ಸರ್ಕಾರ ಕಬ್ಬಿಗೆ ಪ್ರತಿ ಟನ್ಗೆ ಕೇವಲ 3600 ರೂ. ನಿಗದಿಪಡಿಸಿದ್ದನ್ನು ವಿರೋಧಿಸಿ ಬೆಳಗಾವಿಯಲ್ಲಿ ರೈತರು ಬೃಹತ್ ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿ ಟನ್ಗೆ 5000 ರೂ. ದರ ಹಾಗೂ 1000 ರೂ. ಪ್ರೋತ್ಸಾಹ ಧನ ನೀಡಬೇಕೆಂದು ಆಗ್ರಹಿಸಿ ನಾಳೆ ಬೆಳಗಾವಿ ಚಲೋಗೆ ಕರೆ ನೀಡಲಾಗಿದೆ.
ಬೆಳಗಾವಿ (ನ.4): ಪ್ರತಿ ಟನ್ ಕಬ್ಬಿಗೆ 1 ಸಾವಿರ ರೂಪಾಯಿ ಪ್ರೋತ್ಸಾಹ ಧನ ಮತ್ತು 5000 ರೂ ದರ ಘೋಷಣೆಯಾಗಬೇಕು ಎಂಬ ರೈತರ ಬೇಡಿಕೆಗೆ ಸರ್ಕಾರ ಸ್ಪಂದಿಸದ ಹಿನ್ನೆಲೆ ಬೆಳಗಾವಿಯಲ್ಲಿ ರೈತರ ಹೋರಾಟದ ಕಿಚ್ಚು ಮತ್ತಷ್ಟು ಹೊತ್ತಿಕೊಂಡಿದೆ.
ರೈತರು ಕೇಳಿದ್ದು ಪ್ರತಿ ಟನ್ 5000 ರೂ. ಜೊತೆಗೆ ಸಾವಿರ ಪ್ರೋತ್ಸಾಹ ಧನ ಆದರೆ ಸರ್ಕಾರ ಮಾತ್ರ ಪ್ರತಿ ಟನ್ ಕಬ್ಬಿ 3600 ರೂ. ದರ ನಿಗದಿಪಡಿಸಿ ಘೋಷಣೆ ಮಾಡಿದ ಬೆನ್ನಲ್ಲೇ ರೈತರು ಆಕ್ರೋಶಗೊಂಡಿದ್ದಾರೆ. ಇಂದು ರೈತರ ಪಾದಯಾತ್ರೆ ಬೆಳಗಾವಿ ಜಿಲ್ಲೆಯ ಭೂತರಾಮನಹಟ್ಟಿ ತಲುಪಿದ್ದು, ನಾಳೆ ಬೆಳಗಾವಿಗೆ ನಾಡಿನ ರೈತರು ಕೋಟಿ ಕೋಟಿ ಸಂಖ್ಯೆಯಲ್ಲಿ ಬೆಳಗಾವಿಗೆ ಆಗಮನಿಸಬೇಕು ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಚೂನ್ನಪ್ಪ ಪೂಜಾರಿ ಕರೆ ನೀಡಿದ್ದಾರೆ.
ರೈತ ಬಾಂಧವರೇ ನಾಳೆ ಕೋಟಿ ಕೋಟಿ ಸಂಖ್ಯೆಯಲ್ಲಿ ಬೆಳಗಾವಿ ಬನ್ನಿ
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ರೈತ ಹೋರಾಟಗಾರ ಚೂನ್ನಪ್ಪ ಪೂಜಾರಿ, ಕಬ್ಬಿನ ದರ 3600 ರೂ ಘೋಷಣೆ ಮಾಡಲಾಗಿದೆ. ಇದನ್ನ ಒಪ್ಪಲಾಗದು. ನಾಳೆ ಕೋಟ್ಯಂಟರ ರೈತರು ಬೆಳಗಾವಿ ಬರಬೇಕು. ರೈತರ ಸಮ್ಮುಖದಲ್ಲೆ ಸಚಿವ ಸತೀಶ್ ಜಾರಕಿಹೊಳಿ ದರ ಘೋಷಣೆ ಮಾಡಬೇಕು ಎಂದು ಎಚ್ಚರಿಕೆ ನೀಡಿದರು.
ರೈತರ ಬೇಡಿಕೆ ಈಡೇರಿಸುವವರಿಗೂ ಹೋರಾಟ ನಿಲ್ಲದು
ಮುಖ್ಯಮಂತ್ರಿ ಡಿಕೆ ಶಿವಕುಮಾರ ಅವರೇ ರೈತರ ಪ್ರತಿ ಟನ್ ಕಬ್ಬಿಗೆ 1 ಸಾವಿರ ಪ್ರೋತ್ಸಾಹ ಧನ ನೀಡಬೇಕು. ಪ್ರತಿ ಟನ್ಗೆ 5000 ರೂಪಾಯಿ ದರ ಘೋಷಣೆಯಾಗಲೇಬೇಕು. ಇಲ್ಲವಾದರೆ ರೈತ ಹೋರಾಟ ಇನ್ನಷ್ಟು ತೀವ್ರಗೊಳಿಸುತ್ತೇವೆ. ಹೋರಾಟದಿಂದ ಹಿಂದೆ ಸರಿಯುವ ಮಾತೇ ಇಲ್ಲ. ನಾಳೆ ರಾಜ್ಯದ ಮೂಲೆ ಮೂಲೆಗಳಿಂದ ಪಕ್ಷ, ಜಾತಿ ಮತ್ತು ಭೇದ ಮರೆತು ಬೆಳಗಾವಿ ಚನ್ನಮ್ಮ ವೃತ್ತಕ್ಕೆ ಎಲ್ಲರೂ ಬರಬೇಕು, ರೈತರಿಗಾಗಿರೋ ಅನ್ಯಾಯದ ಬಗ್ಗೆ ಧ್ವನಿ ಎತ್ತಲೇಬೇಕು ಎಂದು ಕರೆ ನೀಡಿದರು. ಪ್ರತಿ ಟನ್ ಕಬ್ಬಿನ ಬೆಲೆಗೆ 5,000 ಬಿಲ್ ಘೋಷಣೆಯಾಗುವವರೆಗೂ ನಮ್ಮ ಹೋರಾಟ ನಿಲ್ಲದು ಎಂದು ಎಚ್ಚರಿಸಿದರು.






