Kodagu : ಗುಡಿಸಲಲ್ಲಿ ವಾಸಿಸುತ್ತಿದ್ದ ಅಂಧ ಸಹೋದರರಿಗೆ ಸೂರು ಕಲ್ಪಿಸಿದ ಕೆದಮುಳ್ಳೂರು ಗ್ರಾಪಂ
ಬಾಳಿ ಬದುಕಬೇಕಾಗಿದ್ದ ಸಹೋದರರಿಬ್ಬರು ದೃಷ್ಟಿಕಳೆದುಕೊಂಡಿದ್ದು ಅವರ ಬದುಕೇ ಕತ್ತಲಾವರಿಸಿದೆ. ಗುಡಿಸಲು ಮನೆಯಲ್ಲಿ ವಾಸಿಸುತ್ತಿದ್ದ ಈ ಸಹೋದರರಿಗೆ ಕೆದಮುಳ್ಳೂರು ಗ್ರಾಮ ಪಂಚಾಯಿತಿಯ ವತಿಯಿಂದ ಮನೆಯನ್ನು ನಿರ್ಮಿಸಿಕೊಡಲಾಗಿದ್ದು, ಸಂಕ್ರಾಂತಿ ಹಬ್ಬದದಂದು ನೂತನ ಮನೆಯನ್ನು ಹಸ್ತಾಂತರಿಸುವ ಮೂಲದ ಈ ಅಂಧ ಸಹೋದರರಿಗೊಂದು ಆಶ್ರಯ ಕಲ್ಪಿಸಿದ್ದಾರೆ.
ಮಂಜುನಾಥ್ ಟಿ.ಎನ್.
ವಿರಾಜಪೇಟೆ (ಜ.18) : ಬಾಳಿ ಬದುಕಬೇಕಾಗಿದ್ದ ಸಹೋದರರಿಬ್ಬರು ದೃಷ್ಟಿಕಳೆದುಕೊಂಡಿದ್ದು ಅವರ ಬದುಕೇ ಕತ್ತಲಾವರಿಸಿದೆ. ಗುಡಿಸಲು ಮನೆಯಲ್ಲಿ ವಾಸಿಸುತ್ತಿದ್ದ ಈ ಸಹೋದರರಿಗೆ ಕೆದಮುಳ್ಳೂರು ಗ್ರಾಮ ಪಂಚಾಯಿತಿಯ ವತಿಯಿಂದ ಮನೆಯನ್ನು ನಿರ್ಮಿಸಿಕೊಡಲಾಗಿದ್ದು, ಸಂಕ್ರಾಂತಿ ಹಬ್ಬದದಂದು ನೂತನ ಮನೆಯನ್ನು ಹಸ್ತಾಂತರಿಸುವ ಮೂಲದ ಈ ಅಂಧ ಸಹೋದರರಿಗೊಂದು ಆಶ್ರಯ ಕಲ್ಪಿಸಿದ್ದಾರೆ.
ವಿರಾಜಪೇಟೆ ಸಮೀಪದ ಕೆದಮುಳ್ಳೂರು ಗ್ರಾಮ ಪಂಚಾಯಿತಿಯ ಈ ಮಾದರಿಯ ಕಾರ್ಯ ಸಾರ್ವಜನಿಕ ಪ್ರಶಂಸೆಗೆ ಪಾತ್ರವಾಗಿದೆ. ಸುಮಾರು ಎರಡು ತಿಂಗಳ ಅವಧಿಯಲ್ಲಿ ಮನೆ ನಿರ್ಮಾಣ ಮಾಡಿಕೊಟ್ಟಿದೆ.
