ಗೃಹಲಕ್ಷ್ಮಿ ಯೋಜನೆಯ ಹಣದಿಂದ ಕಲಬುರಗಿಯ ಸುವರ್ಣಮ್ಮ ಎಂಬುವವರು ಕರಕುಶಲ ಉದ್ಯಮ ಆರಂಭಿಸಿ ಯಶಸ್ವಿಯಾಗಿದ್ದಾರೆ. ಇತ್ತೀಚೆಗೆ ನಡೆದ ಸಂವಾದದಲ್ಲಿ ಅವರು ತಯಾರಿಸಿದ ಮಣಿಗಳ ಆಟಿಕೆ ತೊಟ್ಟಿಲನ್ನು ಕಂಡು ಮೆಚ್ಚಿದ ಡಿಕೆ ಶಿವಕುಮಾರ್ ಅವರು ಹಣ ನೀಡಿ ಖರೀದಿಸಿ ಪ್ರೋತ್ಸಾಹಿಸಿದರು.

ಬೆಂಗಳೂರು (ನ.06): ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಗೃಹಲಕ್ಷ್ಮಿ ಯೋಜನೆ (Gruha Lakshmi Scheme) ಮಹಿಳೆಯರ ಆರ್ಥಿಕ ಸ್ವಾತಂತ್ರ್ಯ ಮತ್ತು ಸಬಲೀಕರಣಕ್ಕೆ ಹೇಗೆ ಆಸರೆಯಾಗುತ್ತಿದೆ ಎಂಬುದಕ್ಕೆ ಸಿಎಂ ಗೃಹಕಚೇರಿ 'ಕೃಷ್ಣಾ'ದಲ್ಲಿ ನಡೆದ ಸಂವಾದ ಕಾರ್ಯಕ್ರಮವೊಂದು ಸಾಕ್ಷಿಯಾಯಿತು.

ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳೊಂದಿಗೆ ಶುಕ್ರವಾರ ಸಂವಾದ ನಡೆಸುತ್ತಿದ್ದಾಗ, ಕಲಬುರಗಿ ಮೂಲದ ಮಹಿಳೆಯೊಬ್ಬರ ಕರಕುಶಲ ಉದ್ಯಮ ಮತ್ತು ಅವರ ಶ್ರಮವನ್ನು ಕಂಡು ಉಪಮುಖ್ಯಮಂತ್ರಿ ಹಾಗೂ ಸಿಎಂ ಡಿ.ಕೆ. ಶಿವಕುಮಾರ್ (DK Shivakumar) ಅವರು ಅತ್ಯಂತ ಪ್ರಸನ್ನರಾದರು. ಅಷ್ಟೇ ಅಲ್ಲದೆ, ಅವರ ಬಳಿಯಿದ್ದ ಮಣಿಗಳಿಂದ ಮಾಡಿದ ಆಟಿಕೆ ತೊಟ್ಟಿಲನ್ನು ನೋಡಿ ಇಷ್ಟಪಟ್ಟು, ತಮ್ಮ ಮೊಮ್ಮಗಳಿಗೆಂದು ₹500 ನೀಡಿ ಖರೀದಿಸಿದರು.

ಗೃಹಲಕ್ಷ್ಮಿ ಹಣದಿಂದ ಉದ್ಯಮ ಕಟ್ಟಿಕೊಂಡ ಸುವರ್ಣಮ್ಮ!

ಕಲಬುರಗಿಯ ಶಿವನಗರದ ನಿವಾಸಿ ಎಂ. ಎಸ್. ಸುವರ್ಣ ಅವರು ಗೃಹಲಕ್ಷ್ಮಿ ಯೋಜನೆಯಡಿ ಪ್ರತಿ ತಿಂಗಳು ಸರ್ಕಾರದಿಂದ ಸಿಗುತ್ತಿದ್ದ ಹಣವನ್ನು ಪೋಲು ಮಾಡದೆ, ಅದನ್ನೇ ಬಂಡವಾಳವನ್ನಾಗಿ ಮಾಡಿಕೊಂಡು ಕರಕುಶಲ ವಸ್ತುಗಳ ಸಣ್ಣ ವ್ಯಾಪಾರ ಆರಂಭಿಸಿದ್ದರು. ಮಣಿಗಳಿಂದ ತೊಟ್ಟಿಲು, ಮುತ್ತಿನ ತೇನೆ, ದಂಡಿ ಹಾಗೂ ವಿವಿಧ ಅಲಂಕಾರಿಕ ವಸ್ತುಗಳನ್ನು ತಯಾರಿಸಿ ಮಾರಾಟ ಮಾಡಲು ತೊಡಗಿದರು. ಸಂವಾದದಲ್ಲಿ ತಮ್ಮ ಅನುಭವ ಹಂಚಿಕೊಂಡ ಸುವರ್ಣಮ್ಮ, 'ಈ ಯೋಜನೆಯ ಹಣದಿಂದ ಆರಂಭವಾದ ನನ್ನ ಸಣ್ಣ ಉದ್ಯಮ ಇಂದು ಮುಂಬೈ, ಪುಣೆ, ಹೈದರಾಬಾದ್ ಮುಂತಾದ ದೊಡ್ಡ ನಗರಗಳಿಗೂ ವಿಸ್ತರಿಸಿದೆ. ಇದರಿಂದ ನನ್ನ ಕುಟುಂಬದ ಬದುಕು ಸುಧಾರಿಸಿದೆ' ಎಂದು ಹೆಮ್ಮೆಯಿಂದ ಸಿಎಂ ಗಮನಕ್ಕೆ ತಂದರು.

