಂಕ| ಕ್ವಾರಂಟೈನ್ ಕೇಂದ್ರಗಳಿಂದ ಹಳ್ಳಿ, ನಗರ ಪ್ರದೇಶಗಳತ್ತ ಸೋಂಕು ಹಬ್ಬುವ ಆತಂಕ|

Government Faces Problems for Maintenance of Quarantine Centers in Yadgir District
Author
Bengaluru, First Published May 30, 2020, 9:33 AM IST

ಆನಂದ್ ಎಂ. ಸೌದಿ

ಯಾದಗಿರಿ(ಮೇ.30): ವಲಸಿಗರ ಪ್ರತ್ಯೇಕವಾಗಿರಿಸಲು ಆರಂಭಿಸಿದ್ದ ಕ್ವಾರಂಟೈನ್ ಕೇಂದ್ರಗಳ ನಿರ್ವಹಣೆ ವಿಚಾರದಲ್ಲಿ ಹೈರಾಣಾದಂತಿರುವ ಸರ್ಕಾರ, ಸಾಂಸ್ಥಿಕ ಕ್ವಾರಂಟೈನ್ (ಇನ್ಸಟಿಟ್ಯೂಷನಲ್ ಕ್ವಾರಂಟೈನ್) ಸ್ಥಗಿತಗೊಳಿಸಿ, ಹೋಂ ಕ್ವಾರಂಟೈನ್‌ಗೆ ಆದೇಶಿಸಿದೆಯೇ ಅನ್ನೋ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಮೂಡಿಬರುತ್ತಿವೆ.

ಕ್ವಾರಂಟೈನ್ ಕೇಂದ್ರಗಳಲ್ಲಿ ಅವ್ಯವಸ್ಥೆ ಹಾಗೂ ಅಲ್ಲಿಯೇ ಸೋಂಕು ಹೆಚ್ಚು ಹಬ್ಬುತ್ತಿರುವದನ್ನು ಮನಗಂಡ ಸರ್ಕಾರ ಇಂತಹ ನಿರ್ಧಾರದ ಮೂಲಕ ವಲಸಿಗರನ್ನು ಸಮಾಧಾನಪಡಿಸುವ ಯತ್ನ ನಡೆಸಿದೆಯಾದರೂ, ಮುಂಬರುವ ದಿನಗಳಲ್ಲಿ ಇದು ಭಾರಿ ಸಂಕಷ್ಟಕ್ಕೆ ಸಿಲುಕಿಸಬಹುದು ಎನ್ನಲಾಗುತ್ತಿದೆ. ಕೋವಿಡ್ ಟೆಸ್ಟ್ ಮಾಡಿಸದೆಯೆ ಬಿಡುಗಡೆಗೊಳಿಸಿದರೆ ಮತ್ತಷ್ಟೂ ಆತಂಕ ಮೂಡಿಸಿದೆಯೆಲ್ಲದೆ, ಕ್ವಾರಂಟೈನ್ ಕೇಂದ್ರಗಳಿಂದ ಹಳ್ಳಿ, ನಗರ ಪ್ರದೇಶಗಳತ್ತ ಸೋಂಕು ಹಬ್ಬುವ ಸಾಧ್ಯತೆಯಿದೆ.

ಕೊರೋನಾ ಕಾಟ: ಯಾದಗಿರಿ ವ್ಯಕ್ತಿಯ ರಿಪೋರ್ಟ್‌ನಲ್ಲಿ ಗೊಂದಲವೋ ಗೊಂದಲ !

ಕ್ವಾರಂಟೈನ್ ಕೇಂದ್ರಗಳಲ್ಲಿ ಏಳು ದಿನಗಳ ಪೂರೈಸಿದವರಲ್ಲಿ ಯಾವುದೆ ರೋಗ ಲಕ್ಷಣಗಳು ಕಾಣದಿದ್ದರೆ, ಕೋವಿಡ್ ಟೆಸ್ಟ್ ಮಾಡದಿದ್ದರೂ ಪರವಾಗಿಲ್ಲ ಅವರನ್ನು ಹೋಂ ಕ್ವಾರಂಟೈನ್ ಮಾಡುವ ಬಗ್ಗೆ ಆರೋಗ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೆದ್ ಅಖ್ತರ್ ಅವರು ಮೇ 27 ರಂದು ಆದೇಶ ಹೊರಡಿಸಿದ್ದಾರೆ.

ಹಾಗೆ ನೋಡಿದರೆ, ಎಂಟು ದಿನಗಳಾದ ನಂತರ ಕೋವಿಡ್ ಸೋಂಕಿನ ಲಕ್ಷಣಗಳು ಹಂತ ಹಂತವಾಗಿ ಕಾಣಿಸಿಕೊಳ್ಳುತ್ತವೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ವರದಿಯಂತೆ ಮಾರ್ಚ್ ಅರಂಭದಲ್ಲಿ ಸರ್ಕಾರ ಹೇಳಿತ್ತು. ಅಲ್ಲದೆ, ಕೋವಿಡ್ ಟೆಸ್ಟ್ ಕಡಮೆಯಾಗುತ್ತಿರುವುದನ್ನು ಪ್ರಶ್ನಿಸಿದಾಗ, ಸೋಂಕು 9 ರಿಂದ 12 ದಿನಗಳ ಅಂತರದಲ್ಲಿ ಕಾಣಿಸಿಕೊಳ್ಳುತ್ತದೆ. ಈಗ ಮಾಡಿದರೆ (1 ರಿಂದ 7 ದಿನಗಳು) ವರದಿ ಪರಿಪೂರ್ಣವಾಗಿರುವುದಿಲ್ಲ ಎಂದಿತ್ತು. ಆದರೀಗ, ಏಳೇ ದಿನಗಳಿಗೆ ಮನೆಗೆ ಹೋಗಲು ಅನುಮತಿ ನೀಡಿರುವುದು ಅಚ್ಚರಿ ಮೂಡಿಸಿದೆ, ಅದೂ ಕೋವಿಡ್ ಟೆಸ್ಟ್ ಮಾಡದಿದ್ದರೂ ಸಹ !

