ಕೊಪ್ಪಳದಲ್ಲಿ ಲವ್ ಜಿಹಾದ್ ಆರೋಪ ಎದುರಿಸುತ್ತಿರುವ ಮುಸ್ತಾಫಾ ಖಾದ್ರಿಗೆ ಅಂತರ ರಾಜ್ಯ ಸಂಪರ್ಕದ ಶಂಕೆ ವ್ಯಕ್ತವಾಗಿದೆ. ಯುವತಿಯರ ಖಾಸಗಿ ವೀಡಿಯೋ, ಫೋಟೋಗಳಿರುವ ಆತನ ಮೊಬೈಲ್‌ಗಳನ್ನು ಪೊಲೀಸರು ವಶಕ್ಕೆ ಪಡೆದು ಎಫ್‌ಎಸ್‌ಎಲ್‌ಗೆ ಕಳುಹಿಸಿದ್ದು, ವರದಿಗಾಗಿ ಕಾಯುತ್ತಿದ್ದಾರೆ.

ಕೊಪ್ಪಳ: ಯುವತಿಯರನ್ನು ಪುಸಲಾಯಿಸಿ ಅವರೊಂದಿಗಿನ ಖಾಸಗಿ ವೀಡಿಯೋ, ಫೋಟೋ ಚಿತ್ರೀಕರಿಸಿಕೊಂಡಿರುವ ಮತ್ತು ಲವ್ ಜಿಹಾದ್ ಆರೋಪ ಎದುರಿಸುತ್ತಿರುವ ಕೊಪ್ಪಳ ತಾಲೂಕಿನ ಕಂಪ್ಲಿಯ ಮುಸ್ತಾಫಾ ಖಾದ್ರಿಗೆ ಅಂತರ ರಾಜ್ಯ ಲಿಂಕ್ ಇರುವ ಶಂಕೆ ವ್ಯಕ್ತವಾಗಿದೆ. ಹೀಗಾಗಿ ಪೊಲೀಸರು ಆತನ ಎರಡು ಮೊಬೈಲ್‌ ವಶಪಡೆದು ಎಫ್‌ಎಸ್‌ಎಲ್‌ಗೆ ಕಳುಹಿಸಿದ್ದು, ವರದಿ ಬಂದ ಮೇಲೆ ಮತ್ತಷ್ಟು ರಹಸ್ಯ ಬಯಲಾಗಲಿದೆ.

Add Asianetnews Kannada as a Preferred SourcegooglePreferred

ಮಟ್ಕಾ ಬುಕ್ಕಿಗಳೊಂದಿಗೆ ಹಾಗೂ ಗಾಂಜಾ, ಚರಸ್ ಮಾರಾಟ ದಂಧೆ ಮಾಡುತ್ತಿರುವ ಬಗ್ಗೆಯೂ ತನಿಖೆ ಮಾಡಲಾಗುತ್ತಿದೆ. ಅತ್ಯಂತ ಕಡುಬಡತನದ ಮುಸ್ತಾಫ್ ಖಾದ್ರಿಯ ಹೈಫೈ ಜೀವನ ಶೈಲಿ ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ. ಸಹೋದರ ದುಡಿಯಲು ಬೆಂಗಳೂರಿಗೆ ಹೋಗಿದ್ದರೆ ಮುಸ್ತಾಫ್ ಕಾರ್ಪೆಂಟರ್ ಕೆಲಸ ಮಾಡಲೆಂದು ನಿತ್ಯವೂ ಕೊಪ್ಪಳಕ್ಕೆ ಬರುತ್ತಿದ್ದನಂತೆ. ಹೀಗೆ ಬರುವ ಆತ ಬೆಳಗ್ಗೆಯೇ ಬಂದು, ತಡರಾತ್ರಿ ಮನೆಗೆ ಹೋಗುತ್ತಿದ್ದನು. ಗ್ರಾಮದಲ್ಲಿ ಓಡಾಡಿದ್ದೇ ಅಪರೂಪ ಎಂದು ಸ್ಥಳೀಯರು ಹೇಳಿದ್ದಾರೆ.

