ಜೋಯಿಡಾ(ಏ.20): ಕೊರೋನಾ ಭೀತಿಯಲ್ಲಿದ್ದ ಜೋಯಿಡಾ ತಾಲೂಕಿನ ಜನತೆಗೆ ಈಗ ಮಂಗನಕಾಯಿಲೆ ವಕ್ಕರಿಸಿದೆ. ಚಾಪೋಲಿ ಗ್ರಾಮದ ಮೂವರಿಗೆ ಮಂಗನ ಕಾಯಿಲೆ ರೋಗ ಪ್ರಾಥಮಿಕ ಹಂತದ ಚಿಕಿತ್ಸೆಯಲ್ಲಿ ಗುಣಪಟ್ಟಿದ್ದು, ಇನ್ನೂ 5 ಜನ ಜ್ವರಪೀಡಿತರ ರಕ್ತದ ಮಾದರಿಯನ್ನು ಕೆಎಫ್‌ಡಿ ಲ್ಯಾಬ್‌ ಶಿವಮೊಗ್ಗಕ್ಕೆ ಕಳಿಸಿರುವುದಾಗಿ ಆರೋಗ್ಯ ಇಲಾಖೆಯಿಂದ ಮಾಹಿತಿ ಲಭ್ಯವಾಗಿದೆ.

ಕಳೆದ 2003-04ರ ಅವಧಿಯಲ್ಲಿ ಜೋಯಿಡಾ ತಾಲೂಕಿನಲ್ಲಿ ಒಮ್ಮೆ ಭೀಕರವಾಗಿ ಹಬ್ಬಿದ ಮಂಗನಕಾಯಿಲೆ ಅನೇಕರ ಸಾವು ನೋವಿಗೆ ಕಾರಣವಾಗಿತ್ತು. ಈಗ ಮತ್ತೆ ಈ ಮಾರಿ ಕಾಣಿಸಿಕೊಂಡಿದ್ದು, ಜನರಲ್ಲಿ ಭೀತಿಯ ವಾತಾವರಣ ಸೃಷ್ಟಿಸಿದೆ. ಒಂದೆಡೆ ಕೊರೋನಾದಿಂದ ಭಯಭೀತರಾಗಿ ಮನೆಯಿಂದ ಹೊರಬಾರದ ಕಾಡಂಚಿನ ಹಳ್ಳಿಗರಿಗೆ ಈಗ ಅವರದೆ ಮನೆ ಎದುರಿನ ಕಾಡಿನಲ್ಲಿ ಕೆಎಫ್‌ಡಿ ರಾಕ್ಷಸನ ಎಂಟ್ರಿಯಾಗಿದ್ದು ಕಂಗೆಡುವಂತೆ ಮಾಡಿದೆ.

3 ಜಿಲ್ಲೆಗಳಲ್ಲಿ ಮಂಗನ ಕಾಯಿಲೆ ತೀವ್ರ: ಚಚ್ಚುಮದ್ದು ಪಡೆದವರಿಗೂ ರೋಗ!

ಜೋಯಿಡಾ ತಾಲೂಕಿನ ನಾಗೋಡಾ, ಜೋಯಿಡಾ, ಕಾತೇಲಿ, ಗಾಂಗೋಡಾ ಗ್ರಾಪಂ ವ್ಯಾಪ್ತಿಯ ಕಾಡಿನಲ್ಲಿ ಕಳೆದ ಒಂದು ತಿಂಗಳಿಂದ ಮಂಗಗಳ ಸಾವು ಕಾಣಿಸಿಕೊಳ್ಳುತ್ತಿತ್ತು. ಆರೋಗ್ಯ ಇಲಾಖೆ ಈ ಸತ್ತ ಮಂಗಗಳ ಅಂಗಾಂಶ ಪರೀಕ್ಷೆಗೆ ಕಳಿಸಿತ್ತಾದರೂ, ವರದಿ ಬಂದಿರಲಿಲ್ಲ ಎಂದು ಕಾಯುತ್ತಲೇ ಇರುವಾಗ ಚಾಪೋಲಿ, ಬಾಪೇಲಿ ಹಾಗೂ ಕರಂಬಾಳಿ ಭಾಗದಲ್ಲಿ ತಲಾ ಒಂದರಂತೆ ಮೂರು ಜನಕ್ಕೆ ತೀವ್ರತರ ಜ್ವರ ಬಂದಿರುವ ಹಿನ್ನೆಲೆಯಲ್ಲಿ ಕೊರೋನಾ ಟೆಸ್ಟ್‌ಗೆ ಜಿಲ್ಲಾಸ್ಪತ್ರೆ ಕಾರವಾರಕ್ಕೆ ಕಳಿಸಲಾಗಿತ್ತು. ಅಲ್ಲಿ ಅವರ ರಕ್ತ ಮಾದರಿಯನ್ನು ಪರೀಕ್ಷಿಸಲಾಗಿ ಮಂಗನಕಾಯಿಲೆ ಎಂದು ಪ್ರಾಥಮಿಕ ಹಂತದಲ್ಲೇ ದೃಢಪಟ್ಟಿದೆ. ಒಂದು ವಾರ ಕಾಲ ಚಿಕಿತ್ಸೆ ನೀಡಿದ್ದು, ರೋಗಿಗಳು ಕಳೆದ ಶನಿವಾರ ಇಬ್ಬರು ಗುಣಮುಖರಾಗಿದ್ದರೆ, ಭಾನುವಾರ ಓರ್ವ ಗುಣಮುಖನಾಗಿ ಜೋಯಿಡಾಕ್ಕೆ ಬರುತ್ತಿದ್ದಾಗಿ ತಿಳಿಸಿರುತ್ತಾರೆ.