ಎಷ್ಟಮ್ಮ ಇದರ ಬೆಲೆ? ನನ್ನ ಮೊಮ್ಮಗಳಿಗೆ ಕೊಡ್ತೀನಿ": ಡಿ.ಕೆ. ಶಿವಕುಮಾರ್

ಸಂವಾದದ ವೇಳೆ ಸುವರ್ಣಮ್ಮ ಅವರು ತಾವು ತಯಾರಿಸಿದ್ದ ಗುಲಾಬಿ ಬಣ್ಣದ ಮಣಿಗಳ ಆಟಿಕೆ ತೊಟ್ಟಿಲನ್ನು ಪ್ರದರ್ಶಿಸಿದರು. ಅದನ್ನು ನೋಡಿದ ತಕ್ಷಣವೇ ಆಕರ್ಷಿತರಾದ ಡಿ.ಕೆ. ಶಿವಕುಮಾರ್, 'ಚನ್ನಾಗಿದೆ ಕಣಮ್ಮಾ ಆ ತೊಟ್ಟಿಲು, ನನ್ನ ಮೊಮ್ಮಗಳಿಗೆ ಕೊಡ್ತೀನಿ, ಕೊಡು ಅದನ್ನ, ಎಷ್ಟು ಅದರ ಬೆಲೆ..?' ಎಂದು ಪ್ರೀತಿಯಿಂದ ವಿಚಾರಿಸಿದರು. ಅದಕ್ಕೆ ಉತ್ತರಿಸಿದ ಸುವರ್ಣಮ್ಮ, 'ಸರ್‌, ಇದನ್ನು ಮಾಡಲು ನಮಗೆ ₹125 ಖರ್ಚಾಗುತ್ತದೆ. ನಾವು ಮಾರುಕಟ್ಟೆಯಲ್ಲಿ ₹250 ರಿಂದ ₹300 ಕ್ಕೆ ಮಾರಾಟ ಮಾಡುತ್ತೇವೆ. ಇದರಿಂದ ಸಾಕಷ್ಟು' ಲಾಭ ಸಿಗುತ್ತಿದೆ ಎಂದರು.

ಬೇಡ ಎಂದರೂ ₹500 ನೀಡಿದ ಸಿಎಂ!

ಸುವರ್ಣಮ್ಮ ಅವರು ಗೌರವ ಪೂರ್ವಕವಾಗಿ ತೊಟ್ಟಿಲನ್ನು ಉಚಿತವಾಗಿ ನೀಡಲು ಮುಂದಾದಾಗ, ಸಿಎಂ ಡಿ.ಕೆ. ಶಿವಕುಮಾರ್ ಅವರು 'ಬೇಡ ಬೇಡ' ಎಂದು ಉಚಿತವಾಗಿ ನೀಡುವುದನ್ನು ಪ್ರೀತಿಯಿಂದ ನಿರಾಕರಿಸಿ, ತಮ್ಮ ಜೇಬಿನಿಂದ ₹500 ತೆಗೆದು ಅವರ ಕೈಗಿಟ್ಟರು. ನಂತರ ಆ ಮಣಿ ತೊಟ್ಟಿಲನ್ನು ಮೇಲೆ-ಕೆಳಗೆ ತಿರುಗಿಸಿ ನೋಡಿ, ಅದರ ಸೊಬಗನ್ನು ಕಣ್ತುಂಬಿಕೊಂಡು ಮನೆಗೆ ತೆಗೆದುಕೊಂಡು ಹೋಗಲು ತಮ್ಮ ಸಹಾಯಕ ಸಿಬ್ಬಂದಿ ಕೈಯಲ್ಲಿ ಕಳುಹಿಸಿಕೊಟ್ಟರು. ರಾಜ್ಯದ ಮುಖ್ಯಮಂತ್ರಿಯೊಬ್ಬರು ತಾವೇ ಸ್ವತಃ ತಯಾರಿಸಿದ ವಸ್ತುವನ್ನು ಕೊಂಡುಕೊಂಡು ಪ್ರೋತ್ಸಾಹಿಸಿದ್ದನ್ನು ಕಂಡು ಸುವರ್ಣಮ್ಮನವರ ಸಂತಸಕ್ಕೆ ಎಲ್ಲೆಯಿರಲಿಲ್ಲ.