Uttarakannada; ಆರೋಗ್ಯ ಜಾಗೃತಿಗಾಗಿ ಕೇರಳ ಟು ಲಂಡನ್ ಸೈಕಲ್ ಪ್ರಯಾಣ ಹೊರಟ ಯುವಕ!
ಇಲ್ಲೋರ್ವ ಯುವಕ ಕೇವಲ ಸೈಕಲ್ ಮೂಲಕ ದೇಶ ವಿದೇಶಗಳನ್ನು ಸುತ್ತಿ ಜಾಗೃತಿ ಮೂಡಿಸಲು ಮುಂದಾಗಿದ್ದಾನೆ. ಕೇರಳದಿಂದ ಲಂಡನ್ ವರೆಗೆ ಬರೋಬ್ಬರಿ 30 ಸಾವಿರ ಕಿಲೋಮೀಟರ್ ಪ್ರಯಾಣ ನಡೆಸಿ, ಹೊಸ ರೀತಿಯ ದಾಖಲೆ ನಿರ್ಮಿಸಲು ಮುಂದಾಗಿದ್ದಾನೆ.
ಕಾರವಾರ (ಸೆ.8): ಆರೋಗ್ಯ ಜಾಗೃತಿಗಾಗಿ ಹಲವರು ವಿವಿಧ ಕಾರ್ಯಕ್ರಮಗಳನ್ನು ಕೈಗೊಳ್ಳುವುದು ನಾವು ನೋಡಿದ್ದೇವೆ. ಆದ್ರೆ, ಇಲ್ಲೋರ್ವ ಯುವಕ ಕೇವಲ ಸೈಕಲ್ ಮೂಲಕ ದೇಶ ವಿದೇಶಗಳನ್ನು ಸುತ್ತಿ ಜಾಗೃತಿ ಮೂಡಿಸಲು ಮುಂದಾಗಿದ್ದಾನೆ. ಕೇರಳದಿಂದ ಲಂಡನ್ ವರೆಗೆ ಬರೋಬ್ಬರಿ 30 ಸಾವಿರ ಕಿಲೋಮೀಟರ್ ಪ್ರಯಾಣ ನಡೆಸಿ, ಹೊಸ ರೀತಿಯ ದಾಖಲೆ ನಿರ್ಮಿಸಲು ಮುಂದಾಗಿದ್ದಾನೆ. ಕೇರಳದ ಕೋಝಿಕ್ಕೋಡ್ ಜಿಲ್ಲೆಯ 34 ವರ್ಷದ ನೆಟ್‌ವರ್ಕ್ ಎಂಜಿನಿಯರ್ ಫಾಯಿಸ್ ಆಶ್ರಫ್ ಇದೀಗ ಕೇರಳದಿಂದ ಲಂಡನ್ ವರೆಗೆ ಸೈಕಲ್ ಮೂಲಕ ತೆರಳಿ ಜನರಲ್ಲಿ ವಿವಿಧ ವಿಚಾರಗಳಿಗೆ ಸಂಬಂಧಿಸಿದ ಆರೋಗ್ಯ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ. ಆಜಾದಿ ಕಾ ಅಮೃತ ಮಹೋತ್ಸವ ಅಂಗವಾಗಿ ಆಗಸ್ಟ್ 15ರಂದು ಆಶ್ರಫ್ ತನ್ನ ಸಂಚಾರ ಪ್ರಾರಂಭಿಸಿದ್ದು, ಇದಕ್ಕೆ ಕೇರಳ ಗೃಹ ಸಚಿವರು ಚಾಲನೆ ಕೂಡಾ ನೀಡಿದ್ದಾರೆ. ರೋಟರಿ ಕ್ಲಬ್ ಸದಸ್ಯರಾಗಿರುವ ಫಾಯಿಸ್, ದೇಶ ವಿದೇಶಗಳ ರೋಟರಿ ಕ್ಲಬ್‌ಗಳ ಸಹಾಯ ಪಡೆದುಕೊಂಡೇ ತನ್ನ ಪ್ರಯಾಣ ಬೆಳೆಸುತ್ತಿದ್ದು, ಕೇರಳದಿಂದ ಆಗಮಿಸಿದ ಅವರನ್ನು ಉತ್ತರಕನ್ನಡ ಜಿಲ್ಲೆಯ ಭಟ್ಕಳ, ಕಾರವಾರದಲ್ಲಿ ಅದ್ಧೂರಿಯಾಗಿ ಸ್ವಾಗತ ಮಾಡಲಾಯಿತು.
