Asianet Suvarna News Asianet Suvarna News

Karnataka Politics : ಮಂತ್ರಿ ಗಿರಿಯಿಂದ ಕೆಸಿಎನ್‌ಗೆ ಕೊಕ್ ವದಂತಿ ಬೆನ್ನಲ್ಲೇ ಮತ್ತೊಬ್ಬ ಮುಖಂಡ ಔಟ್

  •  ಮಂತ್ರಿ ಗಿರಿಯಿಂದ ಕೆಸಿಎನ್‌ಗೆ ಕೋಕ್ ವದಂತಿ ಬೆನ್ನಲ್ಲೇ ಮತ್ತೊಂದು ಮತ್ತೊಬ್ಬ ಮುಖಂಡ ಔಟ್
  • ಮುಡಾದಿಂದ ಕೆಸಿಎನ್‌ ಆಪ್ತನಿಗೆ ಕೊಕ್‌..!
  •   ಸಚಿವ ಸ್ಥಾನ ಉಳಿಸಿಕೊಳ್ಳಲು ಆದಿಶ್ರೀಗೆ ಮೊರೆ
  •  ನಿಗಮ-ಮಂಡಳಿ ಅಧ್ಯಕ್ಷ ನೇಮಕದಲ್ಲಿ ಹಸ್ತಕ್ಷೇಪವಿಲ್ಲ
KC Narayana gowda Close aide Out From Muda President post snr
Author
Bengaluru, First Published Jan 4, 2022, 9:16 AM IST

ವರದಿ :  ಮಂಡ್ಯ ಮಂಜುನಾಥ

 ಮಂಡ್ಯ (ಜ.04):  ವಿಧಾನಪರಿಷತ್‌ ಚುನಾವಣೆಯಲ್ಲಿ ಬಿಜೆಪಿ (BJP)  ಅಭ್ಯರ್ಥಿಯ ಠೇವಣಿ ನಷ್ಟದ ಕಾರಣಕ್ಕೆ ಸಚಿವ ಕೆ.ಸಿ. ನಾರಾಯಣಗೌಡ (Narayana Gowda) ಅವರನ್ನು ಸಂಪುಟದಿಂದ ಕೈಬಿಡುತ್ತಾರೆಂದು ವದಂತಿಗಳು ಹಬ್ಬಿದ್ದ ಬೆನ್ನಹಿಂದೆಯೇ ಸಚಿವರ ಆಪ್ತ ಕೆ.ಶ್ರೀನಿವಾಸ್‌ (K Shrinivas) ಅವರನ್ನು ಮುಡಾ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿರುವುದು ಹಲವು ರಾಜಕೀಯ ಚರ್ಚೆಗೆ ಗ್ರಾಸವಾಗಿದೆ. ಸಂಕ್ರಾಂತಿಯ ನಂತರ ರಾಜ್ಯ ಸಂಪುಟದಲ್ಲಿ (Karnataka Cabinet) ಮಹತ್ವದ ಬದಲಾವಣೆಗಳು ಸಂಭವಿಸಲಿದ್ದು, ಚುನಾವಣಾ ಹಿನ್ನೆಲೆ ಮತ್ತು ಬೇರೆ ಬೇರೆ ಕಾರಣಕ್ಕೆ ಕೆಲವರನ್ನು ಕೈಬಿಡುವರೆಂಬ ಮಾತುಗಳು ದಟ್ಟವಾಗಿ ಕೇಳಿಬರುತ್ತಿದ್ದು, ಅದರಲ್ಲಿ ಸಚಿವ ಕೆ.ಸಿ.ನಾರಾಯಣಗೌಡರ ಹೆಸರು ಚಲಾವಣೆಯಲ್ಲಿದೆ.

ಮೂಲ ಬಿಜೆಪಿಗರಿಗೆ ಸ್ಥಾನ:  ವಿಧಾನ ಪರಿಷತ್‌ ಚುನಾವಣೆಯಲ್ಲಿ (MLC Election) ಬಿಜೆಪಿ ಅಭ್ಯರ್ಥಿ ಬೂಕಹಳ್ಳಿ ಮಂಜು ಠೇವಣಿ ಕಳೆದುಕೊಳ್ಳಲು ಸಚಿವ ಕೆ.ಸಿ.ನಾರಾಯಣಗೌಡರೇ ನೇರ ಹೊಣೆಗಾರರು ಎಂಬ ಆರೋಪದ ನಡುವೆ ಸಂಪುಟದಿಂದ ಕೈಬಿಡುವ ಕುರಿತಾದ ಚರ್ಚೆಗಳು ವ್ಯಾಪಕವಾಗಿ ಕೇಳಿಬರುತ್ತಿದ್ದವು. ಇತ್ತೀಚಿನ ಬೆಳವಣಿಗೆಯಲ್ಲಿ ಸಚಿವರ ಆಪ್ತರಾದ ಕೆ.ಶ್ರೀನಿವಾಸ್‌ ಅವರನ್ನು ಮುಡಾ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲಾಗಿದೆ. ಅಲ್ಲಿಗೆ ಮೂಲ ಬಿಜೆಪಿಯ (BJP) ಕೆ.ಎಸ್‌.ದೊರೆಸ್ವಾಮಿ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಅಲ್ಲದೇ, ಸದಸ್ಯ ಸ್ಥಾನವನ್ನೂ ಕೂಡ ಮೂಲ ಬಿಜೆಪಿಗರಿಗೆ (BJP) ನೀಡಿರುವುದನ್ನು ನೋಡಿದರೆ ಸಚಿವ ಕೆ.ಸಿ.ನಾರಾಯಣಗೌಡರನ್ನು ಹೊರಗಿಟ್ಟೇ ಪಕ್ಷ ಕಟ್ಟಲು ಮುಂದಾಗಿದ್ದಾರೆಯೇ ಎಂಬ ಅನುಮಾನಗಳು ಮೂಡಿವೆ.

