ದಿಕ್ಕಿಲ್ಲದವನಿಗೆ ಸಾಕ್ಷಾತ್ ದೇವರಾದ ಡಾಕ್ಟರ್: ಕೊಪ್ಪಳ ವೈದ್ಯರಿಂದ ಯಶಸ್ವಿ ಶಸ್ತ್ರಚಿಕಿತ್ಸೆ
ದಿಕ್ಕಿಲ್ಲದವನಿಗೆ ಊರುಗೋಲಾದ ವೈದ್ಯರು| ಚಪ್ಪೆ ಮುರಿದುಕೊಂಡು ನಡೆದಾಡಲು ತೊಂದರೆ ಅನುಭವಿಸುತ್ತಿದ್ದ ಅನಾಥ| ಕೊಪ್ಪಳ ಮೆಡಿಕಲ್ ಕಾಲೇಜು ವೈದ್ಯರು, ಸಿಬ್ಬಂದಿಯಿಂದ ಶಸ್ತ್ರಚಿಕಿತ್ಸೆ ಯಶಸ್ವಿ|
ಸೋಮರಡ್ಡಿ ಅಳವಂಡಿ
ಕೊಪ್ಪಳ(ಡಿ.16): ಚಪ್ಪೆ ಮುರಿದುಕೊಂಡು ಹಾಸಿಗೆ ಹಿಡಿದಿದ್ದ ಅನಾಥನೊಬ್ಬನಿಗೆ ಕೊಪ್ಪಳ ಮೆಡಿಕಲ್ ಕಾಲೇಜು ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿ ಆಪರೇಷನ್ ಮಾಡಿದ್ದು, ಈಗ ಆತ ಎಲ್ಲರಂತೆ ನಡೆದಾಡುತ್ತಿದ್ದಾನೆ. ದಿಕ್ಕಿಲ್ಲದವನ ಪಾಲಿಗೆ ಅಕ್ಷರಶಃ ದೇವರಾಗಿದ್ದಾರೆ ಈ ವೈದ್ಯರು.
ಯಲಬುರ್ಗಾ ತಾಲೂಕಿನ ವಜ್ರಬಂಡಿ ಗ್ರಾಮದ ಪ್ರಲ್ಹಾದ್ ದೇಸಾಯಿ (60)ಗೆ ಯಾರೂ ದಿಕ್ಕೇ ಇಲ್ಲ. ಆಧಾರ ಕಾರ್ಡ್ ಸೇರಿದಂತೆ ಯಾವೊಂದು ದಾಖಲೆಗಳೂ ಇಲ್ಲ. ವೃದ್ಧಾಶ್ರಮವೊಂದರಲ್ಲಿ ಆಶ್ರಯ ಪಡೆದಿದ್ದು, ಚಪ್ಪೆ ಮುರಿದಿದ್ದರಿಂದ ತೀವ್ರ ಸಮಸ್ಯೆ ಎದುರಿಸುತ್ತಿದ್ದರು. ಇವರನ್ನು ಅನಾಥಾಶ್ರಮ ಸಿಬ್ಬಂದಿ ಕೊಪ್ಪಳ ಜಿಲ್ಲಾಸ್ಪತ್ರೆಗೆ ದಾಖಲು ಮಾಡುತ್ತಾರೆ. ಅಲ್ಲಿ ಅವರನ್ನು ನೋಡಿಕೊಳ್ಳುವುದಕ್ಕೂ ಯಾವ ಸಂಬಂಧಿಕರಿರಲಿಲ್ಲ. ಹೋಗಲಿ ಸರ್ಕಾರದ ಆಯುಷ್ಮಾನ ಭಾರತ ಯೋಜನೆಯಲ್ಲಿ ಆಪರೇಷನ್ ಮಾಡೋಣ ಎಂದರೆ ಅವರ ಬಳಿ ಯಾವ ದಾಖಲೆಗಳು ಇರಲಿಲ್ಲ.
ಮೆಡಿಕಲ್ ಕಾಲೇಜು ನಿರ್ದೇಶಕ ವೈಜನಾಥ ಇಟಗಿ ಅವರು ಎಲುಬು ಕೀಲು ತಜ್ಞ ವೈದ್ಯ ಡಾ. ವಿಜಯ ಸುಂಕದ್ ಅವರೊಂದಿಗೆ ಚರ್ಚಿಸಿ, ಅನಾಥರಾಗಿರುವುದರಿಂದ ದಾಖಲೆ ಇಲ್ಲದೆ ಇರುವುದು ಸಮಸ್ಯೆಯಾಗುತ್ತದೆ. ಆದರೂ ಮೆಡಿಕಲ್ ಕಾಲೇಜಿನಲ್ಲಿ ಇರುವ ವಿಶೇಷ ನಿಧಿಯನ್ನೇ ಬಳಕೆ ಮಾಡಿಕೊಂಡು ಆಪರೇಷನ್ ಮಾಡಿಸಲು ನಿರ್ಧರಿಸಲಾಗುತ್ತದೆ. ಹದಿನೈದು ದಿನಗಳ ಹಿಂದೆಯೇ ಆಪರೇಷನ್ ಮಾಡಲಾಗಿದ್ದು, ಸಂಪೂರ್ಣ ಗುಣಮುಖರಾಗಿದ್ದು, ಈಗ ವಾಕರ್ ಹಿಡಿದುಕೊಂಡು ನಡೆದಾಡುತ್ತಿದ್ದಾರೆ. ಚಪ್ಪೆಯ ಆಪರೇಷನ್ ಮಾಡಲಾಗಿದ್ದು, ಮುರಿದಿದ್ದ ಚಪ್ಪೆಯ ಗುಂಡನ್ನೇ ತೆಗೆದು ಕೃತಕ ಗುಂಡನ್ನು ಅಳವಡಿಸಲಾಗಿದೆ.
