ಕೊಪ್ಪಳ(ಮೇ.27): ಜಿಲ್ಲೆಯ ಕುಷ್ಟಗಿ ತಾಲೂಕಿನ ಕೇಸೂರ ಗ್ರಾಮದ ರಾಯಚೂರು ಜಿಲ್ಲೆಯ ಮಸ್ಕಿ ನಗರದ ಬ್ಯಾಂಕ್‌ ಉದ್ಯೋಗಿ ಪಿ-2254 ಕೊರೋನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಕೇಸರೂ ಗ್ರಾಮವನ್ನು ಸೀಲ್‌ಡೌನ್‌, ದೋಟಿಹಾಳ ಗ್ರಾಮವನ್ನು ಬಫರ್‌ಜೋನ್‌ನಾಗಿ ಮಾಡಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಕುಷ್ಟಗಿ ತಾಲೂಕು ಆಸ್ಪತ್ರೆಗೆ ಚಿಕಿತ್ಸೆಗೆ ತೆರಳಿದ ವೇಳೆ ಗಂಟಲು ದ್ರವ ಸಂಗ್ರಹಿಸಿ ಗ್ರಾಮಕ್ಕೆ ಮರಳಿ ಕಳಿಸಲಾಗಿತ್ತು. ಸೋಮವಾರ ದೋಟಿಹಾಳ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದರು. ಗಂಟಲು ದ್ರವದ ವರದಿಯೂ ಪಾಸಿಟಿವ್‌ ಬಂದ ಹಿನ್ನೆಲೆಯಲ್ಲಿ ಸೋಮವಾರ ರಾತ್ರಿ 11 ಗಂಟೆ ವೇಳೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಗ್ರಾಮಕ್ಕೆ ಆಗಮಿಸಿ ಜಿಲ್ಲಾ ಕೋವಿಡ್‌-19 ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು.

ಬ್ಯಾಂಕ್‌ ಉದ್ಯೋಗಿಗೆ ತಗುಲಿದ ಕೊರೋನಾ: ಆತಂಕದಲ್ಲಿ ಕೊಪ್ಪಳದ ಜನತೆ

ಭಾನುವಾರ ತಾಲೂಕು ಆಸ್ಪತ್ರೆಯಲ್ಲಿ ಗಂಟಲು ದ್ರವ ಪಡೆದ ಮೇಲೆ ಅವರನ್ನು ಮನೆಗೆ ಕಳಿಸದೆ ಕ್ವಾರಂಟೈನ್‌ನಲ್ಲಿ ಇಡಬೇಕಿತ್ತು. ಆದರೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಮನೆಗೆ ಕಳಿಸಿದ ಪರಿಣಾಮ ಸೋಂಕಿತ ವ್ಯಕ್ತಿ ಗ್ರಾಮದ ವಿವಿಧೆಡೆ ಸಂಚರಿಸಿದ್ದಾರೆ. ಇದರಿಂದ ಭಯಭೀತರಾಗಿದ್ದಾರೆಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರೊಂದಿಗೆ ಇವರಿಗೆ ಚಿಕಿತ್ಸೆ ನೀಡಿದ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಗೂ ಆತಂಕ ಶುರುವಾಗಿದೆ. ಹೀಗಾಗಲೇ ಸೋಂಕಿತನ ಕುಟುಂಬದವರ ಗಂಟಲು ದ್ರವ ಸಂಗ್ರಹಿಸಿ ಪರೀಕ್ಷೆಗೆ ಕಳಿಸಲಾಗಿದ್ದು ಅವರೆಲ್ಲರನ್ನೂ ಕ್ವಾರಂಟೈನ್‌ನಲ್ಲಿ ಇಡಲಾಗಿದೆ. ಇತ್ತ ದೋಟಿಹಾಳ ಪ್ರಾಥಮಿಕ ಆರೋಗ್ಯ ಕೇಂದ್ರದ ಐದು ಸಿಬ್ಬಂದಿ ಹಾಗೂ ಕುಷ್ಟಗಿ ತಾಲೂಕು ಆಸ್ಪತ್ರೆಯ ಮೂರು ಸಿಬ್ಬಂದಿಯನ್ನು ಹೋಂ ಕ್ವಾರಂಟೈನ್‌ ಮಾಡಲಾಗಿದೆ. ಗ್ರಾಮದಲ್ಲಿ ಎರಡು ದಿನಗಳ ಕಾಲ ಸ್ಯಾನಿಟೈಸರ್‌ ಸಿಂಪಡಣೆ ಮಾಡಲಾಗುವುದು ಎಂದು ತಾಲೂಕು ಆರೋಗ್ಯಾಧಿಕಾರಿ ಆನಂದ ಗೋಟೂರ ಹೇಳಿದರು.

ಕೇಸೂರ ಗ್ರಾಮಕ್ಕೆ ತಹಸೀಲ್ದಾರ್‌ ಎಂ. ಸಿದ್ದೇಶ ಹಾಗೂ ಪಿಎಸ್‌ಐ ಚಿತ್ತರಂಜನ್‌ ಡಿ., ಸೇರಿದಂತೆ ಕಂದಾಯ ಹಾಗೂ ಆರೋಗ್ಯ, ಗ್ರಾಮ ಪಂಚಾಯಿತಿ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಗ್ರಾಮವನ್ನು ಸೀಲ್‌ಡೌನ್‌ ಮಾಡಿದ್ದಾರೆ. ಸೋಂಕಿತನ ಪ್ರಾಥಮಿಕ ಇರುವ 25ಕ್ಕಿಂತ ಹೆಚ್ಚು ಜನರ ಮಾಹಿತಿ ಪಡೆಯಲಾಗಿದೆ.