ಕಡುಬಡತನದಲ್ಲಿ ಜನಿಸಿ, ಗೋವಾದ ಬೀಚ್‌ನಲ್ಲಿ ಶೇಂಗಾ ಮಾರುತ್ತಿದ್ದ ಬಾಲಕ ಕೊಪ್ಪಳದ ಬಾಲಕ ಇಂಗ್ಲೆಂಡ್‌ ದಂಪತಿ ಆಶ್ರಯ ಪಡೆದು ಈಗ ಬ್ರಿಟಿಷ್‌ ಯೋಧ 10 ವರ್ಷದಿಂದ ಸೇವೆ ಸಲ್ಲಿಸುತ್ತಿರುವ ತಾಲೂಕಿನ ಶಹಪುರ ಗ್ರಾಮದ ಗೋಪಾಲ ವಾಕೋಡೆ

ಕೊಪ್ಪಳ (ಜು.06): ಕಡುಬಡತನದಲ್ಲಿ ಜನಿಸಿ, ಗೋವಾದ ಬೀಚ್‌ನಲ್ಲಿ ಶೇಂಗಾ ಮಾರುತ್ತಿದ್ದ ಕೊಪ್ಪಳದ ಬಾಲಕ ಇಂಗ್ಲೆಂಡ್‌ ದಂಪತಿ ಆಶ್ರಯ ಪಡೆದು ಈಗ ಬ್ರಿಟಿಷ್‌ ಸೈನ್ಯದಲ್ಲಿ ಕೆಲಸ ಮಾಡುತ್ತಿದ್ದಾರೆ.

ತಾಲೂಕಿನ ಶಹಪುರ ಗ್ರಾಮದ ಗೋಪಾಲ ವಾಕೋಡೆ (36) ಎಂಬವರು ಕಳೆದ 10 ವರ್ಷಗಳಿಂದ ಬ್ರಿಟಿಷ್‌ ಸೈನ್ಯದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇಂಗ್ಲೆಂಡ್‌ನ ಈಸ್ವ್‌ ನಲ್ಲಿರುವ ಬ್ರಿಟಿಷ್‌ ಮಿಲಿಟರಿಯಲ್ಲಿ ಈಗ ಸೇವೆಯಲ್ಲಿಯಲ್ಲಿದ್ದಾರೆ.

ಕೊಪ್ಪಳ : ಸೇನೆಯಿಂದ ನಿವೃತ್ತಿ ಆಗಿ ಬಂದ ಯೋಧನಿಗೆ ಹೃದಯಸ್ಪರ್ಶಿ ಸ್ವಾಗತ .

ಶಹಪುರ ಗ್ರಾಮದ ಯಲ್ಲಪ್ಪ ವಾಕೋಡೆ ಮತ್ತು ಫಕೀರವ್ವ ಅವರ ಐದು ಮಕ್ಕಳಲ್ಲಿ ಗೋಪಾಲ ಕೂಡ ಒಬ್ಬರು. ಅವರಿಗೆ ಒಬ್ಬ ಅಣ್ಣ, ಮೂವರು ಸಹೋದರಿಯರಿದ್ದಾರೆ. ಗೋಪಾಲ (ಗೋಪಿ) ಚಿಕ್ಕವನಿದ್ದಾಗಲೇ (10 ವರ್ಷ) ತಂದೆ ಯಲ್ಲಪ್ಪ ವಾಕೋಡೆ ಕುಟುಂಬ ಸಮೇತ ಗೋವಾಕ್ಕೆ ತೆರಳಿದರು. ಆದರೆ 1995 ಹೊತ್ತಿನಲ್ಲೇ ತಂದೆ ಸಾವಿಗೀಡಾದರು. ಬಳಿಕ ತಾಯಿಯೂ ಮೃತಳಾದಳು. ಅಣ್ಣನೂ ಸ್ವಲ್ಪ ಸಮಯದಲ್ಲೇ ತೀರಿಕೊಂಡರು. ಈ ಸಂದರ್ಭದಲ್ಲಿ ಹೇಗೆ ಜೀವನ ನಿರ್ವಹಿಸಬೇಕೆಂಬುದು ತಿಳಿಯದೇ ಗೋಪಾಲ ಗೋವಾದ ಬೀಚ್‌ಗಳಲ್ಲಿ ಶೇಂಗಾ ಮಾರಾಟ ಮಾಡಲಾರಂಭಿಸುತ್ತಾರೆ. ದೈಹಿಕ ಶ್ರಮ, ಹಣಕಾಸಿನ ಸ್ಥಿತಿ ಲೆಕ್ಕಿಸದೇ ಕುಟುಂಬ ನಿರ್ವಹಣೆಗೆ ಹಗಲಿರುಳು ಶ್ರಮಿಸುತ್ತಾರೆ.

