Love Jihad: ಇನ್‌ಸ್ಟಾಗ್ರಾಂ ಮೂಲಕ ಮುಸ್ಲಿಂ ಯುವಕನ ಮದುವೆಯಾದ ಯುವತಿ: ಲವ್ ಜಿಹಾದ್ ಆರೋಪ
ಕೊಪ್ಪಳ ಜಿಲ್ಲೆಯ ಕುಷ್ಟಗಿ ಪಟ್ಟಣದ ಇಂದಿರಾನಗರದ ನಿವಾಸಿ ಸಂಜನಾ ಛಲವಾದಿ ಹಾಗೂ ಹೈದರಾಬಾದ್ ಮೂಲದ ಶೇಖ್ ವಹೀದ್ ಇನ್‌ಸ್ಟಾಗ್ರಾಂ ಮೂಲಕ ಪರಿಚಯ ಆಗಿದ್ದಾರೆ. ಈಗ ಮನೆ ಬಿಟ್ಟು ಓಡಿ ಹೋಗಿ ಮದುವೆಯೂ ಆಗಿದ್ದಾರೆ. ಇದನ್ನು ಪೋಷಕರು ಲವ್ ಜಿಹಾದ್ ಎಂದು ಆರೋಪಿಸಿದ್ದಾರೆ.
ವರದಿ- ದೊಡ್ಡೇಶ್ ಯಲಿಗಾರ್ ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಪ್ಪಳ (ಡಿ.24): ಮದುವೆ ಎನ್ನುವುದು ಸ್ವರ್ಗದಲ್ಲಿ ನಿಶ್ಚಯವಾಗಿರುತ್ತದೆ ಎನ್ನುವ ಮಾತಿದೆ. ಆದರೆ ಇಲ್ಲೊಂದು ಮದುವೆ ಇನ್ಸ್ಟಾಗ್ರಾಂ ಮೂಲಕ ನೆರವೇರಿದೆ. ಆದರೆ ಈ ಮದುವೆಗೆ ಇದೀಗ ಲವ್ ಜಿಹಾದ್ ಆರೋಪ ಕೇಳಿಬಂದಿದೆ. ಅಷ್ಟಕ್ಕೂ ಏನಿದು ಇನ್ಸ್ಟಾಗ್ರಾಂ ಮ್ಯಾರೇಜ್ ಹಾಗೂ ಲವ್ ಜಿಹಾದ್ ಕಹಾನಿ ನೋಡೋಣ ಈ ರಿಪೋರ್ಟ್ ನಲ್ಲಿ.
ಈ ಪ್ರೀತಿ ಎನ್ನುವುದು ಹೇಗೆ? ಯಾರ ಜೊತೆ ಯಾವ ಸಮಯದಲ್ಲಿ ಹುಟ್ಟುತ್ತದೆ ಎನ್ನುವುದು ಗೋತ್ತಾಗುವುದೇ ಇಲ್ಲ. ಹೀಗೆ ಇಲ್ಲೊಂದು ಊರಲ್ಲಿ ಇನ್‌ಸ್ಟಾಗ್ರಾಂ ಮೂಲಕ ವಿಭಿನ್ನ ರೀತಿಯಲ್ಲಿ ಪ್ರೇಮ ಪ್ರಕರಣವೊಂದು ನಡೆದಿದೆ. ಕೊಪ್ಪಳ ಜಿಲ್ಲೆಯ ಕುಷ್ಟಗಿ ಪಟ್ಟಣದ ಇಂದಿರಾನಗರದ ನಿವಾಸಿ ಸಂಜನಾ ಛಲವಾದಿ ಹಾಗೂ ಹೈದರಾಬಾದ್ ಮೂಲದ ಶೇಖ್ ವಹೀದ್ ಕಳೆದ ನಾಲ್ಕು ವರ್ಷಗಳಿಂದ ಇನ್‌ಸ್ಟಾಗ್ರಾಂ ಮೂಲಕ ಪರಿಚಯ ಆಗಿದ್ದಾರೆ. ಹೀಗೆ ಪರಿಚಯವಾದ ಇವರಿಬ್ಬರು ಆರಂಭದಲ್ಲಿ ಉತ್ತಮ ಸ್ನೇಹಿತರಾಗಿದ್ದರು. ಬಳಿಕ ಇವರಿಬ್ಬರ ಸ್ನೇಹ ಪ್ರೀತಿಗೆ ತಿರುಗಿದೆ.
