ಕೊಡಗು ಜಿಲ್ಲೆಯ ಮದೆನಾಡು ಗ್ರಾಮದ ಮನೆಯೊಂದಕ್ಕೆ 10 ಅಡಿ ಉದ್ದದ ಬೃಹತ್ ಕಾಳಿಂಗ ಸರ್ಪವೊಂದು ನುಗ್ಗಿತ್ತು. ಉರಗಪ್ರೇಮಿ ಪಿಯೂಷ್ ಅವರು ಈ ಹಾವನ್ನು ಸುರಕ್ಷಿತವಾಗಿ ಸೆರೆಹಿಡಿದು ಅರಣ್ಯ ಇಲಾಖೆಗೆ ಒಪ್ಪಿಸಿದರು. ಬಳಿಕ ಅದನ್ನು ಸಂಪಾಜೆ ಅರಣ್ಯಕ್ಕೆ ಬಿಡಲಾಯಿತು.
ಕೊಡಗು (ನ.06): ಮಲೆನಾಡಿನ ದಟ್ಟ ಕಾಡುಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಕಾಳಿಂಗ ಸರ್ಪವೊಂದು (King Cobra) ಆಹಾರ ಅಥವಾ ಬೆಚ್ಚಿನ ಸ್ಥಳವನ್ನು ಹುಡುಕಿಕೊಂಡು ಹೋಗಿ ನೇರವಾಗಿ ಮನೆಯೊಳಗೆ ನುಗ್ಗಿದ ಘಟನೆ ಕೊಡಗಿನಲ್ಲಿ ನಡೆದಿದೆ. ಮನೆಯ ಕೋಣೆಯಲ್ಲಿ ಬೃಹತ್ ಗಾತ್ರದ ಹಾವನ್ನು ಕಂಡು ಮನೆಯವರು ಬೆಚ್ಚಿಬಿದ್ದಿದ್ದು, ಬಳಿಕ ಅರಣ್ಯ ಇಲಾಖೆ ಸಿಬ್ಬಂದಿ ಹಾವನ್ನು ಸುರಕ್ಷಿತವಾಗಿ ಸೆರೆಹಿಡಿದು ಕಾಡಿಗೆ ಬಿಟ್ಟಿದ್ದಾರೆ.
ಮದೆನಾಡಿನ ಭಾರತಿ ಅವರ ಮನೆಯಲ್ಲಿ ಪತ್ತೆಯಾದ ಬೃಹತ್ ಹಾವು
ಕೊಡಗು ಜಿಲ್ಲೆಯ ಮದೆನಾಡು ಗ್ರಾಮದ ನಿವಾಸಿ ಭಾರತಿ ಎಂಬುವವರ ಮನೆಯೊಳಗೆ ಈ ಘಟನೆ ನಡೆದಿದೆ. ನಿನ್ನೆ ರಾತ್ರಿ ವೇಳೆ ಮನೆಯಲ್ಲಿ ಎಲ್ಲರೂ ಇದ್ದರೂ, ಸದ್ದಿಲ್ಲದೇ 10 ಅಡಿ ಉದ್ದ ಹಾಗೂ 14 ಕೆಜಿ ತೂಕದ ಬೃಹತ್ ಕಾಳಿಂಗ ಸರ್ಪ ನೇರವಾಗಿ ಮನೆಯ ಕೋಣೆಯೊಳಗೆ ಸೇರಿಕೊಂಡಿದೆ. ರೂಮಿನೊಳಗೆ ಹೋದ ಭಾರತಿ ಅವರಿಗೆ ದೊಡ್ಡ ಗಾತ್ರದ ಹಾವಿನ ಹೆಡೆ ಕಾಣಿಸಿಕೊಂಡಿದ್ದು, ತಕ್ಷಣವೇ ಆತಂಕಗೊಂಡು ಬೆಚ್ಚಿಬಿದ್ದಿದ್ದಾರೆ. ಕೂಡಲೇ ಮನೆಯವರ ಸಹಾಯದಿಂದ ಅಕ್ಕಪಾಸಿನವರಿಗೆ ವಿಷಯ ಮುಟ್ಟಿಸಿದ್ದು, ಗ್ರಾಮಸ್ಥರಲ್ಲಿ ಭೀತಿಯ ವಾತಾವರಣ ನಿರ್ಮಾಣವಾಗಿತ್ತು.
