Asianet Suvarna News Asianet Suvarna News

ಕಾವೇರಿ ನದಿ ಉಗಮ ಸ್ಥಾನದ ಜನರಿಗೇ ಕುಡಿಯಲು ನೀರಿಲ್ಲ: ಕೊಡಗಿನ ಜನರೇ ಎಚ್ಚರ

 ಕರುನಾಡಿನ ಜೀವನದಿ ಎಂದೇ ಖ್ಯಾತವಾದ ಕಾವೇರಿ ನದಿಯೇ ಹುಟ್ಟಿ ಹರಿದರೂ ಕುಡಿಯುವ ನೀರಿಗೆ ಜನರು ಆಹಾಕಾರ ಪಡುವ ಸ್ಥಿತಿ ನಿರ್ಮಾಣವಾಗಿದೆ. 

Kaveri river source Kodagu district people having no drinking water sat
Author
First Published Jun 8, 2023, 6:58 PM IST

ವರದಿ: ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್ 

ಕೊಡಗು (ಜೂ.08): ದೀಪದ ಕೆಳಗೆ ಕತ್ತಲು ಎನ್ನುವ ಗಾದೆ ಮಾತಿದೆ. ಅದೇ ರೀತಿ, ಇಲ್ಲಿ ಕರುನಾಡಿನ ಜೀವನದಿ ಎಂದೇ ಖ್ಯಾತವಾದ ಕಾವೇರಿ ನದಿಯೇ ಹುಟ್ಟಿ ಹರಿದರೂ ಕುಡಿಯುವ ನೀರಿಗೆ ಜನರು ಆಹಾಕಾರ ಪಡುವ ಸ್ಥಿತಿ ನಿರ್ಮಾಣವಾಗಿದೆ. 

ಇದು ಮಡಿಕೇರಿ ನಗರದ ಜನರ ಪರಿಸ್ಥಿತಿ. ಜಿಲ್ಲೆಯಲ್ಲಿ ಒಂದೆಡೆ ಕಾವೇರಿ ನದಿ ಹುಟ್ಟಿ ಹರಿದರೆ, ಮತ್ತೊಂದೆಡೆ ಲಕ್ಷ್ಮಣ ತೀರ್ಥ, ಪಯಶ್ವಿನಿ ಮತ್ತು ಹಾರಂಗಿ ನದಿಗಳು ಹುಟ್ಟಿ ಹರಿಯುತ್ತವೆ. ಆದರೂ ಮಡಿಕೇರಿ ನಗರಸಭೆ ಅಧಿಕಾರಿಗಳು ಮತ್ತು ಆಡಳಿತ ಮಂಡಳಿಯ ಹೊಂದಾಣಿಕೆ ಕೊರತೆಯಿಂದ ಮಡಿಕೇರಿ ನಗರಕ್ಕೆ ಕಳೆದ ನಾಲ್ಕು ದಿನಗಳಿಂದ ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗಿ ತಲೆದೋರಿದೆ. ಇದು ರಾಜಕೀಯ ಜಿದ್ದಾಜಿದ್ದಿಗೂ ಕಾರಣವಾಯಿತ್ತಾ ಎನ್ನುವ ಅನುಮಾನ ಮೂಡಿದೆ. 

