ಬಿಜೆಪಿಗೆ ಮತ ಕೇಳಲು ಹಿಂಜರಿಕೆಯ ಅವಶ್ಯಕತೆ ಇಲ್ಲ: ಶೋಭಾ ಕರಂದ್ಲಾಜೆ
ಡೆಲ್ಲಿಯ ಹಣ ಹಳ್ಳಿಗೂ ಬರುತ್ತದೆ ಎಂಬುದನ್ನು ಪ್ರಧಾನಿ ನರೇಂದ್ರ ಮೋದಿಯವರು ತೋರಿಸಿಕೊಟ್ಟಿದ್ದಾರೆ. ಹಾಗಾಗಿ ಯಾವ ಕಾರ್ಯಕರ್ತರು ವೋಟ್ ಕೇಳುವಾಗ ಹಿಂಜರಿಯಬೇಕಾದ ಅವಶ್ಯಕತೆ ಇಲ್ಲ ಎಂದು ಕೇಂದ್ರದ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
ಚಿಕ್ಕಮಗಳೂರು (ಫೆ.25): ಡೆಲ್ಲಿಯ ಹಣ ಹಳ್ಳಿಗೂ ಬರುತ್ತದೆ ಎಂಬುದನ್ನು ಪ್ರಧಾನಿ ನರೇಂದ್ರ ಮೋದಿಯವರು ತೋರಿಸಿಕೊಟ್ಟಿದ್ದಾರೆ. ಹಾಗಾಗಿ ಯಾವ ಕಾರ್ಯಕರ್ತರು ವೋಟ್ ಕೇಳುವಾಗ ಹಿಂಜರಿಯಬೇಕಾದ ಅವಶ್ಯಕತೆ ಇಲ್ಲ ಎಂದು ಕೇಂದ್ರದ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು. ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಚುನಾವಣಾ ಕಾರ್ಯಾಲಯ ಉದ್ಘಾಟನಾ ಸಮಾರಂಭದ ಅಂಗವಾಗಿ ನಡೆದ ಚುನಾವಣಾ ನಿರ್ವಹಣಾ ಸಮಿತಿ ಸಭೆಯಲ್ಲಿ ಮಾತನಾಡಿ ದರು.
ಮಾರ್ಚ್ ಎರಡನೇ ವಾರದಲ್ಲಿ ಲೋಕಸಭಾ ಚುನಾವಣೆ ಅಧಿಸೂಚನೆ ಪ್ರಕಟವಾಗಬಹುದು. ಎರಡು ತಿಂಗಳಲ್ಲಿ ಚುನಾವಣೆ ಮುಗಿದೇ ಹೋಗಲಿದೆ. ಹಾಗಾಗಿ ಕಾರ್ಯಕರ್ತರು, ಮುಂಚೂಣಿ ಮುಖಂಡರು ಕಳೆದ 10 ವರ್ಷಗಳಲ್ಲಿ ನರೇಂದ್ರ ಮೋದಿ ಸರ್ಕಾರ ಕೊಟ್ಟಿರುವ ಹಲವು ಕಾರ್ಯಕ್ರಮಗಳನ್ನು ಜನರಿಗೆ ತಿಳಿಸಿಕೊಡುವ ಕೆಲಸ ಮಾಡಬೇಕು ಎಂದ ಅವರು, ಅಭಿವೃದ್ಧಿ ಆಧಾರದ ಮೇಲೆ ವೋಟ್ ಕೇಳಿ ಎಂದು ಕರೆ ನೀಡಿದರು. ಡೆಲ್ಲಿಯ ಹಣ ಹಳ್ಳಿಗೆ ಬರಲು ಸಾಧ್ಯನಾ ಎಂದು ಜನರು ಪ್ರಶ್ನೆ ಮಾಡುತ್ತಿದ್ದರು, ದೀನ ದಯಾಳ್ ವಿದ್ಯುದ್ದೀಕರಣ, ಪಿಎಂಜಿಎಸ್‌ಆರ್‌ವೈ, ಕಿಸಾನ್ ಸಮ್ಮಾನ್ ಸೇರಿದಂತೆ ಹಲವು ಯೋಜನೆಗಳನ್ನು ಜಾರಿ ಮಾಡುವ ಮೂಲಕ ಡೆಲ್ಲಿಯ ಹಣ ಹಳ್ಳಿಗಳಿಗೆ ತಲುಪಿದೆ.