ಪಾಯಿಸ್ ಅವರು ಒಟ್ಟು 450 ದಿನಗಳ ಕಾಲ ಬಲ್ಗೇರಿಯಾ, ರೋಮಾನಿಯಾ, ಉಕ್ರೇನ್, ಆಸ್ಟ್ರೀಯಾ, ಇಟಲಿ, ಜರ್ಮನಿ, ಪ್ರಾನ್ಸ್ ಸೇರಿದಂತೆ 35 ದೇಶಗಳಲ್ಲಿ ಸೈಕಲ್ ಸವಾರಿ ಮಾಡಲು ಮುಂದಾಗಿದ್ದಾರೆ. ಸುಮಾರು 150 ಶಾಲೆಗಳು, 25 ವಿಶ್ವ ವಿದ್ಯಾಲಯಗಳು ಭೇಟಿ ನೀಡಿ ಆರೋಗ್ಯ ಸಂಬಂಧದ ಮಾಹಿತಿ ನೀಡಲಿದ್ದಾರೆ. ಪ್ರಯಾಣ ಮಾಡುತ್ತಾ ಕಾರವಾರಕ್ಕೆ ಬಂದ ಫಾಯಿಸ್ ಅವರನ್ನು ರೋಟರಿ ಕ್ಲಬ್ ಸದಸ್ಯರು ಸ್ವಾಗತ ಕೋರಿದ್ದಲ್ಲದೇ, ಅವರಿಗೆ ಪೂರಕ ಸಹಾಯ ಒದಗಿಸಿ ಮುಂದಿನ ಪ್ರಯಾಣಕ್ಕೆ ಶುಭ ಕೋರಿದ್ದಾರೆ.
ಸ್ವಾತಂತ್ರ್ಯೋತ್ಸವದ ಅಂಗವಾಗಿ ದೇಶ ಸುತ್ತಿದ್ದ ಬೈಕರ್ ಕನ್ನಡತಿ ಅಮೃತಾಗೆ ಅದ್ಧೂರಿ ಸ್ವಾಗತ
ಅಂದಹಾಗೆ, ಪೊಲೀಯೋ, ಆ್ಯಂಟಿ ಡ್ರಗ್ಸ್, ಆರೋಗ್ಯ ಸುರಕ್ಷತೆ ಮತ್ತು ಶಾಂತಿಯ ಸಲುವಾಗಿ ಪಾಯಿಸ್ ಜಾಗೃತಿ ಮೂಡಿಸುತ್ತಾ ಮುಂದೆ ಸಾಗಲಿದ್ದಾರೆ. ನೆಟ್ ವರ್ಕ್ ಎಂಜಿನಿಯರಿಂಗ್ ಪದವಿ ಪಡೆದಿರುವ ಫಾಯಿಸ್, 2016ರಲ್ಲಿ ತಂದೆಯ ಅನಾರೋಗ್ಯದಿಂದಾಗಿ ಕೆಲಸ ತೊರೆದು ಅವರ ಆರೈಕೆ ಮಾಡಬೇಕಾಯಿತು. ಹೀಗಾಗಿ ಆರೋಗ್ಯದ ಉದ್ದೇಶ ಇಟ್ಟುಕೊಂಡು ಸೈಕಲ್ ಮೂಲಕ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ. ಇನ್ನು ಈ ಹಿಂದೆ 2019ರಲ್ಲಿ ಕೇರಳದಿಂದ ಸಿಂಗಾಪುರಕ್ಕೆ ಸೈಕಲ್ ಮೂಲಕ ಯಶಸ್ವಿಯಾಗಿ ಹೋಗಿ ಬಂದಿದ್ದರು. ಇದರಿಂದ ಪ್ರೇರೆಪಿತಗೊಂಡು ಮತ್ತೆ 450 ದಿನದಲ್ಲಿ 30 ಸಾವಿರ ಕಿಲೋಮೀಟರ್ ಸೈಕಲ್ ಮೂಲಕ ಕ್ರಮಿಸುತ್ತಿದ್ದಾರೆ. ದಿನಕ್ಕೆ 100ಕಿ.ಮೀ. ಪ್ರಯಾಣಿಸುವ ಮೂಲಕ 2024ಕ್ಕೆ ಫಾಯಿಸ್ ಅವರು ಲಂಡನ್ ತಲುಪುತ್ತಿದ್ದಾರೆ.
ಸೈಕಲ್‌ನಲ್ಲಿ ಜೊಮ್ಯಾಟೋ ಆಹಾರ ಡೆಲಿವರಿ ಮಾಡುವ 7 ವರ್ಷದ ಬಾಲಕ: ರಾತ್ರಿ 11 ಗಂಟೆವರೆಗೆ ಕೆಲಸ..!
ಒಟ್ಟಿನಲ್ಲಿ ವಿವಿಧ ಆರೋಗ್ಯ ಸಂದೇಶಗಳೊಂದಿಗೆ ಸೈಕಲ್ ಮೂಲಕ ತೆರಳಿ ಫಾಯಿಸ್ ಜನಜಾಗೃತಿ ಮೂಡಿಸುತ್ತಿರುವುದಕ್ಕೆ ಜನರಿಂದ ಪ್ರಶಂಸೆ ವ್ಯಕ್ತವಾಗಿದೆ. ಈ ಯುವಕನಿಗೆ ರೋಟರಿ ಕ್ಲಬ್ ಸದಸ್ಯರು ಸ್ವಾಗತ ನೀಡಿ ಊಟೋಪಚಾರದ ವ್ಯವಸ್ಥೆ ಕೈಗೊಂಡು ವಾಸ್ತವ್ಯಕ್ಕೆ ಸಹಕರಿಸುತ್ತಿದ್ದಾರಲ್ಲದೇ, ಮುಂದಿನ ಪ್ರಯಾಣಕ್ಕೂ ಸಹಕಾರ ನೀಡುತ್ತಿದ್ದಾರೆ.