ಮರಕುಂಬಿ ಗಲಾಟೆ ಪ್ರಕರಣ: ಕೋರ್ಟ್ ಶಿಕ್ಷೆ ಪ್ರಕಟ ಮಾಡುತ್ತಿದ್ದಂತೆ ಅಪರಾಧಿ ಸಾವು!
ಕೊಪ್ಪಳ ಜಿಲ್ಲೆಯ ಮರಕುಂಬಿ ಗ್ರಾಮದಲ್ಲಿ 2014ರಲ್ಲಿ ನಡೆದಿದ್ದ ದಲಿತರು ಮತ್ತು ಸವರ್ಣೀಯರ ನಡುವಿನ ಗಲಾಟೆ ಪ್ರಕರಣದಲ್ಲಿ 98 ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಶಿಕ್ಷೆ ಪ್ರಕಟವಾದ ಬಳಿಕ ಆರೋಪಿ ರಾಮಪ್ಪ ಭೋವಿ (44) ಸಾವನ್ನಪ್ಪಿದ್ದಾರೆ.
ಕೊಪ್ಪಳ (ಅ.25): ಕಳೆದ 2014ರಲ್ಲಿ ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನಲ್ಲಿ ಮರಕುಂಬಿ ಗ್ರಾಮದಲ್ಲಿ ನಡೆದಿದ್ದ ದಲಿತರು ಹಾಗೂ ಸವರ್ಣೀಯರ ನಡುವಿನ ಗಲಾಟೆ ಪ್ರಕರಣದ 98 ಆರೋಪಿಗಳಿಗೆ ಜಿಲ್ಲಾ ನ್ಯಾಯಾಲಯದಿಂದ ಜೀವಾವಧಿ ಶಿಕ್ಷೆ ಪ್ರಕಟವಾಗಿದೆ. ಇನ್ನು ಶಿಕ್ಷೆ ಪ್ರಕಟ ಸುದ್ದಿ ಕೇಳುತ್ತಿದ್ದಂತೆಯೇ ಅಪರಾಧಿ ರಾಮಪ್ಪ ಭೋವಿ (44) ಸಾವನ್ನಪ್ಪಿದ್ದಾರೆ.
ಹೌದು, ಕಳೆದ 10 ವರ್ಷಗಳ ಹಿಂದೆ ಮರಕುಂಬಿ ಗ್ರಾಮದಲ್ಲಿ ನಡೆದಿದ್ ಗಲಾಟೆ ಪ್ರಕರಣವು ಇಡೀ ರಾಜ್ಯಕ್ಕೆ ಕಪ್ಪು ಚುಕ್ಕೆಯಂತಾಗಿತ್ತು. ಸಂವಿಧಾನ ಜಾರಿಗೆ ಬಂದು ಸುಮಾರು 60 ವರ್ಷಗಳು ಕಳೆದಿದ್ದರೂ ಅಸ್ಪೃಶ್ಯತೆ ಆಚರಣೆ ಮಾಡಲಾಗಿತ್ತು. ಗಂಗಾವತಿ ಪಟ್ಟಣದ ಸಿನಿಮಾ ಮಂದಿರದಲ್ಲಿ ಟಿಕೆಟ್ ವಿಚಾರಕ್ಕೆ ಆರಂಭವಾದ ಜಗಳ ಮರಕುಂಬಿ ಗ್ರಾಮದಲ್ಲಿ ಸಮುದಾಯಗಳ ನಡುವಿನ ಕಲಹಕ್ಕೆ ವಿಸ್ತರಣೆಗೊಂಡಿತ್ತು. ಇನ್ನು ಗ್ರಾಮದಲ್ಲಿ ದಲಿತರ ಮೇಲೆ ಅಸ್ಪೃಶ್ಯತೆ ಮಾಡುತ್ತಾ ದಲಿತರನ್ನು ಪ್ರಾಣಿಗಳಿಗಿಂತ ಕೀಳಾಗಿ ಕಾಣಲು ಆರಂಭಿಸಿದರು. ಅಸ್ಪೃಶ್ಯತೆಯನ್ನು ವಿರೋಧಿಸಿದ ದಲಿತರ ಮನೆಗಳು ಹಾಗೂ ಗುಡಿಸಲುಗಳನ್ನು ಸವರ್ಣೀಯರು ಸುಟ್ಟು ಹಾಕಿ ವಿಕೃತಿ ಮೆರೆದಿದ್ದರು.