ಲವ್ ಜಿಹಾದ್ ಆರೋಪ: ಮದುವೆಗೆ ಒಂದು ತಿಂಗಳು ಇರುವಾಗ ಯುವತಿ ಎಸ್ಕೇಪ್
ಮನೆ ಬಿಟ್ಟು ಹೋಗಿ ಮದುವೆಯಾದ ಜೋಡಿ: ಇನ್ನು ಇವರಿಬ್ಬರ ಪ್ರೀತಿ ಮದುವೆ ಹಂತಕ್ಕೆ ಬಂದಿದೆ. ಆದರೆ ಮದುವೆಯಾಗುವ ವಿಷಯವನ್ನು ಸಂಜನಾ ಛಲವಾದಿ ತಮ್ಮ ಮನೆಯಲ್ಲಿ ಹೇಳಿಲ್ಲ.ಧರ್ಮ ಬೇರೆಯಾದ ಕಾರಣ ಮನೆಯಲ್ಲಿ ಮದುವೆಗೆ ಒಪ್ಪುವುದಿಲ್ಲ ಎನ್ನುವ ಕಾರಣಕ್ಕೆ ಸಂಜನಾ ಮನೆ ಬಿಟ್ಟು ಹೋಗುವ ನಿರ್ಧಾರಕ್ಕೆ ಬಂದಿದ್ದಾಳೆ.ಹೀಗಾಗಿ ಸಂಜನಾ ಡಿಸೆಂಬರ್ 16ರಂದು ಕುಷ್ಟಗಿಯಿಂದ ಹೈದ್ರಾಬಾದ್‌ಗೆ ತೆರಳಿ ಶೇಖ್ ವಹಿದ್ ಜೊತೆಗೆ ಮದುವೆಯಾಗಿದ್ದಾಳೆ. ಸಂಜನಾ ಛಲವಾದಿ ಎಂದಿನಂತೆ ಸಂಕಲ್ಪ ಕಂಪ್ಯೂಟರ್ ಇನ್ಸ್‌ಟಿಟ್ಯೂಟ್‌ಗೆ ತರಬೇತಿ ಪಡೆಯಲು ಹೋಗಿದ್ದಾಳೆ. ತರಬೇತಿ ಮುಗಿಸಿಕೊಂಡು ವಾಪಸ್ಸು ಮನೆಗೆ ಬಾರದ ಹಿನ್ನೆಲೆಯಲ್ಲಿ ಅವರ ತಂದೆ ಪರಶುರಾಮ ಛಲವಾದಿ ನನ್ನ ಮಗಳು ಕಾಣೆಯಾಗಿದ್ದು ಹುಡುಕಿ ಕೊಡುವಂತೆ ಡಿ.16 ರಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಸಂಜನಾ ಪತ್ತೆಗೆ ವಿಶೇಷ ತಂಡ ರಚನೆ: ಸಂಜನಾ ಕಾಣೆಯಾಗಿದ್ದಾಳೆ ಎನ್ನುವ ಕುರಿತು ದೂರು ದಾಖಲಾಗಿದ್ದಷ್ಟೇ ತಡ ಕೂಡಲೇ ಪೊಲೀಸ್ ಇಲಾಖೆ ಎಚ್ಚೆತ್ತುಕೊಂಡಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಗ್ಸು ಗಿರಿ, ಗಂಗಾವತಿ ವಿಭಾಗ ಡಿವೈಎಸ್ಪಿ ರುದ್ರೇಶ ಉಜ್ಜನಕೊಪ್ಪ, ಸಿಪಿಐ ನಿಂಗಪ್ಪ ರುದ್ರಪ್ಪಗೋಳ ಇವರುಗಳ ಮಾರ್ಗದರ್ಶನದಲ್ಲಿ ಪಿಎಸ್‌ಐ ಮೌನೇಶ ರಾಠೋಡ ಪ್ರಕರಣದ ಕುರಿತು ತನಿಖೆ ಕೈಗೊಂಡು ಕಾರ್ಯಾಚರಣೆ ನಡೆಸಿ ಸಂಜನಾ ಮನಃಪೂರ್ವಕವಾಗಿ ಶೇಖ್ ವಹಿದ್‌ನನ್ನು ಮದುವೆಯಾದ ಬಗ್ಗೆ ದೊರೆತ ಖಚಿತ ಮಾಹಿತಿ ಹಿನ್ನೆಲೆಯಲ್ಲಿ, ಪಿಎಸ್‌ಐ ಮೌನೇಶ್ ರಾಠೋಡ ಅವರು ಹೈದ್ರಾಬಾದ್‌ಗೆ ತೆರಳಿ ಯುವತಿ ಮತ್ತು ಯುವಕನನ್ನು ಕುಷ್ಟಗಿ ಪೊಲೀಸ್ ಠಾಣೆಗೆ ಕರೆತಂದಿದ್ದಾರೆ.
ಮಂಡ್ಯದಲ್ಲಿ ಲವ್ ಜಿಹಾದ್, ಮತಾಂತರವಾದ್ರೆ ಮದುವೆಯಾಗುವುದಾಗಿ ನಂಬಿಸಿ ಅಪ್ರಾಪ್ತ ಅಂಗವಿಕಲೆಯ ಅತ್ಯಾಚಾರ!
ಲವ್ ಜಿಹಾದ್ ಆರೋಪ: ಸಂಜನಾ ಕುಷ್ಟಗಿಗೆ ಬಂದಾಗ ಆಕೆಯ ಪಾಲಕರಿಗೆ ಶಾಕ್ ಕಾದಿತ್ತು. ಸಂಜನಾ ಶೇಖದ ವಹೀದ್ ನನ್ನು ಮುಸ್ಲಿಂ ಸಂಪ್ರದಾಯದ ಪ್ರಕಾರ ಮದುವೆಯಾಗಿದ್ದಾಳೆ. ಆಕೆಗೆ ಒತ್ತಾಯವಾಗಿ ಮುಸ್ಲಿಂ ಧರ್ಮಕ್ಕೆ ಮತಾಂತರಗೊಳಿಸಿ ಮದುವೆ ಮಾಡಲಾಗಿದೆ. ಹೀಗಾಗಿ ಇದರಲ್ಲಿ ಲವ್ ಜಿಹಾದ್ ನಡೆದಿದೆ ಎನ್ನುವುದು ಆಕೆಯ ಪಾಲಕರ ಅರೋಪವಾಗಿತ್ತು. ಯುವತಿ ಸಂಜನಾ ಹಾಗೂ ಶೇಖ್ ವಹೀದ್ ಇಬ್ಬರ ಮದುವೆಯ ವಿಷಯದಲ್ಲಿ ಲವ್ ಜಿಹಾದ್ ಹೆಸರು ಕೇಳಿಬರುತ್ತಲೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದರು. ಸಂಜನಾಳನ್ನ ವಿಚಾರಣೆಗೆ ಒಳಪಡಿಸಿದಾಗ ನಾನು ಮದುವೆಯಾದ ಯುವಕನ ಜೊತೆಗೇ ಹೋಗುತ್ತೇನೆ. ನನಗೆ ಯಾರ ಬಲವಂತವೂ ಇಲ್ಲ. ಸ್ವಯಿಚ್ಛೆಯಿಂದಲೇ ಮದುವೆಯಾಗಿದ್ದೇನೆ ಎಂದು ಪೊಲೀಸರ ಎದುರು ತಿಳಿಸಿದ್ದಾಳೆ.
