ಸ್ವಾತಂತ್ರ್ಯೋತ್ಸವದ ಅಂಗವಾಗಿ ದೇಶ ಸುತ್ತಿದ್ದ ಕಾಸರಗೋಡಿನ ಅಮೃತಾಗೆ ಅದ್ಧೂರಿ ಸ್ವಾಗತ ಮಾಡಲಾಗಿದೆ. ಬೈಕಿನಲ್ಲಿ 22 ಸಾವಿರ ಕಿ.ಮೀ. ಯಾತ್ರೆ ಮುಗಿಸಿ ಬೆಂಗಳೂರಿಗೆ ಬಂದ ಕನ್ನಡತಿಗೆ ಬಿಬಿಎಂಪಿ, ಗಡಿ ಪ್ರಾಧಿಕಾರ ಗೌರವಿಸಿದೆ.
ಬೆಂಗಳೂರು (ಆ.3): ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವದ ನೆನಪಿನಾರ್ಥ ಜಮ್ಮು ಕಾಶ್ಮೀರ ಸೇರಿದಂತೆ ಈಶಾನ್ಯ ಭಾರತದಾದ್ಯಂತ ನಡೆಸುತ್ತಿರುವ ‘ತಿರಂಗಾ ಯಾತ್ರೆ’ಯ ಅಂಗವಾಗಿ ಬೆಂಗಳೂರಿಗೆ ಆಗಮಿಸಿದ ಕಾಸರಗೋಡಿನ ಮಹಿಳಾ ಬೈಕರ್ ಅಮೃತಾ ಜೋಶಿ ಅವರನ್ನು ಬಿಬಿಎಂಪಿ ಮತ್ತು ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಸಹಯೋಗದಲ್ಲಿ ಗೌರವಿಸಲಾಯಿತು. ಸುಮಾರು 22,000 ಕಿಲೋಮೀಟರ್ ಯಾತ್ರೆ ಮುಗಿಸಿ ಆಗಮಿಸಿದ ಅಮೃತಾ ಜೋಶಿಯನ್ನು ಬಿಬಿಎಂಪಿ ಮುಖ್ಯ ದ್ವಾರದಿಂದ ಡಾ. ರಾಜ್‌ಕುಮಾರ್ ಸಭಾಂಗಣದವರೆಗೂ ಪುಷ್ಪವೃಷ್ಟಿಗರೆದು ಸ್ವಾಗತಿಸಲಾಯಿತು. ಜತೆಗೆ, ಜಯ ಘೋಷಗಳನ್ನು ಮೊಳಗಿಸಲಾಯಿತು. ಗೌರವ ಸ್ವೀಕರಿಸಿ ಮಾತನಾಡಿದ ಅಮೃತಾ ಜೋಶಿ, ಮೇಘಾಲಯ ಸೆರಿದಂತೆ ಈಶಾನ್ಯ ರಾಜ್ಯಗಳಲ್ಲಿ ಹೆಚ್ಚು ದೌರ್ಜನ್ಯಗಳು ನಡೆಯುತ್ತಿವೆ ಎಂದು ತಪ್ಪು ಕಲ್ಪನೆಯಿತ್ತು. ಅಲ್ಲಿನ ಪರಿಸ್ಥಿತಿ ಅರಿತುಕೊಳ್ಳಬೇಕು ಎಂಬ ಉದ್ದೇಶವಿತ್ತು. ಹೀಗಾಗಿ ಅಲ್ಲಿಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿ ಬಂದಿದ್ದೇನೆ. ಅಲ್ಲಿಯ ಜನ ಅತ್ಯಂತ ಸ್ನೇಹದಿಂದ ಸ್ವಾಗತಿಸಿದರು, ಆತ್ಮೀಯವಾಗಿ ಬೆರೆತು ನಮ್ಮನ್ನು ತಮ್ಮ ಕುಟುಂಬಸ್ಥರಂತೆ ನೋಡಿಕೊಂಡರು ಎಂದು ಹೇಳಿದರು. ಇನ್ನು ಸೈನಿಕರ ಕಷ್ಟವನ್ನು ನೋಡಬೇಕು ಎಂಬ ಕಾರಣದಿಂದ ಭಾರತೀಯ ಸೇನೆ ಗಡಿ ಭದ್ರತಾ ಪಡೆಯ ಸೈನಿಕರ ಜೊತೆ ಕೆಲ ಕಾಲ ಕಳೆದಿದ್ದೇನೆ. ಶೂನ್ಯ ಡಿಗ್ರಿ ಉಷ್ಣಾಂಶವಿರುವ ಪ್ರದೇಶದಲ್ಲಿ ಜೀವದ ಹಂಗು ತೊರೆದು ದೇಶದ ರಕ್ಷಣೆ ಮಾಡುತ್ತಿದ್ದಾರೆ. ಇದೆಲ್ಲ ಅನುಭವಿಸಿ ಉತ್ತಮವಾದುದನ್ನು ಸಾಧಿಸಿದ ನೆಮ್ಮದಿ ನನಗಿದೆ ಎಂದರು.