ಉರಗಪ್ರೇಮಿ ಪಿಯೂಷ್ ಅವರಿಂದ ಧೈರ್ಯದ ಕಾರ್ಯಾಚರಣೆ
ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಧಾವಿಸಿದ ಯುವ ಉರಗಪ್ರೇಮಿ ಪಿಯೂಷ್, ಯಾವುದೇ ಪ್ರಾಣಾಪಾಯವಾಗದಂತೆ ಎಚ್ಚರಿಕೆ ವಹಿಸಿ ಕಾರ್ಯಾಚರಣೆ ನಡೆಸಿದರು. ಮನೆಯ ಕೋಣೆಯಲ್ಲಿ ಅಡಗಿಕೊಂಡಿದ್ದ ಸುಮಾರು 10 ಅಡಿ ಉದ್ದದ ಅತೀ ವಿಷಪೂರಿತ ಕಾಳಿಂಗ ಸರ್ಪವನ್ನು ಸೆರೆಹಿಡಿಯುವಲ್ಲಿ ಪಿಯೂಷ್ ಯಶಸ್ವಿಯಾದರು. ಹಾವನ್ನು ಸುರಕ್ಷಿತವಾಗಿ ಚೀಲಕ್ಕೆ ಬಂಧಿಸುತ್ತಿದ್ದಂತೆ ಮನೆಯವರು ಹಾಗೂ ಸ್ಥಳೀಯರು ನಿಟ್ಟುಸಿರು ಬಿಟ್ಟರು.
ಅರಣ್ಯ ಇಲಾಖೆ ವತಿಯಿಂದ ಸಂಪಾಜೆ ಅರಣ್ಯಕ್ಕೆ ಬಿಡುಗಡೆ
ಮನೆಯಲ್ಲಿದ್ದ ಕಾಳಿಂಗ ಸರ್ಪವನ್ನು ಯಶಸ್ವಿಯಾಗಿ ಸೆರೆಹಿಡಿದ ಬಳಿಕ, ಉರಗಪ್ರೇಮಿ ಪಿಯೂಷ್ ಅವರು ಅದನ್ನು ತಕ್ಷಣವೇ ಅರಣ್ಯ ಇಲಾಖೆ ಸಿಬ್ಬಂದಿಗೆ ಅಧಿಕೃತವಾಗಿ ಹಸ್ತಾಂತರಿಸಿದರು.
ಅರಣ್ಯ ಇಲಾಖೆಯ ಸಿಬ್ಬಂದಿ ಹಾಗೂ ಉರಗಪ್ರೇಮಿ ಪಿಯೂಷ್ ಅವರ ಸಮ್ಮುಖದಲ್ಲಿ, ಆ ಬೃಹತ್ ಕಾಳಿಂಗ ಸರ್ಪಕ್ಕೆ ಯಾವುದೇ ಹಾನಿಯಾಗದಂತೆ ಸುರಕ್ಷಿತವಾಗಿ ಸಂಪಾಜೆ ಅರಣ್ಯ ಪ್ರದೇಶದ ಆಳಕ್ಕೆ ಒಯ್ದು ಬಿಡಲಾಯಿತು. ಮಲೆನಾಡಿನಲ್ಲಿ ಹೆಚ್ಚುತ್ತಿರುವ ಕಾಡು-ನಾಡು ವಿಸ್ತರಣೆಯ ನಡುವೆಯೂ ವನ್ಯಜೀವಿಗಳ ರಕ್ಷಣೆಗಾಗಿ ಸ್ಥಳೀಯರು ಮತ್ತು ಅರಣ್ಯ ಇಲಾಖೆ ನಡೆಸುತ್ತಿರುವ ಇಂತಹ ಕಾರ್ಯಗಳಿಗೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.