ಆಪರೇಷನ್‌ ಕಮಲದ ಸಂದರ್ಭದಲ್ಲಿ ಕೆ.ಸಿ.ನಾರಾಯಣಗೌಡರ ಶಿಫಾರಸ್ಸಿನ ಮೇರೆಗೆ ಮಂಡ್ಯ ನಗರಕ್ಕೆ ಸಂಬಂಧವೇ ಇಲ್ಲದ ಕೆ.ಆರ್‌.ಪೇಟೆ ಮೂಲದ ಕೆ.ಶ್ರೀನಿವಾಸ್‌ ಅವರನ್ನು ಮುಡಾ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಯಿತು.

ಸ್ಥಳೀಯ, ಮೂಲ ಮತ್ತು ನಿಷ್ಠಾವಂತ ಬಿಜೆಪಿ (BJP) ಕಾರ್ಯಕರ್ತರು ತೀವ್ರ ವಿರೋಧ ವ್ಯಕ್ತಪಡಿಸಿದರೂ ಪಕ್ಷದ ವರಿಷ್ಠರು ಅಸಹಾಯಕತೆಯನ್ನು ವ್ಯಕ್ತಪಡಿಸಿದರು. ಆನಂತರದ ದಿನಗಳಲ್ಲಿ ಮುಡಾ ಅಧ್ಯಕ್ಷರ ಕಾರ್ಯವೈಖರಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ಬದಲಾವಣೆಗೆ ಆಗ್ರಹಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಸಚಿವ ಕೆ.ಸಿ.ನಾರಾಯಣಗೌಡರ ಕೃಪೆಯಿಂದ ಕೆ.ಶ್ರೀನಿವಾಸ್‌ರ ಅಧ್ಯಕ್ಷ ಪದವಿ ಸುರಕ್ಷಿತವಾಯಿತು.

ವರಿಷ್ಠರ ವಿಶ್ವಾಸದಿಂದ ದೂರ:

ವಿಧಾನ ಪರಿಷತ್‌ ಚುನಾವಣಾ ಫಲಿತಾಂಶದ ನಂತರ ಏಕಾಏಕಿ ಮುಡಾ ಅಧ್ಯಕ್ಷರ ಬದಲಾವಣೆಗೆ ಬಿಜೆಪಿ (BJP) ವರಿಷ್ಠರು ಮುಂದಾಗಿದ್ದು, ಈ ಬದಲಾವಣೆ ಸಂಬಂಧ ಸಚಿವರನ್ನು ವಿಶ್ವಾಸಕ್ಕೆ ತೆಗೆದುಕೊಂಡಂತೆ ಮೇಲ್ನೊಟಕ್ಕೆ ಕಂಡುಬರುತ್ತಿಲ್ಲ. ಚುನಾವಣೆ ದಿನ ಅಭ್ಯರ್ಥಿ ಅಳುವ ವೀಡಿಯೊಗಳನ್ನು ಹರಿಯಬಿಟ್ಟು ಪಕ್ಷಕ್ಕೆ ಹಿನ್ನಡೆ ಉಂಟುಮಾಡಿದರು. ಸೋಲಿಗೆ ಬಿಜೆಪಿ ಅಭ್ಯರ್ಥಿಯೇ ಕಾರಣ ಎಂದು ಕೆ.ಆರ್‌.ಪೇಟೆಯ ಸ್ಥಳೀಯ ಬಿಜೆಪಿ ಮುಖಂಡರು, ಕೆಲ ಗ್ರಾಪಂ ಸದಸ್ಯರಿಂದ ಸುದ್ದಿಗೋಷ್ಠಿ ನಡೆಸಿ ಬಹಿರಂಗ ಹೇಳಿಕೆ ಕೊಡಿಸಿದರೂ ಆ ಪ್ರಯತ್ನಗಳು ಅಷ್ಟೊಂದು ಪರಿಣಾಮ ಬೀರಲಿಲ್ಲ. ಅಲ್ಲದೇ, ಭವಿಷ್ಯದಲ್ಲಿ ವರಿಷ್ಠರು ಸಚಿವ ಕೆ.ಸಿ.ನಾರಾಯಣಗೌಡರನ್ನು ಇನ್ನಷ್ಟುನಿರ್ಲಕ್ಷಿಸುವ ಸಾಧ್ಯತೆಗಳು ಕಂಡುಬರುತ್ತಿವೆ. ಈಗಾಗಲೇ ಸಚಿವ ಕೆ.ಸಿ.ನಾರಾಯಣಗೌಡರು ಕಾಂಗ್ರೆಸ್‌ ಸೇರುವರೆಂಬ ವದಂತಿಗಳು ಹಬ್ಬಿದ್ದು, ಸ್ವತಃ ಸಚಿವರೇ ಸ್ಪಷ್ಟನೆ ನೀಡಿದರೂ ಪಕ್ಷದೊಳಗಿನ ಬೆಳವಣಿಗೆಗಳು ಹಲವು ಅನುಮಾನಗಳಿಗೆ ಕಾರಣವಾಗಿದೆ.