ಐದು ಜನರ ರಕ್ತ ಮಾದರಿ ಪರೀಕ್ಷೆ:

ನಾಗೋಡಾ ಗ್ರಾಪಂ ವ್ಯಾಪ್ತಿಯ ಚಾಪೋಲಿ, ಬಾಪೇಲಿ ಭಾಗದ ಇನ್ನೂ 5 ಜನರು ಜ್ವರದಿಂದ ಬಳಲುತ್ತಿದ್ದು, ಅವರ ರಕ್ತದ ಮಾದರಿಯನ್ನು ಕೂಡಾ ಪರೀಕ್ಷೆಗೆ ಕಳಿಸಿದ್ದಾಗಿ ತಾಲೂಕು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ. ಈ ಭಾಗದಲ್ಲಿ ಹಲವು ಮಂಗಗಳು ಮೃತಪಟ್ಟಿದ್ದು, ಇದೇ ಗ್ರಾಮದ ಮೂವರಿಗೆ ಮಂಗನಕಾಯಿಲೆ ದೃಢ ಪಟ್ಟಿದ್ದರಿಂದ ಈ ಭಾಗದಲ್ಲಿ ಜ್ವರ ಪೀಡಿತರ ರಕ್ತ ಮಾದರಿ ಪರೀಕ್ಷೆ ನಡೆಸುತ್ತಿದ್ದಾಗಿ ತಿಳಿದು ಬಂದಿದೆ. ಒಂದೆಡೆ ಕೊರೋನಾ ಕಂಟಕ ಇನ್ನೊಂದೆಡೆ ಮಂಗನಕಾಯಿಲೆ ಗ್ರಾಮೀಣ ಜನರ ಬದುಕನ್ನು ಹಿಂಡುತ್ತಿದೆ.

ಇಂದಿನಿಂದ ವೆಕ್ಷಿನೇಶನ್‌:

ಸೋಮವಾರದಿಂದ ಮಂಗನಕಾಯಿಲೆ ಹರಡಿರುವ ಹಾಗೂ ಹರಡಬಹುದಾದ ಪ್ರದೇಶಗಳಾದ ನಾಗೋಡಾ, ಬಾಪೇಲಿ, ಚಾಪೋಲಿ, ಹುಡಸಾ, ಗಾಂಗೋಡಾ, ಕರಂಬಾಳಿ ಹಾಗೂ ಕಾತೇಲಿ ಪಂಚಾಯಿತಿ ವ್ಯಾಪ್ತಿಯ ಪ್ರಕರಣ ಕಂಡುಬಂದ ಪ್ರದೇಶದ ವ್ಯಾಪ್ತಿಯಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿ ವೆಕ್ಸಿನೇಶನ್‌ ಮಾಡಲಿದ್ದಾಗಿ ತಿಳಿಸಿರುತ್ತಾರೆ. ಈ ಭಾಗದಲ್ಲಿ ಕಾಯಿಲೆ ಬಗ್ಗೆ ಮಾಹಿತಿ ನೀಡಿ, ಉಣ್ಣೆಯಿಂದ ಹರಡುವ ಈ ರೋಗಬಾಧೆಗೆ ಮೈಗೆ ಹಚ್ಚಿಕೊಳ್ಳಲು ಎಣ್ಣೆ (ವೆಕ್ಷಿನ್‌)ಯನ್ನು ನೀಡಲಿದ್ದಾಗಿ ಆರೋಗ್ಯ ಅಧಿಕಾರಿಗಳು ತಿಳಿಸಿರುತ್ತಾರೆ. ಮಂಗ ಸತ್ತಿರುವ ಪ್ರದೇಶಕ್ಕೆ ಉಣ್ಣೆಗಳು ಮನುಷ್ಯನಿಗೆ ತಗುಲದಂತೆ ಔಷಧಿ ಸಿಂಪಡಣೆ ಮಾಡುತ್ತಿದ್ದಾಗಿ ವೈದ್ಯಾಧಿಕಾರಿಗಳು ತಿಳಿಸಿರುತ್ತಾರೆ.