ಬ್ರಿಟಿಷ್‌ ದಂಪತಿ ಕೃಪೆ:

ಇದೇ ಸಮಯದಲ್ಲಿ ಬ್ರಿಟ್ಸ್‌ ಕೊರೊಲ್‌ ಥಾಮಸ್‌ ಮತ್ತು ಕೊಲಿನ್‌ ಹ್ಯಾನ್ಸನ್‌ ಎನ್ನುವ ಬ್ರಿಟಿಷ್‌ ಹಿರಿಯ ದಂಪತಿ ತಮ್ಮ ನಿಕಟವರ್ತಿ ಲಿಂಡಾ ಹ್ಯಾನ್ಸನ್‌ ಅವರೊಂದಿಗೆ ಪ್ರತಿವರ್ಷ ಭಾರತ ಪ್ರವಾಸ ಕೈಗೊಳ್ಳುತ್ತಿದ್ದರು. ಗೋವಾದ ಬೆತೆಲ್‌ ಬಾತಿ ಬೀಚ್‌ನಲ್ಲಿ ಗೋಪಿ ಕಡಲೆ ಮಾರಾಟ ಮಾಡುವುದನ್ನು ಗಮನಿಸುತ್ತಾರೆ. ಗೋಪಿಯಲ್ಲಿನ ಮುಗ್ಧತೆ, ಜೀವನ ಪ್ರೀತಿ ಕಂಡು ಮಮ್ಮಲ ಮರುಗುತ್ತಾರೆ. ಅಂತಃಕರಣದಿಂದ ಅವರಿಗೆ ಹತ್ತಿರದ ಬಟ್ಟೆಅಂಗಡಿಗೆ ಕರೆದುಕೊಂಡು ಹೋಗಿ ಹೊಸ ಬಟ್ಟೆಹಾಗೂ ಶೇಂಗಾ ಮಾರಾಟ ಮಾಡುವ ಬಿದಿರಿನ ಬುಟ್ಟಿ, ವಾಚು ಕೊಡಿಸುತ್ತಾರೆ. ಆನಂತರ ಮಡಗಾಂವ್‌ ನಗರದ ರಸ್ತೆಯ ಪಕ್ಕದಲ್ಲಿರುವ ಅವರ ಟೆಂಟ್‌ ಮತ್ತು ತಾಯಿಯನ್ನೂ ನೋಡಿ ಮರುಕ ಪಡುತ್ತಾರೆ. ಮುಂದಿನ ವರ್ಷ ಮತ್ತೆ ಭೇಟಿಯಾಗುವ ಭರವಸೆ ನೀಡಿ ಹೋಗುತ್ತಾರೆ.

ಉಗ್ರರ 9 ಗುಂಡಿಗೆ ಎದೆಯೊಡ್ಡಿ ಸಾವನ್ನೇ ಗೆದ್ದು ಬಂದ ಕಮಾಂಡರ್ ಚೇತನ್‌ಗೆ ಕೊರೋನಾ! ...

