Kodagu: ರಣಾಂಗಣವಾದ ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಟೆಂಡರ್ ಪ್ರಕ್ರಿಯೆ ಸಭೆ: ಅಸಲಿಗೆ ಆಗಿದ್ದೇನು?
ಗ್ರಾಮ ಪಂಚಾಯಿತಿಯ ವಿವಿಧ ಮಾಂಸ ಮತ್ತು ಮೀನು ವ್ಯಾಪಾರದ ಮಳಿಗೆ ಹಾಗೂ ಹಕ್ಕುಗಳ ಟೆಂಡರ್ ಪ್ರಕ್ರಿಯೆಗೆ ಕರೆದಿದ್ದ ಗ್ರಾಮ ಪಂಚಾಯಿತಿ ಸಭೆ ರಣಾಂಗಣವಾಗಿ ಮಾರ್ಪಟ್ಟ ಘಟನೆ ಕೊಡಗು ಜಿಲ್ಲೆ ಕುಶಾಲನಗರ ತಾಲ್ಲೂಕಿನ ಸುಂಟಿಕೊಪ್ಪದಲ್ಲಿ ನಡೆದಿದೆ.
ವರದಿ: ರವಿ.ಎಸ್.ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು
ಕೊಡಗು (ಫೆ.28): ಗ್ರಾಮ ಪಂಚಾಯಿತಿಯ ವಿವಿಧ ಮಾಂಸ ಮತ್ತು ಮೀನು ವ್ಯಾಪಾರದ ಮಳಿಗೆ ಹಾಗೂ ಹಕ್ಕುಗಳ ಟೆಂಡರ್ ಪ್ರಕ್ರಿಯೆಗೆ ಕರೆದಿದ್ದ ಗ್ರಾಮ ಪಂಚಾಯಿತಿ ಸಭೆ ರಣಾಂಗಣವಾಗಿ ಮಾರ್ಪಟ್ಟ ಘಟನೆ ಕೊಡಗು ಜಿಲ್ಲೆ ಕುಶಾಲನಗರ ತಾಲ್ಲೂಕಿನ ಸುಂಟಿಕೊಪ್ಪದಲ್ಲಿ ನಡೆದಿದೆ. ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ವಿವಿಧ ಮಳಿಗೆಗಳು ಮತ್ತು ಮಾರಾಟ ಹಕ್ಕುಗಳಿಗೆ ಬುಧವಾರ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಟೆಂಡರ್ ನಡೆಯುತಿತ್ತು. ಈ ವೇಳೆ ಆ ಟೆಂಡರ್ ನಡೆಸುವುದರಲ್ಲಿ ಅವ್ಯವಹಾರ ಆಗಿದೆ ಎಂದು ಆರೋಪಿಸಿ ಪಂಚಾಯಿತಿ ಅಧ್ಯಕ್ಷರು ಹಾಗೂ ಪಿಡಿಒ ವಿರುದ್ಧ ಪಂಚಾಯಿತಿಯ ಕೆಲಸ ಸದಸ್ಯರು ತೀವ್ರ ಗಲಾಟೆ ಗದ್ದಲ ಎಬ್ಬಿಸಿದರು.
ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸಲು ಬಂದಿದ್ದ ಬಿಡ್ಡುದಾರರು ತಾವು ತಂದಿದ್ದ ಚಲನ್ಗಳನ್ನು ಪಡೆಯಲು ಬಿಡದೆ ಪಂಚಾಯಿತಿ ಸದಸ್ಯ ರಫೀಕ್, ಆಲಿಕುಟ್ಟಿ, ಪ್ರಸಾದ್ ಕುಟ್ಟಪ್ಪ ಹಾಗೂ ಷರೀಫ್ ಎಂಬುವರು ತೀವ್ರ ವಿರೋಧ ವ್ಯಕ್ತಪಡಿಸಿದರು. ಸದಸ್ಯ ರಫೀಕ್ ಚಲನ್ ಹಾಗೂ ಮಳಿಗೆಗಳ ನಂಬರ್ಗಳನ್ನು ಹಾಕಲು ಇರಿಸಿದ್ದ ಬಾಕ್ಸ್ಗಳನ್ನೆಲ್ಲಾ ಕಿತ್ತೆಸೆದು ಹರಿದು ಬಿಸಾಡಿದರು. ಪಂಚಾಯಿತಿಯ ಇತರೆ ಸದಸ್ಯರು ಹಾಗೂ ಪಿಡಿಒ ಸೇರಿದಂತೆ ಎಲ್ಲರೂ ಎಷ್ಟೇ ಪ್ರಯತ್ನಪಟ್ಟರು ರಫೀಕ್ ಅವರನ್ನು ಸುಮ್ಮನಿರಿಸಲಾಗಲಿಲ್ಲ. ತೀವ್ರ ಗಲಾಟೆ ಗದ್ದಲ ನಡೆದು ಇಡೀ ಪಂಚಾಯಿತಿ ಸಭಾಂಗಣ ರಣಾಂಗಣದಂತಾಗಿ ಪ್ರಕ್ಷುಬ್ಧ ವಾತಾವರಣ ಸೃಷ್ಟಿಯಾಯಿತು.