ಟಿಎಚ್‌ಒ ಒಬ್ಬರಿಂದ ಅಸಾಧ್ಯ:

ಜೋಯಿಡಾ ತಾಲೂಕು ವೈದ್ಯಾಧಿಕಾರಿಗಳಾದ ಸುಜಾತಾ ಉಕ್ಕಲಿಯವರು ರಾಮನಗರ ಆರೋಗ್ಯ ಕೇಂದ್ರದಲ್ಲಿ ವೈದ್ಯಾಧಿಕಾರಿಗಳಾಗಿದ್ದು, ಇತ್ತ ಟಿಎಚ್‌ಒ ಜವಾಬ್ದಾರಿಯನ್ನು ಹೊತ್ತು ನಡೆಸಬೇಕಾದ ಅನಿವಾರ್ಯತೆ ಇದೆ. ಒಬ್ಬರೇ ಇಂತಹ ತುರ್ತು ಪ್ರಕರಣದಲ್ಲಿ ತಾಲೂಕಿನ ಕ್ಯಾಸ್ಟಲ್‌ರಾಕ್‌ ತುದಿಯಿಂದ ಅಣಶಿ ವರೆಗಿನ ನೂರಾರು ಕಿಮೀ ದೂರದ ಪ್ರದೇಶಕ್ಕೆ ಧಾವಿಸಿ ಬಂದು ತ್ವರಿತ ಕ್ರಮಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ಜೋಯಿಡಾ ತಾಲೂಕು ಕೇಂದ್ರದ ಸುತ್ತಲೂ ಇಂತಹ ತುರ್ತು ಪ್ರಕರಣಗಳಲ್ಲಿ ತಾಲೂಕು ಆಡಳಿತಾಧಿಕಾರಿಗಳಾಗಲಿ ಅಥವಾ ಇನ್ನಾರಾದರೂ ವೈದ್ಯಾಧಿಕಾರಿಗಳು ಮುತುವರ್ಜಿ ವಹಿಸಿ ತುರ್ತು ಸೇವೆ ಮುಂದಾದರೆ ತಾಲೂಕಿನಲ್ಲಿ ಮಂಗನಕಾಯಿಲೆಯಂತಹ ಮಹಾಮಾರಿಯನ್ನು ತಡೆಗಟ್ಟಲು ಸಾಧ್ಯವಿದೆ.

ಚಾಪೋಲಿ ಭಾಗದಲ್ಲಿ ಮಂಗನ ಕಾಯಿಲೆ ತುತ್ತಾದವರು ಗುಣಮುಖರಾಗಿದ್ದು, ಮತ್ತೆ ಈ ಭಾಗದಲ್ಲಿ ಮರುಕಳಿಸದಂತೆ ಮುನ್ನೆಚ್ಚರಿಕೆ ಕ್ರಮಕೈಗೊಳ್ಳುತ್ತಿದ್ದೇವೆ. ಸೋಮವಾರದಿಂದ ಚಾಪೋಲಿ ಸೇರಿದಂತೆ ಮಂಗಗಳು ಸತ್ತಿರುವ ಇತರ ಪ್ರದೇಶಗಳಲ್ಲಿಯೂ ವೆಕ್ಷಿನೇಶನ್‌ ಮಾಡಲಾಗುತ್ತಿದೆ. ಈ ಬಗ್ಗೆ ಜನರಿಗೆ ಭಯ, ಭೀತಿ ಬೇಡ ಎಂದು ಜೋಯಿಡಾ ಟಿಎಚ್‌ಒ ಸುಜಾತಾ ಉಕ್ಕಲಿ ಅವರು ಹೇಳಿದ್ದಾರೆ.