ಮಂಡ್ಯ(ಫೆ.13): ರಸ್ತೆ ಅಪಘಾತದಲ್ಲಿ ಕಾಲುಗಳ ಮೂಳೆ ಮುರಿದುಕೊಂಡ ವ್ಯಕ್ತಿಗೆ 37.87 ಲಕ್ಷ ರು. ಪರಿಹಾರ ನೀಡುವಂತೆ ಮಂಡ್ಯದ ಮೋಟಾರು ವಾಹನ ಅಪಘಾತ ಪರಿಹಾರ ನ್ಯಾಯ ಮಂಡಳಿ(ಎಂಎಸಿಟಿ) ವಿಮಾ ಸಂಸ್ಧೆಗೆ ಆದೇಶ ನೀಡಿದೆ.

ಮಂಡ್ಯದ ಅರ್ಕೇಶ್ವರ ನಗರದ ಎನ್‌.ಪುಟ್ಟಸ್ವಾಮಿ ಎಂಬುವರೇ ಭಾರಿ ಪ್ರಮಾಣದ ವಿಮಾ ಮೊತ್ತ ಪಡೆದುಕೊಂಡವರು. ಕಾಲುಗಳ ಮೂಳೆ ಮುರಿತಕ್ಕೆ ಇಷ್ಟುದೊಡ್ಡ ಮೊತ್ತದ ಪರಿಹಾರ ಘೋಷಣೆಯಾಗಿರುವುದು ಜಿಲ್ಲೆಯಲ್ಲಿ ಇದೇ ಮೊದಲ ಪ್ರಕರಣ. ದೇಹದ ಯಾವುದೇ ಅಂಗವನ್ನು ತೆಗೆದು ಹಾಕದೆ ಅಥವಾ ಪ್ರಾಣಹಾನಿಯೂ ಆಗದೆ ಕೇವಲ ಮೂಳೆ ಮುರಿತಕ್ಕೆ ಬರೋಬ್ಬರಿ 37,87,900 ಲಕ್ಷ ಪರಿಹಾರ ಘೋಷಿಸಿರುವುದು ವಿಮಾ ಕಂಪನಿಗೆ ಆಶ್ಚರ್ಯ ಉಂಟಾಗುವಂತೆ ಮಾಡಿದೆ ಈ ಆದೇಶ.

ಪ್ರಕರಣದ ವಿವರ:

ಮದ್ದೂರು ತಾಲೂಕು ಲಕ್ಷ್ಮೇಗೌಡನದೊಡ್ಡಿ ಗ್ರಾಮದ ಎನ್‌.ಪುಟ್ಟಸ್ವಾಮಿ 2016 ಜೂ.6 ರಂದು ಲಕ್ಷ್ಮೇಗೌಡನದೊಡ್ಡಿ ಸಮೀಪದ ಕಾಲುವೆ ಏರಿ ಮೇಲೆ ರಸ್ತೆ ಅಪಘಾತಕ್ಕೆ ಒಳಗಾಗಿದ್ದರು. ರಸ್ತೆ ಬದಿ ಬೈಕ್‌ ನಿಲ್ಲಿಸಿ ಫೋನ್‌ನಲ್ಲಿ ಮಾತನಾಡುತ್ತಿದ್ದ ವೇಳೆ ಎದುರಿನಿಂದ ವೇಗವಾಗಿ ಬಂದ ಕಾರೊಂದು ಡಿಕ್ಕಿ ಹೊಡೆದಿದೆ. ಕಾರು ಡಿಕ್ಕಿಯಿಂದಾಗಿ ಪುಟ್ಟಸ್ವಾಮಿ ರಸ್ತೆ ಬದಿಯ 15 ಅಡಿ ಆಳದ ಕಾಲುವೆಗೆ ಬಿದ್ದಿದ್ದಾರೆ. ಇದರಿಂದಾಗಿ ಪುಟ್ಟಸ್ವಾಮಿ ಅವರ ಬಲಗಾಲಿನ ಮಂಡಿಚಿಪ್ಪು ಮುರಿತಕ್ಕೆ ಒಳಗಾಗಿತ್ತು. ಎಡಗಾಲಿನ ತೊಡೆಯ ಮೂಳೆಯೂ ಮುರಿದಿತ್ತು. ಸುದೀರ್ಘ ಕಾಲ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಪಡೆದಿದ್ದರು. ಚಿಕಿತ್ಸೆಗಾಗಿ ಪುಟ್ಟಸ್ವಾಮಿ ಅವರು 24,43,363 ರು.ಗಳನ್ನು ವೆಚ್ಚ ಮಾಡಿದ್ದರು. ಇದರಲ್ಲಿ 8 ಲಕ್ಷ ರೂ.ಗಳನ್ನು ವೈಯಕ್ತಿಕ ವೈದ್ಯಕೀಯ ವಿಮೆ ಮೂಲಕ ಪರಿಹಾರ ಪಡೆದುಕೊಂಡಿದ್ದರು.

