ಮುಂದಿನ ಸಿಎಂ ಎಂದು ಕೂಗಿ ನನ್ನ ಹಾಳು ಮಾಡಬೇಡಿ: ಡಿಕೆಶಿ
* ನಿಮ್ಮ ಅಭಿಮಾನ ಮುಂದೆ ತೋರಿಸಿ: ಕಾರ್ಯಕರ್ತರಿಗೆ ಡಿಕೆಶಿ ಮನವಿ
* ಯಾರೂ ಜೈಕಾರ ಹಾಗೂ ಮುಂದಿನ ಮುಖ್ಯಮಂತ್ರಿ ಎಂದು ಕೂಗಬೇಡಿ ಶಾಂತವಾಗಿರಿ.
* ಸಂದರ್ಭ ಬಂದಾಗ ನನ್ನ ಬೆಂಬಲಕ್ಕೆ ಇರಿ
ಬಾಗಲಕೋಟೆ(ಜು.19): ‘ಯಾರೂ ಜೈಕಾರ ಕೂಡ ಮುಂದಿನ ಸಿಎಂ ಎಂದು ಈಗಲೇ ಕೂಗಿ ನನ್ನನ್ನು ಹಾಳು ಮಾಡಬೇಡಿ. ನಿಮ್ಮ ಅಭಿಮಾನ ಏನಾದರೂ ಇದ್ದರೆ ಮುಂದೆ ತೋರಿಸುವಿರಂತೆ’
ಇದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಬಾಗಲಕೋಟೆ ಜಿಲ್ಲೆಯ ಬನಹಟ್ಟಿ ಬಸವೇಶ್ವರ ಸಮುದಾಯ ಭವನದಲ್ಲಿ ಭಾನುವಾರ ನಡೆದ ನೇಕಾರರ ಸಂವಾದ ಕಾರ್ಯಕ್ರಮದಲ್ಲಿ ‘ಮುಂದಿನ ಸಿಎಂ ಡಿಕೆಶಿ’ ಎಂದು ಜೈಕಾರ ಹಾಕಿದ ಅಭಿಮಾನಿಗಳಿಗೆ ಕೈಮುಗಿದು ಬೇಡಿಕೊಂಡ ಪರಿ.
ಯಡಿಯೂರಪ್ಪ ಚೇರ್ ಉಳಿಯುತ್ತೋ, ಬೀಳುತ್ತೋ?: ಅಚ್ಚರಿ ಹೇಳಿಕೆ ಕೊಟ್ಟ ಡಿಕೆಶಿ
ವಿಜಯಪುರ ಜಿಲ್ಲೆಯಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲೂ ಅವರು ಈ ರೀತಿಯಾಗಿ ಅಭಿಮಾನಿಗಳು ಕೂಗಿದಾಗ ಮೊದಲು ಪಕ್ಷವನ್ನು ಅಧಿಕಾರಕ್ಕೆ ತರಲು ಪ್ರಯತ್ನಿಸೋಣ ಎಂದಿದ್ದರು. ಭಾನುವಾರವೂ ಅಭಿಮಾನಿಗಳು ‘ಮುಂದಿನ ಸಿಎಂ ಡಿಕೆ, ಡಿಕೆ.....’ ಎಂದು ಘೋಷಣೆ ಕೂಗಿದಾಗ ‘ಯಾರೂ ಜೈಕಾರ ಹಾಗೂ ಮುಂದಿನ ಮುಖ್ಯಮಂತ್ರಿ ಎಂದು ಕೂಗಬೇಡಿ ಶಾಂತವಾಗಿರಿ. ಅದನ್ನೆಲ್ಲಾ ಮಾಡಬೇಡಿ. ನೀವು ಹಾಗೆ ಮಾಡಿದರೆ ನನ್ನ ಹಾಳು ಮಾಡೋಕೆ ಅಂತ ಅನಿಸುತ್ತದೆ. ಈಗಲೇ ಕೂಗಿ ನನ್ನನ್ನು ಹಾಳುಮಾಡಬೇಡಿ. ನಿಮ್ಮ ಅಭಿಮಾನ ಏನಾದರೂ ಇದ್ದರೆ ಮುಂದೆ ತೋರಿಸಿವಿರಂತೆ. ಸಂದರ್ಭ ಬಂದಾಗ ನನ್ನ ಬೆಂಬಲಕ್ಕೆ ಇರಿ’ ಎಂದು ಹೇಳಿದರು.