Asianet Suvarna News Asianet Suvarna News

ಮುಂಬೈ ಮಹಿಳೆಗಿಲ್ಲ ಕೊರೋನಾ, ನಿಟ್ಟುಸಿರು ಬಿಟ್ಟ ಕೊಪ್ಪಳ ಜನ..!

ಮಹಿಳೆ ಪ್ರವಾಸದ ಸುತ್ತ ಅನುಮಾನದ ಹುತ್ತ: ಪ್ರಕರಣದ ತನಿಖೆ ಮತ್ತಷ್ಟು ಚುರುಕು| ಶಿಖಾ ಶೇಖ್‌ ಅವರ ಪ್ರಯೋಗಾಲಯ ವರದಿ ನೆಗಟಿವ್‌ ಬಂದಿದೆ:  ಜಿಲ್ಲಾಧಿಕಾರಿ ಪಿ. ಸುನೀಲ್‌ಕುಮಾರ|

Koppal DC P Sunil Kumar Says Coronavirus Negative Report Mumbai Based women
Author
Bengaluru, First Published Apr 17, 2020, 10:53 AM IST

ಕೊಪ್ಪಳ(ಏ.17): ಮುಂಬೈ ಮೂಲದ ಮಹಿಳೆಗೆ ಪಾಸ್‌ ಕೊಡಿಸಲು ಕೊಪ್ಪಳಕ್ಕೆ ಕರೆಯಿಸಿದ್ದ ಪ್ರಕರಣದಲ್ಲಿ ಪ್ರಯೋಗಾಲಯ ವರದಿ ಬಂದಿದ್ದು, ಮಹಿಳೆಗೆ ಕೊರೋನಾ ನೆಗಟಿವ್‌ ಬಂದಿದೆ. ಇದರಿಂದ ಕೊಪ್ಪಳದ ಜನತೆ ನಿಟ್ಟುಸಿರು ಬಿಟ್ಟಿದ್ದಾರೆ.

ಶಿಖಾ ಶೇಖ್‌ ಅವರ ಪ್ರಯೋಗಾಲಯ ವರದಿ ನೆಗಟಿವ್‌ ಬಂದಿದೆ ಎಂದು ಜಿಲ್ಲಾಧಿಕಾರಿ ಪಿ. ಸುನೀಲ್‌ಕುಮಾರ ಅವರು ಅಧಿಕೃತ ಪ್ರಕಟಣೆ ನೀಡಿದ್ದಾರೆ. ಭಾಗ್ಯನಗರ ನಿವಾಸಿ ಹಾಗೂ ಬಿಜೆಪಿ ಮುಖಂಡ ಗುರುಬಸವ ಹೊಳಗುಂದಿ ಮುಂಬೈಗೆ ತೆರಳಲು ಪಾಸ್‌ ಕೊಡಿಸುವುದಾಗಿ ಇಲ್ಲಿಗೆ ಮುಂಬೈ ಮೂಲದ ಇವರನ್ನು ಕರೆಯಿಸಿದ್ದ. ಈಕೆ ಕೊರೋನಾ ದೃಢಪಟಿರುವ ವ್ಯಕ್ತಿ ಪ್ರಯಾಣಿಸಿದ ಬಸ್ಸಿನಲ್ಲಿಯೇ ಸಂಚಾರ ಮಾಡಿದ್ದಳು. ಹೀಗಾಗಿ, ಭಾರಿ ಆತಂಕಕ್ಕೆ ಕಾರಣವಾಗಿತ್ತು. ಇದರಿಂದ ತಬ್ಬಿಬ್ಬಾದ ಭಾಗ್ಯನಗರ ಗ್ರಾಮಸ್ಥರು ಒಂದು ಭಾಗಕ್ಕೆ ಮುಳ್ಳುಬೇಲಿಯನ್ನು ಬಡಿದಿದ್ದಾರೆ.

ಕೊರೋನಾ ಆತಂಕ: ವೈರಸ್‌ ತಗುಲದಿರಲು ಹೊಲದಲ್ಲೇ 21 ದಿನ ಕಳೆದ ಕುಟುಂಬ

ತನಿಖೆ ಚುರುಕು:

