ಬೆಳೆಗಳಿಗೆ ಕಂಟಕವಾದ ನೀರು : ರೈತರಲ್ಲಿ ಆತಂಕ
25 ಎಕರೆ ರೈತರ ಜಮೀನಿನ ಪ್ರದೇಶಕ್ಕೆ ಕೆ.ಸಿ. ವ್ಯಾಲಿ ನೀರು ಹರಿದು, ರೈತರು ಬೆಳೆದ ಬೆಳೆ ಕೈಗೆ ಬಾರದೆ ಸಂಕಷ್ಟಎದುರಿಸುವಂತಾಗಿದೆ. ನೀಉ ಶುದ್ಧೀಕರಿಸಿ ಬಿಡುವ ಪ್ರಕ್ರಿಯೆಯಿಂದ ರೈತರು ಸಮಸ್ಯೆ ಎದುರಿಸುವಂತಾಗಿದೆ.
ವರದಿ : ವಿ.ಮಂಜುನಾಥ್ ಸೂಲಿಬೆಲೆ
ಹೊಸಕೋಟೆ (ಮಾ.25): ಅಂತರ್ಜಲ ವೃದ್ಧಿಸುವ ಸಲುವಾಗಿ ಅನುಷ್ಠಾನ ಮಾಡಲಾದ ಕೆ.ಸಿ. ವ್ಯಾಲಿ ನೀರಿನ ಯೋಜನೆಯಿಂದ ತಾಲೂಕಿನ ಗೇರಹಳ್ಳಿ ಭಾಗದ ಸಾಕಷ್ಟುರೈತರು ಕೆರೆ ನೀರಿನಿಂದ ತೀವ್ರ ಸಂಕಷ್ಟಎದುರಿಸುವಂತಾಗಿದೆ.
ಕೋರಮಂಗಲ -ಚಲ್ಲಘಟ್ಟನೀರನ್ನು ಶುದ್ಧೀಕರಿಸಿ ಕೋಲಾರ ಜಿಲ್ಲೆಯ ಕೆರೆಗಳಿಗೆ ತುಂಬಿಸುವ ಯೋಜನೆಯಲ್ಲಿ ಹೊಸಕೋಟೆ ತಾಲೂಕಿನ ತಾವರೆಕೆರೆ ಗ್ರಾಮದ ಕೆರೆಗೂ ನೀರನ್ನು ಹರಿಸಲಾಗಿದೆ. ಆದರೆ ಪ್ರಸ್ತುತ ಈ ಕೆರೆಯ ಹಿನ್ನೀರಿನ ಭಾಗ ಗೇರಹಳ್ಳಿ ಗ್ರಾಮದ ವ್ಯಾಪ್ತಿಗೆ ಒಳಪಡಲಿದೆ. ಈ ಗ್ರಾಮದ ಸುಮಾರು 25 ಎಕರೆ ರೈತರ ಜಮೀನಿನ ಪ್ರದೇಶಕ್ಕೆ ಕೆ.ಸಿ. ವ್ಯಾಲಿ ನೀರು ಹರಿದು, ರೈತರು ಬೆಳೆದ ಬೆಳೆ ಕೈಗೆ ಬಾರದೆ ಸಂಕಷ್ಟಎದುರಿಸುವಂತಾಗಿದೆ. ಅಲ್ಲದೆ ದೀರ್ಘಾವಧಿ ಬೆಳೆಗಳಾದ ಮಾವಿನ ಬೆಳೆಯನ್ನು ಸಹ ಬೆಳೆಯಲಾಗಿದ್ದು, ಜಮೀನಿಗೆ ತೆರಳಿ ಬೆಳೆಯನ್ನು ತೆಗೆದುಕೊಳ್ಳಲೂ ಸಾಧ್ಯವಾಗುತ್ತಿಲ್ಲ ಎಂದು ರೈತರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಕೊಪ್ಪಳ: ದರ ಕುಸಿತದಿಂದ ಎಲೆಕೋಸು ಹೊಲದಲ್ಲಿ ಕುರಿ ಮೇಯಿಸಿದ ರೈತ
ರೈತರ ಹಿತದೃಷ್ಟಿಯಿಂದ ಅಂತರ್ಜಲ ವೃದ್ಧಿಸುವ ದೃಷ್ಠಿಯಿಂದ ಕೆರೆಗೆ ನೀರು ಹರಿಸುತ್ತಿರುವುದ ಉತ್ತಮ ಬೆಳವಣಿಗೆ. ಸರ್ಕಾರ ನೀರು ಹರಿಸುವ ಮುನ್ನ ಕೆರೆಯ ಸರ್ವೆ ಮಾಡಿಸಿ, ಸಮರ್ಪಕವಾಗಿ ಕಟ್ಟೆನಿರ್ಮಾಣ ಮಾಡಿ ಬಳಿಕ ನೀರನ್ನು ಹರಿಸಬೇಕಿತ್ತು. ಆದರೆ ತಾಲೂಕು ಆಡಳಿತವಾಗಲಿ, ನೀರಾವರಿ ಇಲಾಖೆ ಆಗಲಿ ಯಾವುದೇ ಮುಂಜಾಗ್ರತಾ ಕ್ರಮ, ಕೈಗೊಳ್ಳದೆ ನೀರು ಹರಿಸಿ ರೈತರ ಹೊಟ್ಟೆಯ ಮೆಲೆ ತಣ್ಣೀರು ಬಟ್ಟೆಹಾಕಿಕೊಳ್ಳುವ ಕೆಲಸ ಮಾಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬರುತ್ತಿದೆ.
