ಕುಷ್ಟಗಿ ತಾಲೂಕಿನ ಮಡಿಕೇರಿ ಗ್ರಾಮದ ರೈತ ರಾಮನಗೌಡ ಪಾಟೀಲ ಅವರು 2 ಹೆಕ್ಟೇರ್ನಲ್ಲಿ ನಿಂಬೆ ಬೆಳೆದು ಮಾದರಿಯಾಗಿದ್ದಾರೆ. ಕಡಿಮೆ ನಿರ್ವಹಣಾ ವೆಚ್ಚ ಮತ್ತು ಮಾರುಕಟ್ಟೆಯ ನಿರಂತರ ಬೇಡಿಕೆಯಿಂದಾಗಿ ನಿಂಬೆ ಕೃಷಿಯು ರೈತರಿಗೆ ಉತ್ತಮ ಆದಾಯ ತರುತ್ತಿದೆ. ತೋಟಗಾರಿಕೆ ಇಲಾಖೆಯ ಮಾರ್ಗದರ್ಶನದಲ್ಲಿ ಈ ಕೃಷಿ ಲಾಭದಾಯಕವಾಗಿದೆ.
ಪರಶಿವಮೂರ್ತಿ ಮಾಟಲದಿನ್ನಿ
ಕನ್ನಡಪ್ರಭ ವಾರ್ತೆ ಕುಷ್ಟಗಿ
ಒಂದೆಡೆ ಕೃಷಿ ವೆಚ್ಚದ ಏರಿಕೆ, ಮತ್ತೊಂದೆಡೆ ಬೆಳೆಗಳಿಗೆ ಸೂಕ್ತ ಬೆಲೆ ಸಿಗದೆ ಕಂಗಾಲಾಗಿರುವ ರೈತರು... ಇಂತಹ ಸಂದರ್ಭದಲ್ಲಿ ಕಡಿಮೆ ನಿರ್ವಹಣಾ ವೆಚ್ಚ, ಮಾರುಕಟ್ಟೆಯಲ್ಲಿ ನಿರಂತರ ಬೇಡಿಕೆ ಹಾಗೂ ಉತ್ತಮ ಆದಾಯದ ನಿರೀಕ್ಷೆ ಹೊಂದಿರುವ ನಿಂಬೆ ಕೃಷಿ ರೈತರ ಪಾಲಿಗೆ ಆಶಾಕಿರಣವಾಗಿ ಮೂಡುತ್ತಿದೆ.
ತಾಲೂಕಿನ ಮಡಿಕೇರಿ ಗ್ರಾಮದ ರೈತ ರಾಮನಗೌಡ ಪಾಟೀಲ ಅವರು ತಮ್ಮ ಜಮೀನಿನಲ್ಲಿ 2 ಹೆಕ್ಟೇರ್ ಪ್ರದೇಶದಲ್ಲಿ ನಿಂಬೆ ಬೆಳೆ ಬೆಳೆದು ಗಮನ ಸೆಳೆದಿದ್ದಾರೆ. ಸಾಂಪ್ರದಾಯಿಕ ಬೆಳೆಗಳ ಜತೆಗೆ ಪರ್ಯಾಯ ಕೃಷಿಯತ್ತ ಮುಖ ಮಾಡಿರುವ ಅವರು, ನಿಂಬೆ ಕೃಷಿಯ ಮೂಲಕ ಉತ್ತಮ ಆದಾಯ ಗಳಿಸುವ ಆಶಯ ಹೊಂದಿದ್ದಾರೆ.
ಕಡಿಮೆ ಖರ್ಚು, ನಿರಂತರ ಬೇಡಿಕೆ:
ನಿಂಬೆ ಬೆಳೆಗೆ ಕೊಟ್ಟಿಗೆ ಗೊಬ್ಬರ ಹಾಗೂ ಸಾವಯವ ಗೊಬ್ಬರ ಬಳಕೆ ಮಾಡಬಹುದು. ಹನಿ ನೀರಾವರಿ ಮೂಲಕ ನೀರಿನ ಸಮರ್ಪಕ ಬಳಕೆ ಸಾಧ್ಯವಾಗುತ್ತದೆ. ಒಂದು ಎಕರೆಗೆ ಸುಮಾರು 100 ಗಿಡಗಳನ್ನು ನಾಟಿ ಮಾಡಬಹುದಾಗಿದೆ. ನಿಂಬೆ ಬೆಳೆಯ ವಿಸ್ತೀರ್ಣ ಕಡಿಮೆಯಾಗುತ್ತಿದ್ದರೂ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚುತ್ತಿರುವುದು ರೈತರಿಗೆ ಹೊಸ ಅವಕಾಶ ಕಲ್ಪಿಸಿದೆ.
