ಕೊಡಗು ಜಿಲ್ಲೆಯಲ್ಲಿ ಆನೆ-ಮಾನವ ಸಂಘರ್ಷ ತಡೆಗಟ್ಟಲು ಸರ್ಕಾರವು 22 ಕೋಟಿ ರೂಪಾಯಿ ವೆಚ್ಚದಲ್ಲಿ 15 ಕಿಲೋ ಮೀಟರ್ ರೈಲ್ವೆ ಬ್ಯಾರಿಕೇಡ್ ನಿರ್ಮಾಣಕ್ಕೆ ಮುಂದಾಗಿದೆ. ವಿರಾಜಪೇಟೆ ತಾಲ್ಲೂಕಿನ ಬಿ. ಶೆಟ್ಟಿಗೇರಿ ಅರಣ್ಯದಲ್ಲಿ ಶಾಸಕ ಪೊನ್ನಣ್ಣನವರು ಈ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದರು.

ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್ 
ಕೊಡಗು (ಫೆ.25):
ಬಹು ದಿನಗಳಿಂದಲೂ ಕೊಡಗು ಜಿಲ್ಲೆಯಲ್ಲಿ ನಡೆಯುತ್ತಿರುವ ಆನೆ ಮಾನವ ಸಂಘರ್ಷ ತಪ್ಪಿಸಲು ಸರ್ಕಾರ ಕೊನೆಗೂ ಮುಂದಾಗಿದೆ. ವಿರಾಜಪೇಟೆ ತಾಲ್ಲೂಕಿನ ಬಿ. ಶೆಟ್ಟಿಗೇರಿ ಅರಣ್ಯದ ಹಂಚಿನಲ್ಲಿ 22 ಕೋಟಿ ರೂಪಾಯಿ ವೆಚ್ಚದಲ್ಲಿ 15 ಕಿಲೋ ಮೀಟರ್ ವ್ಯಾಪ್ತಿಯ ರೈಲ್ವೇ ಬ್ಯಾರಿಕೇಡ್ ನಿರ್ಮಾಣಕ್ಕೆ ವಿರಾಜಪೇಟೆ ಶಾಸಕ ಸಿಎಂ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಶಂಕುಸ್ಥಾಪನೆ ನೆರವೇರಿಸಿದರು.

ಅರಣ್ಯದ ಅಂಚಿನಲ್ಲೇ ಕಾಫಿ ತೋಟಗಳಿದ್ದು ಕಾಫಿ ತೋಟಗಳಲ್ಲಿ ಕೆಲಸ ಮಾಡುವ ಕಾರ್ಮಿಕರ ಮೇಲೆ ಆನೆಗಳು ದಾಳಿ ನಡೆಸುತ್ತಿದ್ದವು. ಇದರಿಂದ ಹಲವು ವರ್ಷಗಳಿಂದಲೂ ಈ ಭಾಗದಲ್ಲಿ ಆನೆಗಳನ್ನು ನಡೆಸುತ್ತಿರುವ ದಾಳಿಯನ್ನು ತಪ್ಪಿಸುವಂತೆ ಜನರು ಆಗ್ರಹಿಸುತ್ತಿದ್ದರು. ಬಿ.ಶೆಟ್ಟಿಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಂದೆಡೆ ಬಿರುನಾಣಿ ಮತ್ತೊಂದೆಡೆ ಬಾಡಗ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಇರುವ ಅರಣ್ಯದಿಂದ ಆನೆಗಳು ಮತ್ತು ಕಾಡೆಮ್ಮೆಗಳು ದೊಡ್ಡ ಪ್ರಮಾಣದಲ್ಲಿ ದಾಳಿ ಮಾಡುತ್ತಿದ್ದವು. ಇದರಿಂದ ಜನರು ಕಾಫಿ ತೋಟಗಳಲ್ಲಿ ಕೆಲಸ ಮಾಡಲು ಸಾಧ್ಯವಾಗದಂತಹ ಪರಿಸ್ಥಿತಿ ಇತ್ತು. ಬಿ. ಶೆಟ್ಟಿಗೇರಿಯ ಅರಣ್ಯದ ಅಂಚಿನಲ್ಲಿ ಶಾಸಕ ಎ.ಎಸ್. ಪೊನ್ನಣ್ಣ ರೈಲ್ವೇ ಬ್ಯಾರಿಕೇಡ್ ನಿರ್ಮಾಣಕ್ಕೆ ಚಾಲನೆ ನೀಡಿದ್ದಾರೆ.

ಎಲ್ಲೆಲ್ಲಿ ರೈಲ್ವೆ ಕಂಬಿಗಳನ್ನು ಬಳಸಿ ಬ್ಯಾರಿಕೇಡ್ ಅಳವಡಿಸಲು ಅವಕಾಶವಿದೆಯೋ ಅಲ್ಲಿ ರೈಲ್ವೇ ಬ್ಯಾರಿಕೇಡ್ ಅಳವಡಿಲಾಗುವುದು ಅದಕ್ಕಾಗಿ 22 ಕೋಟಿ ರೂಪಾಯಿಯನ್ನು ಸರ್ಕಾರ ಬಿಡುಗಡೆ ಮಾಡಿದೆ. ಎಲ್ಲಿ ಸೋಲಾರ್ ಬೇಲಿ ನಿರ್ಮಿಸಲು ಅವಕಾಶವಿದೆಯೋ ಅಲ್ಲಿ ಸೋಲಾರ್ ಬೇಲಿ ನಿರ್ಮಿಸಲಾಗುವುದು. ಜೊತೆಗೆ ಈಗಾಗಲೇ ಆನೆ ಕಂದಕಗಳನ್ನು ತೆಗೆಯಲಾಗಿದ್ದು, ಅವುಗಳ ನಿರ್ವಹಣೆಯನ್ನು ಮಾಡಲಾಗುವುದು. ಅದಕ್ಕಾಗಿ ಪ್ರತ್ಯೇಕ ಅನುದಾನವನ್ನು ಸರ್ಕಾರ ನೀಡಲಿದೆ ಎಂದಿದ್ದಾರೆ.

