Asianet Suvarna News Asianet Suvarna News

Karnataka Politics : ಎಚ್‌ಡಿಕೆ ಸುಪಾರಿ ಪಡೆದವರಂತೆ ಮಾತನಾಡುತ್ತಿದ್ದಾರೆ : ಕೆಪಿಸಿಸಿ ಮುಖಂಡ ಸವಾಲ್

 

  • ಬಿಜೆಪಿ, ಜೆಡಿಎಸ್‌ನವರು ಕೆರೆ ನಿರ್ಮಿಸಿದ್ದರೆ ತಿಳಿಸಲಿ
  •  ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್‌ ಸವಾಲು
  •  ಎಚ್‌ಡಿಕೆ ಸುಪಾರಿ ಪಡೆದವರಂತೆ ಮಾತನಾಡುತ್ತಿದ್ದಾರೆ ಎಂದು ವಾಗ್ದಾಳಿ
     
KPCC Leader Laxman Slams  HD Kumaraswamy snr
Author
Bengaluru, First Published Jan 3, 2022, 11:06 AM IST

 ಮೈಸೂರು (ಜ.03):  ಬಿಜೆಪಿಯಿಂದ (BJP) ಸುಪಾರಿ ಪಡೆದವರಂತೆ ಮಾತನಾಡುತ್ತಿರುವ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ (HD Kumaraswamy) ಅವರೇ ನಿಮ್ಮ ಅಥವಾ ನಿಮ್ಮ ತಂದೆ ಎಚ್‌.ಡಿ. ದೇವೇಗೌಡರು (HD Devegowda) ಯಾವುದಾದರೂ ಅಣೆಕಟ್ಟೆಕಟ್ಟಿದ್ದರೆ ತಿಳಿಸಿ, ಬಿಜೆಪಿಯ (BJP) ನೀರಾವರಿ ಸಚಿವ ಗೋವಿಂದ ಕಾರಜೋಳ ಅವರು ಎಲ್ಲಿಯಾದರೂ ಕೆರೆ ನಿರ್ಮಿಸಿದ್ದಾರಾ ತಿಳಿಸಲಿ ಎಂದು ಕೆಪಿಸಿಸಿ (KPCC)  ವಕ್ತಾರ ಎಂ. ಲಕ್ಷ್ಮಣ್‌ (M lakshman) ಸವಾಲು ಹಾಕಿದರು.

ಕಾಂಗ್ರೆಸ್‌ (Congress) ಭವನದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇಕೆದಾಟು (Mekedatu) ಯೋಜನೆ ಕುರಿತು ಬಿಜೆಪಿ (BJP) ಮತ್ತು ಜೆಡಿಎಸ್‌ (JDS) ಕಾಂಗ್ರೆಸ್‌ನ ನಿಲುವನ್ನು ವಿರೋಧಿಸುತ್ತಿವೆ. ಈ ಕುರಿತು ಕೆಲವು ಪ್ರಶ್ನೆಗಳಿಗೆ ಎಚ್‌.ಡಿ. ಕುಮಾರಸ್ವಾಮಿ (HD Kumaraswamy) ಅವರು ಉತ್ತರಿಸಬೇಕಾಗುತ್ತದೆ. ಕರ್ನಾಟಕದ ರಾಜಕೀಯ (Karnataka politics)  ಇತಿಹಾಸದಲ್ಲಿ ಒಂದು ವಿರೋಧ ಪಕ್ಷ, ಮತ್ತೊಂದು ವಿರೋಧ ಪಕ್ಷದ ನಿಲುವನ್ನು ವಿರೋಧಿಸುತ್ತಿರುವುದು ಇದೇ ಮೊದಲು. ಅಲ್ಲದೆ ನಾವು ಬಿಜೆಪಿಯನ್ನು ಟೀಕಿಸಿದರೆ, ಕುಮಾರಸ್ವಾಮಿ ಅವರು ಕಾಂಗ್ರೆಸ್‌ ಟೀಕಿಸುತ್ತಾರೆ. ಅಂದರೆ ಬಿಜೆಪಿಯಿಂದ ಇವರು ಸುಪಾರಿ ಪಡೆದಿದ್ದಾರೆಯೇ? ಎಂದು ಪ್ರಶ್ನಿಸಿದರು.