ಮೂವರು ಮಕ್ಕಳು ಅಂಧರು, ಪಿಂಚಣಿ ಇಲ್ಲ, ಕೆಲಸವೂ ಇಲ್ಲ; ಅಧಿಕಾರಿಗಳೇ ಇನ್ನಾದ್ರೂ ಕಣ್ಣು ಬಿಡಿ
ಹುಟ್ಟಿನಿಂದಲೇ ದೃಷ್ಟಿಸಮಸ್ಯೆ: ಕೆದಮುಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಬಾರಿಕಾಡು ಪೈಸಾರಿ ನಿವಾಸಿ ಪಿ.ಕೆ. ರಾಮಚಂದ್ರ ಮತ್ತು ಸರೋಜ ದಂಪತಿ ಪುತ್ರರಾದ ಪಿ.ಆರ್. ಕೃಷ್ಣೇಂದ್ರ ಮತ್ತು ಪಿ.ಆರ್. ಜಯೇಂದ್ರಗೆ ಹುಟ್ಟಿನಿಂದಲೇ ಮಂದ ದೃಷ್ಟಿಸಮಸ್ಯೆಯಿತ್ತು. ಕ್ರಮೇಣ ಪ್ರಾಯವಾಗುತ್ತಿದ್ದಂತೆ ದೃಷ್ಟಿಕಡಿಮೆಯಾಗುತ್ತ ಬಂದು ಈಗ ಸಂಪೂರ್ಣ ದೃಷ್ಟಿಯನ್ನು ಕಳೆದುಕೊಂಡಿದ್ದಾರೆ. ನೆರೆಮನೆಯವರು ಇವರಿಗೆ ವಿವಿಧ ದೈನಂದಿನ ಕೆಲಸ ಕಾರ್ಯಗಳಿಗೆ ನೆರವಾಗುತ್ತಾರೆ. ಪುಟ್ಟದಾದ ಗುಡಿಸಲ್ಲಿ ಶೋಚನೀಯ ಸ್ಥಿತಿಯಲ್ಲಿ ಜೀವನ ಸಾಗಿಸುತ್ತಿದ್ದ ಈ ಅಂಧ ಸಹೋದರ ಕಷ್ಟವನ್ನು ಕಂಡ ಸ್ಥಳೀಯ ಕೆದಮುಳ್ಳೂರು ಗ್ರಾಪಂ ಆಡಳಿತ ಬಸವ ಕಲ್ಯಾಣ ಯೋಜನೆಯಡಿಯಲ್ಲಿ ಮನೆಯೊಂದನ್ನು ನಿರ್ಮಾಣ ಮಾಡಿ ಸಂಕ್ರಾಂತಿ ಹಬ್ಬದ ದಿನದಂದು ಅವಿಸ್ಮರಣೀಯವಾದ ಕೊಡುಗೆಯನ್ನು ನೀಡಿತು.
ಕೆದಮುಳ್ಳೂರು ಗ್ರಾಮ ಪಂಚಾಯಿತಿಯ ಚುನಾಯಿತ ಪ್ರತಿನಿಧಿಗಳು, ಪಿ.ಡಿ.ಒ, ಕಾರ್ಯದರ್ಶಿ, ಸಿಬ್ಬಂದಿ ಮತ್ತು ಗ್ರಾಮಸ್ಥರ ಸಮ್ಮುಖದಲ್ಲಿ ಸರಳವಾಗಿ ಗೃಹಪ್ರವೇಶ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮಕ್ಕೆ ಆಗಮಿಸಿದ ತಾಲೂಕು ದಂಡಾಧಿಕಾರಿ ತಹಸೀಲ್ದಾರ್ ಅರ್ಚನಾ ಭಟ್ ಮಾತನಾಡಿ, ಬಡವರು, ದೀನ ದಲಿತರನ್ನು ಗುರುತಿಸಿ ಸರ್ಕಾರದ ಯೋಜನೆಗಳನ್ನು ತಲುಪಿಸುವುದು ಜನಪ್ರತಿನಿಧಿಗಳ ಕೆಲಸವಾಗಿದೆ. ಚುನಾಯಿತ ಪ್ರತಿನಿಧಿಗಳು ತಮ್ಮ ಗ್ರಾಮಗಳ ಏಳಿಗೆಗಾಗಿ ಸರ್ಕಾರದ ಯೋಜನೆಗಳನ್ನು ಅನುಷ್ಠಾನಕ್ಕೆ ತರುವ ಪ್ರಯತ್ನ ಮಾಡಬೇಕು. ಈ ನಿಟ್ಟಿನಲ್ಲಿ 2021- 22ನೇ ಸಾಲೀನ ಬಸವ ವಸತಿ ಯೋಜನೆಯಡಿಯಲ್ಲಿ ಬಂದ 1.20 ಲಕ್ಷ ರು. ಮತ್ತು ನರೇಗಾ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ 28 ಸಾವಿರ ರು. ಅನುದಾನ ಸೇರಿಸಿ ಒಟ್ಟು 1.48 ಲಕ್ಷ ರು. ವೆಚ್ಚದಲ್ಲಿ ಕಡಿಮೆ ಅವಧಿಯಲ್ಲಿ ಮನೆ ನಿರ್ಮಿಸಿಕೊಟ್ಟಗ್ರಾಮ ಪಂಚಾಯಿತಿ ಸದಸ್ಯರಾದ ಕೆ.ಎಂ. ರಾಮಯ್ಯ ಅವರ ಶ್ರಮ ಮತ್ತು ಪಿಡಿಒ ಅವರ ಕಾರ್ಯಕ್ಷಮತೆ ಶ್ಲಾಘನೀಯ ಎಂದರು.
ಸಹೋದರರ ಮನೆ ಹಸ್ತಾಂತರ ಕಾರ್ಯಕ್ರಮದಲ್ಲಿ ಕಂದಾಯ ಅಧಿಕಾರಿ ಹರೀಶ್, ಗ್ರಾಮ ಲೆಕ್ಕಿಗರಾದ ಹೇಮಂತ್, ಕೆದಮುಳ್ಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ನಡಿಕೇರಿಯಂಡ ಶೀಲಾ ಮೇದಪ್ಪ, ಉಪಧ್ಯಕ್ಷರಾದ ಎಂ.ಬಿ. ಮೀನಾಕ್ಷಿ, ಸದಸ್ಯರಾದ ಜಯಂತಿ, ಕಾರ್ಯದರ್ಶಿ ಸತೀಶ್ ಪಿ.ಎಸ್., ಹಿಂದೂ ಮಲಯಾಳಿ ಅಸೋಸಿಯೇಷನ್‌ನ ಸದಸ್ಯರು ಮತ್ತು ಗ್ರಾಮಸ್ಥರು ಹಾಜರಿದ್ದರು.
ಸುಮಾರು ಮೂರು ವರ್ಷಗಳ ಹಿಂದೆ ಈ ಸಹೋದರರು ವಾಸವಾಗಿದ್ದ ಮನೆ ಬಿದ್ದುಹೊಗಿತ್ತು. ಮಾನವೀಯ ನೆಲೆಯಲ್ಲಿ ತಾತ್ಕಾಲಿಕವಾಗಿ ಗುಡಿಸಲು ನಿರ್ಮಿಸಿ ವಾಸವಿರಲು ಅನುವು ಮಾಡಿಕೊಟ್ಟಿದ್ದೆ, ನಂತರದಲ್ಲಿ ಸಹೊದರರನ್ನು ಸಮೀಪದ ಬಾಡಿಗೆ ಮನೆಯೊಂದಕ್ಕೆ ಸ್ಥಳಾಂತರಿಸಿ, ಪಂಚಾಯಿತಿಯಿಂದಲೇ ಬಾಡಿಗೆ ಹಣ ಪಾವತಿಸುತ್ತಿದ್ದೆವು. ಬಸವ ವಸತಿ ಯೋಜನೆಯಡಿ 2022-23 ನೇ ಸಾಲಿನನ ಅನುದಾನ ಹಾಗೂ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಮನೆ ನಿರ್ಮಿಸಿ ಕೊಡಲಾಗಿದೆ. ಮನೆ ನಿರ್ಮಾಣ ಕಾರ್ಯದಲ್ಲಿ ಹಿಂದೂ ಮಲಯಾಳಿ ಅಸೋಸಿಯೇಷನ್ ಅವರ ನೆರವು ಹಾಗೂ ಪಂಚಾಯಿತಿ ಪಿ.