Asianet Suvarna News Asianet Suvarna News

ಇನ್ನೂ ಸಿಗದ ರೈಲ್ವೆ ನಕಲಿ ನೇಮಕಾತಿ ಸುತ್ರದಾರರ ಸುಳಿವು

*  ಮಕ್ಕಳಿಗೆ ಉದ್ಯೋಗ ಕೊಡಿಸಲು ಹಣ ಕಳೆದುಕೊಂಡಿರುವ ಪಾಲಕರು
*  ಆರ್‌ಪಿಎಫ್‌ ಐಜಿಯಿಂದ ತನಿಖೆ ನಡೆದರೂ ಸಿಕ್ಕಿಲ್ಲ ಯಾರೆಂಬುದು
*  ನೌಕರರೇ ಬಾಯಿ ಬಿಡ್ತಿಲ್ಲ 
 

Kingpin of Railway Fake Recruiters Who Are Yet to be Found grg
Author
Bengaluru, First Published Jun 12, 2022, 7:15 AM IST

ಶಿವಾನಂದ ಗೊಂಬಿ

ಹುಬ್ಬಳ್ಳಿ(ಜೂ.12): ರೈಲ್ವೆ ಇಲಾಖೆಯ ವಿವಿಧ ಹುದ್ದೆಗಳ ನಕಲಿ ನೇಮಕಾತಿಗೆ ಸಂಬಂಧಪಟ್ಟಂತೆ ತನಿಖೆ ಶುರುವಾಗಿದ್ದು, ಈ ವರೆಗೂ ಯಾರೊಬ್ಬರ ಸುಳಿವು ದೊರಕಿಲ್ಲ. ಈ ನಡುವೆ ನೈಋುತ್ಯ ರೈಲ್ವೆ ಇಲಾಖೆಯ ಕೆಲ ನೌಕರರೇ ತಮ್ಮ ಮಕ್ಕಳ ನೌಕರಿಗಾಗಿ ದುಡ್ಡು ಕೊಟ್ಟು ಮೋಸ ಹೋಗಿರುವ ಮಾತುಗಳು ಕೇಳಿಬರುತ್ತಿವೆ.

ಕಳೆದ ಎರಡ್ಮೂರು ತಿಂಗಳಿಂದ ನಕಲಿ ನೇಮಕಾತಿ ಕುರಿತಂತೆ ರೈಲ್ವೆ ಇಲಾಖೆಯಲ್ಲಿ ಚರ್ಚೆ ಶುರುವಾಗಿದೆ. ಇಲಾಖೆಯ ನೋಟಿಫಿಕೇಶನ್‌ನಂತೆಯೇ ಇಂತಿಂಥ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ ಎಂದು ನಕಲಿ ನೋಟಿಫಿಕೇಶನ್‌ ಹೊರಡಿಸಲಾಗಿತ್ತು. ಜಿಎಂ (ಜನರಲ್‌ ಮ್ಯಾನೇಜರ್‌) ಕೋಟಾದಡಿ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ ಎಂದು ನೋಟಿಫಿಕೇಶನ್‌ನಲ್ಲಿತ್ತು. ಕೆಲ ದಿನಗಳ ಬಳಿಕ ಇಂತಿಂಥ ಹುದ್ದೆಗಳಿಗೆ ಇಂಥವರನ್ನು ನೇಮಕಾತಿ ಮಾಡಲಾಗಿದೆ ಎಂದು ನೇಮಕಾತಿ ಆದೇಶ ಪತ್ರ ಹೊರಡಿಸಲಾಗಿತ್ತು. ಈ ವಿಷಯ ನೈಋುತ್ಯ ರೈಲ್ವೆ ವಲಯದ ಅಧಿಕಾರಿಗಳಿಗೆ ತಿಳಿದು ಪರಿಶೀಲಿಸಿದ ಬಳಿಕ ಅದು ನಕಲಿ ನೋಟಿಫಿಕೇಶನ್‌ ಹಾಗೂ ನಕಲಿ ನೇಮಕಾತಿ ಆದೇಶ ಪ್ರತಿ ಎಂಬುದು ತಿಳಿದು ಬಂದಿತು. ಅಧಿಕಾರಿಗಳ ಸಹಿ, ಮೊಹರು ಎಲ್ಲವೂ ಅಸಲಿಯಂತೆ ಇತ್ತು. ಇದು ನಕಲಿ ಎಂದು ಅಂದಾಜಿಸಲೂ ಸಾಧ್ಯವಿಲ್ಲದಂತೆ ಮುದ್ರಿಸಲಾಗಿತ್ತು.