ದೂರು ದಾಖಲು

ವಿಶ್ವ ಹಿಂದೂ ಪರಿಷತ್ ಕೊಪ್ಪಳ ಜಿಲ್ಲಾಧ್ಯಕ್ಷ ಡಾ. ಸಂಗಮೇಶ ಹಿರೇಮಠ ನೀಡಿದ ದೂರು ಮತ್ತು ಮಸ್ತಾಫ್ ಪರವಾಗಿ ಯುವತಿಯೋರ್ವಳು ನೀಡಿದ ದೂರಿನ ಅನ್ವಯ ಎರಡು ಪ್ರಕರಣ ದಾಖಲಿಸಲಾಗಿದೆ. ಈ ಕುರಿತು ಪೊಲೀಸರು ಮುಸ್ತಾಫಾ ಮೊಬೈಲ್ ವಶಪಡಿಸಿಕೊಂಡು, ನೋಟಿಸ್ ಸಹ ಜಾರಿಗೊಳಿಸಿದ್ದಾರೆ. ಆದರೆ, ಪೋನ್‌ ಲಾಕ್‌ ಮಾಡಿದ್ದರಿಂದ ಅದರಲ್ಲಿರುವುದು ಏನು ಎನ್ನುವುದು ತಿಳಿದುಬಂದಿಲ್ಲ. ಅದರಲ್ಲಿ ವಿಡಿಯೋ ಫೋಟೋಗಳಿವೆ ಎಂದು ದೂರು ನೀಡಲಾಗಿದೆ.

ಮೊಬೈಲ್‌ ದಿಢೀರ್ ರೀಸೆಟ್‌

ವಿಶ್ವ ಹಿಂದೂ ಪರಿಷತ್ ಪದಾಧಿಕಾರಿಗಳು ಈತನ ಮಾಹಿತಿ ದೊರೆತ ತಕ್ಷಣ ಅವನ ಮೊಬೈಲ್‌ ಪರಿಶೀಲಿಸುವಾಗ ಸಾವಿರಾರು ಅಶ್ಲೀಲ ವೀಡಿಯೋ, ಫೋಟೋ ಇರುವುದು ಗಮನಕ್ಕೆ ಬಂದಿವೆ. ಇದನ್ನು ಪರಿಶೀಲಿಸುವಾಗಲೇ ಆರೋಪಿ ಮುಸ್ತಾಫ್‌ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ. ಅದಾದ 10 ನಿಮಿಷದಲ್ಲಿಯೇ ಆರೋಪಿಯ ಮೊಬೈಲ್‌ನಲ್ಲಿದ್ದ ಎಲ್ಲ ಆ್ಯಪ್‌ ತನ್ನಿಂದ ತಾನೇ ರೀಸೆಟ್ ಆಗಿವೆಯಂತೆ. ಹಾಗಾದರೆ ದೂರದಿಂದಲೇ ಆ ಮೊಬೈಲ್ ನಿರ್ವಹಣೆ ಮಾಡಿದ್ದು ಯಾರು ಎನ್ನುವುದು ಸಹ ತನಿಖೆಯಾಗಬೇಕಾಗಿದೆ.

ಈಗ ಲಭ್ಯ ಮಾಹಿತಿ ಪ್ರಕಾರ ಆತನಿಗೆ ಅಂತರ ರಾಜ್ಯ ಲಿಂಕ್ ಇತ್ತು ಎನ್ನಲಾಗಿದೆ. ಮಟ್ಕಾ ಬುಕ್ಕಿಗಳು ಮತ್ತು ಗಾಂಜಾ ಚರಸ್ ಪೂರೈಕೆಯ ವಾಸನೆಯೂ ಬಂದಿದ್ದು, ಅದೆಲ್ಲವೂ ತನಿಖೆಯಿಂದಲೇ ತಿಳಿಯಬೇಕಿದೆ. ಆರೋಪಿ ಮುಸ್ತಾಫಾನನ್ನು ವಿಚಾರಣೆ ನಡೆಸಿರುವ ಪೊಲೀಸರು, ಎಫ್‌ಎಸ್‌ಎಲ್ ವರದಿಗಾಗಿ ಕಾಯುತ್ತಿದ್ದಾರೆ. ವರದಿ ಬಂದ ನಂತರ ಬ್ಯಾಂಕ್ ಖಾತೆ ಪರಿಶೀಲಿಸಿದರೆ ಮತ್ತಷ್ಟು ಮಾಹಿತಿ ಲಭ್ಯವಾಗಲಿದೆ.

ದೂರಿನಲ್ಲಿ ಏನಿದೆ?

ವಿಎಚ್‌ಪಿ ಮುಖಂಡ ಡಾ. ಸಂಗಮೇಶ ಹಿರೇಮಠ ಏ. 9ರಂದು ನೀಡಿದ ದೂರಿನಲ್ಲಿ ಆರೋಪಿಯ ಮೊಬೈಲ್‌ ಪರಿಶೀಲಿಸಿದಾಗ ಎರಡು ಮೊಬೈಲ್‌ನಲ್ಲಿ 7000 ಅಶ್ಲೀಲ ಫೋಟೋ, 9700 ವೀಡಿಯೋಗಳಿವೆ. ಇದರಲ್ಲಿ ವಿವಿಧ ಸಮಾಜದ 16 ಮುಗ್ಧ ಹೆಣ್ಣು ಮಕ್ಕಳ ಅಶ್ಲೀಲ ಫೋಟೋ, ವೀಡಿಯೋ ಇಟ್ಟುಕೊಂಡು ಅವರಿಗೆ ಮಾನಸಿಕ ಹಿಂಸೆ ನೀಡಿದ್ದಾನೆ. ಜತೆಗೆ ಈ ಮಹಿಳೆಯರ ಸಮ್ಮತಿ ಇಲ್ಲದೆ ವೀಡಿಯೋ ಹಾಗೂ ಫೋಟೋಗಳನ್ನು ಮತ್ತೊಬ್ಬರಿಗೆ ಕಳುಹಿಸಿರುವ ಸಾಧ್ಯತೆ ಇದೆ. ಆದರಿಂದ ಈ ಕುರಿತು ಸಮಗ್ರ ತನಿಖೆ ನಡೆಸಬೇಕೆಂದು ತಿಳಿಸಿದ್ದರು.