ಇದನ್ನೂ ಓದಿ: ಕೇಂದ್ರ ಸಚಿವ ಕುಮಾರಸ್ವಾಮಿ ತನ್ನ ಮೇಲಿರುವ ಕೇಸುಗಳಿಂದ ಪಾರಾಗಲಿ; ಸಚಿವ ದಿನೇಶ್ ಗುಂಡೂರಾವ್

ಇನ್ನು ಈಗಾಗಲೇ ತೋಟಗಳಿಗೆ ಬಂದು ಹಲವು ವರ್ಷಗಳಿಂದ ಅಲ್ಲಿಯೇ ವಾಸಿಸುತ್ತಿರುವ ಆನೆಗಳನ್ನು ಕಾಡಿಗೆ ಅಟ್ಟುವ ಕೆಲಸವೂ ಆಗಬೇಕಾಗಿದೆ. ಜೊತೆಗೆ ಆನೆ ಮಾನವ ಸಂಘರ್ಷ ತಪ್ಪಿಸುವುದಕ್ಕೆ ರೈತರಿಂದಲೂ ಸಹಕಾರ ಬೇಕಾಗಿದೆ ಎಂದರು. ಸದ್ಯ ರೈಲ್ವೇ ಬ್ಯಾರಿಕೇಡ್ ನಿರ್ಮಾಣಕ್ಕೆ ಚಾಲನೆ ನೀಡಿರುವುದಕ್ಕೆ ರೈತರು ಸಂತಸ ವ್ಯಕ್ತಪಡಿಸಿದ್ದಾರೆ. ಹಲವು ವರ್ಷಗಳ ಬೇಡಿಕೆ ಇದು. ಇತ್ತೀಚೆಗಷ್ಟೇ ಶಾಸಕ ಪೊನ್ನಣ್ಣ ಅವರು ರೈಲ್ವೇ ಬ್ಯಾರಿಕೇಡ್ ನಿರ್ಮಾಣ ಮಾಡಲು ಅನುದಾನ ಕೊಡವುದಾಗಿ ಹೇಳಿದ್ದರು. ಮಾತಿನಂತೆ 22 ಕೋಟಿ ವೆಚ್ಚದಲ್ಲಿ ರೈಲ್ವೇ ಬ್ಯಾರಿಕೇಡ್ ನಿರ್ಮಿಸುತ್ತಿದ್ದಾರೆ.

ಇದರಿಂದ ಆನೆಗಳು ತೋಟಗಳಿಗೆ ನುಗ್ಗುವುದು ತಪ್ಪುವ ಆಶಾಭಾವನೆ ಇದೆ. ಆನೆಗಳು ತೋಟಗಳಿಗೆ ನುಗ್ಗುವುದು ಕಡಿಮೆ ಆಯಿತ್ತೆಂದರೆ ನಾವು ನೆಮ್ಮದಿಯಿಂದ ಬೆಳೆ ಬೆಳೆಯಬಹುದು. ಕಾರ್ಮಿಕರಿಗೂ ಇದರಿಂದ ರಕ್ಷಣೆ ದೊರೆಯಲಿದೆ ಎಂದಿದ್ದಾರೆ. ಆನೆಗಳಿಗೆ ಅರಣ್ಯದಲ್ಲಿ ಉತ್ತಮವಾದ ಆಹಾರ ಮತ್ತು ನೀರಿನ ಸೌಲಭ್ಯ ದೊರೆತ್ತಲ್ಲಿ ಕಾಡಿನಿಂದ ನಾಡಿಗೆ ಅಥವಾ ತೋಟಗಳಿಗೆ ಆಹಾರ ಅರಸಿ ಬರುವುದು ಕಡಿಮೆ ಆಗಬಹುದು. ಇದರ ಬಗ್ಗೆ ಅರಣ್ಯ ಇಲಾಖೆ ಹೆಚ್ಚಿನ ಗಮನ ಹರಿಸಬೇಕಾದ ಅಗತ್ಯವಿದೆ ಎಂದಿದ್ದಾರೆ. ಸದ್ಯ ಅರಣ್ಯಗಳಿಂದ ಕಾಡಾನೆಗಳು ಬರುವುದು ಒಂದೆಡೆಯಾದರೆ ಮತ್ತೊಂದೆಡೆ ಈಗಾಗಲೇ ದೊಡ್ಡ ಸಂಖ್ಯೆಯಲ್ಲಿ ಕಾಡಾನೆಗಳು ಕಾಫಿ ತೋಟದೊಳಗೆ ಸೇರಿಕೊಂಡಿದ್ದು ಅವುಗಳನ್ನು ಕಾಡಿಗೆ ಓಡಿಸುವ ಕಾರ್ಯಾಚರಣೆಯೂ ನಡೆಯಲಿದೆ ಎಂದು ಪೊನ್ನಣ್ಣ ಹೇಳಿದ್ದಾರೆ.

ಇದನ್ನೂ ಓದಿ: ವಿಧಾನ ಸೌಧದಲ್ಲಿರುವ 52 ಬೀದಿ ನಾಯಿಗಳಿಗೆ ಸರ್ಕಾರದಿಂದ ಆಶ್ರಯ; ಸಭಾಪತಿ ಯು.ಟಿ. ಖಾದರ್!