ಗೋಪಿ ಗೋವಾ ಬೀಚ್‌ನಲ್ಲಿ ಶೇಂಗಾ ಮಾರುವುದನ್ನು ಮುಂದುವರಿಸುತ್ತಾನೆ. ಪ್ರತಿ ವರ್ಷ ಭಾರತಕ್ಕೆ ಭೇಟಿ ನೀಡುವ ಬ್ರಿಟಿಷ್‌ ದಂಪತಿ ಗೋಪಿಯನ್ನು ಭೇಟಿಯಾಗುತ್ತಾರೆ. ಹಣಕಾಸಿನ ನೆರವು, ಅಗತ್ಯ ಸೌಲಭ್ಯ ನೀಡುತ್ತಾರೆ. 2009 ರಲ್ಲಿ ಗೋಪಿಗೆ 19 ವರ್ಷ ತುಂಬುತ್ತಿದ್ದಂತೆ ಇಂಗ್ಲೆಂಡ್‌ಗೆ ಕರೆದುಕೊಂಡು ಹೋದರು. ಬ್ರಿಟ್ಸ್‌ ಕೊರೊಲ್‌ ಮತ್ತು ಕೊಲಿನ್‌ ಹ್ಯಾನ್ಸನ್‌ ದಂಪತಿ ಅಲ್ಲಿಂದಲೇ ಗೋಪಿ ಅವರ ಕುಟುಂಬದವರಿಗೆ ಹಣಕಾಸಿನ ನೆರವು ನೀಡುತ್ತಿದ್ದರು. ಗೋಪಿ ಸಹೋದರಿಯರ ಮದುವೆ ಮತ್ತು ಮನೆ ಕಟ್ಟಲು ನೆರವಾದರು. ಈ ನಡುವೆ ಗೋಪಿ ಅವರಿಗೆ ಇಂಗ್ಲೆಂಡ್‌ನ ಸ್ಥಳೀಯ ಮಿಲಿಟರಿ ಬ್ಯಾರಕ್‌ನಲ್ಲಿ ಕ್ರಿಕೆಟ್‌ ತರಬೇತಿ ಕೊಡಿಸಿದರು. ಹಂತ ಹಂತವಾಗಿ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಗೋಪಿ, ಸ್ಥಳೀಯ ಕ್ರಿಕೆಟ್‌ ತಂಡದ ನಾಯಕನಾಗಿ ಗಮನ ಸೆಳೆದರು. ಕ್ರಿಕೆಟ್‌ ಆಟದಲ್ಲಿನ ಅವರ ಚಾಣಾಕ್ಷತೆ ಕಂಡು ಮಿಲಿಟರಿ ಪಡೆಯ ಅಧಿಕಾರಿಯೊಬ್ಬರು ಸೈನ್ಯಕ್ಕೆ ಸೇರಿಸಿಕೊಳ್ಳುವೆಯಾ? ಎಂದಾಗ ಗೋಪಿ ಸಮ್ಮತಿಸುತ್ತಾರೆ.

ಬ್ರಿಟಿಷ್‌ ಪ್ರಜೆ:

