ಕೊಪ್ಪಳ ಜಿಲ್ಲೆಯ ಕಾರಟಗಿಯಲ್ಲಿ ಸ್ವಾಮೀಜಿಯೊಬ್ಬರು 101 ದಿನಗಳ ಕಾಲ ಮರದ ಮೇಲೆ ಕುಳಿತು ಕಠಿಣ ವ್ರತ ಆಚರಿಸುತ್ತಿದ್ದಾರೆ. ದಿನಕ್ಕೊಮ್ಮೆ ಹಾಲು ಮಾತ್ರ ಸೇವಿಸುವ ಇವರು, ಈ ಹಿಂದೆಯೂ ಇದೇ ರೀತಿಯ ವ್ರತ ಆಚರಿಸಿದ್ದರು.
ಕೊಪ್ಪಳ : ಲೋಕ ಕಲ್ಯಾಣಕ್ಕಾಗಿ ಸತತ ಐದು ದಿನಗಳಿಂದ ಸ್ವಾಮೀಜಿಯೊಬ್ಬರು ಜಿಲ್ಲೆಯಲ್ಲಿ ಮರವನ್ನೇರಿ ಕುಳಿತಿದ್ದಾರೆ. ಸ್ವಾಮೀಜಿಯ ಕಠಿಣ ಅನುಷ್ಠಾನ ಕಂಡು ಜನರು ಅಚ್ಚರಿಗೊಂಡಿದ್ದಾರೆ. ಜಿಲ್ಲೆಯ ಕಾರಟಗಿ ತಾಲೂಕಿನಲ್ಲಿ ಆಹಾರ ಇಲ್ಲದೆ ಮರದ ಮೇಲೆ ವಾಸವಾಗಿರುವ ಅವಧೂತ ಸ್ವಾಮೀಜಿಯ ಕಠಿಣ ಅನುಷ್ಠಾನ ಬೆರಗುಗೊಳಿಸುತ್ತಿದೆ.
ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಬಾದ್ಯಪುರದಿಂದ ಬಂದಿರುವ ಅವಧೂತ ಸ್ವಾಮೀಜಿ, ಮರದ ಮೇಲೆ ಗೂಡು ಕಟ್ಟಿಕೊಂಡು ದಿನವಿಡಿ ಅನುಷ್ಠಾನ ಮಾಡುತ್ತಿದ್ದಾರೆ. ದಿನಕ್ಕೆ ಒಂದು ಬಾರಿ ಒಂದು ಲೋಟ ಹಾಲು ಸೇವೆನೆ ಮಾಡುವ ಅವದೂತ ಸಚ್ಚಿದಾನಂದ ಶ್ರೀಗಳು 101 ದಿನಗಳು ಮರದಲ್ಲಿಯೇ ಕುಳಿತು ಲೋಕ ಕಲ್ಯಾಣಕ್ಕಾಗಿ ಧ್ಯಾನ ಮಾಡುವ ವಾಗ್ದಾನ ಮಾಡಿದ್ದಾರೆ. ಈ ಹಿಂದೆ 2012 ರಲ್ಲಿ ಆಲದಮರದಲ್ಲಿ ಅನುಷ್ಠಾನ ಕುಳಿತು ಈ ಸ್ವಾಮೀಜಿ ದೇಶದ್ಯಾಂತ ಸದ್ದು ಮಾಡಿದ್ದರು.
ಇದೀಗ ಕಾರಟಗಿ ತಾಲೂಕಿನ ಮುಷ್ಟೂರು ಬಳಿ ಇರುವ ಬರಗಾಲ ಸಿದ್ದಪ್ಪ ಮಠದ ಆವರಣದ ಮಾವಿನ ತೋಟದಲ್ಲಿರುವ ಮಾವಿನ ಮರ ಏರಿ ಅನುಷ್ಠಾನ ಮಾಡುತ್ತಿದ್ದಾರೆ. ಮೌನಿಯಾಗಿ ಮರದ ಮೇಲೆ ಕುಳಿತು ಸಚ್ಚಿದಾನಂದ ಶ್ರೀಗಳು ಅನುಷ್ಠಾನ ಮಾಡುತ್ತಿದ್ದಾರೆ.