ತೇಜಸ್ವಿ ಸೂರ‍್ಯ ಬೆಂಬಲ: ತಿರಂಗಾ ಯಾತ್ರೆ ಸಂದರ್ಭದಲ್ಲಿ ಉತ್ತರ ಪ್ರದೇಶದಲ್ಲಿ ನಡೆದ ಅಪಘಾತದಿಂದ ಯಾತ್ರೆಗೆ ಒಂದು ತಿಂಗಳು ವಿರಾಮ ಹಾಕಬೇಕಾಯಿತು. ಈ ಸಂದರ್ಭದಲ್ಲಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅವರು ನನ್ನ ನೆರವಿಗೆ ಬಂದಿದ್ದರು. ಅವರ ನೆರವಿನಿಂದ ಮತ್ತೆ ಯಾತ್ರೆ ಮುಂದುವರೆಸಿದೆ. ಈ ಯಾತ್ರೆ ಇನ್ನು ಒಂದು ವಾರ ಮುಂದುವರೆಯಲಿದೆ. ಬೆಂಗಳೂರು- ಶಿವಮೊಗ್ಗ ಮೂಲಕ ಕುಂಬಳೆ ತಲುಪಲಿದ್ದೇನೆ ಎಂದು ಹೇಳಿದರು.
ಅಮೃತ ರಾಜ್ಯದ ಸಾಂಸ್ಕೃತಿಕ ರಾಯಭಾರಿ: ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಿ.ಸೋಮಶೇಖರ್ ಮಾತನಾಡಿ, ಸುಮಾರು ನಾಲ್ಕು ತಿಂಗಳುಗಳ ಕಾಲ ವಿಭಿನ್ನ ಭಾಷೆ, ಸಂಸ್ಕೃತಿ, ಆಹಾರ ಸಂಪ್ರದಾಯ ಹೊಂದಿರುವ ರಾಜ್ಯಗಳಲ್ಲಿ ಸುತ್ತಾಡಿ ದೇಶವೇ ಒಂದು ಎಂಬ ಭಾವನೆ ಮೂಡಿಸಿರುವ ಅಮೃತಾ ಕೇರಳ- ಕರ್ನಾಟಕ ರಾಜ್ಯದ ಸಾಮರಸ್ಯ ಮತ್ತು ಸಾಂಸ್ಕೃತಿಕ ರಾಯಭಾರಿಯಾಗಿದ್ದಾರೆ ಎಂದು ಹೇಳಿದರು.
Har Ghar Tiranga: 1 ಕೋಟಿ ರಾಷ್ಟ್ರಧ್ವಜ ಹಾರಾಟ ಗುರಿ: ಸಿಎಂ ಬೊಮ್ಮಾಯಿ
ಉದ್ಯಮಿ ಟಿ.ವಿ.ಮೋಹನ್‌ದಾಸ್ ಪೈ ಮಾತನಾಡಿ, ಕಾಸರಗೋಡಿನ 21 ವರ್ಷದ ಯುವತಿ ಮೋಟಾರ್ ಸೈಕಲ್‌ನಲ್ಲಿ ಇಡೀ ದೇಶವನ್ನು ಸುತ್ತಿ ಭಾವೈಕ್ಯತೆ ಮೂಡಿಸುವ ಪ್ರಯತ್ನಗಳನ್ನು ಮಾಡಿದ್ದಾರೆ. ದೇಶದ ಎಲ್ಲಾ ಭಾಗಗಳ ಜನತೆಯೂ ಒಂದೇ, ಎಲ್ಲರೂ ಒಟ್ಟಾಗಿದ್ದು ದೇಶದ ಅಭಿವೃದ್ಧಿಯತ್ತ ಕೊಂಡೊಯ್ಯಬೇಕು ಎಂಬ ಅಂಶವನ್ನು ಸಾರಿದ್ದು, ಅತ್ಯಂತ ಹೆಮ್ಮೆಯ ವಿಚಾರವಾಗಿದೆ ಎಂದು ಹೇಳಿದರು.
India@75: ಹರ್ ಘರ್ ತಿರಂಗಾಕ್ಕೆ 7 ತಿಂಗಳು ಮೊದಲೇ ಸಲಹೆ ಕೊಟ್ಟಿದ್ದ ಕನ್ನಡಿಗ..!
ಇದೇ ವೇಳೆ ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಸಂಘದ ಕ್ಷೇಮಾಭಿವೃದ್ಧಿ ಸಂಘದ 1 ಲಕ್ಷ ರು.ಗಳ ಚೆಕ್ ಅನ್ನು ಅಮೃತಾರಿಗೆ ನೀಡಿ ಗೌರವಿಸಿದರು. ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಬಿಬಿಎಂಪಿ ಅಧಿಕಾರಿಗಳು ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಅಮೃತ್ ರಾಜ್, ವಿಕಾಸ ಟ್ರಸ್ಟ್‌ನ ಅಧ್ಯಕ್ಷ ರವಿ ನಾರಾಯಣ ಗುಣಾಜೆ ಮತ್ತಿತರರಿದ್ದರು.