ನಮ್ಮ ನಿಷ್ಠೆ ಎದೆ ಬಗೆದು ತೋರಿಸಲು ಆಗೋದಿಲ್ಲ: ಸಿ.ಟಿ.ರವಿ
ಗಲಾಟೆಯಾಗುತ್ತದೆ ಎಂದು ಮೊದಲೇ ಅರಿತ್ತಿದ್ದ ಪೊಲೀಸ್ ಇಲಾಖೆ ಒಂದು ಒಂದು ತುಕಡಿ ರಿಸರ್ವ್ ಪೊಲೀಸನ್ನೇ ನೇಮಿಸಿತ್ತು. ಪಂಚಾಯಿತಿ ಸಭಾಂಗಣದಲ್ಲಿ ಗಲಾಟೆ ಶುರುವಾಗುತ್ತಿದ್ದಂತೆ ದೌಡಾಯಿಸಿದ ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು ಹರಸಾಹಸ ಪಟ್ಟರು. ಟೆಂಡರ್ ಪ್ರಕ್ರಿಯೆ ನಡೆಸಲು ಬಂದಿದ್ದ ಇಲಾಖೆ ಒಂದರ ಸಹಾಯಕ ನಿರ್ದೇಶಕ ಅಧಿಕಾರಿ ಮೂಕಪ್ರೇಕ್ಷಕರಾಗಿ ಕುಳಿತುಕೊಳ್ಳಬೇಕಾಯಿತು. ಕುಶಾಲನಗರ ವೃತ್ತ ನಿರೀಕ್ಷ ಪೊಲೀಸ್ ಕೂಡ ಎಷ್ಟೇ ಪ್ರಯತ್ನಪಟ್ಟರು ಗಲಾಟೆ ನಿಯಂತ್ರಿಸಲು ಸಾಧ್ಯವಾಗಲಿಲ್ಲ. ಕೊನೆ ಲಾಠಿಯನ್ನು ಕೈಗೆತ್ತಿಕೊಂಡು ಎಲ್ಲರನ್ನು ಹೊರಗೆ ದೂಡಿ ಸಭೆಯಲ್ಲಿ ನಡೆಯುತ್ತಿದ್ದ ಗಲಾಟೆಯನ್ನು ನಿಯಂತ್ರಿಸಬೇಕಾಯಿತು.
ಬಳಿಕ ಮಧ್ಯಾಹ್ನದ ಹೊತ್ತಿಗೆ ಸ್ಥಳಕ್ಕೆ ಬಂದ ಸೋಮವಾರಪೇಟೆ ತಾಲ್ಲೂಕು ಪಂಚಾಯಿತಿ ಇಓ ಜಯಣ್ಣ ಅವರು ಈಗಾಗಲೇ ಪಂಚಾಯಿತಿಯ ಸಭೆಯಲ್ಲಿ ನೀವೇ ನಿರ್ಧರಿಸುವಂತೆ ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ. ಆದರೆ ಯಾವುದೇ ಕಾರಣಕ್ಕೂ ಖಾಸಗಿ ಮಳಿಗೆಗಳಲ್ಲಿ ವ್ಯಾಪಾರ ಮಾಡುತ್ತಿರುವವರಿಗೆ ವಿವಿಧ ವ್ಯಾಪಾರದ ಹಕ್ಕುಗಳನ್ನು ನೀಡಲು ಸಾಧ್ಯವಿಲ್ಲ. ಯಾರೇ ಟೆಂಡರ್ ಪಡೆದರೂ ಗ್ರಾಮ ಪಂಚಾಯಿತಿಯ ಮಳಿಗೆಗಳಲ್ಲಿ ಮಾತ್ರವೇ ವ್ಯಾಪಾರಕ್ಕೆ ಅವಕಾಶ ಎಂದು ಹೇಳಿದರು. ಕೆಲವರು ಹೆದ್ದಾರಿ ಬದಿಯ ಮಳಿಗೆಗಳಲ್ಲಿ ಮೀನು ಮಾಂಸಗಳ ವ್ಯಾಪಾರ ನಡೆಸುತ್ತಿದ್ದು ಅವರು ಕೋರ್ಟಿನಲ್ಲಿ ದಾವೆ ಹೂಡಿದ್ದಾರೆ. ಸದ್ಯ ಅವರಿಗೆ ಯಥಾಸ್ಥಿತಿ ಕಾಪಾಡಲೇ ಬೇಕು.