ಕೃಷಿಯಲ್ಲಿ ಒಂದೇ ಬೆಳೆಯನ್ನು ಅವಲಂಬಿಸದೆ ಮಾರುಕಟ್ಟೆ ಬೇಡಿಕೆ, ನೀರಿನ ಲಭ್ಯತೆ ಹಾಗೂ ಮಣ್ಣಿನ ಗುಣಧರ್ಮಕ್ಕೆ ಅನುಗುಣವಾಗಿ ಪರ್ಯಾಯ ಬೆಳೆಗಳನ್ನು ಆಯ್ಕೆ ಮಾಡಿಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ರಾಮನಗೌಡ ಪಾಟೀಲ ಅವರ ನಿಂಬೆ ಕೃಷಿ ಪ್ರಯತ್ನ ಇತರ ರೈತರಿಗೂ ಪ್ರೇರಣೆಯಾಗಬಹುದು.
ತೋಟಕ್ಕೆ ಅಧಿಕಾರಿಗಳ ಭೇಟಿ, ಮಾರ್ಗದರ್ಶನ:
ರೈತ ರಾಮನಗೌಡ ಪಾಟೀಲ ನಿಂಬೆ ತೋಟಕ್ಕೆ ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಶಿವಯೋಗಪ್ಪ ಅವರು ಭೇಟಿ ನೀಡಿ ಬೆಳೆ ಪರಿಶೀಲಿಸಿದರು. ಗಿಡಗಳ ಬೆಳವಣಿಗೆ, ತೋಟದ ನಿರ್ವಹಣೆ ಹಾಗೂ ಉತ್ತಮ ಇಳುವರಿ ಪಡೆಯುವ ಕೃಷಿ ಪದ್ಧತಿಗಳ ಕುರಿತು ಸಲಹೆ ನೀಡಿದರು.
ಕುಷ್ಟಗಿ ತಾಲೂಕಿನಲ್ಲಿ ನಿಂಬೆ ಬೆಳೆ ಬೆಳೆಯಲು ಉತ್ತಮ ಅವಕಾಶಗಳಿವೆ. ವೈಜ್ಞಾನಿಕ ಪದ್ಧತಿಯಲ್ಲಿ ತೋಟ ನಿರ್ವಹಣೆ, ಹನಿ ನೀರಾವರಿ ಹಾಗೂ ಸಾವಯವ ಗೊಬ್ಬರ ಬಳಕೆಗೆ ಆದ್ಯತೆ ನೀಡಬೇಕು. ತೋಟಗಾರಿಕೆ ಇಲಾಖೆಯಿಂದ ನಿಂಬೆ ಬೆಳೆ ಮತ್ತು ಹನಿ ನೀರಾವರಿಗೆ ದೊರೆಯುವ ಸಹಾಯಧನವನ್ನು ರೈತರು ಸದುಪಯೋಗಪಡಿಸಿಕೊಳ್ಳಬೇಕು.
ಶಿವಯೋಗಪ್ಪ, ಹಿರಿಯ ಸಹಾಯಕ ನಿರ್ದೇಶಕ ತೋಟಗಾರಿಕೆ ಕುಷ್ಟಗಿ
ದ್ರಾಕ್ಷಿ ಮತ್ತು ದಾಳಿಂಬೆ ಬೆಳೆಗಳಿಗೆ ಹೋಲಿಸಿದರೆ ನಿಂಬೆ ಕೃಷಿಯಲ್ಲಿ ನಿರ್ವಹಣಾ ವೆಚ್ಚ ಕಡಿಮೆ. ಒಂದು ಗಿಡದಿಂದ ವರ್ಷಕ್ಕೆ ₹5 ಸಾವಿರದಿಂದ ₹6 ಸಾವಿರದ ವರೆಗೆ ಆದಾಯ ಗಳಿಸುವ ಅವಕಾಶವಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಒಂದು ನಿಂಬೆಗೆ ₹8ರಿಂದ ₹10ರ ವರೆಗೆ ಬೆಲೆ ದೊರೆಯುತ್ತಿದೆ. ಬೇಸಿಗೆಯಲ್ಲಿ ಬೇಡಿಕೆ ಹೆಚ್ಚಾದಾಗ ಉತ್ತಮ ಬೆಲೆ ಸಿಗುತ್ತದೆ. ಒಂದು ಎಕರೆಗೆ ವಾರ್ಷಿಕ ₹2ರಿಂದ ₹3 ಲಕ್ಷದ ವರೆಗೆ ಲಾಭ ಗಳಿಸುವ ಅವಕಾಶವಿದೆ. ರೈತರು ನಿಂಬೆ ಕೃಷಿಯತ್ತ ಆಸಕ್ತಿ ತೋರಬೇಕು.
ರಾಮನಗೌಡ ಪಾಟೀಲ್, ಮಡಿಕೇರಿ ಗ್ರಾಮದ ನಿಂಬೆ ಬೆಳೆದ ರೈತ