ಮನವೊಲಿಕೆಗೆ ಜಗ್ಗದ ಸಂಜನಾ: ಸಂಜನಾಳನ್ನ ಹೈದರಾಬಾದ್ ನಿಂದ ಕರೆತರುತ್ತಲೆ ಆಕೆಯ ಪಾಲಕರು ಆಕೆಯನ್ನು ಮನವೊಲಿಸಲು ಪ್ರಯತ್ನ ಮಾಡಿದ್ದಾರೆ. ಜೊತೆಗೆ ಕಣ್ಣೀರು ಸುರಿಸಿ, ಶೇಖ್ ವಹೀದ್ ನನ್ನು ಬಿಟ್ಟು ಬಿಡಲು ಮನವಿ ಮಾಡಿದ್ದಾರೆ. ಆದರೆ ಸಂಜನಾ ಮಾತ್ರ ಪಾಲಕರ ಕಣ್ಣೀರಿಗೆ ಕರಿಗಿಲ್ಲ. ನಾನು ಯಾವುದೇ ಕಾರಣಕ್ಕೂ ಶೇಖ್ ವಹೀದ್ ನನ್ನು ಬಿಟ್ಟು ಬರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾಳೆ.
ಲವ್ ಜಿಹಾದ್ ಅಲ್ಲಗಳೆದ ಪೊಲೀಸರು: ಈ ಪ್ರಕರಣದಲ್ಲಿ ಲವ್ ಜಿಹಾದ್ ವಾಸನೆ ಬಡೆಯಿತೋ ಆಗ ಸಿಪಿಐ ನಿಂಗಪ್ಪ ರುದ್ರಪ್ಪಗೋಳ ಹಾಗೂ ಪಿಎಸ್‌ಐ ಮೌನೇಶ ಮಾದ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಇಂದಿರಾ ನಗರದ ಯುವತಿ ಕಾಣೆಯಾದ ಕುರಿತು ಅವರ ಪಾಲಕರು ದೂರು ಸಲ್ಲಿಸಿದ ಹಿನ್ನೆಲೆಯಲ್ಲಿ, ಪ್ರಕರಣವನ್ನು ಭೇದಿಸಿದ್ದು, ಆಕೆ ಮುಸ್ಲಿಂ ಯುವಕನ ಜೊತೆಗೆ ಮದುವೆಯಾಗಿರುವುದಾಗಿ ಸ್ವಯಂ ಹೇಳಿಕೆ ನೀಡಿದ್ದಾಳೆ. ಇದು ಲವ್ ಮ್ಯಾರೇಜ್ ಆಗಿದೆ ಹೊರತು, ಲವ್ ಜಿಹಾದ್ ಅಲ್ಲ ಎಂದು ಸ್ಪಷ್ಟನೆ ನೀಡಿದರು.
ಒಟ್ಟಿನಲ್ಲಿ ಇನ್‌ಸ್ಟಾಗ್ರಾಂ ಮೂಲಕ ಆರಂಭವಾದ ಸ್ನೇಹ, ಪ್ರೀತಿಗೆ ತಿರುಗಿ ಬಳಿಕ ಮದುವೆಯಲ್ಲಿ ಅಂತ್ಯಗೊಂಡಿದೆ. ಆದರೆ ಈ ಪ್ರಕರಣದಲ್ಲಿ ಲವ್ ಜಿಹಾದ್ ಆರೋಪ ಕೇಳಿಬಂದಿರುವುದು ನಿಜಕ್ಕೂ ದುರಂತ. ಇನ್ನು ಈ ಕುರಿತಾಗಿ ಇನ್ನಷ್ಟು ವಾಸ್ತವವಾಗಿ ತನಿಖೆಯಾದಾಗ ಮಾತ್ರ ಸತ್ಯ ಹೊರಬರಲಿದೆ.