ಮುಂದಿನ ದಿನಗಳಲ್ಲಿ ಕೋರ್ಟಿನ ತೀರ್ಪು ಏನು ಬರುತ್ತದೆಯೋ ಅದರ ಆಧಾರದಲ್ಲಿ ಈ ಮಳಿಗೆಗಳಲ್ಲಿ ವ್ಯಾಪಾರ ಮಾಡುತ್ತಿರುವವರನ್ನು ಪಂಚಾಯಿತಿ ತೆರವು ಮಾಡಲಿದೆ ಎಂದರು. ಟೆಂಡರ್ ಪ್ರಕ್ರಿಯೆಗೆ ವಿರೋಧ ವ್ಯಕ್ತಪಡಿಸಿದ್ದ ಸದಸ್ಯ ರಫೀಕ್ ಅವರು ಮಾತನಾಡಿ ಪ್ರಾಮಾಣಿಕವಾಗಿ ಪ್ರತೀ ವರ್ಷ ಲಕ್ಷಾಂತರ ರೂಪಾಯಿ ಪಂಚಾಯಿತಿಗೆ ಕಟ್ಟಿ ವ್ಯಾಪಾರ ನಡೆಸುತ್ತಿದ್ದಾರೆ. ಈಗ ಅವರನ್ನು ಯಾವುದೇ ಮೂಲಸೌಲಭ್ಯಗಳಿಲ್ಲದೆ, ಗ್ರಾಮದ ಯಾವುದೋ ಮೂಲೆಯಲ್ಲಿರುವ ಪಂಚಾಯಿತಿಯ ಮಳಿಗೆಗಳಿಗೆ ಸ್ಥಳಾಂತರಿಸಲು ಪಂಚಾಯಿತಿ ಅಧಿಕಾರಿಗಳು ಮುಂದಾಗಿದ್ದಾರೆ. ಹೀಗೆ ಮಾಡಿದರೆ ಪಂಚಾಯಿತಿಗೆ ಲಕ್ಷಾಂತರ ರೂಪಾಯಿ ಕಟ್ಟಿ ವ್ಯಾಪಾರ ಮಾಡುತ್ತಿರುವವರಿಗೆ ಅನ್ಯಾವಾಗಲಿದೆ.
ಬಿಜೆಪಿಗೆ ಮತ ಕೇಳಲು ಹಿಂಜರಿಕೆಯ ಅವಶ್ಯಕತೆ ಇಲ್ಲ: ಶೋಭಾ ಕರಂದ್ಲಾಜೆ
ಕೇವಲ ಐದು ನೂರು ರೂಪಾಯಿಗೆ ವ್ಯಾಪಾರದ ಹಕ್ಕು ಕೊಡಿ ಎಂದು ಪಂಚಾಯಿತಿ ವಿರುದ್ಧ ಕೋರ್ಟಿಗೆ ಹೋಗಿರುವವರಿಗೆ ಅನುಕೂಲವಾಗಲಿದೆ. ಹೀಗೆ ಮಾಡುತ್ತಿರುವುದರ ಹಿಂದೆ ಪಂಚಾಯಿತಿ ಅಧಿಕಾರಿಗಳ ಹುನ್ನಾರವಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸದ್ಯ ಇರುವ ಪಂಚಾಯಿತಿಯ 10 ಮಳಿಗೆಗಳಿಗೆ ಟೆಂಡರ್ ಮಾಡುವುದಾಗಿ ಇಒ ತಿಳಿಸಿದ್ದಾರೆ. ಆದರೆ ಪ್ರಾಮಾಣಿಕವಾಗಿ ಪಂಚಾಯಿತಿಗೆ ಲಕ್ಷಾಂತರ ರೂಪಾಯಿ ಕಟ್ಟಿ ವ್ಯಾಪಾರ ಮಾಡುತ್ತಿರುವವರಿಗೆ ತೊಂದರೆಯಾದರೆ ತೀವ್ರ ಹೋರಾಟ ಮಾಡುವುದಾಗಿ ರಫೀಕ್ ಎಚ್ಚರಿಕೆ ನೀಡಿದರು. ಅಂತು ಪಂಚಾಯಿತಿಯಲ್ಲಿ ಗದ್ದಲ, ಗಲಾಟೆಯ ಬಳಿಕ ಟೆಂಡರ್ಗೆ ಅವಕಾಶ ನೀಡಲಾಗಿದೆ.