ಶಿವಮೊಗ್ಗ (ಆ.20): ಮುಖ್ಯಮಂತ್ರಿಗಳು ಕೂಡಲೇ ಸರ್ವಪಕ್ಷ ಸಭೆ ಕರೆಯಬೇಕು. ರಾಜ್ಯದಲ್ಲಿ ಎದುರಾಗಿರುವ ಪ್ರವಾಹ ಪರಿಸ್ಥಿತಿಯನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸುವಂತೆ ಕೇಂದ್ರದ ಮೇಲೆ ಒತ್ತಡ ತರಬೇಕು. ಇಲ್ಲವಾದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಒತ್ತಾಯಿಸಿದರು.

ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ ಉದ್ಭವವಾಗಿದ್ದು, ಶಿವಮೊಗ್ಗ, ಉತ್ತರ ಕರ್ನಾಟಕ, ಬೆಳಗಾವಿ, ಕೊಡಗು ಸೇರಿದಂತೆ ಬಹಳಷ್ಟುಕಡೆ ಆಸ್ತಿ ಪಾಸ್ತಿ ನಷ್ಟವಾಗಿದೆ. ಭಾರೀ ಪ್ರಮಾಣದಲ್ಲಿ ಜಾನುವಾರು ಹಾಗೂ ಬೆಳೆ ನಾಶವಾಗಿದೆ. ಮನೆಗಳು ಬಿದ್ದು ಅನಾಹುತವಾಗಿದೆ. 2015 ರಲ್ಲಿ ಉತ್ತರ ಕರ್ನಾಟಕದಲ್ಲಿ ಇದೇ ರೀತಿ ಪ್ರವಾಹ ಪರಿಸ್ಥಿತಿ ಉದ್ಭವವಾಗಿತ್ತು. ಈ ಬಾರಿ ಅದಕ್ಕಿಂತ ದೊಡ್ಡ ಪ್ರಮಾಣದಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದೆ. ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರೇ ಇದು ಬಹಳ ದೊಡ್ಡ ವಿಕೋಪ ಎಂದು ಹೇಳಿದ್ದಾರೆ. ಆದರೆ 12-13 ದಿನ ಕಳೆದರೂ ಸಹ ಕೇಂದ್ರ ಸರ್ಕಾರ ಈ ಬಗ್ಗೆ ಗಮನಕೊಡುತ್ತಿಲ್ಲ. ತಾತ್ಕಾಲಿಕ ಪರಿಹಾರವನ್ನೂ ಬಿಡುಗಡೆ ಮಾಡಿಲ್ಲ ಎಂದು ಆರೋಪಿಸಿದರು.

ಶಿವಮೊಗ್ಗದ ಸುದ್ದಿ ಓದಲಿ ಇಲ್ಲಿ ಕ್ಲಿಕ್ ಮಾಡಿ

ರಾಜ್ಯ ಹಾಗೂ ಕೇಂದ್ರದಲ್ಲಿ ಬಿಜೆಪಿ ಸರ್ಕಾರವೇ ಇವೆ. ಆದರೂ ಸಹ ರಾಜ್ಯದಲ್ಲಿ ಅತಿವೃಷ್ಟಿಯಿಂದ ಭಾರೀ ನಷ್ಟವುಂಟಾಗಿದ್ದರೂ ಕೇಂದ್ರ ಸರ್ಕಾರ ಈ ಬಗ್ಗೆ ಬೇಜವಬ್ದಾರಿತನವನ್ನು ತೋರುತ್ತಿದೆ. ಮುಖ್ಯಮಂತ್ರಿಗಳು ಮೃತ ಕುಟುಂಬಗಳಿಗೆ 5 ಲಕ್ಷ ರು. ಕೊಡುವುದಾಗಿ ಹೇಳಿದ್ದಾರೆ. ಇನ್ನುಳಿದ ನೆರೆ ಸಂತ್ರಸ್ತರಿಗೆ ಪರಿಹಾರ ಘೋಷಿಸಲು ರಾಜ್ಯ ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ. ಕೇಂದ್ರ ಸರ್ಕಾರ ತಕ್ಷಣಕ್ಕೆ ತಾತ್ಕಾಲಿಕ ಪರಿಹಾರವಾಗಿ 5 ಸಾವಿರ ಕೋಟಿ ರು.ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದರು.

ಫೋನ್‌ ಕದ್ದಾಲಿಕೆ ಸರ್ಕಾರಕ್ಕೆ ಬಿಟ್ಟವಿಷಯ:

ಫೋನ್‌ ಕದ್ದಾಲಿಕೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿರುವುದು ಸರ್ಕಾರಕ್ಕೆ ಬಿಟ್ಟವಿಷಯವಾಗಿದೆ. ತನಿಖೆ ಮಾಡಲಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಿ. ಆದರೆ ಗೌರಿ ಲಂಕೇಶ್‌ ಹಂತಕರನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾದ ಸಿಒಡಿ, ಎಸ್‌ಐಟಿ ಮೇಲೆ ರಾಜ್ಯ ಸರ್ಕಾರಕ್ಕೆ ನಂಬಿಕೆ ಇಲ್ಲವೆ ಎಂದು ಪ್ರಶ್ನಿಸಿದರು.

ಪ್ರಧಾನಿಗೆ ಪುರುಸೊತ್ತಿಲ್ಲ ....

ಸಣ್ಣ ಸಣ್ಣ ವಿಷಯಗಳಿಗೂ ಟ್ವೀಟ್‌ ಮಾಡುವ ಪ್ರಧಾನಿ ನರೇಂದ್ರ ಮೋದಿಯವರಿಗೆ ರಾಜ್ಯದಲ್ಲಿ ಪ್ರವಾಹದಿಂದ ಮೂರಾಬಟ್ಟೆಯಾಗಿರುವ ಸಂತ್ರಸ್ತರ ಕುರಿತು ಸೌಜನ್ಯದ ಮಾತು ಆಡಲು ಸಹ ಪುರುಸೊತ್ತಿಲ್ಲ. ಕರ್ನಾಟಕ, ಕೇರಳ, ಮಹಾರಾಷ್ಟ್ರ, ಬಿಹಾರ ಸೇರಿದಂತೆ ವಿವಿಧೆಡೆ ಮಳೆ ಹಾಗೂ ಪ್ರವಾಹದಿಂದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಲ್ಲಿಗೆ ಭೇಟಿ ನೀಡುವ ಸೌಜನ್ಯ ಕೂಡ ಇಲ್ಲ. ಕಾಂಗ್ರೆಸ್‌ ಈ ಕುರಿತು ಪ್ರಶ್ನಿಸಿ ನೆರವು ನೀಡುವಂತೆ ಕೋರಿದರೆ, ಕಾಂಗ್ರೆಸ್‌ ಪಕ್ಷವನ್ನು ಹಿಂದೂ ವಿರೋಧಿ, ದೇಶದ್ರೋಹಿಗಳು ಎಂದು ಬಿಂಬಿಸಲಾಗುತ್ತಿದೆ. ಅಮಿತ್‌ ಶಾ, ನಿರ್ಮಲಾ ಸೀತಾರಾಮನ್‌ ಭೇಟಿ ನೀಡಿದರೂ ಪ್ರಯೋಜನವಾಗಿಲ್ಲ. ಯಡಿಯೂರಪ್ಪ ದೆಹಲಿಗೆ ಹೋಗಿ ಬಂದರೂ ಏನೂ ಸಿಕ್ಕಿಲ್ಲ ಎಂದು ದಿನೇಶ್‌ ಗುಂಡುರಾವ್‌ ಟೀಕಿಸಿದರು.