Kodagu: ಮನೆ ಸಿದ್ದವಾದರೂ ವಾಸಕ್ಕೆ ಬಾರದ ಸಂತ್ರಸ್ಥರು, ನೋಟಿಸ್ ನೀಡಿ ಮನೆ ವಾಪಸ್ ಪಡೆಯಲು ಚಿಂತನೆ!
ಸಾರಿಗೆ ಸಂಪರ್ಕವಿಲ್ಲ, ಯಾವುದೇ ಕೂಲಿ ಕೆಲಸಗಳು ಸಿಗಲ್ಲ ಎನ್ನುವ ಕಾರಣವೊಡ್ಡಿ ಕೊಡಗಿನ 90 ಕ್ಕೂ ಹೆಚ್ಚು ಕುಟುಂಬಗಳು ಸರ್ಕಾರ ನಿರ್ಮಿಸಿರುವ ಸುಸಜ್ಜಿತ ಮನೆಗಳಿಗೆ ಹೋಗಿಲ್ಲ.
ವರದಿ: ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು (ಜೂ.20) : ಕರೆದು ಹೆಣ್ಣು ಕೊಟ್ಟರೆ ಅಳಿಯನಿಗೆ ಮಲ್ಲೋಗ್ರ ಎನ್ನುವ ಗಾದೆ ಮಾತನ್ನು ನೀವು ಕೇಳಿಯೇ ಇರುತ್ತೀರಾ. ಹಾಗೆ ಇವರೆಲ್ಲಾ ಅಪಾಯದಲ್ಲಿದ್ದಾರೆ, ಮನೆ ಮಠಗಳ್ನು ಕಳೆದುಕೊಂಡಿದ್ದಾರೆ. ಅವರ ಜೀವ, ಜೀವನಕ್ಕೂ ಬೆಲೆ ಇದೆ ಎಂದು ತೀರಾ ಅಪಾಯದಲ್ಲಿದ್ದ 140 ಕ್ಕೂ ಹೆಚ್ಚು ಕುಟುಂಬಗಳಿಗೆ ತಲಾ 9.85 ಲಕ್ಷ ವೆಚ್ಚದಲ್ಲಿ ಸರ್ಕಾರ ಮನೆಗಳನ್ನು ನಿರ್ಮಿಸಿಕೊಟ್ಟಿದೆ. ಆದರೆ ಸಾರಿಗೆ ಸಂಪರ್ಕವಿಲ್ಲ, ಅಲ್ಲಿ ಯಾವುದೇ ಕೂಲಿ, ಕೆಲಸಗಳು ಸಿಗಲ್ಲ ಎನ್ನುವ ಕಾರಣವೊಡ್ಡಿ 90 ಕ್ಕೂ ಹೆಚ್ಚು ಕುಟುಂಬಗಳು ಸರ್ಕಾರ ನಿರ್ಮಿಸಿರುವ ಈ ಸುಸಜ್ಜಿತ ಮನೆಗಳಿಗೆ ಹೋಗಿಲ್ಲ.
ಕೊಡಗು ಜಿಲ್ಲೆಯಲ್ಲಿ 2018 ರಲ್ಲಿ ಭೀಕರ ಭೂಕುಸಿತ, ಪ್ರವಾಹಕ್ಕೆ ಸಾವಿರಾರು ಕುಟುಂಬಗಳು ಮನೆ ಕಳೆದುಕೊಂಡಿದ್ದವು. ಅಂದಿನ ಕಾಂಗ್ರೆಸ್, ಜೆಡಿಎಸ್ ಸಮ್ಮಿಶ್ರ ಸರ್ಕಾರ ಕೂಡಲೇ ಎಲ್ಲಾ ಸಂತ್ರಸ್ಥರಿಗೆ ಮನೆ ನಿರ್ಮಿಸಿ ಕೊಡುವುದಾಗಿ ಭರವಸೆ ನೀಡಿತ್ತು. ತಡವಾದರೂ ಕೊಟ್ಟ ಮಾತಿನಂತೆ ಸಂತ್ರಸ್ಥರಿಗೆ ಮನೆ ನಿರ್ಮಿಸಿಕೊಟ್ಟಿತ್ತು. ಮಡಿಕೇರಿ ತಾಲ್ಲೂಕಿನ ಗಾಳಿಬೀಡು ಪಂಚಾಯಿತಿ ವ್ಯಾಪ್ತಿಯಲ್ಲೂ 140 ಮನೆಗಳನ್ನು ನಿರ್ಮಿಸಲಾಗಿತ್ತು. ಅವರಲ್ಲಿ ಕೇವಲ 50 ಕುಟುಂಬಗಳು ಮಾತ್ರವೇ ಈ ಮನೆಗಳಿಗೆ ಹೋಗಿ ವಾಸಿಸುತ್ತಿವೆ. ಉಳಿದ 50 ಕುಟುಂಬಗಳು ಮನೆ ಪಡೆದುಕೊಂಡಿದ್ದರೂ ಅಲ್ಲಿ ವಾಸ ಮಾಡುತ್ತಿಲ್ಲ. 38 ಕುಟುಂಬಗಳು ಇದುವರೆಗೆ ಮನೆಗಳ ಕೀಗಳನ್ನೇ ಪಡೆದುಕೊಂಡಿಲ್ಲ.
ಗೃಹಜ್ಯೋತಿಗೆ ಸರ್ವರ್ ವಿಘ್ನ, ಕೊಡಗು ಜಿಲ್ಲೆಯಾದ್ಯಂತ ಕಾದು ಕಾದು ಸುಸ್ತಾಗಿ ವಾಪಸ್ಸಾದ ಜನರು
ಗಾಳಿಬೀಡಿನಲ್ಲಿ ಒಂಭತ್ತುವರೆ ಎಕರೆ ಪ್ರದೇಶದಲ್ಲಿ ತಲಾ ಎರಡು ಬೆಡ್ ರೂಮುಗಳ 140 ಮನೆಗಳಿರುವ ಸುಸಜ್ಜಿತವಾದ ಬಡಾವಣೆ ನಿರ್ಮಿಸಲಾಗಿದೆ. ಆದರೆ ಮನೆ ಹಂಚಿಕೆಯಾಗಿದ್ದರೂ ಜನರು ಮಾತ್ರ ಮಡಿಕೇರಿ ನಗರದಿಂದ ಪುನರ್ವಸತಿ ಯೋಜನೆ ಮನೆಗಳಿರುವ ಸ್ಥಳಕ್ಕೆ ಹೋಗಲು ಬಸ್ಸುಗಳ ವ್ಯವಸ್ಥೆ ಇಲ್ಲ. ಆಟೋಗಳಿಗೆ ಹೋಗಬೇಕೆಂದರೆ 200 ರೂಪಾಯಿ ಕೊಡಬೇಕು ಎಂದು ಬಹುತೇಕರು ಅಲ್ಲಿಗೆ ಹೋಗಿಲ್ಲ.
ಹೀಗಾಗಿ ಮನೆಗಳು ಸಿದ್ಧವಿದ್ದರೂ, ವಾಸಕ್ಕೆ ಹೋಗದೇ ಇರುವುದರಿಂದ ಮನೆಗಳು ಪಾಳುಬಿದ್ದಿವೆ. ಸುತ್ತಲೂ ಗಿಡಗಂಟಿಗಳು ಬೆಳೆದು ಕಾಡು ಪಾಲಾಗುತ್ತಿವೆ. ಮನೆಗಳಿಗೆ ಹೋಗಿ ವಾಸಿಸುವಂತೆ ಜಿಲ್ಲಾಡಳಿತ ಹಲವು ಬಾರಿ ಸಂತ್ರಸ್ಥರ ಮನವೊಲಿಸಲು ಪ್ರಯತ್ನಿಸಿದೆ. ಅದು ಸಾಧ್ಯವಾಗದೇ ಇದ್ದಾಗ ಕೊನೆಗೆ ಜಿಲ್ಲಾಡಳಿತ ಮನೆಗೆ ಹೋಗದಿರುವ ಸಂತ್ರಸ್ಥ ಕುಟುಂಬಗಳಿಗೆ ನೋಟೀಸ್ ಜಾರಿ ಮಾಡಿದೆ. ಮನೆಗಳಿಗೆ ಹೋಗಿ ವಾಸಿಸಿ, ಇಲ್ಲವೇ ಸರ್ಕಾರದ ಆದೇಶದಂತೆ ಕ್ರಮ ಕೈಗೊಂಡು, ನಿಮಗೆ ನೀಡಿರುವ ಮನೆಗಳನ್ನು ವಾಪಸ್ ಪಡೆಯಲಾಗುವುದು ಎಂದು ನೋಟಿಸ್ ನೀಡಿದೆ.
ಮಲ್ಪೆ ಕಡಲ ತೀರದಲ್ಲಿ ಎಲ್ಲಿ ನೋಡಿದರಲ್ಲಿ ಗಂಗೆಯ ಕೂದಲು! ಏನಿದರ ವಿಶೇಷ?