ಆದರೆ, ಪಾಸ್‌ ಕೊಡಿಸುವ ದಂಧೆಯ ಕುರಿತು ಅನೇಕ ಉಹಾಪೋಹಗಳು, ವದಂತಿಗಳು ಹರಡಿವೆ. ಮುಂಬೈ ಮೂಲದವರು ಹುಬ್ಬಳ್ಳಿಯಲ್ಲಿದ್ದರೂ ಕೊಪ್ಪಳದಿಂದ ಪಾಸ್‌ ಕೊಡಿಸಲು ಕರೆಯಿಸಿದ್ದು ಯಾಕೆ? ಇದಕ್ಕೆ ಪೊಲೀಸ್‌ ಇಲಾಖೆಯ ಯಾರು ಅಸ್ತು ಎಂದಿದ್ದರು? ಎನ್ನುವುದು ತನಿಖೆಯ ನಂತರವೇ ಬೆಳಕಿಗೆ ಬರಬೇಕಾಗಿದೆ. ಅಲ್ಲದೆ ಇಂಥ ಪಾಸ್‌ ಕೊಡಿಸುವ ದಂಧೆಯ ಕರಾಳ ಮುಖವನ್ನು ಬಯಲಿಗೆ ಎಳೆದರೆ ಇನ್ನೂ ದೊಡ್ಡ ದೊಡ್ಡ ಕುಳಗಳು ಅಂದರ್‌ ಆಗುತ್ತಾರೆ ಎನ್ನುತ್ತಾರೆ ಹೆಸರು ಹೇಳಲು ಇಚ್ಚಿಸದ ಪೊಲೀಸ್‌ ಅಧಿಕಾರಿ.

ಪೊಲೀಸ್‌ ವ್ಯಾನ್‌ನಲ್ಲಿಯೇ ಬಂದಳೆ?

ಇಂಥ ಲಾಕ್‌ಡೌನ್‌ ಹಾಗೂ ಕಟ್ಟುನಿಟ್ಟಿನ ಕ್ರಮದ ನಡುವೆಯೂ ಶಿಖಾ ಶೇಖ್‌ ಹುಬ್ಬಳ್ಳಿಯಿಂದ ಎಲ್ಲರ ಕಣ್ಣು ತಪ್ಪಿಸಿ ಹಾಲಿನ ವಾಹನದಲ್ಲಿ ಬಂದಿದ್ದರು ಎನ್ನುವ ಮಾಹಿತಿ ಇತ್ತು. ಆದರೆ, ಈಗ ಬರುತ್ತಿರುವ ಮಾಹಿತಿಯ ಪ್ರಕಾರ ಅವಳನ್ನು ಪೊಲೀಸ್‌ ವಾಹನದಲ್ಲಿಯೇ ಕರೆತರಲಾಗಿದೆ ಎನ್ನಲಾಗಿದೆ. ಇದು ಭಾರೀ ಕುತೂಹಲಕ್ಕೆ ಕಾರಣವಾಗಿದೆ. ಇದೇ ವಾಹನ ಮತ್ತು ಅಧಿಕಾರಿಯೂ ಹುಬ್ಬಳ್ಳಿಗೆ ನಾಲ್ಕಾರು ಬಾರಿ ಹೋಗಿ ಬಂದಿದ್ದಾರೆ ಎನ್ನಲಾಗಿದೆ. ಈ ಮಾಹಿತಿ ಈಗ ಸರ್ಕಾರಕ್ಕೆ ಗೊತ್ತಾಗಿದೆ. ಇದನ್ನು ತನಿಖೆ ನಡೆಸುವ ಕಾರ್ಯ ತೆರೆಮರೆಯಲ್ಲಿ ನಡೆದಿದೆ.

ಏನು ಸಂಬಂಧ?

ಮುಂಬೈ ಮೂಲ ಶಿಖಾ ಶೇಖ್‌ ಯಾರು? ಈಕೆಯೊಂದಿಗೆ ಭಾಗ್ಯನಗರ ಬಿಜೆಪಿ ಮುಖಂಡ ಗುರುಬಸವ ಹೊಳಗುಂದಿ ಅವರ ವ್ಯವಹಾರ ಏನು? ಹುಬ್ಬಳ್ಳಿಯ ಲಕ್ಷ್ಮೀ ಭಟ್‌, ಭಾಗ್ಯನಗರ ಶಾಂತರಾಮ್‌ ಅವರ ಜೊತೆ ಶಿಖಾ ಶೇಖ್‌ಗೆ ಯಾವ ಸಂಬಂಧ ಹಾಗೂ ವ್ಯವಹಾರ? ಇಂಥ ಹತ್ತು ಹಲವು ಪ್ರಶ್ನೆಗಳಿಗೂ ಈಗ ಉತ್ತರ ಸಿಗಬೇಕಾಗಿದೆ.

ಮುಂಬೈ ಮೂಲದ ಶಿಖಾ ಶೇಖ್‌ ಹುಬ್ಬಳ್ಳಿಗೆ ಬಂದಿದ್ದಾದರೂ ಯಾಕೆ ಎನ್ನುವುದು ಅನುಮಾನಕ್ಕೆ ಕಾರಣವಾಗಿದೆ. ಹುಬ್ಬಳ್ಳಿಗೆ ಬಂದ ಮೇಲೆ ಆಕೆ ತನ್ನ ಮೊಬೈಲ್‌ ಸ್ವಿಚ್‌ ಆಫ್‌ ಮಾಡಿದ್ದು ಯಾಕೆ? ಎನ್ನುವ ಪ್ರಶ್ನೆಗೂ ಉತ್ತರ ದೊರೆಯಬೇಕಾಗಿದೆ.

