ಪಂಚಮಸಾಲಿ ಹೋರಾಟಕ್ಕೆ ಎಂ.ಬಿ.ಪಾಟೀಲ ಬೆಂಬಲ

ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಕಲ್ಪಿಸುವ ಬೇಡಿಕೆ ಬಗ್ಗೆ ಕೆಪಿಸಿಸಿ ಅಧ್ಯಕ್ಷರು, ಪ್ರತಿಪಕ್ಷದ ನಾಯಕರು ಹಾಗೂ ಕೆಪಿಸಿಸಿ ರಾಜ್ಯ ಉಸ್ತುವಾರಿಗಳ ಜೊತೆ ಚರ್ಚಿಸಿ, ಪಕ್ಷದ ನಿಲುವು ತಿಳಿಸುವುದಾಗಿ ಭರವಸೆ ನೀಡಿದ ಎಂ.ಬಿ.ಪಾಟೀಲ 

KPCC Campaign Committee Chairman MB Patil Support for Panchmasali Struggle grg

ವಿಜಯಪುರ(ಮಾ.09):  ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡುವಂತೆ ಆಗ್ರಹಿಸಿ ಬೆಂಗಳೂರಿನಲ್ಲಿ ಕೂಡಲಸಂಗಮ ಶ್ರೀಗಳು ನಡೆಸುತ್ತಿರುವ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ ಭೇಟಿ ನೀಡಿ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು.

ಫ್ರೀಡಂ ಪಾರ್ಕ್‌ನಲ್ಲಿ ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ನಡೆಸುತ್ತಿರುವ ಧರಣಿ ಸತ್ಯಾಗ್ರಹ 52 ದಿನ ಪೂರೈಸಿದ್ದು, ಎಂ.ಬಿ.ಪಾಟೀಲ ಅವರು ಶ್ರೀಗಳನ್ನು ಭೇಟಿ ಮಾಡಿದರು. ಅಲ್ಲದೇ, ಹೋರಾಟಕ್ಕೆ ತಮ್ಮ ಬೆಂಬಲ ಸೂಚಿಸಿ ಮಾತನಾಡಿದರು. ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಕಲ್ಪಿಸುವ ಬೇಡಿಕೆ ಬಗ್ಗೆ ಕೆಪಿಸಿಸಿ ಅಧ್ಯಕ್ಷರು, ಪ್ರತಿಪಕ್ಷದ ನಾಯಕರು ಹಾಗೂ ಕೆಪಿಸಿಸಿ ರಾಜ್ಯ ಉಸ್ತುವಾರಿಗಳ ಜೊತೆ ಚರ್ಚಿಸಿ, ಪಕ್ಷದ ನಿಲುವು ತಿಳಿಸುವುದಾಗಿ ಅವರು ಭರವಸೆ ನೀಡಿದರು.

ಪಂಚಮಸಾಲಿಗೆ ಮೀಸಲಾತಿ ಕೊಡದಿದ್ದರೆ ಬಿಜೆಪಿಗೆ ದೊಡ್ಡ ನಷ್ಟ: ಜಯಮೃತ್ಯುಂಜಯ ಸ್ವಾಮೀಜಿ ಎಚ್ಚರಿಕೆ

ನಮ್ಮ ತಂದೆಯವರ ಕಾಲದಿಂದಲೂ ನಮ್ಮ ಮನೆತನ ಹಾಗೂ ಪಂಚಮಸಾಲಿ ಸಮಾಜದ ನಡುವೆ ಅವಿನಾಭಾವ ಸಂಬಂಧವಿದೆ. ಶ್ರೀಗಳು ಮಠವನ್ನು ಕಟ್ಟದೆ, ಸಮಾಜವನ್ನು ಕಟ್ಟಿದ್ದಾರೆ. ಶ್ರೀಗಳ ಬದ್ಧತೆಯನ್ನು ಯಾರೂ ಪ್ರಶ್ನಿಸುವಂತಿಲ್ಲ. ಅವರು ಬೇರೇನೂ ಕೇಳದೇ ಸಮಾಜಕ್ಕೆ 2ಎ ಮೀಸಲಾತಿ ಒದಗಿಸುವಂತೆ ಹೋರಾಟ ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸರ್ಕಾರ ಕೊಟ್ಟಮಾತನ್ನು ಈಡೇರಿಸಬೇಕು ಎಂದು ಎಂ.ಬಿ.ಪಾಟೀಲ ಒತ್ತಾಯಿಸಿದರು.

ಈ ವೇಳೆ ಮಾಜಿ ಸಚಿವ ವಿನಯ ಕುಲಕರ್ಣಿ, ಎ.ಬಿ.ಪಾಟೀಲ, ಗುಂಡು ಪಾಟೀಲ, ಎಂ.ಎಸ್‌.ರುದ್ರಗೌಡರ, ಸಂಗಮೇಶ ಕೊಳ್ಳಿ, ಕೊಟ್ರೇಶ ಕಂಚಿಕೆರೆ, ದರಿಯಪ್ಪ ಟಕ್ಕನ್ನವರ, ಬಾಬಾಸಾಹೇಬ ಪಾಟೀಲ, ಚಂದ್ರಶೇಖರ ಕೊಣ್ಣೂರ, ಜೈನ ಸಮುದಾಯದ ಮುಖಂಡ ಉತ್ತಮ ಪಾಟೀಲ ಮುಂತಾದವರು ಇದ್ದರು.

Latest Videos
Follow Us:
Download App:
  • android
  • ios