ಐದು ವರ್ಷದಲ್ಲಿ ದುಪ್ಪಟ್ಟಾದ ಕಾಡಾನೆಗಳ ಸಂತತಿ: ಮಾನವರ ಮೇಲಿನ ದಾಳಿಯೂ ಹೆಚ್ಚಳ

ಕೂಟುಹೊಳೆ ಮತ್ತು ಕುಂಡಾಮೇಸ್ತ್ರಿ ಯೋಜನೆಗಳಿಂದ ನೀರೆತ್ತಲು ಪಂಪ್‌ಗಳಿಲ್ಲ: ಮಡಿಕೇರಿ ನಗರಕ್ಕೆ ನೀರು ಪೂರೈಸಲು ಕೂಟುಹೊಳೆ ಮತ್ತು ಕುಂಡಾಮೇಸ್ತ್ರಿ ಯೋಜನೆಗಳಿವೆ. ಈ ಬಾರಿ ಬೇಸಿಗೆ ಮಳೆಗಳು ಅಷ್ಟಾಗಿ ಸುರಿಯಲಿಲ್ಲ. ಮಳೆಗಾಲ ಆರಂಭವಾಗಿದ್ದರೂ ಮಳೆಯ ಸುಳಿವಿಲ್ಲ. ಹೀಗಾಗಿ ಕೂಟುಹೊಳೆ ಬತ್ತಿಹೋಗಿದ್ದರೆ, 6 ಕಿಲೋಮೀಟರ್ ದೂರದ ಕುಂಡಾಮೇಸ್ತ್ರಿ ಯೋಜನೆಯಿಂದ ಕೂಟುಹೊಳೆಗೆ ನೀರನ್ನು ಲಿಫ್ಟ್ ಮಾಡಿ ಅಲ್ಲಿಂದ ಮಡಿಕೇರಿ ನಗರಕ್ಕೆ ಪೂರೈಸಲಾಗುತ್ತಿದೆ. ಆದರೆ, ಕೂಟುಹೊಳೆಯಿಂದ ನಗರಕ್ಕೆ ನೀರು ಪೂರೈಸುವ 300 ಹೆಚ್‌ಪಿ ಸಾಮರ್ಥ್ಯದ ಎರಡು ಮೋಟರ್ಗಳು ಕೆಟ್ಟುಹೋಗಿವೆ. ಒಂದು ಮೋಟರ್ ಫೆಬ್ರವರಿ ತಿಂಗಳಿನಲ್ಲಿಯೇ ಕೆಟ್ಟುಹೋಗಿದ್ದರೆ, ಮತ್ತೊಂದು ಮೋಟರ್ ಕಳೆದ ನಾಲ್ಕು ದಿನಗಳ ಹಿಂದೆಯಷ್ಟೇ ಕೆಟ್ಟು ಹೋಗಿದೆ.

ನಾಲ್ಕು ದಿನದಿಂದ ಕುಡಿಯಲು ನೀರಿಲ್ಲ: ಹೀಗಾಗಿ ಮಡಿಕೇರಿ ನಗರಕ್ಕೆ ಕಳೆದ ನಾಲ್ಕು ದಿನಗಳಿಂದ ಕುಡಿಯುವ ನೀರು ಪೂರೈಕೆಯಾಗುತ್ತಿಲ್ಲ. ಆರು ಟ್ಯಾಂಕರ್ಗಳನ್ನು ಬಳಸಿ ನೀರು ಸರಬರಾಜು ಮಾಡಲಾಗುತ್ತಿದೆ. ನಾಲ್ಕು ದಿನಗಳಿಂದ ನೀರು ಪೂರೈಕೆ ಇಲ್ಲದೆ ಜನರು ಸಮಸ್ಯೆ ಅನುಭವಿಸುತ್ತಿರುವ ದೂರು ಕೇಳಿ ಬಂದ ಹಿನ್ನೆಲೆಯಲ್ಲಿ ಕೂಟು ಹೊಳೆಗೆ ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ ಅಧಿಕಾರಿಗಳಿಂದ ಮಾಹಿತಿ ಪಡೆದ ಮಂತರ್ ಗೌಡ ನಗರಸಭೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. 

