ಕೇಂದ್ರ-ರಾಜ್ಯ ಸರ್ಕಾರಕ್ಕೆ ಕರುಣೆ ಇಲ್ಲ: ದೇಶಪಾಂಡೆ ವಾಗ್ದಾಳಿ
* ರಾಜಕೀಯ ಕ್ಷೇತ್ರಕ್ಕೆ ಬೊಮ್ಮಾಯಿ ಕುಟುಂಬದ ಕೊಡುಗೆ ಅಪಾರ
* ಬೊಮ್ಮಾಯಿ ಉತ್ತಮ ಆಡಳಿತ ನೀಡುತ್ತಾರೆ ಎಂಬ ವಿಶ್ವಾಸ ನಮಗಿದೆ
* ಬೆಲೆ ಏರಿಕೆಯಿಂದ ತತ್ತರಿಸಿ ಹೋದ ದೇಶದ ಜನತೆ
ಮುಂಡಗೋಡ(ಜು.30): ರಾಜ್ಯ ಹಾಗೂ ಕೇಂದ್ರ ಬಿಜೆಪಿ ಸರ್ಕಾರಕ್ಕೆ ಕರುಣೆ ಎಂಬುವುದಿಲ್ಲ. ಜನರ ದುಖ ನೋಡಲು ಕಣ್ಣಿಲ್ಲ. ಕಷ್ಟ ಕೇಳಲು ಕಿವಿ ಇಲ್ಲ. ರೈತರ ಬೆಳೆಗೆ ಬೆಲೆ ಇಲ್ಲ. ಬೆಲೆ ಏರಿಕೆಯಿಂದ ಜನ ತತ್ತರಿಸಿ ಹೋಗಿದ್ದಾರೆ. ಈ ನಡುವೆ ಕೊರೋನಾ ಲಾಕ್‌ಡೌನ್ ನಿಂದ ಉದ್ಯಮ ಸ್ಥಗಿತಗೊಂಡಿವೆ. ಅಂಗಡಿಗಳು, ಹೋಟೆಲ್‌ಗಳು ಬಂದ್ ಆಗಿವೆ. ಬೀದಿ ವ್ಯಾಪಾರಸ್ಥರು ದುಡಿಮೆ ಇಲ್ಲದೆ ಪರದಾಡುವಂತಾಗಿದೆ ಎಂದು ಕೆಪಿಸಿಸಿ ಸದಸ್ಯ ಪ್ರಶಾಂತ ದೇಶಪಾಂಡೆ ಹೇಳಿದ್ದಾರೆ.
ಕ್ಷೇತ್ರದ ವಿವಿಧ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಬಳಿಕ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಳೆ ಹಾಗೂ ಪ್ರವಾಹದಿಂದ ಜನರು ತೀವ್ರ ಸಂಕಷ್ಟದಲ್ಲಿದ್ದಾರೆ. ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆಯನ್ನು ಪರಿಹರಿಸುವ ಕೆಲಸ ಮಾಡಲಾಗುತ್ತಿದೆ. ಕಾಂಗ್ರೆಸ್ ಪಕ್ಷದ ಸಹಾಯ ಹಸ್ತ ಕಾರ್ಯಕ್ರದಡಿ ಎಲ್ಲರ ಕಷ್ಟದ ಬಗ್ಗೆ ಮಾಹಿತಿ ಸಂಗ್ರಹಿಸಿ ಜನರಿಗೆ ಧೈರ್ಯ ತುಂಬಿ ಸಾಧ್ಯವಾದ ನೆರವು ನೀಡುವ ಕೆಲಸ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಡಿಕೆಶಿ-ಸಿದ್ದರಾಮಯ್ಯ ಮಧ್ಯೆ ಬಿರುಕು: ದೇಶಪಾಂಡೆ ಹೇಳಿದ್ದೇನು?
ಕೋವಿಡ್‌ನಿಂದ ಮೃತಪಟ್ಟವರಿಗೆ ಪರಿಹಾರ ನೀಡಬೇಕಾಗುತ್ತದೆ ಎಂದು ಸಾಮಾನ್ಯ ಸಾವಿನ ಮರಣ ಪ್ರಮಾಣ ಪತ್ರ ನೀಡಲಾಗಿದೆ ಎಂದು ಆರೋಪಿಸಿದ ಅವರು, ಕೋವಿಡ್‌ನಿಂದಲೇ ಮೃತಪಟ್ಟ ಬಗ್ಗೆ ದಾಖಲೆ ಇಲ್ಲದಂತಾಗಿದೆ. ಹಾಗಾಗಿ ಕೋವಿಡ್‌ನಿಂದ ಮೃತಪಟ್ಟವರ ಬಗ್ಗೆ ನಮ್ಮ ಪಕ್ಷದಿಂದ ಮಾಹಿತಿ ಕಲೆ ಹಾಕಲಾಗುತ್ತಿದ್ದು, ಈ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಪರಿಹಾರ ಕೊಡಿಸುವ ಕೆಲಸ ಮಾಡಲಾಗುವುದು.
ಆ. 1ರಂದು ಉತ್ತರ ಕನ್ನಡ ಜಿಲ್ಲೆಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಆಗಮಿಸಲಿದ್ದು, ಪ್ರಹಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಜನರ ಸಂಕಷ್ಟಗಳ ಬಗ್ಗೆ ಸರ್ಕಾರ ಗಮನಕ್ಕೆ ತಂದು ಪರಿಹಾರ ಕೊಡಿಸುವ ಕೆಲಸ ಮಾಡಲಿದ್ದಾರೆ ಎಂದು ಹೇಳಿದರು.
ರಾಜಕೀಯ ಕ್ಷೇತ್ರಕ್ಕೆ ಬೊಮ್ಮಾಯಿ ಕುಟುಂಬದ ಕೊಡುಗೆ ಅಪಾರವಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಸಾಕಷ್ಟು ಅನುಭವವಿದ್ದು ಉತ್ತಮ ಆಡಳಿತ ನೀಡುತ್ತಾರೆ ಎಂಬ ವಿಶ್ವಾಸ ನಮಗಿದೆ. ಹಾಗಾಗಿ ರಾಜ್ಯದ ಜನತೆಯ ಪರವಾಗಿ ಅವರಿಗೆ ಅಭಿನಂದಿಸುವುದಾಗಿ ತಿಳಿಸಿದರು.