ಉಳಿದಂತೆ 16,43,363 ರೂ.ಗಳ ವೆಚ್ಚ ಭರಿಸಲು ಸಾಲ ಮಾಡಿಕೊಂಡಿದ್ದ ಪುಟ್ಟಸ್ವಾಮಿ ಮತ್ತವರ ಕುಟುಂಬ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿತ್ತು. ಹೀಗಾಗಿ ಚಿಕಿತ್ಸಾ ವೆಚ್ಚ ಹಾಗೂ ಅಪಘಾತದಿಂದ ತಮಗಾಗಿರುವ ಆರ್ಥಿಕ ನಷ್ಟವನ್ನು ವಿಮಾ ಸಂಸ್ಥೆ ಮತ್ತು ಕಾರಿನ ಮಾಲೀಕರಿಂದ ಭರಿಸಿಕೊಡಬೇಕೆಂದು 2018 ಆಗಸ್ಟ್‌ 7ರಂದು ಮಂಡ್ಯದ 1ನೇ ಅಪರ ಹಿರಿಯ ಸಿವಿಲ್‌ ನ್ಯಾಯಾಲಯ ಹಾಗೂ ಎಂಎಸಿಟಿಗೆ ಮೊರೆ ಹೋಗಿದ್ದರು.

ಕರ್ನಾಟಕ ಬಂದ್‌, ಏನಿರುತ್ತೆ? ಏನಿರಲ್ಲ?: ಶಾಲಾ- ಕಾಲೇಜು ಕತೆ ಏನು?

ನ್ಯಾಯಾಲಯ ಮತ್ತು ಮಂಡಳಿಗೆ ಅರ್ಜಿದಾರರು ವಕೀಲ ಎನ್‌.ಚನ್ನಬಸಪ್ಪ ಅವರ ಮೂಲಕ 7 ಮಂದಿ ಸಾಕ್ಷಿಗಾರರಿಂದ ಸಾಕ್ಷಿ ಕೊಡಿಸಿ, ಬರೋಬ್ಬರಿ 691 ದಾಖಲೆಗಳನ್ನು ಸಲ್ಲಿಸಿದ್ದರು. ಇಷ್ಟೆಲ್ಲ ಸಾಕ್ಷಿ ಮತ್ತು ದಾಖಲೆಗಳನ್ನು ಪರಿಶೀಲನೆ ನಡೆಸಿದ ಮಂಡಳಿಯ ಮುಖ್ಯಸ್ಥರೂ ಆದ 1ನೇ ಅಪರ ಹಿರಿಯ ಸಿವಿಲ್‌ ನ್ಯಾಯಾಲಯ ನ್ಯಾಯಾ​ಧೀಶೆ ಎಂ.ರಶ್ಮಿ ಅವರು 2020ರ ಜನವರಿ 8ರಂದು ಪುಟ್ಟಸ್ವಾಮಿ ಅವರಿಗೆ 37 ಲಕ್ಷ ಹಣವನ್ನು ಪರಿಹಾರವಾಗಿ ನೀಡಬೇಕು ಎಂದು ಆದೇಶ ಹೊರಡಿದ್ದಾರೆ.

ಯಾವುದಕ್ಕೆ ಎಷ್ಟುಪರಿಹಾರ

*ನೋವು ಮತ್ತು ದುಃಖಕ್ಕೆ 60 ಸಾವಿರ

*ವೈದ್ಯಕೀಯ ವೆಚ್ಚಕ್ಕೆ 16,43,400

*ಭವಿಷ್ಯದ ಗಳಿಕೆಯ ನಷ್ಟಕ್ಕಾಗಿ 13,80,600 ರು.

*ಚಿಕಿತ್ಸಾ ಅವಧಿಯಲ್ಲಾದ ಆರ್ಥಿಕ ನಷ್ಟಕ್ಕೆ 2,12,400ರು.

*ಭವಿಷ್ಯದ ವೈದ್ಯಕೀಯ ವೆಚ್ಚಕ್ಕಾಗಿ 1.50 ಲಕ್ಷ ರು.

*ಸೌಲಭ್ಯಗಳ ಕೊರತೆಗಾಗಿ 25,000 ರು.

*ಪಥ್ಯ, ಶುಶ್ರೂಷೆ ಹಾಗೂ ಅನಾನುಕೂಲತೆಗಾಗಿ 3,16,500 ರು.

ಬಡ್ಡಿ ಸೇರಿಸಿ ವಿಮಾ ಮೊತ್ತ ಪಾವತಿಸಿ

ಅರ್ಜಿದಾರರು ಕೋರ್ಟ್‌ಗೆ ಅರ್ಜಿ ದಾಖಲಿಸಿದ ದಿನದಿಂದ ಹಣ ಪಾವತಿಸುವ ದಿನಾಂಕದವರೆಗೆ ವಾರ್ಷಿಕ ಶೇ.8ರಂತೆ ಬಡ್ಡಿಯನ್ನು ನೀಡಬೇಕು. ಆದೇಶದ ದಿನದವರೆಗೆ ಲೆಕ್ಕ ಹಾಕಿದರೆ ವಿಮಾ ಕಂಪನಿಯು ಸುಮಾರು 7.50 ಲಕ್ಷ ರು. ಬಡ್ಡಿ ಸೇರಿ 45,37,900 ರು. ಗಾಯಾಳು ಪುಟ್ಟಸ್ವಾಮಿ ಅವರಿಗೆ ಪಾವತಿಸಬೇಕಿದೆ. ಈ ಮೊತ್ತಕ್ಕೆ ಈಗಾಗಲೇ ಪಾವತಿಯಾಗಿರುವ ವೈದ್ಯಕೀಯ ವಿಮಾ ವೆಚ್ಚ 8 ಲಕ್ಷ ರು.ಗಳನ್ನು ಸೇರಿಸಿದರೆ 53.37 ಲಕ್ಷ ರೂ. ಪರಿಹಾರ ಸಿಕ್ಕಂತಾಗಿದೆ.

ನಾನು ಒಳ್ಳೆಯವನಾಗಿದ್ದೇನೆ, ನನ್ನ ನಂಬಿ ಪ್ಲೀಸ್; ಕೈಮುಗಿದು ನಲಪಾಡ್ ಕಣ್ಣೀರು!

ರಸ್ತೆ ಅಪಘಾತದಲ್ಲಿ ಮೂಳೆ ಮುರಿದ ಪ್ರಕರಣದಲ್ಲಿ ಗಾಯಾಳುವಿಗೆ ನ್ಯಾಯಾಲಯವು ಬೃಹತ್‌ ಮೊತ್ತದ ವಿಮಾ ಪರಿಹಾರ ಘೋಷಿಸಿರುವುದು ಇದೇ ಮೊದಲು. ಯಾವುದೇ ಪ್ರಕರಣವನ್ನು ಸೂಕ್ಷ್ಮವಾಗಿ ನ್ಯಾಯಾಲಯದ ಗಮನಕ್ಕೆ ತಂದು, ಅರ್ಜಿದಾರರಿಗಾದ ನಷ್ಟದ ಪರಿಣಾಮವನ್ನು ಮನವರಿಕೆ ಮಾಡಿಕೊಟ್ಟರೆ ಪರಿಹಾರ ಸಿಗುತ್ತದೆ ಎನ್ನುವುದಕ್ಕೆ ಈ ಪ್ರಕರಣ ಸಾಕ್ಷಿಯಾಗಿದೆ ಎಂದು ವಕೀಲ ಎನ್‌.ಚನ್ನಬಸಪ್ಪ ಹೇಳಿದ್ದಾರೆ.