ರೈತರಿಗೆ ಕಹಿಯಾದ ಹುಣಸೆ : ಭಾರೀ ದರ ಕುಸಿತ ..
ಗೇರಹಳ್ಳಿ ಭಾಗದಲ್ಲಿ ಸುಮಾರು 20ಕ್ಕೂ ಅಧಿಕ ರೈತರ 35ಕ್ಕೂ ಎಕರೆಗೂ ಅಧಿಕ ರೈತರ ಜಮೀನಿದೆ. ಇಲ್ಲಿ ಉಂಟಾಗಿರುವ ಸಮಸ್ಯೆ ಬಗ್ಗೆ ಕಂದಾಯ ಇಲಾಖೆ ಕಾರ್ಯದರ್ಶಿ, ಜಿಲ್ಲಾಧಿಕಾರಿಗೆ ಮನವಿ ಸಹ ಸಲ್ಲಿಸಲಾಗಿದೆ. ಆದರೆ ಜಿಲ್ಲಾಧಿಕಾರಿಗಳು ತಾಲೂಕು ದಂಡಾಧಿಕಾರಿಗೆ ಪರಿಶೀಲನೆ ನಡೆಸುವಂತೆ ಶಿಫಾರಸು ಮಾಡಿದ್ದಾರೆ. ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರೂ ಯಾವುದೇ ರೀತಿಯ ಕಿಮ್ಮತ್ತು ಧಕ್ಕಿಲ್ಲ ಎಂದು ನೊಂದ ರೈತರು ಆರೋಪಿಸಿದ್ದಾರೆ.
ಆದ್ದರಿಂದ ಸಂಬಂಧಪಟ್ಟಇಲಾಖೆ ಅಧಿಕಾರಿಗಳು ಇತ್ತ ಗಮನಹರಿಸಿ ಸಮಸ್ಯೆಗೆ ಪರಿಹಾರ ಕೊಡಿಸುವ ಪ್ರಯತ್ನ ಮಾಡದಿದ್ದರೆ ನ್ಯಾಯಾಲಯದ ಕದ ತಟ್ಟುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಹಲವಾರು ವರ್ಷಗಳಿಂದ ನಾವು ನಮ್ಮ ಜಮೀನಿನಲ್ಲಿ ವ್ಯವಸಾಯ ಮಾಡಿಕೊಂಡು ಜೀವನ ಸಾಗಿಸುತ್ತಿದ್ದೆವು. ಹಲವಾರು ಬಾರಿ ಮಳೆ ಬಂದರೂ ನಮಗೆ ಏನು ತೊಂದರೆ ಆಗುತ್ತಿರಲಿಲ್ಲ. ಆದರೆ ಈಗ ಕೆ.ಸಿ. ವ್ಯಾಲಿ ನೀರು ಬಿಟ್ಟಿರುವುದರಿಂದ ಹಿನ್ನೀರಿನ ಭಾಗ ತುಂಬಿ ಹೊಲಗಳಿಗೆ ನುಗ್ಗುತ್ತಿದೆ. ಇದರಿಂದ ಅಲ್ಪಾವಧಿ ಬೆಳೆ ಬೆಳೆಯಲೂ ಆಗುತ್ತಿಲ್ಲ. ದೀರ್ಘಾವಧಿ ಫಸಲು ಪಡೆದುಕೊಳ್ಳಲು ಆಗುತ್ತಿಲ್ಲ.
ಜಯರಾಮಪ್ಪ, ರೈತ ಗಂಗಾಪುರ
ಕೆರೆಯ ನೀರು ರೈತರ ಜಮೀನಿಗೆ ಹರಿಯುತ್ತಿರುವ ಬಗ್ಗೆ ನಮ್ಮ ಗಮನಕ್ಕೆ ಬಂದಿಲ್ಲ. ಕೆರೆಯ ಬಳಿಗೆ ತೆರಳಿ ಸ್ಥಳ ಪರಿಶೀಲನೆ ನಡೆಸಿ, ಕೆರೆಯ ಸರ್ವೆ ಕಾರ್ಯಕ್ಕೆ ತಹಸೀಲ್ದಾರ್‌ಗೆ, ಸಂಬಂಧಪಟ್ಟಅಧಿಕಾರಿಗಳಿಗೆ ಪತ್ರ ಬರೆಯಲಾಗುವುದು. ಸರ್ವೆಯಲ್ಲಿ ನೀರು ತುಂಬಿರುವ ಸ್ಥಳ ಸರ್ಕಾರದ್ದಾದರೆ ರೈತರು ಬಿಟ್ಟು ಕೊಡಬೇಕು. ಒಂದು ವೇಳೆ ರೈತರ ಜಮೀನಾದರೆ ಸರ್ಕಾರದಿಂದ ಪರಿಹಾರ ಕೊಡುವ ವ್ಯವಸ್ಥೆ ಇರುತ್ತದೆ. ಜರೂರಾಗಿ ಸರ್ವೆ ಮಾಡಿಸಲಾಗುವುದು.
ಮಂಜುನಾಥ್, ಎಇ ಸಣ್ಣ ನೀರಾವರಿ ಇಲಾಖೆ