ಇದನ್ನೂ ಓದಿ: Koppal: ಮರಕುಂಬಿ ದಲಿತರ ಮೇಲೆ ದೌರ್ಜನ್ಯ ಕೇಸ್: 98 ಸವರ್ಣಿಯರಿಗೆ ಜೀವಾವಧಿ ಶಿಕ್ಷೆ
ಈ ಪ್ರಕರಣದ ರಾಜ್ಯಾದ್ಯಂತ ಕಾಡ್ಗಿಚ್ಚಿನಂತೆ ಹಬ್ಬಿತ್ತು. ಸರ್ಕಾರದಿಂದ ಆರೋಪಿಗಳಿಗೆ ಶಿಕ್ಷೆ ಆಗಲೇಬೇಕು ಎಂದು ಎಲ್ಲ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿ ಆರೋಪಿಗಳನ್ನು ಜೈಲಿಗಟ್ಟುವಂತೆ ಸೂಚಿಸಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆ ವರದಿ ಸಲ್ಲಿಕೆ ಮಾಡಿತ್ತು. ಇದೀಗ 10 ವರ್ಷಗಳ ಅಂತರದಲ್ಲಿ ನ್ಯಾಯಾಲಯದಲ್ಲಿ ಮರಕುಂಬಿ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ತೀರ್ಪು ಪ್ರಕಟ ಮಾಡಲಾಗಿದೆ. ಈ ಕೇಸಿನಲ್ಲಿ ಒಟ್ಟು 117 ಆರೋಪಿಗಳಿದ್ದರು. 117 ಜನರ ಪೈಕಿ 101 ಜನರಿಗೆ ಇದೀಗ ಶಿಕ್ಷೆ ಪ್ರಕಟವಾಗಿದೆ.
ಇನ್ನುಳಿದ 16 ಜನರಲ್ಲಿ ಕೆಲವರು ಮೃತಪಟ್ಟಿದ್ದು, ಇನ್ನು ಕೆಲವರ ಹೆಸರುಗಳು ಪುನರಾವರ್ತನೆ ಆಗಿದ್ದವು. ಹೀಗಾಗಿ ಸದ್ಯ 101 ಜನ ಅಪರಾಧಿಗಳಿಗೆ ಇದೀಗ ಶಿಕ್ಷೆಯಾಗಿದೆ. ಅದರಲ್ಲಿ 98 ಜನರಿಗೆ ಜೀವಾವಧಿ ಶಿಕ್ಷೆ ಹಾಗೂ ತಲಾ 5,000 ರೂ. ದಂಡ ವಿಧಿಸಲಾಗಿದೆ. ಬಾಕಿ ಮೂವರು ಅಪರಾಧಿಗಳು ಎಸ್‌ಸಿ, ಎಸ್‌ಟಿ ವರ್ಗಕ್ಕೆ ಸೇರಿದವರಾಗಿದ್ದರಿಂದ ಅವರಿಗೆ ಜಾತಿನಿಂದನೆ ಕಾಯ್ದೆ ಅನ್ವಯವಾಗಿರಲಿಲ್ಲ. ಹೀಗಾಗಿ, ಕೊಲೆ ಯತ್ನ ಸೇರಿದಂತೆ ಇತರ ಸೆಕ್ಷನ್ ಅಡಿಯಲ್ಲಿ 5 ವರ್ಷಗಳ ಶಿಕ್ಷೆ ಹಾಗೂ ತಲಾ 2,000 ರೂ. ದಂಡವನ್ನು ವಿಧಿಸಲಾಗಿದೆ.
ಇದನ್ನೂ ಓದಿ: ಕೊಪ್ಪಳ: ಇದಪ್ಪ ಛಲ ಅಂದ್ರೆ, 10ಕ್ಕೂ ಅಧಿಕ ಸರ್ಕಾರಿ ನೌಕರಿ ಗಿಟ್ಟಿಸಿಕೊಂಡ ಹಳ್ಳಿ ಹುಡುಗ ರೇವಣ್ಣ ಗುರಿಕಾರ!
ಮರಕುಂಬಿ ಗಲಾಟೆ ಪ್ರಕರಣದಲ್ಲಿ ಭಾಗಿಯಾಗಿದ್ದ ರಾಮಪ್ಪ ಭೋವಿ (44) ಅವರನ್ನು ಕೊಪ್ಪಳ ಜಿಲ್ಲಾ ಕಾರಾಗೃಹದಲ್ಲಿಯೇ ಇರಿಸಲಾಗಿತ್ತು. ಇನ್ನು ಕೋರ್ಟ್‌ನಲ್ಲಿ ಶಿಕ್ಷೆ ಪ್ರಕಟ ಆಗುತ್ತಿದ್ದಂತೆ ಈ ವಿಚಾರ ತಿಳಿದ ರಾಮಪ್ಪನಿಗೆ ಭಾರೀ ಚಿಂತೆಗೀಡಾಗಿದ್ದು, ನಿನ್ನೆ ತಡರಾತ್ರಿ ಆರೋಗ್ಯದಲ್ಲಿ ಏರುಪೇರಾಗಿತ್ತು. ಈ ಹಿನ್ನೆಲೆಯಲ್ಲಿ ಅಪರಾಧಿಯನ್ನು ಕೂಡಲೆ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ರಾಮಪ್ಪ ಸಾವಿಗೀಡಾಗಿದ್ದಾನೆ.