ಸೋಮರಡ್ಡಿ ಅಳವಂಡಿ

ಕೊಪ್ಪಳ [ಜ.06]:  ಮಣ್ಣು ಹೋಗಿ ಚಿನ್ನ ಆಗಬಹುದು, ಚಿನ್ನ ಹೋಗಿ ಮಣ್ಣು ಆಗಬಹುದು ಎನ್ನುವ ಗಾದೆ ಮಾತು ಈಗ ಅಕ್ಷರಶಃ ನಿಜವಾಗುತ್ತಿದೆ. ಮರಳು ಬಂಗಾರದ ಬೆಲೆಗೆ ಮಾರಾಟವಾಗುತ್ತಿದೆ. ಅಷ್ಟೇ ಅಲ್ಲ, ಮರಳನ್ನು ಸಿಸಿ ಕ್ಯಾಮೆರಾ ಹಾಕಿ ಕಾಯಲಾಗುತ್ತಿದೆ.

ಒಂದು ಕಾಲಕ್ಕೆ ಅದಿರು ಮಾರಾಟ ಉತ್ತಂಗದ ಸ್ಥಿತಿ ಈಗ ಮರಳಿಗೆ ಬಂದಿದೆ. ಕೊಪ್ಪಳ ಜಿಲ್ಲೆ ಸೇರಿದಂತೆ ಸುತ್ತಮುತ್ತಲ ಜಿಲ್ಲೆಯಲ್ಲಿ ಮರಳು ವಹಿವಾಟು ಸರ್ಕಾರವನ್ನೇ ಅಲುಗಾಡಿಸುವಂತಾಗಿದೆ. ಅಧಿಕಾರಿಗಳು, ಜನಪ್ರತಿನಿಧಿಗಳ ಸುತ್ತ ಈಗ ಮರಳು ವಾಸನೆ ಬಲುಜೋರಾಗಿಯೇ ಕೇಳಿಬರಲಾರಂಭಿಸಿದೆ.

ಚಿನ್ನದ ಬೆಲೆ:

ಮರಳಿಗೆ ಕೊಪ್ಪಳದಲ್ಲಿ ಚಿನ್ನದಂತಹ ಬೆಲೆ ಬಂದಿದೆ. ಕೇವಲ 1000-2000 ಸಾವಿರ ರು.ಗೆ ಒಂದು ಟ್ರ್ಯಾಕ್ಟರ್‌ ಮಾರಾಟವಾಗುತ್ತಿತ್ತು, ಈಗ ಮೂರರಿಂದ ನಾಲ್ಕೂವರೆ ಸಾವಿರ ರುಪಾಯಿಗೆ ಒಂದು ಟ್ರ್ಯಾಕ್ಟರ್‌ ಮಾರಾಟವಾಗುತ್ತಿದೆ. ಇನ್ನು ಟಿಪ್ಪರ್‌ ಬೆಲೆ  12-15 ಸಾವಿರ ರು. ಆಗಿದೆ. ಇಷ್ಟಾದರೂ ಮರಳು ಸಲೀಸಾಗಿ ಸಿಗುತ್ತಿಲ್ಲ. ಇದಕ್ಕೆ ಶಿಫಾರಸು, ಅಧಿಕಾರಿಗಳ ಕೃಪೆ ಬೇಕು.

ಬಂದಾದ ಕಾಮಗಾರಿಗಳು:

ಮರಳು ಚಿನ್ನದ ದರದಲ್ಲಿ ಮಾರಾಟವಾಗುತ್ತಿರುವುದರಿಂದ ಮನೆ ಕಟ್ಟುವುದನ್ನೇ ಕೆಲವರು ನಿಲ್ಲಿಸಿದ್ದಾರೆ. ಇನ್ನು ರಸ್ತೆ ಕಾಮಗಾರಿ ಸೇರಿದಂತೆ ಮೊದಲಾದ ಮರಳು ಆಧಾರಿತ ಕಾಮಗಾರಿಗಳು ಸ್ಥಗಿತವಾಗಿವೆ. ಇದರಿಂದ ಜನರು ರೋಸಿ ಹೋಗಿದ್ದಾರೆ. ಸಮ್ಮಿಶ್ರ ಸರ್ಕಾರ ಪತನವಾಗಿ ಬಿಜೆಪಿ ಅಧಿಕಾರಕ್ಕೆ ಬರುತ್ತಿದ್ದಂತೆ ಮರಳು ದರ ದುಪ್ಪಟ್ಟಾಗಿರುವುದು ಅಚ್ಚರಿಗೆ ಕಾರಣವಾಗಿದೆ. ಅಕ್ರಮ ತಡೆಯಲು ಮುಂದಾಗಿದ್ದೇ ಈಗ ಈ ಅವಾಂತರಕ್ಕೆ ಕಾರಣವಾಗಿದೆ. ಕಟ್ಟುನಿಟ್ಟಿನ ಕ್ರಮದಿಂದ ಮರಳು ದರ ದುಪ್ಪಟ್ಟಾಯಿತೇ ಹೊರತು ಮರಳು ದಂಧೆಗೇನೂ ಕಡಿವಾಣ ಬಿದ್ದಿಲ್ಲ.

