ಬಿಜೆಪಿ ಕಪಿಮುಷ್ಠಿಯಿಂದ ದೇಶ ಮುಕ್ತಗೊಳಿಸಿ: ಕಾಂಗ್ರೆಸ್ ಮುಖಂಡ
- ಕಾಂಗ್ರೆಸ್ ನೇತೃತ್ವದ ಸರ್ಕಾರ 70 ವರ್ಷಗಳಲ್ಲಿ ಕಟ್ಟಿದ ಭವ್ಯ ಭಾರತವನ್ನು ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಮಾರಾಟಕ್ಕಿಟ್ಟಿದೆ
- ಕೊಡಗು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಧರ್ಮಜ ಉತ್ತಪ್ಪ ಆರೋಪ
ಸೋಮವಾರಪೇಟೆ (ಆ.26): ಕಾಂಗ್ರೆಸ್ ನೇತೃತ್ವದ ಸರ್ಕಾರ 70 ವರ್ಷಗಳಲ್ಲಿ ಕಟ್ಟಿದ ಭವ್ಯ ಭಾರತವನ್ನು ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಮಾರಾಟಕ್ಕಿಟ್ಟಿದೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಧರ್ಮಜ ಉತ್ತಪ್ಪ ದೂರಿದರು.
ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ಆಯೋಜಿಸಿದ್ದ ಯುವ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.
ರಾಷ್ಟ್ರೀಕರಣಗೊಂಡಿದ್ದ ಸಂಸ್ಥೆಗಳನ್ನು ಖಾಸಗಿಯವರಿಗೆ ಮಾರಾಟ ಮಾಡುತ್ತಿದ್ದಾರೆ. ಪ್ರಶ್ನೆ ಮಾಡಿದವರನ್ನು ದೇಶದ್ರೋಹಿಗಳ ಪಟ್ಟಕಟ್ಟುತ್ತಿದ್ದಾರೆ. ಯುವಕರ ತಲೆಯಲ್ಲಿ ಭ್ರಮಾ ಲೋಕವನ್ನು ಸೃಷ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆ. ದೇಶವನ್ನು ಬಿಜೆಪಿ ಕಪಿಮುಷ್ಠಿಯಿಂದ ಮುಕ್ತಗೊಳಿಸಲು ಯುವಸಮುದಾಯ ಪ್ರತಿಜ್ಞೆ ಮಾಡಬೇಕು ಎಂದು ಕರೆ ನೀಡಿದರು.
ದಮನಕಾರಿ ಶಕ್ತಿಗಳ ಆಟ ಬಹಳ ದಿನ ನಡೆಯಲ್ಲ.. ಸೋಮನಾಥದ ಇತಿಹಾಸ ಗೊತ್ತಲ್ಲ!
ಜನಸಾಮಾನ್ಯರು ಪ್ರತಿ ಹಂತದಲ್ಲೂ ಸೋತು ಹೋಗಿದ್ದಾರೆ. ಪೆಟ್ರೋಲ್, ಡೀಸೆಲ್, ಗ್ಯಾಸ್, ಆಹಾರ ಪದಾರ್ಥಗಳ ಬೆಲೆ ಗಗನಕ್ಕೇರಿದೆ. ಜನಸಾಮಾನ್ಯರ ನೋವಿಗೆ ಸ್ಪಂದಿಸುತ್ತಿಲ್ಲ. ಸರ್ವಾಧಿಕಾರಿಗಳಂತೆ ವರ್ತಿಸುತ್ತಿದ್ದಾರೆ. ಹೋರಾಟಗಾರರನ್ನು ಬಗ್ಗು ಬಡಿಯಲಾಗುತ್ತಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕೊಟ್ಟಯೋಜನೆಗಳಿಂದ ಜನಸಾಮಾನ್ಯ ಒಂದಷ್ಟುನೆಮ್ಮದಿಯಾಗಿದ್ದರು. ಈಗ ರಾಜ್ಯ ಸರ್ಕಾರ ಬಡವರ ಬಿ.ಪಿ.ಎಲ್. ಕಾರ್ಡ್‌ಗಳನ್ನು ಕಿತ್ತುಕೊಳ್ಳುತ್ತಿದೆ ಎಂದು ಆರೋಪಿಸಿದರು.
ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಿಥುನ್‌ಗೌಡ ಹಾನಗಲ್, ಸೋಮವಾರಪೇಟೆ ಬ್ಲಾಕ್ ಅಧ್ಯಕ್ಷ ಬಿ.ಬಿ.ಸತೀಶ್, ನಗರ ಅಧ್ಯಕ್ಷ ಎಚ್.ಎ.ನಾಗರಾಜ್, ಮಾಜಿ ಅಧ್ಯಕ್ಷ ಕೆ.ಎಂ.ಲೋಕೇಶ್, ವಿರಾಜಪೇಟೆ ಬ್ಲಾಕ್ ಅಧ್ಯಕ್ಷ ನವೀನ್, ಯುವ ಮುಖಂಡ ಸುರ್ಜಿತ್ ಇದ್ದರು. ಇದೇ ಸಂದರ್ಭ ಸೋಮವಾರ ಪೇಟೆ ಹಾಗು ಗೌಡಳ್ಳಿ ವಿಭಾಗದ ವಿವಿಧ ಪಕ್ಷಗಳ 40 ಮಂದಿ ಕಾರ್ಯಕರ್ತರು ಯುವ ಕಾಂಗ್ರೆಸ್ ಸೇರ್ಪಡೆಗೊಂಡರು.