ಬೆಂಗಳೂರು(ಫೆ.24): ಪ್ರತಿ ವರ್ಷ ಬೇಸಿಗೆಯಲ್ಲಿ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿ ಪ್ರವಾಸಿಗರು ಮತ್ತು ವನ್ಯ ಜೀವಿಗಳಿಗೆ ಕಾಡುತ್ತಿದ್ದ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ದೊರೆತಿದೆ. ಎಲ್ಲ ಅಂದುಕೊಂಡಂತೆ ನಡೆದರೆ ಮುಂದಿನ ಆರು ತಿಂಗಳಲ್ಲಿ ಈ ಮಹತ್ವದ ಉದ್ಯಾನಕ್ಕೆ ಕಾವೇರಿ ನೀರೇ ದೊರೆಯಲಿದೆ.

ಹೌದು, ಬೆಂಗಳೂರಿಗೆ ಹೊಂದಿಕೊಂಡಿರುವ ಈ ರಾಷ್ಟ್ರೀಯ ಉದ್ಯಾನಕ್ಕೆ ಕಾವೇರಿ ನೀರು ಒದಗಿಸಬೇಕು ಎಂಬ ಅರಣ್ಯ ಇಲಾಖೆಯ ಕೋರಿಕೆಯನ್ನು ರಾಜ್ಯ ಸರ್ಕಾರ ಪುರಸ್ಕರಿಸಿದ್ದು, ಬೆಂಗಳೂರು ಜಲಮಂಡಳಿ ಮೂಲಕ ನಿತ್ಯ 3 ಲಕ್ಷ ಲೀಟರ್‌ ನೀರು ಪೂರೈಸುವ ಯೋಜನೆಗೆ ಅಸ್ತು ಎಂದಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದಲ್ಲಿ ಪ್ರತಿ ವರ್ಷ ಡಿಸೆಂಬರ್‌, ಜನವರಿ, ಫೆಬ್ರವರಿ ಮತ್ತು ಮಾರ್ಚ್‌ ತಿಂಗಳಿನಲ್ಲಿ ನೀರಿನ ಅಭಾವ ಉಂಟಾಗುತ್ತಿತ್ತು. ಮಳೆ ಕೊರತೆ ಉಂಟಾಗುವ ವರ್ಷಗಳಲ್ಲಿ ಉದ್ಯಾನದಲ್ಲಿರುವ ವನ್ಯ ಜೀವಿಗಳಿಗೆ ಟ್ಯಾಂಕರ್‌ಗಳ ಮೂಲಕ ನೀರು ಒದಗಿಸಲಾಗುತ್ತಿತ್ತು. ಇದಕ್ಕೆ ಪರಿಹಾರವಾಗಿ ಕಾವೇರಿ ನೀರನ್ನು ಉದ್ಯಾನವನಕ್ಕೆ ಒದಗಿಸಲು ಕೋರಿ ಅರಣ್ಯ ಇಲಾಖೆಯಿಂದ ಸರ್ಕಾರಕ್ಕೆ ಮನವಿ ಮಾಡಿತ್ತು. ಈ ಕುರಿತು ಪರಿಶೀಲಿಸಿದ್ದ ನಗರಾಭಿವೃದ್ಧಿ ಇಲಾಖೆ ನೀರು ಪೂರೈಕೆಗೆ ಅನುಮತಿ ನೀಡಿದೆ. ಈ ಸಂಬಂಧ ಅಗತ್ಯ ಕ್ರಮ ಕೈಗೊಳ್ಳಲು ಬೆಂಗಳೂರು ಜಲಮಂಡಳಿಗೆ ಸೂಚನೆ ನೀಡಿದೆ.

ಅಲ್ಲದೆ, ಈ ಕುರಿತು ಜಲ ಮಂಡಳಿಯ ಅಧ್ಯಕ್ಷರನ್ನು ಈಗಾಗಲೇ ಭೇಟಿ ಮಾಡಿ ನೀರು ಪೂರೈಸುವ ಸಂಬಂಧ ಚರ್ಚೆ ನಡೆಸಲಾಗಿದ್ದು, ಶೀಘ್ರದಲ್ಲಿ ಕಾವೇರಿ ನೀರು ಸಂಪರ್ಕ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದ್ದಾರೆ ಎಂದು ಬನ್ನೇರುಘಟ್ಟಜೈವಿಕ ಉದ್ಯಾನವನದ ಕಾರ್ಯನಿರ್ವಹಣಾಧಿಕಾರಿ ವನಶ್ರೀ ವಿಪಿನ್‌ ಸಿಂಗ್‌ ತಿಳಿಸಿದ್ದಾರೆ.

ಬನ್ನೇರುಘಟ್ಟರಾಷ್ಟ್ರೀಯ ಉದ್ಯಾನಕ್ಕೆ ನೀರು ಪೂರೈಕೆ ಮಾಡುವ ಸಂಬಂಧ ಅರಣ್ಯ ಇಲಾಖೆಯ ಸಲ್ಲಿಸಿದ್ದ ಪ್ರಸ್ತಾವನ ಸಂಬಂಧ ಕ್ರಮ ಕೈಗೊಳ್ಳಲು ಸರ್ಕಾರದ ನಗರಾಭಿವೃದ್ಧಿ ಇಲಾಖೆಯಿಂದ ಸೂಚನೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ನೀರು ಪೂರೈಸುವ ಸಂಬಂಧ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಜಲ ಮಂಡಳಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ದಿನಕ್ಕೆ 3 ಲಕ್ಷ ಲೀಟರ್‌:

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನಕ್ಕೆ ಪ್ರತಿ ದಿನ 3 ಲಕ್ಷ ಲೀಟರ್‌ ನೀರು ಪೂರೈಸುವ ಸಂಬಂಧ ಅನುಮೋದನೆ ಸಿಕ್ಕಿದೆ. ಆದರೆ, ಮುಂದಿನ ದಿನಗಳಲ್ಲಿ ನೀರಿನ ಬೇಡಿಕೆ ಹೆಚ್ಚಾಗುವ ಸಾಧ್ಯೆತೆಯಿದೆ. ಆದ್ದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಪ್ರತಿ ದಿನ 10 ಲಕ್ಷ ಲೀಟರ್‌ ಪೂರೈಕೆ ಮಾಡಬಹುದಾದ ಎಂಟು ಇಂಚಿನ ಕೊಳವೆ ಅಳವಡಿಸಲಾಗುತ್ತದೆ. ಈ ಬಗ್ಗೆ ಜಲ ಮಂಡಳಿ ಹಿರಿಯ ಅಧಿಕಾರಿಗಳು ಪರಿಶೀಲನೆ ನಡೆಸಿ ಮುಂದಿನ ಆರು ತಿಂಗಳಲ್ಲಿ ನೀರಿನ ಸಂಪರ್ಕ ಕಲ್ಪಿಸಲು ಕ್ರಮ ಕೈಗೊಳ್ಳಲಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ವಿವರಿಸಿದ್ದಾರೆ.

98 ಕೋಟಿ ವೆಚ್ಚ:

ಉದ್ಯಾನಕ್ಕೆ ನೀರಿನ ಸಂಪರ್ಕ ಕಲ್ಪಿಸಲು ಹೆಚ್ಚುವರಿಯಾಗಿ ಸುಮಾರು 2 ಕಿಲೋಮೀಟರ್‌ ಉದ್ದದ ಪೈಪ್‌ ಲೈನ್‌ ಅಳವಡಿಸಬೇಕು. ಇದಕ್ಕಾಗಿ ಸುಮಾರು 98 ಲಕ್ಷ ವೆಚ್ಚ ಆಗಬಹುದು ಎಂದು ನಿರೀಕ್ಷಿಸಲಾಗಿದೆ. ಈ ಮೊತ್ತವನ್ನು ಅರಣ್ಯ ಇಲಾಖೆಯಿಂದ ಪಾವತಿ ಮಾಡಿದ ತಕ್ಷಣ ಸಂಪರ್ಕ ಕಲ್ಪಿಸುವ ಕಾಮಗಾರಿಗೆ ಟೆಂಡರ್‌ ಕರೆದು, ಆರು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬನ್ನೇರುಘಟ್ಟಕ್ಕೆ ರಾಷ್ಟ್ರೀಯ ಉದ್ಯಾನವನಕ್ಕೆ ಕಾವೇರಿ ನೀರಿನ ಸೌಲಭ್ಯ ಕಲ್ಪಿಸಲು ಸರ್ಕಾರದಿಂದ ಅನುಮೋದನೆ ಸಿಕ್ಕಿದೆ. ಮಂಡಳಿಯ ಅಧಿಕಾರಿಗಳು ಈ ಬಗ್ಗೆ ಪರಿಶೀಲನೆ ನಡೆಸಿ ನೀರಿನ ಸೌಲಭ್ಯ ಕಲ್ಪಿಸುವ ಸಂಬಂಧ ಸೂಕ್ತ ಕ್ರಮಗಳನ್ನು ಕೈಗೊಳ್ಳಲಿದ್ದು, ಶೀಘ್ರದಲ್ಲಿ ಉದ್ಯಾನವನಕ್ಕೆ ನೀರು ಕಲ್ಪಿಸಲಾಗುತ್ತದೆ ಎಂದು ಜಲ ಮಂಡಳಿ ಅಧ್ಯಕ್ಷ ತುಷಾರ್‌ ಗಿರಿನಾಥ್‌ ತಿಳಿಸಿದ್ದಾರೆ.  

ಈ ಬಗ್ಗೆ ಮಾತನಾಡಿದ ಬನ್ನೇರುಘಟ್ಟ ಜೈವಿಕ ಉದ್ಯಾನವನದ ಕಾರ್ಯನಿರ್ವಹಣಾಧಿಕಾರಿ ವನಶ್ರೀ ವಿಪಿನ್‌ ಸಿಂಗ್‌ ಅವರು, ಬೇಸಿಗೆ ಬರುತ್ತಿದ್ದಂತೆ ಉದ್ಯಾನದಲ್ಲಿ ನೀರಿನ ಕೊರತೆ ಕಾಡುತ್ತಿತ್ತು. ಇದೀಗ ಕಾವೇರಿ ನೀರು ಸಂಪರ್ಕ ಕಲ್ಪಿಸಲು ಸರ್ಕಾರ ಅನುಮೋದನೆ ನೀಡಿದ್ದು, ಉದ್ಯಾನಕ್ಕೆ ಶೀಘ್ರದಲ್ಲಿ ನೀರಿನ ಸೌಲಭ್ಯ ಲಭ್ಯವಾಗಲಿದೆ. ಈ ನೀರಿನ್ನು ಪ್ರವಾಸಿಗರು ಮತ್ತು ಉದ್ಯಾನದ ಪ್ರಾಣಿ ಪಕ್ಷಿಗಳಿಗೆ ಬಳಕೆ ಮಾಡಿಕೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.