ಪಿಎಸ್‌ಐ ಪರೀಕ್ಷೆ ಅಕ್ರಮ: ಮೊದಲ ರ‍್ಯಾಂಕ್‌ ಪಡೆದಿದ್ದ ಜೆಡಿಎಸ್‌ ಮುಖಂಡನ ಪುತ್ರನ ಬಂಧನ

ಈ ನೋಟಿಫಿಕೇಶನ್‌ ಹಾಗೂ ನೇಮಕಾತಿ ಪತ್ರ ರೈಲ್ವೆ ಇಲಾಖೆಯ ಅಧಿಕಾರಿಗಳ ಕೈಗೆ ಅದ್ಹೇಗೋ ಸೇರಿತ್ತು. ಜಿಎಂ ಕೋಟಾದಡಿ ನೇಮಕಾತಿ ರದ್ದುಪಡಿಸಿ ಆಗಲೇ ಎಂಟ್ಹತ್ತು ವರ್ಷಗಳಾಗಿವೆ. ಆದಕಾರಣ ನೋಟಿಫಿಕೇಶನ್‌ ಹೊರಡಿಸಿದವರು ಯಾರು? ಇದರ ಹಿಂದೆ ಇರುವ ಜಾಲ ಯಾವುದು? ಎಂಬುದನ್ನು ಬಯಲಿಗೆಳೆಯಲು ವಲಯದ ಅಧಿಕಾರಿಗಳು, ಆರ್‌ಪಿಎಫ್‌ ಪೊಲೀಸರಿಗೆ ದೂರು ನೀಡಿದ್ದರು. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲೂ ಜಾಗೃತಿ ಮೂಡಿಸಲಾಗಿತ್ತು. ಅದರಂತೆ ಇದೀಗ ಆರ್‌ಪಿಎಫ್‌ನ ಐಜಿ ಅವರಿಂದಲೇ ತನಿಖೆ ಶುರುವಾಗಿದೆ. ಆದರೆ ಈ ಬಗ್ಗೆ ಯಾರೂ ಸಿಕ್ಕಿಲ್ಲ. ಯಾವುದೇ ಸುಳಿವು ಕೂಡ ಈ ವರೆಗೂ ಸಿಕ್ಕಿಲ್ಲ.

ನೌಕರರೇ ಬಾಯಿ ಬಿಡ್ತಿಲ್ಲ:

ಈ ನಡುವೆ ನೈಋುತ್ಯ ರೈಲ್ವೆ ಇಲಾಖೆಯ ಕೆಲ ನೌಕರರೇ ಈ ನೋಟಿಫಿಕೇಶನ್‌ ನಂಬಿ ದುಡ್ಡು ಕೊಟ್ಟು ಕೈ ಸುಟ್ಟುಕೊಂಡಿದ್ದಾರಂತೆ. ಇಲಾಖೆ ವ್ಯಾಪ್ತಿಯ ವಿವಿಧ ವಿಭಾಗಗಳ ನೌಕರರು ದುಡ್ಡು ಕಳೆದುಕೊಂಡಿರುವುದು ಗೊತ್ತಾಗಿದೆ. ಆದರೆ ಯಾವ ನೌಕರರು ಈ ಬಗ್ಗೆ ಬಾಯಿ ಬಿಡುತ್ತಿಲ್ಲ. ಎಲ್ಲಿ ತಮ್ಮ ನೌಕರಿಗೆ ಕುತ್ತು ಬರುತ್ತದೆ ಎಂದುಕೊಂಡು ನೌಕರರಾರ‍ಯರು ಹೇಳಿಕೊಳ್ಳುತ್ತಿಲ್ಲವಂತೆ. ಬರೀ ತಮ್ಮ ತಮ್ಮ ಆಪ್ತ ವಲಯದಲ್ಲಷ್ಟೇ ಚರ್ಚಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸುತ್ತವೆ.