ರಕ್ಷಣಾತ್ಮಕ ನಡೆ

ಸಂಪುಟ ಪುನಾರಚನೆಗೂ ಮುನ್ನವೇ ತಮ್ಮ ಹುದ್ದೆಯನ್ನು ಭದ್ರಪಡಿಸಿಕೊಳ್ಳಲು ಸಚಿವ ಕೆ.ಸಿ.ನಾರಾಯಣಗೌಡರೂ ಕೂಡ ಲಾಬಿ ನಡೆಸಿದ್ದಾರೆ. ಜನವರಿ 4 ಮತ್ತು 5ರಂದು ನಡೆಯುತ್ತಿರುವ ರಾಜ್ಯ ಮಟ್ಟದ ಯುವಜನೋತ್ಸವಕ್ಕೆ ಆದಿ ಚುಂಚನಗಿರಿ ಮಠ ಆಯ್ಕೆ ಮಾಡಿಕೊಂಡಿರುವ ಹಿಂದೆ ಕೂಡ ರಾಜಕೀಯ (Politics) ಲೆಕ್ಕಾಚಾರಗಳಿವೆ ಎಂದು ಹೇಳಲಾಗುತ್ತಿದೆ.

ಈಗಾಗಲೇ ಜಿಲ್ಲೆಯ ಏಕೈಕ ಬಿಜೆಪಿ ಶಾಸಕ ಮತ್ತು ಸಚಿವರಾಗಿ ಜಿಲ್ಲೆಯೊಳಗೆ ಪಕ್ಷದ ಬಲವರ್ಧನೆಗೆ ಶ್ರಮಿಸುತ್ತಿರುವುದಾಗಿ ವರಿಷ್ಠರೆದುರು ಹೇಳಿಕೊಂಡಿರುವ ಕೆ.ಸಿ.ನಾರಾಯಣಗೌಡರು ಚುಂಚನಗಿರಿ ಮಠದ ಶ್ರೀಗಳ ಮೂಲಕ ಮಂತ್ರಿಗಿರಿ ಉಳಿಸಿಕೊಳ್ಳುವ ಪ್ರಯತ್ನಕ್ಕೆ ಮುಂದಾಗಿದ್ದಾರೆಂದು ತಿಳಿದುಬಂದಿದೆ.

ಕೆ.ಆರ್‌.ಪೇಟೆಯಿಂದ ಮಠಕ್ಕೆ!

ಚುಂಚನಗಿರಿ ಶ್ರೀಗಳ ಓಲೈಕೆ ಉದ್ದೇಶದಿಂದಲೇ ಯುವಜನೋತ್ಸವವನ್ನು ಕೆ.ಆರ್‌.ಪೇಟೆಯಿಂದ ಆದಿ ಚುಂಚನಗಿರಿ ಮಠಕ್ಕೆ ಸ್ಥಳಾಂತರಿಸಲಾಗಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಮಾರಂಭಕ್ಕೆ ಬಂದ ಸಂದರ್ಭದಲ್ಲಿ ಕೆ.ಸಿ.ನಾರಾಯಣಗೌಡರ ಪರ ಶ್ರೀಗಳು ಬ್ಯಾಟಿಂಗ್‌ ಮಾಡುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

ಆದಿಶ್ರೀಗಳ ಮೂಲಕ ಪದವಿ ರಕ್ಷಣೆಗೆ ಮುಂದಾಗಿರುವ ಸಚಿವ ಕೆ.ಸಿ.ನಾರಾಯಣಗೌಡ ವಿವಿಧ ನಿಗಮ-ಮಂಡಳಿ ಅಧ್ಯಕ್ಷರು ಮತ್ತು ಆಯ್ಕೆ ವಿಚಾರದಲ್ಲಿ ಹಸ್ತಕ್ಷೇಪ ಮಾಡದೆ ವರಿಷ್ಠರ ನಿರ್ಧಾರವನ್ನೇ ಒಪ್ಪಿಕೊಂಡು ತಮ್ಮ ಹುದ್ದೆಯನ್ನು ಉಳಿಸಿಕೊಳ್ಳುವುದಕ್ಕಷ್ಟೇ ಸೀಮಿತರಾಗಿದ್ದಾರೆ ಎಂದು ಹೇಳಲಾಗಿದೆ.

Follow Us:
Download App:
  • android
  • ios