ಡಿ.ಒ ಪ್ರಮೋದ್ ಅವರು ಸಹಕಾರದಿಂದಾಗಿ ಬೇಗ ಮನೆ ನಿರ್ಮಿಸಲು ಸಾಧ್ಯವಾಯಿತು
- ಕೆ.ಎಂ. ರಾಮಯ್ಯ ಕೆದಮುಳ್ಳೂರು ಗ್ರಾಮ ಪಂಚಾಯಿತಿ ಸದಸ್ಯ
ಸರ್ಕಾರದಿಂದ ಹಲವು ಯೋಜನೆಗಳು ಜಾರಿಗೊಳ್ಳುತ್ತದೆ. ಜನಪ್ರತಿನಿಧಿಗಳು ಮತ್ತು ಇಲಾಖೆಯ ಸಿಬ್ಬಂದಿಯ ಇಚ್ಛಾಶಕ್ತಿಯಿಂದ ಮಾತ್ರ ಅವುಗಳು ಅನುಷ್ಠಾನಕ್ಕೆ ಬರಲು ಸಾಧ್ಯವಾಗುತ್ತದೆ. ಇದಕ್ಕೆ ನೈಜ ಉದಾಹರಣೆ ಕೆದಮುಳ್ಳೂರು ಗ್ರಾಪಂ ಆಡಳಿತ. ಸರ್ಕಾರದ ಅನುದಾನದೊಂದಿಗೆ ಹಿಂದೂ ಮಲಯಾಳಿ ಅಸೋಸಿಯೆಷನ್ ವತಿಯಿಂದ ವಿರಾಜಪೇಟೆ ದಾಾನಿಗಳ ಸಹಕಾರದಿಂದ ಮನೆ ನಿರ್ಮಾಣಕ್ಕೆ ನೆರವು ನೀಡಲಾಗಿದೆ. ಸಹೋದರರ ಮುಂದಿನ ಭವಿಷ್ಯ ಚೆನ್ನಾಗಿರಲಿ
- ಎ. ವಿನೂಪ್ ಕುಮಾರ್, ಅಧ್ಯಕ್ಷರು ಹಿಂದೂ ಮಲಯಾಳಿ ಅಸೋಸಿಯೇಶನ್, ವಿರಾಜಪೇಟೆ
BIG 3 Impact: ಅಂದು ಬೀದಿ ಬದಿ ಹಾಡುತ್ತಿದ್ದ ಅಂಧರು ಇಂದು ಸೆಲೆಬ್ರೆಟಿಗಳು!
ಅಂಧರಾದ ನಾವುಗಳು ಗುಡಿಸಲು ಮನೆಯಲ್ಲಿ ಜೀವನ ಸಾಗಿಸುತಿದ್ದೆವು, ಇದನ್ನು ಮನಗಂಡು ಗ್ರಾಮ ಪಂಚಾಯಿತಿ ಸದಸ್ಯರಾದ ರಾಮಯ್ಯ ಮತ್ತು ಗ್ರಾಮ ಪಂಚಾಯಿತಿ ಆಡಳಿತ ಹಾಗೂ ಮಲಯಾಳಿ ಸಂಘವು ಜೀವನ ಸಾಗಿಸಲು, ವಾಸ ಮಾಡಲು ನಮಗೆ ಸ್ವಂತ ಸೂರನ್ನು ನಿರ್ಮಿಸಿಕೊಟ್ಟಿದ್ದಾರೆ. ಎಲ್ಲರಿಗೂ ಮನದಾಳದ ಕೃತಜ್ಞತೆಗಳನ್ನು ಅರ್ಪಿಸುತಿದ್ದೇವೆ
- ಪಿ.ಆರ್. ಕೃಷ್ಣೇಂದ್ರ ಮತ್ತು ಪಿ.ಆರ್. ಜಯೇಂದ್ರ ಸಹೋದರರು