*   ಒಎಂಆರ್‌ ತಿದ್ದಿದ್ದ ಆರೋಪಿ*  ಮಾಗಡಿ ಜೆಡಿಎಸ್‌ ಮುಖಂಡನ ಪುತ್ರ ಕುಶಾಲ್‌ ಬಂಧನ*  ಹಿರಿಯ ಅಧಿಕಾರಿಗೆ 80 ಲಕ್ಷ ರು. ಸಂದಾಯ 

ಬೆಂಗಳೂರು(ಜೂ.10): ಪೊಲೀಸ್‌ ಸಬ್‌ ಇನ್ಸ್‌ಪೆಕ್ಟರ್‌ ನೇಮಕಾತಿ ಪರೀಕ್ಷೆ ಅಕ್ರಮ ಸಂಬಂಧ ಮೊದಲ ರ‍್ಯಾಂಕ್‌ ಪಡೆದಿದ್ದ ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ಜುಟ್ಟನಹಳ್ಳಿಯ ಜೆಡಿಎಸ್‌ ಮುಖಂಡರೊಬ್ಬರ ಪುತ್ರ ಜೆ.ಕುಶಾಲ್‌ ಕುಮಾರ್‌ ಎಂಬಾತನನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ.

ಪಿಎಸ್‌ಐ ನೇಮಕಾತಿ ಪರೀಕ್ಷೆಯಲ್ಲಿ ಬೆಂಗಳೂರಿನ ಹಲಸೂರು ಸಮೀಪದ ಸೇಂಟ್‌ ಆನ್ಸ್‌ ಕಾಲೇಜಿನ ಕೇಂದ್ರದಲ್ಲಿ ಕುಶಾಲ್‌ ಪರೀಕ್ಷೆ ಬರೆದಿದ್ದು, ಒಎಂಆರ್‌ ಶೀಟ್‌ ತಿದ್ದುಪಡಿ ಮಾಡಿ ಪರೀಕ್ಷೆಯಲ್ಲಿ ಮೊದಲ ರ‍್ಯಾಂಕ್‌ ಪಡೆದ ಆರೋಪವಿದೆ.
ಈ ಸಂಬಂಧ ಹಲಸೂರು ಠಾಣೆಯಲ್ಲಿ ಎಫ್‌ಐಆರ್‌ ದಾಖಲಿಸಿ ಆತನನ್ನು ಮಂಗಳವಾರ ಸಿಐಡಿ ಬಂಧಿಸಿದೆ. ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಿದ ಸಿಐಡಿ ಪೊಲೀಸರು, ಹೆಚ್ಚಿನ ತನಿಖೆ ಸಲುವಾಗಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.

PSI Recruitment Scam; ವಿವಾದಕ್ಕೆ ಕಾರಣವಾಗಿದ್ದ ಅಭ್ಯರ್ಥಿ ದರ್ಶನ್ ಗೌಡ ಸೇರಿ ಮೂವರು ಅರೆಸ್ಟ್

ಪಿಎಸ್‌ಐ ನೇಮಕಾತಿ ಅಕ್ರಮ ಸಂಬಂಧ ಎಲ್ಲ ಅಭ್ಯರ್ಥಿಗಳ ಒಎಂಆರ್‌ ಶೀಟ್‌ ಹಾಗೂ ಕಾರ್ಬನ್‌ ಒಎಂಆರ್‌ ಶೀಟ್‌ಗಳನ್ನು ವಶಕ್ಕೆ ಪಡೆದು ಎಫ್‌ಎಸ್‌ಎಲ್‌ಗೆ ಕಳುಹಿಸಲಾಗಿತ್ತು. ಎಫ್‌ಎಸ್‌ಎಲ್‌ ಪರಿಶೀಲನೆ ವೇಳೆ ಕುಶಾಲ್‌ ಒಂಎಂಆರ್‌ ಶೀಟ್‌ ಕೂಡ ತಿದ್ದುಪಡಿಯಾಗಿರುವುದು ದೃಢಪಟ್ಟಿದೆ. ಈ ಮಾಹಿತಿ ಆಧರಿಸಿ ಮಾಗಡಿ ತಾಲೂಕಿನ ಜುಟ್ಟನಹಳ್ಳಿಯಲ್ಲಿರುವ ಆತನ ಮನೆಯಿಂದಲೇ ಆರೋಪಿಯನ್ನು ವಶಕ್ಕೆ ಪಡೆದು ಕರೆತರಲಾಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ.

2ನೇ ಪತ್ರಿಕೆಯಲ್ಲಿ 137 ಅಂಕ:

ಮಾಗಡಿ ತಾಲೂಕಿನ ಪ್ರಭಾವಿ ಜೆಡಿಎಸ್‌ ಮುಖಂಡ ಹಾಗೂ ಪ್ರಗತಿ ಪರ ರೈತ ಜುಟ್ಟನಹಳ್ಳಿ ಜಯರಾಮ್‌ ರಿಯಲ್‌ ಎಸ್ಟೇಟ್‌ ವ್ಯವಹಾರದಲ್ಲಿ ಸಕ್ರಿಯವಾಗಿದ್ದಾರೆ. ಅವರು ತಾ.ಪಂ. ಮಾಜಿ ಸದಸ್ಯರು ಸಹ ಆಗಿದ್ದಾರೆ. ಜಯರಾಮ್‌ ಅವರಿಗೆ ಇಬ್ಬರು ಮಕ್ಕಳಿದ್ದು, ಕುಶಾಲ್‌ ಹಿರಿಯ ಪುತ್ರನಾಗಿದ್ದಾನೆ. ಪಿಎಸ್‌ಐ ಆಗುವ ಕನಸು ಕಂಡಿದ್ದ ಕುಶಾಲ್‌, ಬೆಂಗಳೂರಿನ ವಿಜಯನಗರದ ಕೋಚಿಂಗ್‌ ಸೆಂಟರ್‌ನಲ್ಲಿ ತರಬೇತಿ ಸಹ ಪಡೆದಿದ್ದ. ಇತ್ತ ಮಗನ ಕನಸು ಈಡೇರಿಸಲು ಮುಂದಾದ ಜಯರಾಮ್‌, ತಮ್ಮ ಪ್ರಭಾವ ಬಳಸಿ ಮಗನಿಗೆ ಪಿಎಸ್‌ಐ ಹುದ್ದೆ ಕೊಡಿಸಲು ಯತ್ನಿಸಿ ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಮೂಲಗಳು ಹೇಳಿವೆ.

PSI Recruitment Scam: ಪಿಎಸ್‌ಐ ನೇಮಕ ಆದೇಶಕ್ಕೆ 9 ಶಾಸಕರ ಒತ್ತಡ

ಬೆಂಗಳೂರಿನ ಹಲಸೂರು ಸಮೀಪದ ಸೇಂಟ್‌ ಆನ್ಸ್‌ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆಗೆ ಹಾಜರಾಗಿದ್ದ ಕುಶಾಲ್‌, ರಾಜ್ಯಕ್ಕೆ ಮೊದಲಿಗನಾಗಿ ಉತ್ತೀರ್ಣನಾಗಿದ್ದ. ಮೊದಲ ಪತ್ರಿಕೆಯಲ್ಲಿ 30.5 ಅಂಕ ಹಾಗೂ ಎರಡನೇ ಪತ್ರಿಕೆಯಲ್ಲಿ 137.25 ಅಂಕಗಳು ಸೇರಿ ಆತ ಒಟ್ಟು 167.75 ಅಂಕ ಪಡೆದಿದ್ದ. ಈಗ ಆತನ ಅಸಲಿಯತ್ತು ಬಯಲಾಗಿದೆ. ನೇಮಕಾತಿ ವಿಭಾಗದ ಸಿಬ್ಬಂದಿ ಸಹಕಾರದಲ್ಲಿ ಒಎಂಆರ್‌ ಶೀಟ್‌ ತಿದ್ದಿ ಕುಶಾಲ್‌ ಮೊದಲ ರಾರ‍ಯಂಕ್‌ ಗಳಿಸಿದ್ದ ಸಂಗತಿ ತನಿಖೆ ವೇಳೆ ಬೆಳಕಿಗೆ ಬಂದಿತ್ತು. ಪಿಎಸ್‌ಐ ನೇಮಕಾತಿ ಅಕ್ರಮ ಸಂಬಂಧ ಎಲ್ಲ ಅಭ್ಯರ್ಥಿಗಳ ಒಎಂಆರ್‌ ಶೀಟ್‌ ಹಾಗೂ ಕಾರ್ಬನ್‌ ಒಎಂಆರ್‌ ಶೀಟ್‌ಗಳನ್ನು ವಶಕ್ಕೆ ಪಡೆದು ಎಫ್‌ಎಸ್‌ಎಲ್‌ಗೆ ಕಳುಹಿಸಲಾಗಿತ್ತು. ಎಫ್‌ಎಸ್‌ಎಲ್‌ ಪರಿಶೀಲನೆ ವೇಳೆ ಕುಶಾಲ್‌ ಒಂಎಂಆರ್‌ ಶೀಟ್‌ ಸಹ ತಿದ್ದುಪಡಿಯಾಗಿರುವುದು ದೃಢಪಟ್ಟಿತು ಎಂದು ಅಧಿಕಾರಿಗಳು ಹೇಳಿದ್ದಾರೆ.

ಹಿರಿಯ ಅಧಿಕಾರಿಗೆ 80 ಲಕ್ಷ ರು. ಸಂದಾಯ

ನೇಮಕಾತಿ ವಿಭಾಗದ ಹಿರಿಯ ಅಧಿಕಾರಿಯೊಬ್ಬರ ಮೂಲಕ ಪಿಎಸ್‌ಐ ಹುದ್ದೆಯನ್ನು ಕುಶಾಲ್‌ ಡೀಲ್‌ ಮಾಡಿದ್ದ ಎನ್ನಲಾಗಿದೆ. ಇದಕ್ಕಾಗಿ ಆ ಅಧಿಕಾರಿಗೆ ಸುಮಾರು 80 ಲಕ್ಷ ರು.ಗಳನ್ನು ನಗದು ರೂಪದಲ್ಲಿ ಸಂದಾಯ ಮಾಡಿದ್ದ. ರಿಯಲ್‌ ಎಸ್ಟೇಟ್‌ನಲ್ಲಿ ಸಂಪಾದಿಸಿದ ಹಣವನ್ನು ಮಗನ ಪಿಎಸ್‌ಐ ಕನಸಿಗೆ ಜೆಡಿಎಸ್‌ ಮುಖಂಡ ಜಯರಾಮ್‌ ವ್ಯಯಿಸಿದ್ದರು ಎನ್ನಲಾಗಿದೆ.