ಅಧಿಕಾರಿಗಳಿಗೆ ಚಳಿ ಬಿಡಿಸಿದ ಶಾಸಕ ಮಂತರ್‌ಗೌಡ:  ಜಲಮಂಡಳಿ ಹಾಗೂ ನಗರಸಭೆ ಅಧಿಕಾರಿಗಳು ನೀವು ಸೋಮಾರಿಗಳಾಗಿದ್ದೀರ. ಕೆಟ್ಟುಹೋಗಿರುವ ಮೋಟರ್ ಅನ್ನು ರಿಪೇರಿಗೆ ಕಳುಹಿಸಿ 15 ದಿನಗಳಾದರೂ ವಾಪಸ್ ಏಕೆ ತರಿಸಿಲ್ಲ. ಮೋಟರ್ಗಳನ್ನು ಆಗಿಂದಾಗ್ಗೆ ನಿರ್ವಹಣೆ ಮಾಡಲು ಅನುದಾನ ಕೊಡುವುದಿಲ್ಲವೆ? ಎಂದು ಪ್ರಶ್ನಿಸಿದರು. ಈ ಮಾತಿಗೆ ನಗರಸಭೆ ಆಯುಕ್ತ ವಿಜಯ ಅವರು ಆಡಳಿತ ಮಂಡಳಿ ಒಪ್ಪುವುದಿಲ್ಲ ಎಂದರು. ಈ ಮಾತು ಕೇಳುತ್ತಿದ್ದಂತೆ ಶಾಸಕ ಮಂತರ್ ಗೌಡ ಸಿಟ್ಟಾದರು. ಆಡಳಿತ ಮಂಡಳಿ ಮತ್ತು ನಿಮ್ಮ ನಡುವಿನ ಹೊಂದಾಣಿಕೆ ಕೊರತೆಗೆ ಜನರಿಗೆ ಏಕೆ ಸಮಸ್ಯೆ ನೀಡುತ್ತೀರಿ. ಆಡಳಿತ ಮಂಡಳಿ ಒಪ್ಪುತ್ತಿಲ್ಲ ಎಂದು ಹೇಳುತ್ತೀರಲ್ಲ ಆಡಳಿತ ಮಂಡಳಿಯನ್ನು ಬಿಸಾಡುತ್ತೀರ. ಆಡಳಿತ ಮಂಡಳಿಗೆ ಸಲಹೆ ನೀಡಬೇಕಾಗಿರುವುದು ಯಾರ ಜವಾಬ್ದಾರಿ ಎಂದರು. 

ರಾಮನಗರದಲ್ಲಿ ಇಬ್ಬರು ರೈತರನ್ನು ಬಲಿ ಪಡೆದಿದ್ದ ಪುಂಡಾನೆ ಸೆರೆ: ನಾಗರಹೊಳೆ ಅಭಿಮನ್ಯು ಸಾಹಸಕ್ಕೆ ಮೆಚ್ಚುಗೆ

ಬೆಳಗಾಗುವುದರೊಳಗೆ ಮನೆ-ಮನೆ ನಲ್ಲಿಯಲ್ಲಿ ನೀರು ಬರಬೇಕು: ಮುಂದಿನ 6 ಗಂಟೆ ಸಮಯ ನೀಡುತ್ತೇನೆ. ಆರು ಗಂಟೆಯೊಳಗಾಗಿ ಮೋಟರ್ ಸರಿಪಡಿಸಿ ನಗರದ ಜನರಿಗೆ ನೀರು ಪೂರೈಸಬೇಕು. ಇಲ್ಲದಿದ್ದರೆ ಸುಮ್ಮನಿರಲ್ಲ ಎಂದು ಎಚ್ಚರಿಕೆ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ನಗರಸಭೆ ಆಯುಕ್ತ ವಿಜಯ್‌ ಆಡಳಿತ ಮಂಡಳಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡು ಕೆಲಸ ಮಾಡುತ್ತಿದ್ದೇನೆ. ಅದು ಸಾಧ್ಯವಾಗದಿದ್ದಾಗ ಜಿಲ್ಲಾಧಿಕಾರಿಗಳು ಮತ್ತು ಶಾಸಕರ ಗಮನಕ್ಕೆ ತಂದು ಕೆಲಸ ಮಾಡುತ್ತೇನೆ. ಸದ್ಯ ಜನರಿಗೆ ತೊಂದರೆಯಾಗದಂತೆ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ. ಸದ್ಯದಲ್ಲೇ ಸಮಸ್ಯೆ ಬಗೆಹರಿಸುತ್ತೇವೆ ಎಂದಿದ್ದಾರೆ. 

ಒಟ್ಟಿನಲ್ಲಿ ಒಂದೆಡೆ ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಬಾರದ ಹಿನ್ನೆಲೆಯಲ್ಲಿ ನೀರಿನ ಕೊರತೆ ಎದುರಾಗಿದ್ದರೆ, ಮತ್ತೊಂದೆಡೆ ಅಧಿಕಾರಿಗಳು ಮತ್ತು ನಗರಸಭೆ ಆಡಳಿತ ಮಂಡಳಿ ನಡುವಿನ ಹೊಂದಾಣಿಕೆ ಸಮಸ್ಯೆಗೆ ನಗರದ ಜನರು ಕಷ್ಟಪಡುವಂತೆ ಆಗಿದೆ.

Follow Us:
Download App:
  • android
  • ios