ತೂಕದ ಲೆಕ್ಕಾಚಾರ:

ತಾಲೂಕಿನ ಯತ್ನಟ್ಟಿಗ್ರಾಮದ ಬಳಿ ಮರಳು ಪಾಯಿಂಟ್‌ ಇದೆ. ಇದು ಸರ್ಕಾರದಿಂದ ಅಧಿಕೃತವಾಗಿ ಪರವಾನಗಿ ಇರುವ ಕೇಂದ್ರ. ಇಲ್ಲಿ ಮರಳನ್ನು ವೇ ಬ್ರೀಡ್ಜ್‌ನಲ್ಲಿ ತೂಕ ಮಾಡಿ ಮಾರಾಟ ಮಾಡಲಾಗುತ್ತದೆ. ಒಂದು ಟಿಪ್ಪರ್‌ಗೆ 12 ಸಾವಿರ ರು. ಎಂದು ಹೇಳಲಾಗುತ್ತದೆ. ಎಲ್ಲಿಗೆ ಬಂತಪ್ಪ ಕಾಲ ಎಂದು ಜನರು ಪ್ರಶ್ನೆ ಮಾಡುತ್ತಿದ್ದಾರೆ. ಹಳ್ಳದಲ್ಲಿ ಸಿಗುವ ಮರಳನ್ನು ತೂಕ ಮಾಡಿಯೇ ಮಾರಾಟ ಮಾಡಲಾಗುತ್ತದೆ ಎನ್ನುವುದು ಸೋಜಿಗದ ಸಂಗತಿಯಾಗಿದೆ.

ಅಧಿಕಾರಿಗಳ ಆಗಮನ:

ಜಿಲ್ಲೆಯೊಂದರಲ್ಲಿಯೇ ಪ್ರತಿ ತಿಂಗಳು ಸುಮಾರು ನೂರಾರು ಕೋಟಿ ವಹಿವಾಟು ನಡೆಯುತ್ತದೆ. ಇದರಲ್ಲಿ ಸರ್ಕಾರಕ್ಕೆ ಶೇ. 1ರಷ್ಟುರಾಜಸ್ವ ಬರುತ್ತಿಲ್ಲ. ಆದ್ದರಿಂದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಸಚಿವ ಸಿ.ಸಿ. ಪಾಟೀಲ ಅವರು ಕನಕಪುರದಲ್ಲಿ ಕಾರ್ಯನಿರ್ವಹಿಸಿದ ಅಧಿಕಾರಿಗಳ ತಂಡವನ್ನೇ ಕೊಪ್ಪಳ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ವರ್ಗಾಯಿಸಿದ್ದಾರೆ. ಅಲ್ಲಿ ಕಟ್ಟುನಿಟ್ಟಾಗಿ ಮಾಡುವಲ್ಲಿ ಯಶಸ್ವಿಯಾಗಿರುವ ಅಧಿಕಾರಿಗಳ ತಂಡವನ್ನೇ ಇಲ್ಲಿಗೆ ವರ್ಗಾಯಿಸಲಾಗಿದೆ ಎಂದು ಸ್ವತಃ ಸಚಿವ ಸಿ.ಸಿ. ಪಾಟೀಲ ಅವರೇ ಮಾಧ್ಯಮದವರಿಗೆ ಮಾಹಿತಿ ನೀಡಿದ್ದಾರೆ.

ಕೊಪ್ಪಳ : ಜನರ ಅನುಕೂಲಕ್ಕಾಗಿ ಜಿಲ್ಲಾಡಳಿತದಿಂದ ಉಚಿತ ಬಸ್ ಸೇವೆ..

