'ದೊರೆಸ್ವಾಮಿ ವಿರುದ್ಧ ಮಾತನಾಡುವವರಿಗೆ ಹುಚ್ಚು ಹಿಡಿದಿದ್ದು, ರೇಬಿಸ್ ಚುಚ್ಚುಮದ್ದು ಹಾಕಲಿ'
ದೊರೆಸ್ವಾಮಿ ವಿರುದ್ಧ ಮಾತನಾಡುವವರಿಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ರೇಣುಕಾಚಾರ್ಯ, ಸಿಟಿ ರವಿ, ಎನ್. ರವಿಕುಮಾರ್, ಸೋಮಶೇಖರ ರೆಡ್ಡಿ ಅವರಿಗೆ ಹುಚ್ಚು ಹಿಡಿದಿದ್ದು, ರೇಬಿಸ್ ಚುಚ್ಚುಮದ್ದು ಹಾಕಬೇಕಿದೆ: ಪತ್ರೇಶ್ ಹಿರೇಮಠ
ಹಗರಿಬೊಮ್ಮನಹಳ್ಳಿ(ಮಾ.05): ಹಿರಿಯ ಸ್ವಾತಂತ್ರ್ಯ ಹೋರಾಟಗಾರ, ಶತಾಯುಷಿ ದೊರೆಸ್ವಾಮಿ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುತ್ತಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ರೇಣುಕಾಚಾರ್ಯ, ಸಿಟಿ ರವಿ, ಎನ್. ರವಿಕುಮಾರ್, ಸೋಮಶೇಖರ ರೆಡ್ಡಿ ಅವರಿಗೆ ಹುಚ್ಚು ಹಿಡಿದಿದ್ದು, ರೇಬಿಸ್ ಚುಚ್ಚುಮದ್ದು ಹಾಕಬೇಕಿದೆ ಎಂದು ಕೆಪಿಸಿಸಿ ಮಾಧ್ಯಮ ವಕ್ತಾರ ಪತ್ರೇಶ್ ಹಿರೇಮಠ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಟ್ಟಣದಲ್ಲಿ ಬುಧವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ನಕಲಿ ದೇಶಭಕ್ತ ಬ್ರಿಟಿಷರಿಗೆ ತಪ್ಪೊಪ್ಪಿಗೆ ಬರೆದುಕೊಟ್ಟ ಸಾವರ್ಕರ್‌ನನ್ನು ವೀರನನ್ನಾಗಿಸುವ ಮತ್ತು ಗಾಂಧೀಜಿಯವರನ್ನು ಕೊಂದ ಗೋಡ್ಸೆಯನ್ನು ಮುನ್ನೆಲೆಗೆ ತಂದು, ನೈಜ ಹೋರಾಟಗಾರರನ್ನು ಯುವಪೀಳಿಗೆಯ ಮನಸ್ಸಿನಿಂದ ಅಳಿಸಿಹಾಕುವ ಹಿಡೆನ್ ಅಜೆಂಡಾ ಆರೆಸ್ಸೆಸ್ ಹೊಂದಿದ್ದು, ಇದು ಅಪಾಯಕಾರಿ ಬೆಳವಣಿಗೆ ಎಂದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಪಾಕಿಸ್ತಾನದ ಏಜೆಂಟ್, ಜತೆಗೆ ನಕಲಿ ಸ್ವಾತಂತ್ರ್ಯ ಹೋರಾಟಗಾರ ಮತ್ತು ಹೋರಾಟದ ದಾಖಲೆ ಕೇಳುವ, ಅರ್ಥಹೀನ ಮಾತುಗಳ ಮೂಲಕ ಸ್ವಾತಂತ್ರ್ಯ ಚಳವಳಿ ಮತ್ತು ಹೋರಾಟಗಾರರನ್ನು ನಿಕೃಷ್ಟವಾಗಿ ಕಂಡು ಭಾರತದ ಚಳವಳಿಗಳನ್ನು ವ್ಯಂಗ್ಯವಾಡುವ ಇವರನ್ನು, ಜನತೆ ಎಲ್ಲವನ್ನೂ ನೋಡುತ್ತಿದ್ದಾರೆ. ಜನತೆಯನ್ನು ಹಾದಿತಪ್ಪುವಂತಹ ಕೆಲಸಬಿಟ್ಟು ರಾಜ್ಯದ ಅಭಿವೃದ್ಧಿ ಮತ್ತು ಸಾರ್ವಜನಿಕರ ಚಿಂತನೆಯನ್ನು ಮಾಡಲಿ ಎಂದರು. ಸಾರ್ವಜನಿಕರೇ ಮುಂದಾಗಿ ಕ್ರಮ ಕೈಗೊಳ್ಳುವ ಮುನ್ನ ಬಿಜೆಪಿ ಅವರನ್ನು ಪಕ್ಷದಿಂದ ಉಚ್ಚಾಟಿಸಬೇಕು ಎಂದು ಪತ್ರೇಶ್ ಆಗ್ರಹಿಸಿದರು.
ಅಡುಗೆ ಅನಿಲ ಮತ್ತು ಬಸ್ ದರ ಹೆಚ್ಚಳದಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು, ಬೆಲೆ ಇಳಿಕೆಗೆ ಕ್ರಮ ಕೈಗೊಳ್ಳುವುದನ್ನು ಬಿಟ್ಟು, ಜಾತಿ, ಧರ್ಮದ ಕೋಮುಭಾವನೆಗಳನ್ನು ಕೆರಳಿಸುವ ಹೇಳಿಕೆ ನೀಡುವ ಮೂಲಕ, ಅಭಿವೃದ್ಧಿ ಚರ್ಚೆಯನ್ನು ಗೌಣ ಮಾಡುವ ಹುನ್ನಾರ ಇದಾಗಿದೆ. ಆಗಲೇ ಜನತೆ ಬಿಜೆಪಿಗೆ ಅನೇಕ ರಾಜ್ಯಗಳಲ್ಲಿ ಸೋಲಿನ ರುಚಿ ತೋರಿಸಿದ್ದಾರೆ ಎಂದು ಪತ್ರೇಶ್ ಅಭಿಪ್ರಾಯ ವ್ಯಕ್ತಪಡಿಸಿದರು.