ಸರ್ಕಾರದ ಬಳಿ ಹಣ ಇಲ್ಲ ಆರೋಪಕ್ಕೆ ಕಾಮಗಾರಿ ಉತ್ತರ: ಸಚಿವ ಕೆ.ಎನ್.ರಾಜಣ್ಣ
ಗ್ರಾಮೀಣ ಭಾಗದ ಶೇ. 90 ರಷ್ಟು ಜನರು ಸೌಲಭ್ಯ ಪಡೆದುಕೊಂಡಿದ್ದಾರೆ. ಕೇಂದ್ರದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಬೇಕು, ನರೇಂದ್ರಮೋದಿಯವರು ಪ್ರಧಾನಿಯಾಗಬೇಕು. ಹಾಗಾಗಿ ಯಾವುದೇ ಹಿಂಜರಿಕೆ ಇಲ್ಲದೆ ಬಿಜೆಪಿಗೆ ಮತ ಕೇಳಿ ಎಂದು ಹೇಳಿದರು. ಬಿ.ಎಸ್. ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗ ರಾಜ್ಯದಲ್ಲಿ ಭಾಗ್ಯಲಕ್ಷ್ಮಿ ಯೋಜನೆ ಜಾರಿಗೆ ತಂದಿದ್ದರು. ರೈತರ ಪಂಪ್ ಸೆಟ್‌ಗಳಿಗೆ ಉಚಿತ ವಿದ್ಯುತ್ ನೀಡಿದ್ದರು. ಇಡೀ ರಾಜ್ಯದಲ್ಲಿ ಪಿಎಂಜಿಎಸ್‌ವೈ ಯೋಜನೆಯಡಿ ಹಣ ತಂದಿರುವುದು ಪ್ರಹ್ಲಾದ್ ಜೋಷಿ ಹಾಗೂ ತಾವು ಇಬ್ಬರೆ ಹೆಚ್ಚೆಂದು ಹೇಳಿದರು.
ವಿಧಾನಪರಿಷತ್ ಉಪ ಸಭಾಪತಿ ಎಂ.ಕೆ. ಪ್ರಾಣೇಶ್ ಮಾತನಾಡಿ, ಈ ಬಾರಿ ಅಧಿವೇಶನವನ್ನು ಕೇಂದ್ರ ಸರ್ಕಾರವನ್ನು ಟೀಕೆ ಮಾಡಿಕೊಳ್ಳಲು ರಾಜ್ಯ ಸರ್ಕಾರ ಬಳಸಿಕೊಂಡಿತು. ಮಾತು ಮಾತಿಗೂ ಕೇಂದ್ರದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ ಎಂದರು. ರಾಜ್ಯ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಯಿಂದ ಖಜಾನೆ ಖಾಲಿಯಾಗಿದೆ. ಹಣ ಕ್ರೋಢಿಕರಿಸಲು ಹಲವು ಸಾಮಾಗ್ರಿಗಳ ಬೆಲೆಯನ್ನು ದುಬಾರಿ ಮಾಡಿದೆ ಎಂದ ಅವರು, ರಾಜ್ಯ ಅಭಿವೃದ್ಧಿ ಆಗಿರೋದು ಕೇಂದ್ರ ಸರ್ಕಾರದ ವಿವಿಧ ಯೋಜನೆಯಿಂದಾಗಿ, ಇದನ್ನು ಜನರಿಗೆ ತಿಳಿಸಿಕೊಡುವ ಕೆಲಸ ಆಗಬೇಕು. ಇಲ್ಲದೆ ಹೋದರೆ ರಾಜ್ಯ ಸರ್ಕಾರ ಮತ ದಾರರಲ್ಲಿ ಗೊಂದಲ ಸೃಷ್ಟಿಸಿ ದಿಕ್ಕು ತಪ್ಪಿಸುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ಹೇಳಿದರು.