ಮರಳು ನೀತಿ:

ಮರಳು ಅಕ್ರಮದಿಂದ ಸುಸ್ತಾಗಿರುವ ಸರ್ಕಾರ ಹೊಸದೊಂದು ಮರಳು ನೀತಿಯನ್ನು ಜಾರಿ ಮಾಡಲು ಮುಂದಾಗಿದೆ. ಈಗಾಗಲೇ ರೂಪುರೇಷೆಗಳು ಸಿದ್ಧವಾಗಿದ್ದು, ಪ್ರಸಕ್ತ ಬಜೆಟ್‌ ನಂತರ ನೂತನ ಮರಳು ನೀತಿ ಜಾರಿಗೆ ಬರುತ್ತದೆ ಎನ್ನಲಾಗಿದೆ. ಮರಳನ್ನು ಇನ್ಮುಂದೆ ಬ್ಯಾಗ್‌ನಲ್ಲಿಯೇ ಸಿಮೆಂಟ್‌ ರೀತಿಯಲ್ಲಿ ಮಾರಾಟ ಮಾಡುವ ಕುರಿತು ಸರ್ಕಾರ ಗಂಭೀರ ಚಿಂತನೆಯನ್ನು ನಡೆಸಿದೆ. ಅಕ್ರಮ ತಡೆಗೆ ಈಗ ಅದೊಂದೆ ಪರಿಹಾರ ಎನ್ನುವ ನಿರ್ಧಾರಕ್ಕೆ ಸರ್ಕಾರ ಬಂದಂತೆ ಇದೆ.

ಮದ್ಯ ಮಾರಾಟ ನಿಷೇಧ : ಜಿಲ್ಲಾಧಿಕಾರಿ ಆದೇಶ..

ಮನಬಂದಂತೆ ಜಫ್ತಿ

ಮರಳನ್ನು ಮನಬಂದಂತೆ ಜಫ್ತಿ ಮಾಡಲಾಗುತ್ತಿದೆ. ಮರಳು ಜಪ್ತಿಗೆ ಸ್ವತಃ ಪೊಲೀಸ್‌ ವರಿಷ್ಠಾಧಿಕಾರಿ ಅವರೇ ಅಖಾಡಕ್ಕೆ ಇಳಿದಿದ್ದಾರೆ. ಪೊಲೀಸ್‌ ಇಲಾಖೆಯಲ್ಲಿನ ಕಿತ್ತಾಟ ಇದಕ್ಕೆ ಕಾರಣ ಎನ್ನಲಾಗುತ್ತಿದೆ. ಮನೆಕಟ್ಟಲು ಹಾಕಿರುವ ಮರಳನ್ನು ಜಫ್ತಿ ಮಾಡಿಕೊಂಡು ಬಂದು ತಹಸೀಲ್ದಾರ್‌ ಕಚೇರಿ ಆವರಣದಲ್ಲಿ ಜಮಾ ಮಾಡಲಾಗುತ್ತಿದೆ. ಭಾಗ್ಯನಗರದಲ್ಲಿ ಆಶ್ರಯ ಮನೆ ಕಟ್ಟಿಕೊಳ್ಳಲು ಸಂಗ್ರಹಿಸಿಕೊಂಡಿದ್ದ ಮರಳನ್ನೇ ಜಫ್ತಿ ಮಾಡಿದ್ದು, ಮಹಿಳೆಯರು ಪೊಲೀಸ್‌ ಇಲಾಖೆ ಮತ್ತು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ಮಾಡಿದ್ದರು.

ಕೊಪ್ಪಳ ಜಿಲ್ಲೆಯಲ್ಲಿ ಮರಳು ಅಕ್ರಮ ಮಿತಿಮೀರಿದೆ. ಇಲ್ಲಿ ದುಪ್ಪಟ್ಟು ದರಕ್ಕೆ ಕದ್ದುಮುಚ್ಚಿ ಮಾರಾಟ ಮಾಡಲಾಗುತ್ತದೆ ಎನ್ನುವುದು ಗಮನಕ್ಕೆ ಬಂದಿರುವ ಹಿನ್ನೆಲೆಯಲ್ಲಿ ವಿಶೇಷ ಅಧಿಕಾರಿಗಳ ತಂಡವನ್ನೇ ವರ್ಗಾಯಿಸಲಾಗಿದೆ. ಕಡಿವಾಣ ಹಾಕಲಾಗುತ್ತದೆ.

ಸಿ.ಸಿ. ಪಾಟೀಲ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಸಚಿವರು