ಮಂಡ್ಯ(ಫೆ.13): ಕೊನೆಗೂ ರಾಜ್ಯ ಸರ್ಕಾರ ಜಿಲ್ಲೆಯಲ್ಲಿ ಬೆಳೆದು ನಿಂತಿರುವ ಬೇಸಿಗೆ ಬೆಳೆಗೆ ಕೃಷ್ಣರಾಜಸಾಗರ ಜಲಾಶಯದಿಂದ ನೀರು ಹರಿಸಲು ನಿರ್ಧರಿಸಿದೆ. ತೋಟಗಾರಿಕೆ ಸಚಿವ ಕೆ.ಸಿ.ನಾರಾಯಣಗೌಡರ ಅಧ್ಯಕ್ಷತೆಯಲ್ಲಿ ಬೆಂಗಳೂರಿನಲ್ಲಿ ಬುಧವಾರ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ರೈತರ ಬೇಸಿಗೆ ಬೆಳೆಗೆ ಅನುಕೂಲವಾಗಲಿ ಎಂದು 15 ದಿನಗಳ ಆನ್‌ ಆಂಡ್‌ ಆಫ್‌ ವ್ಯವಸ್ಥೆಯಲ್ಲಿ ನೀರು ಹರಿಸಲು ನೀರಾವರಿ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಈ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ 6ಗಂಟೆಯಿಂದ ಕಾವೇರಿ ಅಚ್ಚುಕಟ್ಟು ಪ್ರದೇಶದ ಎಲ್ಲಾ ನಾಲೆಗಳಿಗೆ ನೀರು ಹರಿಸಲಾಗುವುದು.

ಬೇಸಿಗೆ ಬೆಳೆ ಹಾಗೂ ಜೂನ್‌ ಮೊದಲವಾರದ ವರೆಗೆ ಬೆಂಗಳೂರು - ಮೈಸೂರು, ಮಂಡ್ಯ ಸೇರಿದಂತೆ ಪ್ರಮುಖ ನಗರಗಳಿಗೆ ಕುಡಿಯುವ ನೀರಿಗೆ ಅಗತ್ಯವಾದ ನೀರನ್ನು ಇಟ್ಟುಕೊಂಡು ಬೆಳೆಗಳಿಗೆ ನೀರು ಕೊಡಲು ಯೋಜನೆ ರೂಪಿಸಲಾಗಿದೆ. ಬೇಸಿಗೆ ಭತ್ತದ ಬೆಳೆಗೆ ಮಾತ್ರ ನೀರನ್ನು ಬಳಕೆ ಮಾಡಿಕೊಳ್ಳಬೇಕು. ಬೆಳೆದು ನಿಂತ ಕಬ್ಬಿನ ಬೆಳೆಗೆ ನೀರು ಕೊಡುವುದು ಕಷ್ಟ. ವಿ.ಸಿ.ನಾಲೆ ಕೊನೆ ಭಾಗಕ್ಕೆ ನೀರು ತಲುಪಿಸುವುದು ಕೂಡ ಈ ವೇಳೆಯಲ್ಲಿ ಕಷ್ಟವಾಗಲಿದೆ ಎಂದು ನೀರಾವರಿ ಇಲಾಖೆ ಮೂಲಗಳು ಹೇಳಿವೆ.

ಕಾವೇರಿ ನದಿಗೆ ಇಳಿದು ರೈತರ ಜಲ ಸತ್ಯಾಗ್ರಹ

ಶ್ರೀರಂಗಪಟ್ಟಣದಲ್ಲಿ ಕಾವೇರಿ ಜಲಾಶಯದಿಂದ ರೈತರ ಬೇಸಿಗೆ ಬೆಳೆಗಳಿಗೆ ನೀರು ಹರಿಸುವಂತೆ ಒತ್ತಾಯಿಸಿ ಜೆಡಿಎಸ್‌ ಕಾರ್ಯಕರ್ತರು ಹಾಗೂ ಸಂಘಟನೆಗಳು ಹಾಗೂ ರೈತರು ಕಾವೇರಿ ನದಿ ಇಳಿದು ಬುಧವಾರ ಪ್ರತಿಭಟನೆ ನಡೆಸಿದರು.

ಪಟ್ಟಣದ ಸ್ನಾನ ಘಟ್ಟದಲ್ಲಿ ಜೆಡಿಎಸ್‌ ರಾಜ್ಯಉಪಾಧ್ಯಕ್ಷ ಎಂ.ಸಂತೋಷ್‌ ನೇತೃತ್ವದಲ್ಲಿ ಪಕ್ಷದ ಕಾರ್ಯಕರ್ತರು, ಜನಪ್ರತಿನಿಧಿಗಳು ಹಾಗೂ ಇತರ ಸಂಘಟನೆಗಳ ಮುಖಂಡರು ಕಾವೇರಿ ನದಿಗಿಳಿದು ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಕೆಲ ಕಾಲ ನದಿಯಲ್ಲಿ ಪ್ರತಿಭಟನೆ ನಡೆಸಿದರು.