ಚುನಾವಣಾ ಪ್ರಚಾರ ಕಾರ್ಯಾಲಯ ಉದ್ಘಾಟಿಸಿ ಮಾತನಾಡಿದ ಮಾಜಿ ಸಚಿವ ಸಿ.ಟಿ. ರವಿ, ಕಾಂಗ್ರೆಸ್ ಪಕ್ಷಕ್ಕೆ ಸಂವಿಧಾನಕ್ಕೆ ಗೌರವ ಕೊಟ್ಟೆ ಗೊತ್ತಿಲ್ಲ, ಅರ್ಟಿಕಲ್ 370 ರದ್ದುಪಡಿಸುವವರೆಗೂ ಸಂವಿಧಾನದ ಪ್ರಕಾರ ಕಾಶ್ಮೀರಕ್ಕೆ ಮೀಸಲಾತಿ ಸಿಗುತ್ತಿರಲಿಲ್ಲ. ಸಂವಿಧಾನದ ಶಿಲ್ಪಿ ಬದುಕಿದ್ದಾಗಲೂ, ಸತ್ತಿದ್ದಾಗಲೂ ಅಪಮಾನ ಮಾಡಿದಂತಹ ಜನ. ಅಂಬೇಡ್ಕರ್ ಹೆಸರಿನಲ್ಲಿ ವಶೀಕರಣ ಮಾಡಲು ಪ್ರಯತ್ನ ಮಾಡುತ್ತಿದ್ದಾರೆ ಎಂದರು. ಪ್ರಜಾಪ್ರಭುತ್ವ ವ್ಯವಸ್ಥೆ ಬಗ್ಗೆ ಕಾಂಗ್ರೆಸ್ ಪಕ್ಷಕ್ಕೆ ನಂಬಿಕೆ ಇಲ್ಲ. ಅಂಬೇಡ್ಕರ್ ಅವರು ಮೀಸಲಾತಿಯನ್ನು ಬಲವಾಗಿ ಪ್ರತಿಪಾದಿಸಿದ್ದರು. ಆದರೆ, ಮೀಸಲಾತಿ ವಿರುದ್ಧ ಪತ್ರ ಬರೆದವರು ನೆಹರು. ಅವರು ರಾಜ್ಯದ ಎಲ್ಲಾ ಸಿಎಂಗೆ ಪತ್ರ ಬರೆದಿದ್ದರು ಎಂದು ಹೇಳಿದರು.
ಮೋದಿ ಮತ್ತೊಮ್ಮೆ ಪ್ರಧಾನಿಯನ್ನಾಗಿಸಲು ಪಣ ತೊಡಿ: ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ
ಸಕ್ಷನ್ 356 ಬಳಸಿ ರಾಜ್ಯ ಸರ್ಕಾರವನ್ನು ವಜಾ ಮಾಡಿದ್ದು ಕಾಂಗ್ರೆಸ್ ಪಕ್ಷ. ಅವರಿಗೆ ಸಂವಿಧಾನದ ಬಗ್ಗೆ ಜಾಗೃತಿ ಇದ್ದಿದ್ದರೆ, ಈ ರೀತಿ ಮಾಡುತ್ತಿರಲಿಲ್ಲ. 1993 ರಲ್ಲಿ 4 ರಾಜ್ಯಗಳ ಸರ್ಕಾರವನ್ನು ವಜಾ ಮಾಡಿತು. ಸಂವಿಧಾನದ ಬಗ್ಗೆ ಗೌರವ ಇದ್ದಿದ್ದರೆ ಚುನಾಯಿತ ಸರ್ಕಾರಗಳನ್ನು ವಜಾ ಮಾಡುತ್ತಿರಲಿಲ್ಲ . ಇದು ಕಾಂಗ್ರೆಸ್‌ನ ಇತಿಹಾಸ. ಸಂವಿಧಾನ ದೇಶವನ್ನು ಜೋಡಿಸಿತು. ಜಾಗೃತಿ ಎಂದರೆ ದೇಶ ಒಡೆಯುವುದಲ್ಲ. ಎಂದು ಕಿವಿ ಮಾತು ಹೇಳಿದರು. ಬಿಜೆಪಿ ಜಿಲ್ಲಾಧ್ಯಕ್ಷ ದೇವರಾಜ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಮಾಜಿ ಸಚಿವ ಡಿ.ಎನ್. ಜೀವರಾಜ್, ಮಾಜಿ ಶಾಸಕ ಡಿ.ಎಸ್. ಸುರೇಶ್, ಬಿಜೆಪಿ ರೈತ ಮೋರ್ಚಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್.ಸಿ. ಕಲ್ಮರಡಪ್ಪ, ಪ್ರೇಮ್ ಕುಮಾರ್, ನವೀಶ್‌ಶೆಟ್ಟಿ ಪುತ್ತಿಯಾರ್, ರವೀಂದ್ರ ಬೆಳವಾಡಿ, ಪುಣ್ಯಪಾಲ್, ಬಿ. ರಾಜಪ್ಪ, ನರೇಂದ್ರ ಉಪಸ್ಥಿತರಿದ್ದರು.