ವೈದ್ಯರು ನನ್ನ ಪಾಲಿನ ದೇವರು:
ಅಯ್ಯೋ ದೇವರೇ ನನಗೆ ಯಾರೂ ದಿಕ್ಕೇ ಇರಲಿಲ್ಲ, ಆಸ್ಪತ್ರೆಗೆ ತಂದು ಹಾಕಿದ ಮೇಲೆ ನನಗೆ ಚಹ ಕೊಡುವುದಕ್ಕೂ ನನ್ನವರು ಇರಲಿಲ್ಲ. ಆದರೆ, ಆಸ್ಪತ್ರೆಯ ಸಿಬ್ಬಂದಿ, ವೈದ್ಯರೇ ನನ್ನ ಪಾಲಿಗೆ ದೇವರಂತೆ ಬಂದರು ಎನ್ನುತ್ತಾನೆ ಪ್ರಲ್ಹಾದ್ ದೇಸಾಯಿ. ಆಪರೇಷನ್ ಮಾಡಿದ್ದು, ಈಗ ಅಡ್ಡಾಡಲು ಬರುತ್ತಿದೆ. ಆದರೂ ನೋವು ಇದೆ ಎನ್ನುತ್ತಾರೆ.
ದೇವರ ಪಟ್ಟಾಭಿಷೇಕಕ್ಕೆ 18 ವರ್ಷ: ಗವಿಮಠಕ್ಕೆ ಗತವೈಭವ ಮರುಕಳಿಸಿದ ಶ್ರೀಗಳು
ಅನಾಥನಾಗಿದ್ದರಿಂದ ದಾಖಲೆಗಳು ಇರಲಿಲ್ಲ. ಆದರೂ ಮೆಡಿಕಲ್ ಕಾಲೇಜು ನಿರ್ದೇಶಕರ ಸಹಕಾರದಿಂದ ಆಪರೇಷನ್ ಮಾಡಲಾಗಿದೆ. ವಾಕರ್ ಸಹಾಯದಿಂದ ನಡೆದಾಡುತ್ತಿದ್ದಾನೆ. ಅನಾಥನನ್ನು ಆಸ್ಪತ್ರೆಯ ಸಿಬ್ಬಂದಿಯೇ ಮನೆಯ ಸಂಬಂಧಿ ಎನ್ನುವಂತೆ ನೋಡಿಕೊಂಡಿದ್ದಾರೆ ಎಂದು ಎಲಬು, ಕೀಲು ತಜ್ಞವೈದ್ಯ ಡಾ. ವಿಜಯ ಸುಂಕದ್ ತಿಳಿಸಿದ್ದಾರೆ.
ದಿಕ್ಕಿಲ್ಲದ ನನ್ನನ್ನು ವೈದ್ಯರು, ಸಿಬ್ಬಂದಿ ದೇವರಂತೆ ನೋಡಿಕೊಂಡಿದ್ದಾರೆ. ಮುರಿದು ಹೋಗಿದ್ದ ಕಾಲು ಆಪರೇಷನ್ ಮೂಲಕ ನಡೆದಾಡುವಂತೆ ಮಾಡಿದ್ದಾರೆ ಎಂದು ವೃದ್ಧ ಪ್ರಲ್ಹಾದ್ ದೇಸಾಯಿ ಅವರು ಹೇಳಿದ್ದಾರೆ.
ಕೊಪ್ಪಳದ ಬಸವೇಶ್ವರ ವೃತ್ತದಲ್ಲಿ ಭಿಕ್ಷಾಟನೆ ಮಾಡುತ್ತಿದ್ದ ಇವರ ಬಗ್ಗೆ ಮಾಹಿತಿ ಪಡೆದು ಸುರಭಿ ವೃದ್ಧಾಶ್ರಮಕ್ಕೆ ಸೇರಿಸಲಾಗಿತ್ತು. ಚಪ್ಪೆ ಮುರಿದಿದ್ದರಿಂದ ಜಿಲ್ಲಾಸ್ಪತ್ರೆಯಲ್ಲಿ ದಾಖಲು ಮಾಡಿ ಆಪರೇಷನ್ ಮಾಡಲಾಗಿದ್ದು, ಸಕ್ಸಸ್ ಆಗಿದೆ ಎಂದು ಸುರಭಿ ವೃದ್ಧಾಶ್ರಮ ನೀಲಪ್ಪ ಹೇಳಿದ್ದಾರೆ.