ಪ್ರಕರಣವನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಬೇಕು. ಸಾವಿರಾರು ವೀಡಿಯೋ, ಫೋಟೋ ಇರುವುದರಿಂದ ಅವುಗಳೆಲ್ಲವನ್ನು ತನಿಖೆಗೆ ಒಳಪಡಿಸಿಬೇಕು. ಅಮಾಯಕ ಹೆಣ್ಣು ಮಕ್ಕಳ ಬಲಿಯಾಗುತ್ತಿದ್ದು ಜಾಲ ಭೇದಿಸಿ ಮಟ್ಟ ಹಾಕಬೇಕು. ಪ್ರೀತಿಸಿ ಮದುವೆಯಾಗಲು ಹಕ್ಕು ಇದೆ. ಆದರೆ, ಖಾಸಗಿ ವೀಡಿಯೋ ಮಾಡಿಕೊಳ್ಳುವುದು, ಫೋಟೋ ತೆಗೆಯುವುದು ಅಕ್ಷ್ಯಮ್ಯ ಅಪರಾಧ. ಈ ಮೂಲಕ ಬ್ಲಾಕ್ ಸಹ ಮಾಡಿರುವ ಶಂಕೆ ಇದೆ ಎಂದು ಕೊಪ್ಪಳದ ವಿಎಚ್‌ಪಿ ಅಧ್ಯಕ್ಷ ಡಾ. ಸಂಗಮೇಶ ಹಿರೇಮಠ ಹೇಳುತ್ತಾರೆ.

ಇದನ್ನೂ ಓದಿ: ಕೊಪ್ಪಳದಲ್ಲೂ 'ಲವ್ ಜಿಹಾದ್': ಮುಸ್ತಫಾ ಮೊಬೈಲ್‌ನಲ್ಲಿ ಹಿಂದೂ ಯುವತಿಯರ ಅಶ್ಲೀಲ ವಿಡಿಯೋ ಪತ್ತೆ! ಎಸ್‌ಪಿಗೆ ದೂರು

ಮೊಬೈಲ್‌ಗಳು ಲಾಕ್‌ ಇರುವುದರಿಂದ ಯಾವ ಮಾಹಿತಿ ಲಭ್ಯವಾಗಿಲ್ಲ. ಅವುಗಳನ್ನು ಎಫ್‌ಎಸ್‌ಎಲ್‌ಗೆ ಕಳುಹಿಸಿಕೊಟ್ಟಿದ್ದು ವರದಿ ಬಂದ ಬಳಿಕವೇ ನಿಜಾಂಶ ತಿಳಿಯಲಿದೆ. ವರದಿ ಯಾವ ರೀತಿ ಬರುತ್ತದೆ ಅದರ ಆಧಾರದ ಮೇಲೆ ತನಿಖೆ ನಡೆಸಲಾಗುವುದು. ಅಂತರ ರಾಜ್ಯ ಲಿಂಕ್ ಸೇರಿದಂತೆ ಇನ್ಯಾವುದೇ ಆರೋಪದ ಬಗ್ಗೆಯೂ ಈಗಲೇ ಏನು ಹೇಳಲು ಆಗದು ಎಸ್‌ ಪಿ ಡಾ. ರಾಮ ಎಲ್. ಅರಸಿದ್ದಿ ಹೇಳಿದ್ದಾರೆ.

ಇದನ್ನೂ ಓದಿ: ರಾಜ್ಯದಲ್ಲಿ ವ್ಯವಸ್ಥಿತವಾಗಿ ನಡೆಯುತ್ತಿದೆಯೇ ‘ಲವ್ ಜಿಹಾದ್’? ಹುಬ್ಬಳ್ಳಿ ಘಟನೆ ಮಾಸುವ ಮುನ್ನವೇ ಕೊಪ್ಪಳದಲ್ಲಿ ಮರುಕಳಿಸಿದ ಕೃತ್ಯ!