PSI Recruitment Scam: ಪಿಎಸ್‌ಐ ನೇಮಕ ಆದೇಶಕ್ಕೆ 9 ಶಾಸಕರ ಒತ್ತಡ

ಇದೇ ಮೊದಲಲ್ಲ:

ಇನ್ನೂ ಇಂತಹ ನೋಟಿಫಿಕೇಶನ್‌ ಹೊರಡಿಸಿ ದುಡ್ಡು ವಸೂಲಿ ಮಾಡುವುದು ರೈಲ್ವೆ ಇಲಾಖೆಯಲ್ಲಿ ಇದೇ ಮೊದಲಲ್ಲ. ಹಿಂದೆ ಮೂರ್ನಾಲ್ಕು ವರ್ಷದ ಹಿಂದೆಯೂ ಇದೇ ರೀತಿ ನಕಲಿ ನೇಮಕಾತಿ ನೋಟಿಫಿಕೇಶನ್‌ ಹೊರಬಂದಾಗ ಆಗಿನ ರೈಲ್ವೆ ಸಚಿವರಾಗಿದ್ದ ಸುರೇಶ ಅಂಗಡಿ ಕೂಡ ಬಹಿರಂಗ ಭಾಷಣದಲ್ಲೇ ಈ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದ್ದರಂತೆ. ಈ ರೀತಿ ನಕಲಿ ನೋಟಿಫಿಕೇಶನ್‌ ಹೊರಡಿಸಿ ನಿರುದ್ಯೋಗಿಗಳಿಂದ ಹಣ ವಸೂಲಿ ಮಾಡಿ ಪರಾರಿಯಾಗುವ ದೊಡ್ಡ ಜಾಲವೇ ಇರುವ ಸಾಧ್ಯತೆ ಇದೆ ಎಂಬ ಶಂಕೆ ರೈಲ್ವೆ ಇಲಾಖೆಯದ್ದು. ಇನ್ನಾದರೂ ಬಗ್ಗೆ ಗಂಭೀರವಾಗಿ ತನಿಖೆ ನಡೆಸಿ ಜಾಲವನ್ನು ಬಯಲಿಳೆಯಬೇಕು ಎಂಬುದು ಸಾರ್ವಜನಿಕರ ಆಗ್ರಹ.

ರೈಲ್ವೆ ಇಲಾಖೆಯಲ್ಲಿ ನೇಮಕಾತಿ ವಿಷಯವಾಗಿ ಕೆಲವರು ನಕಲಿ ನೋಟಿಫಿಕೇಶನ್‌, ಅಭ್ಯರ್ಥಿಗಳ ಪಟ್ಟಿಬಿಡುಗಡೆ ಮಾಡಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಆರ್‌ಪಿಎಫ್‌ ಐಜಿ ಅವರಿಗೆ ದೂರು ನೀಡಲಾಗಿದೆ. ತನಿಖೆ ನಡೆಯುತ್ತಿದೆ. ಆದರೆ ಈ ವರೆಗೂ ಯಾರೂ ಸಿಕ್ಕಿಲ್ಲ. ಮೂರ್ನಾಲ್ಕು ವರ್ಷದ ಹಿಂದೆಯೂ ಇದೇ ರೀತಿ ನಕಲಿ ನೇಮಕಾತಿಯ ನೋಟಿಫಿಕೇಶನ್‌ ಹೊರಡಿಸಿದ್ದು ಬೆಳಕಿಗೆ ಬಂದಿತ್ತು. ಇದು ದೊಡ್ಡ ರಾಕೆಟ್‌ ಇರುವ ಸಾಧ್ಯತೆ ಇದೆ. ಅಭ್ಯರ್ಥಿಗಳು ಮೋಸಕ್ಕೊಳಗಾಗಬಾರದು ಅಂತ ನೈಋುತ್ಯ ರೈಲ್ವೆ ವಲಯದ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಅನೀಶ ಹೆಗಡೆ ತಿಳಿಸಿದ್ದಾರೆ. 

Follow Us:
Download App:
  • android
  • ios