ಹೀಗೆ ನಾಲ್ಕು ಬಾರಿ ನೋಟಿಸ್ ನೀಡಿದರು ಹೆಚ್ಚಿನ ಸಂತ್ರಸ್ಥ ಕುಟುಂಬಗಳು ಯಾವುದೇ ಉತ್ತರ ನೀಡಿಲ್ಲ. ಹೀಗಾಗಿ ಜಿಲ್ಲಾಡಳಿತ ಸರ್ಕಾರಕ್ಕೆ ವರದಿ ಸಲ್ಲಿಸಿ ಕ್ರಮ ಕೈಗೊಳ್ಳಲು ನಿರ್ಧರಿಸಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಕೊಡಗು ಉಪವಿಭಾಗಧಿಕಾರಿ ಯತೀಶ್ ಉಳ್ಳಾಲ್ ಅವರು, ಮನೆಗಳಿಗೆ ಹೋಗದಿರುವವರಿಗೆ ಮತ್ತೊಮ್ಮೆ ಸೂಚನೆ ಕೊಡುತ್ತೇವೆ. ಸರ್ವೆ ಮಾಡಿಸಿ ಯಾರು ನಿಜವಾಗಿ ಮನೆಯಲ್ಲಿ ವಾಸಿಸುತ್ತಿಲ್ಲವೋ ಅಥವಾ ಯಾರು ಮನೆಗಳ ಕೀಗಳನ್ನೇ ಪಡೆದುಕೊಂಡಿಲ್ಲವೋ ಅವರ ವಿವರವನ್ನು ಸರ್ಕಾರಕ್ಕೆ ಸಲ್ಲಿಸುತ್ತೇವೆ. ಸರ್ಕಾರ ಏನು ಆದೇಶ ನೀಡುತ್ತದೆಯೋ ಅದೇ ರೀತಿ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ.
ಆದರೆ ಜನರು ಮಾತ್ರ ಜಿಲ್ಲಾಡಳಿತ ಮತ್ತು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಬ್ರಿಟೀಷ್ ಆಳ್ವಿಕೆ ಸಂದರ್ಭದಲ್ಲಿ ಯಾರಾದರೂ ಅವರ ವಿರುದ್ಧ ಪ್ರತಿಭಟಿಸಿದರೆ ಅಂಡಮಾನ್ ಮತ್ತು ನಿಕೋಬಾರ್ ಜೈಲುಗಳಿಗೆ ಕಳುಹಿಸುತ್ತಿದ್ದರು. ಅದೇ ರೀತಿ ಸಂತ್ರಸ್ಥ ಕುಟುಂಬಗಳನ್ನು ಆ ನಿರ್ಜನ ಪ್ರದೇಶಕ್ಕೆ ಕಳುಹಿಸಿದ್ದಾರೆ. ಸಂತ್ರಸ್ಥರು ಮನೆಗಳನ್ನು ಪಡೆದುಕೊಳ್ಳಲಿಲ್ಲ ಎಂದು ಜಿಲ್ಲಾಡಳಿತವೇನೋ ಹೇಳುತ್ತಿದೆ. ಆದರೆ ಓಡಾಡಲು ಅಲ್ಲಿಗೆ ಕನಿಷ್ಠ ಬಸ್ಸುಗಳ ವ್ಯವಸ್ಥೆಯಿಲ್ಲ. ಇದು ಎಷ್ಟು ಸರಿ ಎಂದು ಪ್ರಶ್ನಿಸುತ್ತಿದ್ದಾರೆ. ಏನೇ ಹಾಗಲಿ ಕೋಟ್ಯಂತರ ರೂಪಾಯಿ ವ್ಯಯಿಸಿ ಸರ್ಕಾರ ಸಂತ್ರಸ್ಥರಿಗಾಗಿ ಮನೆಗಳನ್ನು ನಿರ್ಮಿಸಿಕೊಟ್ಟಿದ್ದರೂ ಸಾರಿಗೆ ಸಂಪರ್ಕ ಕಲ್ಪಿಸಿಲ್ಲ. ಹೀಗಾಗಿ ಸಂತ್ರಸ್ಥರು ಮಾತ್ರ ಅಲ್ಲಿಗೆ ಹೋಗುತ್ತಿಲ್ಲ. ಇದು ಸರ್ಕಾರದ ಕೋಟ್ಯಂತರ ರೂಪಾಯಿ ಹಣ ಪೋಲಾಗುವಂತೆ ಆಗಿರುವುದು ವಿಪರ್ಯಾಸವೇ ಸರಿ.