ಹಲ್ಲೆ ಆರೋಪಿಗಳನ್ನ ಬಂಧಿಸಲು ಹೋದ ಪೊಲೀಸ್ ಮೇಲೆ ಹಲ್ಲೆ
ಹಳೇ ದ್ವೇಷದಿಂದ ಕೋಡಿಹಳ್ಳಿ ಚಂದ್ರಶೇಖರ್ ಬಣದ ರಾಜ್ಯ ಸಂಚಾಲಕನ ಮೇಲೆ ಹಲ್ಲೆ ಮಾಡಿದ ಆರೋಪಿಗಳನ್ನ ಬಂಧಿಸಲು ಹೋದ ಪೊಲೀಸ್ ಮೇಲೆ ಹಲ್ಲೆಯಾಗಿದೆ. ಕೋಲಾರ ಜಿಲ್ಲೆಯಲ್ಲಿ ನಡೆದ ಪ್ರಕರಣದ ವಿವರ ಇಲ್ಲಿದೆ.
ಕೋಲಾರ(ಸೆ.06): ಹಲ್ಲೆ ಆರೋಪಿಗಳನ್ನ ಹಿಡಿಯಲು ಹೋದ ಪಿಎಸ್ಐ ಮೇಲೆಯೇ ಹಲ್ಲೆಗೈದ ಘಟನೆ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಬೆಡಶೆಟ್ಟಿಹಳ್ಳಿ ಗ್ರಾಮದಲ್ಲಿ ನಡೆದಿದೆ.
ಹಳೆ ದ್ವೇಷ ಹಿನ್ನೆಲೆ ಕೋಡಿಹಳ್ಳಿ ಚಂದ್ರಶೇಖರ್ ಬಣದ ರಾಜ್ಯ ಸಂಚಾಲಕ ರಮೇಶ್ (45) ಮೇಲೆ ಅದೇ ಗ್ರಾಮದ ಕೆಲ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದರು. ಹಲ್ಲೆ ನಡೆಸಿದ ವೆಂಕಟೇಶ್, ರಾಮಕೃಷ್ಣಪ್ಪ, ಶೀನಿವಾಸ್ ರನ್ನ ಬಂಧಿಸಲು ಹೋದ ವೇಳೆ ಬೆಂಗಳೂರಿನ ಆವಲಹಳ್ಳಿಯಲ್ಲಿ ಪಿಎಸ್ ಐ ವಸಂತ್ ಕುಮಾರ್ ಮೇಲೆ ದಾಳಿ ಮಾಡಿದ್ದಾರೆ.
ಹಲ್ಲೆ ಆರೋಪಿಗಳನ್ನ ಬಂಧಿಸಲು ತಡ ರಾತ್ರಿ ಮಾಸ್ತಿ ಪೊಲೀಸ್ ಠಾಣೆಯ ಪಿಎಸ್ ಐ ವಸಂತ್ ಕುಮಾರ್ ತೆರಳಿದ್ದಾರೆ. ಈ ವೇಳೆ ಆರೋಪಿ ವೆಂಕಟೇಶ್ ಹಾಗೂ ಕುಟುಂಬದವರು ಚಾಕು ಹಾಗೂ ಗಾಜಿನಿಂದ ಪಿಎಸ್ ಐ ಮೇಲೆ ಹಲ್ಲೆ ಮಾಡಿದ್ದಾರೆ.
ಹಲ್ಲೆಗೆ ಒಳಗಾದ ಪಿಎಸ್ ಐ ವಸಂತ್ ಕುಮಾರ್ ಬಲಗೈಗೆ ಗಾಯ, ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೆಂಗಳೂರಿನ ಆವಲಹಳ್ಳಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.