ಕೋಲಾರ [ಸೆ.01]:  ಜಿಲ್ಲೆಯಲ್ಲಿ ಕಾಂಗ್ರೆಸ್ ಒಳಜಗಳ ತಾರಕಕ್ಕೇರಿದೆ, ಮಾಡು ಇಲ್ಲ ಮಡಿ ಎನ್ನುವ ಸ್ಥಿತಿಗೆ ಬಂದು ನಿಂತಿದೆ. ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ಮತ್ತು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಗುಂಪುಗಳ ನಡುವೆ ನಡೆಯುತ್ತಿರುವ ಈ ಕಾಳಗದಲ್ಲಿ ಯಾರು ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳುತ್ತಾರೋ ಯಾರು ಕಳೆದುಕೊಳ್ಳುತ್ತಾರೋ ಎನ್ನುವ ಸ್ಥಿತಿ ಇದೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಲು ಮಾಜಿ ಸ್ಪೀಕರ್ ರಮೇಶ್ ಕುಮಾರ್, ಶಾಸಕರಾದ ವಿ.ಮುನಿಯಪ್ಪ, ಎಸ್.ಎನ್ .ನಾರಾಯಣಸ್ವಾಮಿ, ಮಾಜಿ ಶಾಸಕರಾದ ನಸೀರ್ ಅಹಮದ್ ಹಾಗು ಕೊತ್ತೂರು ಮಂಜುನಾಥ್ ಕಾರಣ ಎಂದು ಮಾಜಿ ಸಂಸದ ಕೆ.ಎಚ್. ಮುನಿಯಪ್ಪ ಅವರು ಸೋನಿಯಾ ಗಾಂಧಿ ಅವರಿಗೆ ದೂರು ಸಲ್ಲಿಸಿ ಇವರನ್ನು ಪಕ್ಷದಿಂದ ಉಚ್ಚಾಟಿಸಬೇಕೆಂದು ಒತ್ತಾಯಿಸಿದ್ದಾರೆ.

ಸತ್ಯಶೋಧನಾ ಸಮಿತಿಗೆ ದೂರು: ಕಳೆದ ಎರಡು ಮೂರು ದಿವಸಗಳ ಹಿಂದೆ ಇದೇ ವಿಚಾರದಲ್ಲಿ ಕಾಂಗ್ರೆಸ್‌ನ ಸತ್ಯ ಸಂಶೋಧನಾ ಸಮಿತಿಯೂ ಮಾಲೂರಿಗೆ ಬಂದು ಚುನಾವಣೆಯಲ್ಲಿ ಮುನಿಯಪ್ಪ ಸೋಲಿಗೆ ಕಾರಣ ಏನೆಂಬುದಕ್ಕೆ ಕಾಂಗ್ರೆಸ್ ಕಾರ್ಯಕರ್ತರು ನೀಡಿದ ದೂರುಗಳನ್ನು ದಾಖಲಿಸಿಕೊಂಡಿದ್ದಾರೆ. ಕಾಂಗ್ರೆಸ್ ಸೋಲಿಗೆ ಪಕ್ಷದಲ್ಲಿರುವ ಆಂತರಿಕ ಬಿಕ್ಕಟ್ಟು ಮತ್ತು ಮುಖಂಡರ ಕಚ್ಚಾಟವೇ ಕಾರಣ ಎಂಬುದು ವೀಕ್ಷಕರಿಗೂ ಮನದಟ್ಟಾದಂತಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿ

ಈ ಕಚ್ಚಾಟದಲ್ಲಿ ಮುನಿಯಪ್ಪ ತಮ್ಮ ವಿರೋಧಿಗಳನ್ನು ಪಕ್ಷದಿಂದ ಹೊರ ಹಾಕುವ ಮಾತುಗಳನ್ನು ಆಡುತ್ತಿದ್ದಾರೆ. ಆದರೆ ರಮೇಶ್ ಕುಮಾರ್ ಮುನಿಯಪ್ಪರ ಆರೋಪಗಳಿಗೆ ಉತ್ತರ ನೀಡದೆ ಯಾರು ಏನಾದರೂ ಮಾತಾಡಿಕೊಳ್ಳಲಿ ಎನ್ನುತ್ತಾ ಒಳಗೊಳಗೇ ತಮ್ಮ ರಾಜಕೀಯ ತಂತ್ರಗಳನ್ನು ಹೆಣೆಯುತ್ತಿದ್ದಾರೆ. ಲೋಕಸಭಾ ಚುನಾವಣೆ ಸೋಲುಣಿಸಿ ರಾಜಕೀಯವಾಗಿ ಮುನಿಯಪ್ಪಗೆ ಅರ್ಧ ಜೀವ ತೆಗೆದಿರುವ ಈ ಗುಂಪು ಉಳಿದ ಜೀವ ತೆಗೆಯಲು ಸಮಯ ಎದುರು ನೋಡುತ್ತಿದೆ.