Kodihalli Chandrashekhar: 2013ರ ಮಹದಾಯಿ ಹೋರಾಟದ ರೈಲು ತಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಅವರನ್ನು ಶಿರಸಿಯಲ್ಲಿ ಬಂಧಿಸಲಾಗಿದೆ. ವಿಚಾರಣೆಗೆ ಗೈರಾಗಿದ್ದ ಅವರನ್ನು ಹುಬ್ಬಳ್ಳಿ ನ್ಯಾಯಾಲಯವು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ಹುಬ್ಬಳ್ಳಿ (ಸೆ.29): 2013ರಲ್ಲಿ ಮಹದಾಯಿ, ಕಳಸಾ-ಬಂಡೂರಿ ಯೋಜನೆಗೆ ಆಗ್ರಹಿಸಿ 6 ತಾಸು ರೈಲು ತಡೆ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್‌ ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಹುಬ್ಬಳ್ಳಿ ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಗಳ ನ್ಯಾಯಾಲಯ ಸೋಮವಾರ ಆದೇಶಿಸಿದೆ.

ಕಾನೂನಿಗೆ ಗೌರವ ನೀಡದವರು ಹೋರಾಟಗಾರರೇ ಅಲ್ಲ

ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಕನ್ನಡ ಜಿಲ್ಲೆ ಶಿರಸಿಯಲ್ಲಿ ರೈಲ್ವೆ ಪೊಲೀಸರು ಬಂಧನ ವಾರೆಂಟ್‌ ಆಧಾರದ ಮೇಲೆ ಕೋಡಿಹಳ್ಳಿ ಅವರನ್ನು ವಶಕ್ಕೆ ಪಡೆದು ಹುಬ್ಬಳ್ಳಿ ಕೋರ್ಟ್‌ಗೆ ಹಾಜರುಪಡಿಸಿದರು. ವಿಚಾರಣೆ ವೇಳೆ ಕೋಡಿಹಳ್ಳಿ ಜಾಮೀನು ನೀಡುವಂತೆ ಕೋರ್ಟ್‌ಗೆ ಮನವಿ ಮಾಡಿದ್ದರು. ಈ ವೇಳೆ ನ್ಯಾ. ಸಚಿನ್‌ ಕುಮಾರ ಅವರು, ಕಾನೂನಿಗೆ ಗೌರವ ನೀಡದ ಹೋರಾಟಗಾರರು, ಹೋರಾಟಗಾರರೇ ಅಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಶಿರಸಿ ಪ್ರವಾಸಿ ಮಂದಿಯಲ್ಲಿ ಮಲಗಿದ್ದಾಗ ಬಂಧನ

ಈ ಪ್ರಕರಣದಲ್ಲಿ ಕೋಡಿಹಳ್ಳಿ 2019ರಿಂದ ವಿಚಾರಣೆಗೆ ಹಾಜರಾಗಿಲ್ಲ ಎಂಬುದನ್ನು ಪ್ರಸ್ತಾಪಿಸಿದ ನ್ಯಾಯಾಧೀಶರು, ಈಗ ಮತ್ತೆ ಜಾಮೀನು ನೀಡಿದರೆ ಮುಂದಿನ 5 ವರ್ಷವೂ ಕೋರ್ಟ್‌ಗೆ ಹಾಜರಾಗದಿರುವ ಸಾಧ್ಯತೆ ಇದೆ ಎಂದು ತರಾಟೆಗೆ ತೆಗೆದುಕೊಂಡರು. ಶಿರಸಿಯ ಪ್ರವಾಸಿ ಮಂದಿರದಲ್ಲಿ ಮಲಗಿದ್ದ ಕೋಡಿಹಳ್ಳಿ ಅವರನ್ನು ರೈಲ್ವೆ ಪೊಲೀಸರು ಬಂಧಿಸಿ ಕರೆದೊಯ್ದರು.