ಅಪಘಾತದಲ್ಲಿ ಮೂಳೆ ಕಟ್‌: ಪರಿಹಾರ ಮೊತ್ತ ಕೇಳಿ ವಿಮಾ ಕಂಪನಿ ತಬ್ಬಿಬ್ಬು

ಅಣೆಕಟ್ಟೆಇತಿಹಾಸದಲ್ಲೇ 100 ದಿನಕ್ಕೂ ಹೆಚ್ಚುಕಾಲ ಜಲಾಶಯದಲ್ಲಿ 118 ಅಡಿ ನೀರಿದ್ದರೂ ಸಹ ಆರ್‌ಬಿಎಲ್‌ ಎಲ್, ಚಿಕ್ಕದೇವರಾಯ, ಬಂಗಾರದೊಡ್ಡಿ, ರಾಜಪರಮೇಶ್ವರಿ ಸೇರಿದಂತೆ ಇತರ ಪ್ರಮುಖ ನಾಲೆಗಳಿಗೆ ಸರ್ಕಾರ ನೀರು ಹರಿಸಲು ಸರ್ಕಾರ ಮೀನಾಮೇಷ ಎಣಿಸುತ್ತಿದೆ. ಮೈತ್ರಿ ಸರ್ಕಾರ ಪತನದ ಬಳಿಕ ಬಿಜೆಪಿ ಸರ್ಕಾರ ಮಂಡ್ಯ ಜಿಲ್ಲೆಯ ರೈತರನ್ನೇ ಮರೆತಿದೆ ಎಂದು ಕಿಡಿಕಾರಿದರು.

ಕಾವೇರಿ ಜಲಾಶಯದಿಂದ ಇನ್ನು 2-3 ದಿನಗಳಲ್ಲಿ ನಾಲೆಗಳಿಗೆ ನೀರು ಹರಿಸದೆ ಇದ್ದರೆ ಜೆಡಿಎಸ… ಕಾರ್ಯಕರ್ತರು ಹಾಗೂ ತಾಲೂಕಿನ ಪ್ರಗತಿಪರ ಸಂಘಟನೆಗಳ ಜೊತೆಗೂಡಿ ಫೆ.25ರಂದು ರಂಗನಾಥಸ್ವಾಮಿ ಮೈದಾನದಿಂದ ಮಂಡ್ಯದವರೆಗೆ ಪಾದಯಾತ್ರೆ ನಡೆಸಲಾಗುತ್ತಿದೆ. ಒಂದು ವೇಳೆ ಸರ್ಕಾರ ಸ್ಪಂದಿಸದೆ ಹೋದರೆ ಮಾ.5 ರಂದು ವಿಧಾನಸೌಧ ಮುತ್ತಿಗೆ ಹಾಕಲಾವುದು ಎಂದು ಇದೇ ವೇಳೆ ಎಚ್ಚರಿಸಿದರು.

ಪುರಸಭಾ ಸದಸ್ಯ ಎಂ.ನಂದೀಶ್, ಜೆಡಿಎಸ್‌ ಪಕ್ಷದ ಮುಖಂಡರಾದ ನಗುವನಹಳ್ಳಿ ಶಿವಸ್ವಾಮಿ, ಸ್ವಾಮಿಗೌಡ, ಗೌಡಹಳ್ಳಿ ದೇವರಾಜು, ಚಂದ್ರಶೇಖರ್‌ , ದರಸಗುಪ್ಪೆ ಮಂಜುನಾಥ…, ಬಾಬುರಾಯನ ಕೊಪ್ಪಲು ಚೆಲುವರಾಜು, ವೈರಮುಡಿ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.

ಜಲ ಸತ್ಯಾಗ್ರಹ ಯಾಕೆ?

*ಕೆಆರ್‌ಎಸ್‌ ಡ್ಯಾಂನಲ್ಲಿ ನೀರಿದ್ದರೂ ಸಕ್ಕರೆ ನಾಡಿನ ಅನ್ನದಾತರಿಗೆ ಆತಂಕ ತಪ್ಪಿಲ್ಲ.

*ಬೇಸಿಗೆ ಬೆಳೆಗೆ ನೀರು ಬೇಕು, ಸರ್ಕಾರ ಹಾಗೂ ಜಿಲ್ಲಾಡಳಿತ ನೀರು ಬಿಡಲು ವಿಳಂಬ

* ಹಲವು ವರ್ಷಗಳಿಂದ ನೀರಿನ ಕೊರತೆಯಿಂದಾಗಿ ರೈತರು ಸಂಕಷ್ಟದಲ್ಲಿದ್ದಾರೆ.

*ಈ ಹೊತ್ತಿಗೆ ಬೇಸಿಗೆ ಬೆಳೆಗೆ ನೀರು ಕೊಡಬೇಕಿದ್ದ ಸರ್ಕಾರದಿಂದ ಮೀನಮೇಷ

*ನಾಲೆಗಳಲ್ಲಿ ನೀರು ಹರಿಯದ ಹಿನ್ನೆಲೆಯಲ್ಲಿ ಭತ್ತ ನಾಟಿ ಕಾರ್ಯಕ್ಕೆ ತೊಡಕು

*ರಾಗಿ, ಭತ್ತ ಸೇರಿದಂತೆ ಅಲ್ಪಾವಧಿಯ ಬೆಳೆಗೆ ನೀರಿಗಾಗಿ ಕಾಯುತ್ತಿರುವ ರೈತರು