ಕೊರಟಗೆರೆ [ಸೆ.15]:  ಪೊಲೀಸ್‌ ಇಲಾಖೆಯಲ್ಲಿ ಮುಂಬಡ್ತಿ ಪಡೆಯುವ ಉದ್ದೇಶದಿಂದ ಕರ್ತವ್ಯ ನಿರ್ಲಕ್ಷ್ಯತೆ ಮತ್ತು ಬೇಜವಾಬ್ದಾರಿತನ ತೋರಿಸಿದ ಹಿನ್ನೆಲೆ ಕೋಳಾಲ ಪಿಎಸೈ ಸಂತೋಷರ ಅವರನ್ನು ಸೆ.9ರಂದು ಕೇಂದ್ರ ವಲಯ ಆರಕ್ಷಕ ಮಹಾನೀರಿಕ್ಷಕ ಕೆ.ವಿ.ಶರತಚಂದ್ರ ಅಮಾನತಿಗೆ ಆದೇಶಿಸಿದ್ದಾರೆ.

ಕೊರಟಗೆರೆ ತಾಲೂಕು ಕೋಳಾಲ ಪೊಲೀಸ್‌ ಠಾಣೆಯಲ್ಲಿ ಪಿಎಸೈ ಸಂತೋಷ್‌ ಕಳೆದ ಮೂರು ವರ್ಷದಿಂದ ಕರ್ತವ್ಯ ನಿರ್ವಹಣೆ ಮಾಡಿದ್ದಾರೆ. ಕೆಂಗೇರಿ ಪೊಲೀಸ್‌ ಠಾಣೆಯಲ್ಲಿ ಇವರ ವಿರುದ್ಧ ಪ್ರಕರಣದಾಖಲಾಗಿದ್ದರೂ ಪೊಲೀಸ್‌ ಇಲಾಖೆಯ ಮುಂಬಡ್ತಿಗೆ ಅರ್ಜಿ ಸಲ್ಲಿಸುವ ವೇಳೆ ಸುಳ್ಳು ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಕರ್ತವ್ಯದಿಂದ ಅಮಾನತಿಗೆ ಆದೇಶ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಬೆಂಗಳೂರಿನ ಕೆಂಗೇರಿ ಪೊಲೀಸ್‌ ಠಾಣೆಯಲ್ಲಿ ಕೋಳಾಲ ಪಿಎಸೈ ಸಂತೋಷ್‌ ವಿರುದ್ಧ ಪ್ರಕರಣದಾಖಲಾಗಿದೆ. ಸದರಿ ಪ್ರಕರಣದಲ್ಲಿ ಕೆಂಗೇರಿ ಪೊಲೀಸ್‌ ಠಾಣೆಯಿಂದ ದೋಷಾರೋಪಣಾ ಪಟ್ಟಿಯನ್ನು 2016ರ ಏ.5ರಂದು ಘನ 3ನೇ ಎಸಿಎಂಎಂ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ಸದರಿ ಪ್ರಕರಣವು ಘನ ನ್ಯಾಯಾಲಯದ 1204/2016ರಲ್ಲಿ ವಿಚಾರಣೆ ನಡೆಯುತ್ತಿದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಪೊಲೀಸ್‌ ಇಲಾಖೆಗೆ ಮುಂಬಡ್ತಿಗಾಗಿ ಅರ್ಜಿ ಸಲ್ಲಿಸುವ ವೇಳೆಯಲ್ಲಿ ಸದರಿ ಪ್ರಕರಣದ ಮಾಹಿತಿಯನ್ನು ಮರೆಮಾಚಿ ಯಾವುದೇ ಇಲಾಖೆಯಲ್ಲಿ ವಿಚಾರಣೆ, ಚಾಲ್ತಿ ಶಿಕ್ಷೆ, ನ್ಯಾಯಾಲಯದ ನಡವಳಿ/ಕ್ರಿಮಿನಲ್‌ ಪ್ರಕರಣ ಬಾಕಿ ಇರುವುದಿಲ್ಲವೆಂದು ಸುಳ್ಳು ದೃಢೀಕರಣ ಪತ್ರವನ್ನು ತುಮಕೂರು ಕಚೇರಿಗೆ ನೀಡುವ ಮೂಲಕ ಕರ್ತವ್ಯದಲ್ಲಿ ಅತೀವ ನಿರ್ಲಕ್ಷ್ಯತೆ ಮತ್ತು ಬೇಜವಾಬ್ದಾರಿತನ ವಿರುದ್ಧ ಶಿಸ್ತು ಕ್ರಮಕ್ಕಾಗಿ ತುಮಕೂರು ಪೊಲೀಸ್‌ ಅಧಿಕ್ಷಕರು ಮೇಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

ಮೇಲ್ಕಂಡ ಆರೋಪಗಳು ಇಲಾಖೆ ಉಲ್ಲೇಖ (1) ಮತ್ತು (2)ರ ವರದಿಗಳ ಪರಿಶೀಲನೆಯಿಂದ ಮೇಲ್ನೋಟಕ್ಕೆ ದೃಢಪಟ್ಟಿರುವ ಹಿನ್ನೆಲೆಯಲ್ಲಿ ಸದರಿ ಪ್ರಕರಣದ ವಿಚಾರಣೆಯು ಮಾನ್ಯ ನ್ಯಾಯಾಲಯದಲ್ಲಿ ಬಾಕಿ ಇರುವ ಉದ್ದೇಶದಿಂದ ಕರ್ತವ್ಯಲೋಪ ಮತ್ತು ನಿರ್ಲಕ್ಷ್ಯತೆಯಿಂದ ಪರಿಗಣಿಸಿ ಕರ್ನಾಟಕ ರಾಜ್ಯ ಶಿಸ್ತು ನಿಯಮಗಳ ಪ್ರಕಾರ ಕರ್ತವ್ಯದಿಂದ ಅಮಾನತಿಗೆ ಆದೇಶ ಮಾಡಲಾಗಿದೆ.

ಕೋಳಾಲ ಪಿಎಸೈ ಸಂತೋಷ ಅಮಾನತು ಆದ ಠಾಣೆಗೆ ತುಮಕೂರು ಪೊಲೀಸ್‌ ಅಧಿಕ್ಷಕ ಡಾ.ಕೋನವಂಶಿ ಕೃಷ್ಣ ಅವರ ಆದೇಶದ ಮೇರೆಗೆ ಕೊರಟಗೆರೆ ಪಿಎಸೈ ಮಂಜುನಾಥ ಅವರನ್ನು ಪ್ರಭಾರ ಪಿಎಸೈ ಆಗಿ ನೇಮಕ ಮಾಡಲಾಗಿದೆ. ಸೆ.12ರ ಗುರುವಾರ ಕೋಳಾಲ ಪ್ರಭಾರ ಪಿಎಸೈ ಆಗಿ ಮಂಜುನಾಥ ಕರ್ತವ್ಯಕ್ಕೆ ಹಾಜರಾಗಿದ್ದಾರೆ.