ಕುಮಾರಸ್ವಾಮಿ (Kumaraswamy) ಅವರು ತಮ್ಮ ನಿಲುವನ್ನು ಮೊದಲು ಸ್ಪಷ್ಟಪಡಿಸಬೇಕು. ರಾಜ್ಯದಲ್ಲಿ 26 ಜಲಾಶಯವಿದೆ. ಈ ಪೈಕಿ 21 ಜಲಾಶಯ ಕಾಂಗ್ರೆಸ್‌ (Congress) ಅವಧಿಯಲ್ಲಿ ನಿರ್ಮಾಣವಾಗಿದೆ. ಒಂದು ನಾಲ್ವಡಿ ಕೃಷ್ಣರಾಜ ಒಡೆಯರ್‌ ನಿರ್ಮಿಸಿದ್ದರು. ಉಳಿದ ನಾಲ್ಕನ್ನು ಬ್ರಿಟಿಷರ (British) ಕಾಲದಲ್ಲಿ ನಿರ್ಮಿಸಲಾಗಿತ್ತು. ಅಂದರೆ ಬಿಜೆಪಿ ಮತ್ತು ಜೆಡಿಎಸ್‌ ಪಾತ್ರವೇನು?. ಎಚ್‌.ಡಿ. ದೇವೇಗೌಡರು ನೀರಾವರಿ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎನ್ನುತ್ತಾರಲ್ಲ, ನಿತಿನ್‌ ಗಡ್ಕರಿ ಬಳಿಗೆ ಮೂರ್ನಾಲ್ಕು ಬಾರಿ ಹೋಗಿ ಭೇಟಿ ಮಾಡಿದ್ದೆ ಸಾಧನೆಯೇ? ಬಿಜೆಪಿ ಮತ್ತು ಜೆಡಿಎಸ್‌ನವರು ಒಂದೇ ಒಂದು ಕೆರೆ ನಿರ್ಮಿಸಿದ್ದರೆ ಹೇಳಲಿ ಸಾಕು? ಎಂದು ಅವರು ಸವಾಲು ಹಾಕಿದರು.

1968ರಲ್ಲಿ ನಿಜಲಿಂಗಪ್ಪ ಅವರು ಮೇಕೆದಾಟು ಯೋಜನೆ ಪ್ರಸ್ತಾಪಿಸಿದ್ದರು. ವೀರೇಂದ್ರಪಾಟೀಲರು ಅನುಷ್ಠಾನಕ್ಕೆ ಮುಂದಾಗಿದ್ದರು. ಇವರೆಲ್ಲ ಕಾಂಗ್ರೆಸ್‌ನ ಮುಖ್ಯಮಂತ್ರಿಗಳು. 2013ರಲ್ಲಿ ಸಿದ್ದರಾಮಯ್ಯ ಅವರು ಎಂ.ಬಿ. ಪಾಟೀಲರ ಮೂಲಕ . 5,387 ಕೋಟಿಗೆ ಡಿಪಿಆರ್‌ ಸಿದ್ಧಪಡಿಸಿ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು. ಆದರೆ ಕೇಂದ್ರ ಸರ್ಕಾರ ತಿರಸ್ಕರಿಸಿತು. ನಂತರ 2018ರಲ್ಲಿ ಮತ್ತೆ . 9,500 ಕೋಟಿಗೆ ಪ್ರಸ್ತಾವನೆ ಸಲ್ಲಿಸಿದಾಗಲೂ ತಿರಸ್ಕರಿಸಿದರು. ಈಗ ಅದೇ ಯೋಜನೆಗೆ ಕಾರಜೋಳ ಅವರು . 10,500 ಕೋಟಿಗೆ ಪ್ರಸ್ತಾವನೆ ಸಲ್ಲಿಸಿದ್ದಾರೆ ಎಂದರು.

ಕಾರಜೋಳ ಅವರು ಮೇಕೆದಾಟು ಯೋಜನೆ ತಡವಾಗುವುದಕ್ಕೆ ಕಾಂಗ್ರೆಸ್‌ ಕಾರಣ, ಇದಕ್ಕೆ ತಮ್ಮ ಬಳಿ ದಾಖಲೆ ಇದೆ ಎನ್ನುತ್ತಾರಲ್ಲ. ನಿಮ್ಮ ಬಳಿ ಅಂತದ್ದೇನು ದಾಖಲೆ ಇದೆ. ನನ್ನ ಬಳಿ ನೀವು ಕಿಕ್‌ ಬ್ಯಾಕ್‌ ಪಡೆದ ದಾಖಲೆ ಇದೆ. ಅನೇಕ ಯೋಜನೆಗಳು ನೆನಗುದಿಗೆ ಬೀಳಲು ನೀವೇ ಕಾರಣ ಎಂಬುದಕ್ಕೆ ನನ್ನ ಬಳಿ ದಾಖಲೆ ಇದೆ. ನಾವು ಜನರ ಬಳಿ ಚಂದ ಸಂಗ್ರಹಿಸಿ ಅಥವಾ ಭಿಕ್ಷೆ ಎತ್ತಿಯಾದರೂ ಅಣೆಕಟ್ಟೆನಿರ್ಮಿಸುತ್ತೇವೆ ಎಂದರು.