ಇಂಗ್ಲೆಂಡ್‌ನ ಜಾಸ್ಮಿನ್‌ ಎಂಬ ಯುವತಿಯನ್ನು ವಿವಾಹವಾಗಿರುವ ಗೋಪಾಲ್‌, ಡೈಸಿ ಎಂಬ ಹೆಣ್ಣುಮಗುವಿನ ತಂದೆಯಾಗಿದ್ದಾರೆ. 10 ವರ್ಷಗಳಿಂದ ಇಂಗ್ಲೆಂಡ್‌ನಲ್ಲಿ ವಾಸ ಮಾಡಿಕೊಂಡಿದ್ದು, ಕ್ರಿಕೆಟ್‌ ಮತ್ತು ಮಿಲಿಟರಿ ಸೇವೆಗಾಗಿ ಅಫಘಾನಿಸ್ತಾನ, ಕೀನ್ಯಾ ಮತ್ತು ಜರ್ಮನಿಯಲ್ಲೂ ಸಂಚರಿಸಿದ್ದಾರೆ. ಬ್ರಿಟಿಷ್‌ ಪ್ರಜೆಯಾದರೂ ಭಾರತದ ಬಗ್ಗೆ ಹೆಮ್ಮೆ, ಹುಟ್ಟೂರಿನ ಬಗ್ಗೆ ಅಭಿಮಾನ ಹೊಂದಿದ್ದಾರೆ. ಮೂರು ವರ್ಷಕ್ಕೊಮ್ಮೆ ಹುಟ್ಟೂರಿಗೆ ಆಗಮಿಸಿ ಬಂಧುಗಳೊಂದಿಗೆ ಬೆರೆಯುತ್ತಾರೆ. ಗೋಪಾಲ ಅವರ ನಡೆ, ನುಡಿ, ವಿನಮ್ರತೆ, ಕ್ರೀಡೆ ಕುರಿತು, ಇಂಗ್ಲೆಂಡ್‌ನಲ್ಲಿ ಸಿನೆಮಾವೊಂದು ಸಿದ್ಧವಾಗುತ್ತಿದ್ದು, ಗೋಪಿ ದೊಡ್ಡ ಹವಾ ಎಬ್ಬಿಸಿದ್ದಾರೆ.

ಇಂಗ್ಲೆಂಡ್‌ ಆರ್ಮಿಯಲ್ಲಿ ಸೇವೆ ಸಲ್ಲಿಸುತ್ತಿದ್ದೇನೆ. ಇಂಗ್ಲೆಂಡ್‌ ನನಗೆ ಬದುಕು-ನೆಲೆ ಕೊಟ್ಟಿದೆ. ಇಂಗ್ಲೆಂಡ್‌ ದಂಪತಿ ಕೃಪಾಶೀರ್ವಾದದಿಂದ ನನ್ನ ಬದುಕು ಬದಲಾಯಿತು. ಆದರೆ ನನ್ನ ಊರು, ದೇಶದ ಬಗ್ಗೆ ಹೆಮ್ಮೆ ಇದೆ.

ಗೋಪಾಲ ವಾಕೋಡೆ

ಬಾಲ್ಯದಲ್ಲಿ ತುಂಬಾ ಕಷ್ಟದ ದಿನಗಳನ್ನು ಕಳೆದಿದ್ದಾನೆ. ನೋವು, ನರಳಾಟ ಗಮನಿಸಿ ಬ್ರಿಟಿಷ್‌ ಹಿರಿಯ ದಂಪತಿ ಈತನನ್ನು ಕ್ರೀಡಾಪಟು, ಸಮಾಜ ಸೇವಕ, ಉತ್ತಮ ನಾಗರಿಕನನ್ನಾಗಿ ರೂಪಿಸಿದ್ದಾರೆ. ಬ್ರಿಟಿಷ್‌ ಪ್ರಜೆಯಾದರೂ ಭಾರತದ ಬಗ್ಗೆ ಮತ್ತು ನಮ್ಮೂರಿನ ಬಗ್ಗೆ ಅತೀವ ಪೂಜ್ಯ ಭಾವನೆ ಹೊಂದಿದ್ದಾನೆ. ಪೋಷಕರ ಅವಲಂಬನೆಯಿಲ್ಲದೇ ತನ್ನ ಬದುಕನ್ನು ರೂಪಿಸಿಕೊಂಡಿದ್ದಾನೆ. ಈತನ ಸಾಧನೆ ಕಂಡು ನಮಗೆ ಖುಷಿಯಾಗಿದೆ.

ವೀರಣ್ಣ ಜೋಶಿ, ಗೋಪಿಯ ಅಜ್ಜ. ಶಹಪುರ