ವಿಶೇಷ ತನಿಖೆ:
 

ಇಡೀ ಪ್ರಕರಣ ಪೊಲೀಸ್‌ ಇಲಾಖೆಯ ಸುತ್ತವೇ ಸುತ್ತುತ್ತಿದೆ. ಪೊಲೀಸರ ನೆರವಿಲ್ಲದೇ ಅವಳು ಬರುವುದು ಸಾಧ್ಯವೇ ಇಲ್ಲ ಎನ್ನಲಾಗುತ್ತಿದೆ. ಹೀಗಾಗಿ, ಈಗ ಪೊಲೀಸ್‌ ಇಲಾಖೆಯಿಂದಲೇ ತನಿಖೆ ನಡೆಸಿದರೆ ಪ್ರಯೋಜನವಾಗುವುದಿಲ್ಲ. ವಿಶೇಷ ತನಿಖಾ ತಂಡದಿಂದ ತನಿಖೆ ಮಾಡಿಸಿದರೆ ಮಾತ್ರ ಸತ್ಯ ಬೆಳಕಿಗೆ ಬರುತ್ತದೆ ಎನ್ನುವುದು ಈಗ ಸಾರ್ವಜನಿಕವಾಗಿ ಕೇಳಿ ಬರುತ್ತಿರುವ ಆಗ್ರಹ.

ಪ್ರಕರಣದಲ್ಲಿನ ಮಹಿಳೆಯ ಪ್ರಯೋಗಾಲಯ ವರದಿ ನೆಗೆಟಿವ್‌ ಬಂದಿದೆ. ಆದರೆ, ಪಾಸ್‌ ಕೊಡುವ ವಿಚಾರಕ್ಕೆ ಹಾಗೂ ಆಕೆ ಇಲ್ಲಿಗೆ ಬಂದಿರುವ ಕುರಿತು ನಾನಾ ಮಾಹಿತಿಗಳು ಬಂದಿದ್ದು, ಸರ್ಕಾರದ ಮುಖ್ಯಕಾರ್ಯದರ್ಶಿ ಅವರಿಗೆ ಸಮಗ್ರ ಮಾಹಿತಿಯನ್ನು ನೀಡಲಾಗುವುದು ಎಂದು ಕೊಪ್ಪಳ ಡಿಸಿ ಪಿ. ಸುನೀಲ್‌ಕುಮಾರ ಹೇಳಿದ್ದಾರೆ.

ಕೊಪ್ಪಳದ 200 ವರದಿಗಳು ನೆಗಟಿವ್‌

ಜಿಲ್ಲಾದ್ಯಂತ ಕಳೆದ ಮೂರು ದಿನಗಳಲ್ಲಿ ಕೊರೋನಾ ಟೆಸ್ಟ್‌ಗಾಗಿ ಪ್ರಯೋಗಾಲಯಕ್ಕೆ ಕಳುಹಿಸಿದ್ದ 226 ವರದಿಗಳ ಪೈಕಿ 200 ವರದಿಗಳು ನೆಗಟಿವ್‌ ಬಂದಿವೆ. ಇನ್ನು 26 ವರದಿಗಳು ಮಾತ್ರ ಬರಬೇಕಾಗಿದೆ. ಉಳಿದಂತೆ ಇದುವರೆಗೂ ಕೊರೋನಾ ಟೆಸ್ಟ್‌ಗೆ ಕಳುಹಿಸಿದ ವರದಿಗಳೆಲ್ಲವೂ ನೆಗಟಿವ್‌ ಬರುತ್ತಿರುವುದರಿಂದ ಜಿಲ್ಲಾಡಳಿತ ಮತ್ತು ಜಿಲ್ಲೆಯ ಜನರು ನಿಟ್ಟುಸಿರು ಬಿಟ್ಟಿದ್ದಾರೆ.

ತಬ್ಲೀಘಿ ಪ್ರಕರಣ, ವಿದೇಶದಿಂದ ಬಂದವರು ಸೇರಿದಂತೆ ನಾನಾ ರಾಜ್ಯದಿಂದ ಬಂದವರನ್ನು ಪರೀಕ್ಷೆಗೆ ಒಳಪಡಿಸಿದಾಗಲೂ ನೆಗಟಿವ್‌ ಬಂದಿದೆ. ಮುಂಬೈ ಮೂಲದ ಶಿಖಾ ಶೇಖ್‌ ವರದಿಯೂ ನೆಗಟಿವ್‌ ಬಂದಿರುವುದು ದೊಡ್ಡ ಆಂತಕ ನಿವಾರಣೆಯಾದಂತೆ ಆಗಿದೆ.
 

Follow Us:
Download App:
  • android
  • ios