ಕಿಡಿ ಹಚ್ಚುವ ಪಾದಯಾತ್ರೆ ನಮ್ಮದಲ್ಲ:

ನಾವು ಪಾದಯಾತ್ರೆ ಹಮ್ಮಿಕೊಂಡಿರುವುದು ಬೆಂಕಿ ಹಚ್ಚುವ ಕೆಲಸವಲ್ಲ. ನಿಮ್ಮ ಯೋಗ್ಯತೆಗೆ ಇಂತಹ ಯಾವುದಾದರು ಕೆಲಸ ಮಾಡಿದ್ದೀರಾ? ಆರೋಗ್ಯ ಸಚಿವ ಡಾ. ಸುಧಾಕರ್‌, ಉನ್ನತ ಶಿಕ್ಷಣ ಸಚಿವ ಡಾ. ಅಶ್ವಥ್‌ ನಾರಾಯಣ್‌ ಎಲ್ಲಿದ್ದಾರೆ?. ನಾಲ್ಕೈದು ಸಚಿವರು 10 ಮಂದಿ ಐಎಎಸ್‌ (IAS)  ಅಧಿಕಾರಿಗಳ ಜೊತೆ ಕುಟುಂಬ ಸಮೇತ ಹೊಸ ವರ್ಷಾಚರಣೆಗೆ ಶ್ರೀಲಂಕಾಗೆ ಹೋಗಿದ್ದಾರೆ. ಇವರಿಗೆ ಏನಾದರೂ ಬದ್ಧತೆ ಇದೆಯಾ? ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ. ಸೋಮಶೇಖರ್‌ 16 ತಿಂಗಳಿಂದ ಉಸ್ತುವಾರಿ ವಹಿಸಿಕೊಂಡು 16 ಕೋಟಿಯನ್ನಾದರೂ ನೀಡಿದ್ದಾರ ಜಿಲ್ಲೆಗೆ ಎಂದು ಪ್ರಶ್ನಿಸಿದರು.

ಅಡ್ಡಂಡ ಕಾರ್ಯಪ್ಪ ವಜಾಗೊಳಿಸಿ

ಬೇರೆ ಊರಿನಿಂದ ಬಂದು ಇಲ್ಲಿ ತಮ್ಮ ಬೇಳೆಕಾಳು ಬೇಯಿಸಿಕೊಳ್ಳುವವರ ಸಂಖ್ಯೆ ಮೈಸೂರಿನಲ್ಲಿ ಹೆಚ್ಚಾಗಿದೆ. ಅಡ್ಡಂಡ ಕಾರ್ಯಪ್ಪ ಮೈಸೂರು (Mysuru) ರಂಗಾಯಣ ನಿರ್ದೇಶಕರಾಗಿ ಬಂದು  ಮೈಸೂರು ಮತ್ತು ಕೊಡಗಿನ ಜನರ ಮಧ್ಯೆ ಇದ್ದ ಸೌಹಾರ್ಧತೆಯನ್ನು ಕೆಡಿಸುತ್ತಿದ್ದಾರೆ. ಬಲಪಂಥೀಯರನ್ನು ಪ್ರಗತಿಪರರ ವಿರುದ್ಧ ಎತ್ತಿ ಕಟ್ಟುವ ಕೆಲಸ ಮಾಡುತ್ತಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಮರ್ಯಾದೆ ಇದ್ದರೆ ಮೊದಲು ಅವರನ್ನು ತೆಗೆದು ಹಾಕಬೇಕು. ಇಲ್ಲವೇ ಮಡಿಕೇರಿಯಲ್ಲಿ ಪ್ರತ್ಯೇಕ ರಂಗಾಯಣ ನಿರ್ಮಿಸಿ, ಅಲ್ಲಿಗೆ ಅವರನ್ನು ನೇಮಿಸಿಕೊಳ್ಳಲಿ ಎಂದರು.

ಸುದ್ದಿಗೋಷ್ಠಿಯಲ್ಲಿ ನಗರ ಕಾಂಗ್ರೆಸ್‌ ಅಧ್ಯಕ್ಷ ಆರ್‌. ಮೂರ್ತಿ, ಕಾರ್ಯದರ್ಶಿ ಶಿವಣ್ಣ ಮೊದಲಾದವರು ಇದ್ದರು.

Follow Us:
Download App:
  • android
  • ios