ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಅಲಕನೂರ ಗ್ರಾಮದ ಶ್ರೀ ಕರಿಸಿದ್ದೇಶ್ವರ ಮಠದ 30 ವರ್ಷದ ಪಟ್ಟದಾನೆ 'ಧ್ರುವರಾಜ' ಅನಾರೋಗ್ಯದಿಂದ ಮೃತಪಟ್ಟಿದೆ. ರಾಜ್ಯದಲ್ಲೇ ಅತಿ ಎತ್ತರದ ಆನೆಗಳಲ್ಲಿ ಒಂದಾಗಿದ್ದ ಧ್ರುವರಾಜನ ಅಗಲಿಕೆಯಿಂದ ಭಕ್ತರು ಮತ್ತು ಗಣ್ಯರು ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.
ಬೆಳಗಾವಿ/ಚಿಕ್ಕೋಡಿ (ನ.13): ಕಳೆದ 25 ವರ್ಷಗಳಿಂದ ಮಠದ ಆವರಣದಲ್ಲಿ ಆಟವಾಡುತ್ತಾ, ಭಕ್ತರ ಅಚ್ಚುಮೆಚ್ಚಿನ ಒಡನಾಡಿಯಾಗಿ ಬೆಳೆದು ನಿಂತಿದ್ದ ಪಟ್ಟದಾನೆ ವಿಧಿವಶವಾಗಿದೆ. ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಐತಿಹಾಸಿಕ ಅಲಕನೂರ ಗ್ರಾಮದ ಶ್ರೀ ಕರಿಸಿದ್ದೇಶ್ವರ ಮಠದ ಪಟ್ಟದಾನೆ 'ಧ್ರುವರಾಜ' (30 ವರ್ಷ) ನಿನ್ನೆ ತಡರಾತ್ರಿ ಇಹಲೋಕ ತ್ಯಜಿಸಿದ್ದು, ಭಕ್ತವೃಂದದಲ್ಲಿ ಶೋಕದ ಛಾಯೆ ಆವರಿಸಿದೆ.
ಕರಿಸಿದ್ದೇಶ್ವರ ದೇವರ ದರ್ಶನದ ಜೊತೆಗೆ ಮಠದ ಆನೆಯ ಆಶೀರ್ವಾದ ಪಡೆದು ಸಂಭ್ರಮಿಸುತ್ತಿದ್ದ ಭಕ್ತರಿಗೆ ಈ ದುಃಖದ ಸುದ್ದಿಯನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಸುದ್ದಿ ತಿಳಿಯುತ್ತಿದ್ದಂತೆ ಮಠಕ್ಕೆ ಸಾವಿರಾರು ಭಕ್ತರು ಧಾವಿಸಿದ್ದು, ಧ್ರುವರಾಜನ ಪಾರ್ಥಿವ ಶರೀರ ಕಂಡು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.
ರಾಜ್ಯದಲ್ಲೇ ಅತಿ ಎತ್ತರದ ಆನೆ ಎಂಬ ಹೆಗ್ಗಳಿಕೆ!
ಮಠದಲ್ಲೇ ಬೆಳೆದು ದೊಡ್ಡವನಾಗಿದ್ದ ಧ್ರುವರಾಜನಿಗೆ ಈಗ ಸುಮಾರು 30 ವರ್ಷ ವಯಸ್ಸಾಗಿತ್ತು. ಬರೋಬ್ಬರಿ 6 ಟನ್ ತೂಕ ಹಾಗೂ 12.5 ಅಡಿ ಎತ್ತರ ಹೊಂದಿದ್ದ ಧ್ರುವರಾಜ, ರಾಜ್ಯದ ಅತ್ಯಂತ ದೊಡ್ಡ ಮತ್ತು ಆಕರ್ಷಕ ಸಾಕಾನೆಗಳಲ್ಲಿ ಒಂದೆಂದು ಖ್ಯಾತಿ ಪಡೆದಿದ್ದ. ಊರ ಜಾತ್ರೆಗಳಲ್ಲಾಗಲಿ, ಧಾರ್ಮಿಕ ಕಾರ್ಯಗಳಲ್ಲಾಗಲೀ ರಾಜಗಾಂಭೀರ್ಯದಿಂದ ಓಡಾಡುತ್ತಿದ್ದರೂ ಯಾರಿಗೂ ಕಿಂಚಿತ್ತೂ ತೊಂದರೆ ಕೊಡದ ಶಾಂತ ಸ್ವಭಾವ ಇದರದ್ದಾಗಿತ್ತು. ಜಾತ್ರೆಯ ಸಂದರ್ಭದಲ್ಲಿ ಮದುಮಗನಂತೆ ಸಿಂಗಾರಗೊಂಡು ಮೆರವಣಿಗೆಯಲ್ಲಿ ಹೆಜ್ಜೆ ಹಾಕುತ್ತಿದ್ದ ಧ್ರುವರಾಜನನ್ನು ನೋಡಲು ಎರಡು ಕಣ್ಣುಗಳು ಸಾಲುತ್ತಿರಲಿಲ್ಲ. ಮಠಕ್ಕೆ ಬರುವ ಸಣ್ಣ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಎಲ್ಲರ ಆಕರ್ಷಣೆಯ ಕೇಂದ್ರಬಿಂದುವಾಗಿದ್ದ.