ಅನೇಕ ಕಡೆಗಳಲ್ಲಿ ನೆಗಟಿವ್ ಬಂದ ಮೂರ್‍ನಾಲ್ಕು ದಿನಗಳಲ್ಲೇ ಪಾಸಿಟಿವ್ ಬಂದ ಪ್ರಕರಣಗಳೂ ಇವೆ. ಯಾದಗಿರಿಯ ದುಕಾನವಾಡಿ ವ್ಯಕ್ತಿಯ (ಪಿ-1758) ರಿಪೋರ್ಟ್ ಕಲಬುರಗಿಯಲ್ಲಿ ನೆಗೆಟಿವ್ ಬಂದ ಮೂರೇ ದಿನಗಳಲ್ಲಿ ಪಾಸಿಟಿವ್ ಬಂದಿತ್ತಲ್ಲದೆ, ಸೋಂಕಿತ 14 ತಿಂಗಳ ಮಗಳಿಗೂ (ಪಿ-1874) ಸೋಂಕು ದೃಢಪಟ್ಟಿತ್ತು.

ಯಾದಗಿರಿ ಜಿಲ್ಲೆಯ 224 ಕ್ವಾರಂಟೈನ್ ಕೇಂದ್ರಗಳಲ್ಲಿರುವ 14500 ಕ್ಕೂ ಹೆಚ್ಚು ಜನರನ್ನು ಹಂತ ಹಂತವಾಗಿ ಬಿಡುಗಡೆ ಮಾಡಲಾಗುತ್ತಿದೆ. ಈ ಎರಡು ದಿನಗಳಲ್ಲಿ ಈಗಾಗಲೇ ಮುನ್ನೂರಕ್ಕೂ ಹೆಚ್ಚು ಜನರನ್ನು ಅವರವರ ಗ್ರಾಮಗಳಿಗೆ ಕಳುಹಿಸಿ, ಹೋಂ ಕ್ವಾರಂಟೈನ್‌ಗೆ ಸೂಚಿಸಲಾಗಿದೆ. ಜಿಲ್ಲೆಯಲ್ಲಿ ಕಳೆದ 17 ದಿನಗಳ ಅಂತರದಲ್ಲಿ 223 ಪ್ರಕರಣಗಳು ಪತ್ತೆಯಾಗಿವೆ.

ಮಹಾರಾಷ್ಟ್ರದ ಮುಂಬೈ, ಥಾಣೆ, ಪುಣೆಯಿಂದ ಆಗಮಿಸಿದ ವಲಸಿಗರಲ್ಲೆ ಹೆಚ್ಚು ಸೋಂಕು ಕಾಣಿಸಿಕೊಂಡಿದೆ. ಅವರೆಲ್ಲರೂ ಕ್ವಾರಂಟೈನ್ ಕೇಂದ್ರಗಳಲ್ಲಿದ್ದವರು. ಇನ್ನೂ ಸುಮಾರು 10 ಸಾವಿರಕ್ಕೂ ಅಽಕರ ಕೋವಿಡ್ ಟೆಸ್ಟ್ ಆಗಬೇಕಿದೆ. ಈಗ, ಸರ್ಕಾರದ ಈ ಆದೇಶದಿಂದಾಗಿ ಮನೆಗೆ ಮರಳುವ ತವಕದಲ್ಲಿರುವ ವಲಸಿಗರಿಗೆ ಸಂತಸ ಮೂಡಿಸಬಹುದಾದರೂ, ಮುಂದಿನ ದಿನಗಳಲ್ಲಿ ಭಾರಿ ಬೆಲೆ ತೆರಬೆಕಾಗುತ್ತದೆ ಎಂದು ವೈದ್ಯರ ಅಭಿಪ್ರಾಯವಾಗಿತ್ತು.

ನಮ್ಮ ಭಾಗದಲ್ಲಿ ವಲಸಿಗರ ಸಂಖ್ಯೆ ಹೆಚ್ಚಿದೆ. ಈ ಸಮಯದಲ್ಲಿ ಕ್ವಾರಂಟೈನ್ ಹಾಗೂ ಟೆಸ್ಟ್‌ಗಳನ್ನು ಬಿಗಿಗೊಳಿಸಬೆಕು. ವಲಸಿಗರಲ್ಲೇ ಹೆಚ್ಚು ಸೋಂಕು ಕಾಣಿಸಿಕೊಳ್ಳುವ ಇಂತಹ ಸಂದರ್ಭದಲ್ಲಿ ನಿರ್ಲಕ್ಷ್ಯ ಬೇಡ ಎಂದು ಕರ್ನಾಟಕ ರಾಜ್ಯ ಸರ್ಕಾರದ ಕೋವಿಡ್ ಸಲಹಾ ಸಮಿತಿ ಸದಸ್ಯ ಡಾ. ಗುರುರಾಜ್ ಅರಕೇರಿ ಅವರು ಹೇಳಿದ್ದಾರೆ. 
 

Follow Us:
Download App:
  • android
  • ios