ಡಿಕೆಶಿ-ಸಿದ್ದರಾಮಯ್ಯ ಮಧ್ಯೆ ಬಿರುಕು: ದೇಶಪಾಂಡೆ ಹೇಳಿದ್ದೇನು?
* ಮುಖ್ಯಮಂತ್ರಿ ಯಾರೆಂಬ ಚರ್ಚೆ ಸರಿಯಲ್ಲ
* ವಿಷಯಗಳು ನಾಲ್ಕು ಗೋಡೆ ಚೌಕಟ್ಟಿನಲ್ಲಿಯೇ ಇರಬೇಕು
* ಪಕ್ಷದ ಹಿತದೃಷ್ಟಿಯಿಂದ ಇಂಥ ಉಹಾಪೋಹ ಸೃಷ್ಟಿಸುವ ಅಗತ್ಯವಿಲ್ಲ
ಶಿರಸಿ(ಜು.02): ಕಾಂಗ್ರೆಸ್‌ನಲ್ಲಿ ಮುಂದಿನ ಮುಖ್ಯಮಂತ್ರಿ ಯಾರು ಎಂಬ ಬಗ್ಗೆ ಈಗಲೇ ಚರ್ಚೆ ಸರಿಯಲ್ಲ. ಇನ್ನೂ ಎರಡೂವರೆ ವರ್ಷ ಅವಧಿ ಇದೆ ಎಂದು ಮಾಜಿ ಸಚಿವ ಆರ್.ವಿ. ದೇಶಪಾಂಡೆ ಹೇಳಿದ್ದಾರೆ.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದ ವಿಷಯಗಳು ನಾಲ್ಕು ಗೋಡೆ ಚೌಕಟ್ಟಿನಲ್ಲಿಯೇ ಇರಬೇಕು. ಮುಖ್ಯಮಂತ್ರಿ ಅಭ್ಯರ್ಥಿ ಬಗ್ಗೆ ಕೆಲವರು ಅಭಿಮಾನದಿಂದ ಅಭಿಪ್ರಾಯ ಕೊಟ್ಟಿರಬಹುದು. ಅದರದ್ದೆ ಚರ್ಚೆ ಮುಂದುವರಿಸುವ ಅಗತ್ಯವಿಲ್ಲ. ಪಕ್ಷದ ಹಿತದೃಷ್ಟಿಯಿಂದ ಇಂಥ ಉಹಾಪೋಹ ಸೃಷ್ಟಿಸುವ ಅಗತ್ಯವಿಲ್ಲ. ಮೊದಲು ಚುನಾವಣೆ ನಡೆಯಬೇಕು, ಕಾಂಗ್ರೆಸ್ ಬಹುಮತ ಬರಬೇಕು, ಆಮೇಲೆ ಮುಖ್ಯಮಂತ್ರಿ ಸ್ಥಾನದ ಬಗ್ಗೆ ಚರ್ಚೆ ಮಾಡೋಣ ಎಂದರು.
ಮುಂದಿನ ಸಿಎಂ ಚರ್ಚೆ: ಮನೆಯೊಂದು, ಮೂರು ಬಾಗಿಲಾಯ್ತು ಕಾಂಗ್ರೆಸ್..!
ನನ್ನ ರಾಜಕಿಯ ಜೀವನದಲ್ಲಿ ಯಾವಾಗಲೂ ನನ್ನ ಮುಖ್ಯಮಂತ್ರಿ, ಮಂತ್ರಿ ಮಾಡಿ ಎಂದು ಕೇಳಿದವನಲ್ಲ. ಡಿಕೆಶಿ ಹಾಗೂ ಸಿದ್ದರಾಮಯ್ಯ ಕೂಡಿಯೇ ಹೋಗುತ್ತಿದ್ದಾರೆ. ಅವರ ನಡುವೆ ಬಿರುಕಿದೆ ಎನ್ನುವುದು ಕೆಲ ಮಾಧ್ಯಮಗಳ ಸೃಷ್ಟಿ. ಪಕ್ಷದ ನಾಯಕರೆಲ್ಲಾ ಒಗ್ಗಟ್ಟಿನಿಂದ ಕೆಲಸ ಮಾಡುತ್ತಿದ್ದೇವೆ ಎಂದ ಅವರು, ರಾಜ್ಯದಲ್ಲಿ ಕೆಲವು ಜಿಲ್ಲಾ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಅವಧಿ ಬಹಳಷ್ಟು ವರ್ಷ ಆಗಿದೆ. ಹೀಗಾಗಿ ಪಕ್ಷದಲ್ಲಿ ಇರುವ ನಿಗದಿತ ವರ್ಷದ ಸಂವಿಧಾನದ ಬಗ್ಗೆ ರಾಜ್ಯಾಧ್ಯಕ್ಷರು ಹೇಳಿದ್ದಾರೆ. ಹಾಗಂತ ಯಾರನ್ನೇ ಬದಲಾಯಿಸುತ್ತೇವೆ ಎಂದಿಲ್ಲ. ಈ ಬಗ್ಗೆ ಜಿಲ್ಲಾಮಟ್ಟದಲ್ಲಿ ಚರ್ಚೆ ಮಾಡ್ತೇವೆ. ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ಹೇಳಿದರು.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಾನೇ ಮುಖ್ಯಮಂತ್ರಿ ಎಂದು ಹೇಳಿಕೆ ನೀಡುತ್ತಾರೆ. ಅವರೇ ಮುಖ್ಯಮಂತ್ರಿ ಇರುವಾಗ ಹೀಗೆ ಹೇಳುವುದು ಯಾಕೆ? ಇದನ್ನು ನೋಡಿದರೆ ಅಲ್ಲಿ ಏನೋ ಸಮಸ್ಯೆಯಿದೆ ಎಂಬುದು ಸ್ಪಷ್ಟವಾಗುತ್ತದೆ. ಹೀಗಾದರೆ ಆಡಳಿತದ ಮೇಲೆ ದುಷ್ಟರಿಣಾಮವಾಗುತ್ತದೆ ಎಂದರು.