ಶಿವಮೊಗ್ಗ ವೈದ್ಯರ ಚಿಕಿತ್ಸೆಯೂ ಫಲಿಸಲಿಲ್ಲ:
ಕಳೆದ ಎರಡು ತಿಂಗಳಿಂದ ಧ್ರುವರಾಜ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ. ಮಠದ ಆಡಳಿತ ಮಂಡಳಿಯು ಕೂಡಲೇ ಬೆಳಗಾವಿ ಜಿಲ್ಲಾ ಅರಣ್ಯ ಇಲಾಖೆಗೆ ಮಾಹಿತಿ ನೀಡಿ ಸ್ಥಳೀಯ ವೈದ್ಯರಿಂದ ಚಿಕಿತ್ಸೆ ಕೊಡಿಸಿತ್ತು. ಆದರೆ ಆರೋಗ್ಯ ಸುಧಾರಿಸದಿದ್ದಾಗ, ಶಿವಮೊಗ್ಗದಿಂದ ನುರಿತ ಆನೆ ತಜ್ಞ ವೈದ್ಯರನ್ನು ಕರೆಯಿಸಿ ವಿಶೇಷ ಚಿಕಿತ್ಸೆ ಕೊಡಿಸಲಾಯಿತು. ಆದರೂ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ರಾತ್ರಿ 11:00 ಗಂಟೆ ಸುಮಾರಿಗೆ ಧ್ರುವರಾಜ ಕೊನೆಯುಸಿರೆಳೆದಿದ್ದಾನೆ.
ಅಂತಿಮ ದರ್ಶನ ಪಡೆದು ಕಂಬನಿ ಮಿಡಿದ ಗಣ್ಯರು:
ಧ್ರುವರಾಜನ ಸಾವಿನ ವಿಷಯ ತಿಳಿಯುತ್ತಿದ್ದಂತೆ ಕುಡಚಿ ಶಾಸಕ ಮಹೇಂದ್ರ ತಮ್ಮಣ್ಣವರ್, ಮಾಜಿ ಶಾಸಕ ಪಿ. ರಾಜೀವ್ ಸೇರಿದಂತೆ ಸುತ್ತಮುತ್ತಲಿನ ಹಲವು ಮಠಾಧೀಶರು ಹಾಗೂ ಜನಪ್ರತಿನಿಧಿಗಳು ಮಠಕ್ಕೆ ಭೇಟಿ ನೀಡಿ ಅಂತಿಮ ದರ್ಶನ ಪಡೆದು ಕಂಬನಿ ಮಿಡಿದರು.
ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ದೌಡಾಯಿಸಿದ್ದು, ನಿಯಮಾನುಸಾರ ವೈದ್ಯರಿಂದ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಸಾವಿಗೆ ನಿಖರ ಕಾರಣವೇನು ಎಂಬುದು ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರವಷ್ಟೇ ಸ್ಪಷ್ಟವಾಗಲಿದೆ. ಇಂದು ಸಂಜೆ ಮಠದ ಧಾರ್ಮಿಕ ವಿಧಿವಿಧಾನಗಳೊಂದಿಗೆ ಮಠಕ್ಕೆ ಸೇರಿದ ಜಮೀನಿನಲ್ಲಿ ಧ್ರುವರಾಜನ ಅಂತ್ಯಕ್ರಿಯೆಯನ್ನು ಸಕಲ ಗೌರವಗಳೊಂದಿಗೆ ನೆರವೇರಿಸಲಾಯಿತು.














